More

    ರಾಜಕಾಲುವೆಗೆ ತಡೆಗೋಡೆ, ಕೃತಕ ನೆರೆ ತಡೆಗೆ ಮನಪಾ ಯೋಜನೆ

    ಭರತ್ ಶೆಟ್ಟಿಗಾರ್ ಮಂಗಳೂರು

    ನಗರದ ವಿವಿಧೆಡೆ ಹಾದು ಹೋಗಿರುವ ರಾಜಕಾಲುವೆಗಳು ಮಳೆಗಾಲದಲ್ಲಿ ಕೃತಕ ನೆರೆ ಸೃಷ್ಟಿಗೆ ಕಾರಣವಾಗುತ್ತಿದೆ. ಒಂದು ಗಂಟೆ ಕಾಲ ಜೋರಾದ ಮಳೆ ಸುರಿದರೂ ಕೃತಕ ನೆರೆ ಖಚಿತ. ಕಾರಣ ಕಾಲುವೆಯಿಂದ ಉಕ್ಕಿದ ನೀರು ತಗ್ಗು ಪ್ರದೇಶಗಳತ್ತ ಹರಿಯುತ್ತದೆ. ಇದನ್ನು ತಡೆಯುವ ನಿಟ್ಟಿನಲ್ಲಿ ನೀರು ಹೊರಕ್ಕೆ ಬಾರದಂತೆ ತಡೆಗೋಡೆ ನಿರ್ಮಿಸಲು ಪಾಲಿಕೆ ಉದ್ದೇಶಿಸಿದೆ.

    ಮುಖ್ಯವಾಗಿ ತಗ್ಗು ಪ್ರದೇಶ ವ್ಯಾಪ್ತಿಯಲ್ಲಿ ಹರಿದು ಹೋಗುವ ರಾಜಕಾಲುವೆಗಳು ಸ್ಥಳೀಯರಲ್ಲಿ ನೆರೆ ಭೀತಿಗೆ ಕಾರಣವಾಗಿವೆ. ನೀರಿನ ಭಾರಿ ಪ್ರವಾಹದಿಂದ ಕಾಲುವೆ ಬದಿ ಜರಿಯುವುದು ಸಾಮಾನ್ಯವಾಗಿದೆ. ಇದನ್ನೆಲ್ಲ ತಡೆಯುವ ನಿಟ್ಟಿನಲ್ಲಿ ಸುಸಜ್ಜಿತ ತಡೆಗೋಡೆ ನಿರ್ಮಿಸಿ ಕಾಲುವೆಯಲ್ಲೇ ನೀರು ಹರಿದು ಹೋಗುವಂತೆ ಮಾಡಲಾಗುತ್ತದೆ.

    65 ಕೋಟಿ ರೂ. ವೆಚ್ಚದ ಯೋಜನೆ: ಯೋಜನೆ ಈಗ ಆರಂಭಿಕ ಹಂತದಲ್ಲಿದ್ದು, ಅಗತ್ಯವಿರುವ ಕಡೆಗಳಲ್ಲಿ ಒಟ್ಟು 65 ಕೋಟಿ ರೂ.ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲು ಉದ್ದೇಶಿಸಲಾಗಿದೆ. ಸದ್ಯ 35 ಕೋಟಿ ರೂ.ವೆಚ್ಚದ ರೂಪುರೇಷೆ ಸಿದ್ಧಪಡಿಸಲಾಗಿದೆ. 30 ಕೋಟಿ ರೂ. ಹೆಚ್ಚುವರಿ ಅನುದಾನ ಜೋಡಿಸಿಕೊಂಡು ರಾಜಕಾಲುವೆ ಶೀಘ್ರ ನಿರ್ಮಾಣವಾಗಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ. ಪ್ರತಿ ಮಳೆಗಾಲದಲ್ಲಿ ನೀರು ಉಕ್ಕಿ ಹರಿಯುತ್ತಿರುವುದು ಪಾಲಿಕೆಗೂ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಆದ್ದರಿಂದ ಶೀಘ್ರ ಇದಕ್ಕೊಂದು ಅಂತ್ಯ ಹಾಡಲು ಉದ್ದೇಶಿಸಿದೆ.

    ಯಾವೆಲ್ಲ ಪ್ರದೇಶದಲ್ಲಿ ನೆರೆ: ಮಂಗಳೂರು ನಗರದ ವಿವಿಧೆಡೆ ಕೃತಕ ನೆರೆ ಪೀಡಿತ ಪ್ರದೇಶಗಳಿವೆ. ಮಳೆಗಾಲ ಬಂತೆಂದರೆ ಅಲ್ಲಿನ ಜನರಿಗೆ ನಡುಕ ಶುರುವಾಗುತ್ತಿದೆ. ರಾತ್ರಿ ಜೋರಾಗಿ ಮಳೆ ಸುರಿಯುತ್ತಿದ್ದರೆ ಇಲ್ಲಿನ ಜನರಿಗೆ ನಿದ್ದೆ ಇಲ್ಲ. ಯಾವಾಗ ನೀರು ಒಳಗೆ ಬರುತ್ತದೋ ಎನ್ನುವ ಆತಂಕದಿಂದ ರಾತ್ರಿ ಕಳೆಯಬೇಕಾಗುತ್ತದೆ. ಪ್ರತಿ ವರ್ಷ ಮಳೆಗಾಲದಲ್ಲಿ ಒಂದು ಬಾರಿಯಾದರೂ ಕೃತಕ ನೆರೆ ಬರುತ್ತದೆ. 2018ರ ಮಹಾಮಳೆಯನ್ನು ಜನ ಇನ್ನೂ ಮರೆತಿಲ್ಲ. ಮುಖ್ಯವಾಗಿ ನಗರ ಕೊಟ್ಟಾರ ಚೌಕಿ, ಮಾಲೆಮಾರ್, ಕುದ್ರೋಳಿ, ಅಳಕೆ, ಕೊಡಿಯಾಲ್‌ಗುತ್ತು, ಪತ್ತುಮುಡಿ, ಕೊಡಿಯಾಲ್‌ಬೈಲ್, ಜಪ್ಪಿನಮೊಗರು, ಬಿಜೈ ಆನೆಗುಂಡಿ, ಪಾಂಡೇಶ್ವರ ಮೊದಲಾದೆಡೆಗಳಲ್ಲಿ ನೆರೆ ಸಾಮಾನ್ಯವಾಗಿದೆ. ಇವುಗಳೆಲ್ಲ ತಗ್ಗು ಪ್ರದೇಶಗಳಾಗಿದ್ದು, ಕಾಲುವೆ ಮಟ್ಟ ಅಥವಾ ಕೆಳಗೆ ಇದೆ. ತಡೆಗೋಡೆಗಳನ್ನು ನಿರ್ಮಿಸುವುದರಿಂದ ಮಾತ್ರ ಈ ಭಾಗಗಳಲ್ಲಿ ನೆರೆ ತಡೆಯಬಹುದು.

    ಪ್ರತಿ ಮಳೆಗಾಲದಲ್ಲಿ ಮಂಗಳೂರಿನಲ್ಲಿ ಕೃತಕ ನೆರೆ ಸಮಸ್ಯೆ ಎದುರಾಗುತ್ತಿದೆ. ಭಾರಿ ಮಳೆಗೆ ರಾಜಕಾಲುವೆಗಳು ಉಕ್ಕಿ ಹರಿಯುವುದರಿಂದ ತಗ್ಗು ಪ್ರದೇಶಗಳು ಜಲಾವೃತಗೊಳ್ಳುತ್ತವೆ. ಇದನ್ನು ತಡೆಯುವ ನಿಟ್ಟಿನಲ್ಲಿ ನೀರು ಹೊರಬರದಂತೆ ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಿಸಿ ಜನರು ನೆಮ್ಮದಿಯಿಂದ ಇರುವಂತೆ ಯೋಜನೆ ರೂಪಿಸಲು ಉದ್ದೇಶಿಸಲಾಗಿದೆ.
    ವೇದವ್ಯಾಸ ಕಾಮತ್
    ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts