More

    ಕರೊನಾ ನಿಯಂತ್ರಣಕ್ಕೆ ಮನಪಾ ದಿಟ್ಟ ಹೆಜ್ಜೆ

    ಮಂಗಳೂರು: ಪರಿಣಾಮಕಾರಿ ಕರೊನಾ ನಿಯಂತ್ರಣ ಹಾಗೂ ಸೋಂಕಿತರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ನಗರದ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಕ್ರಮ ತೆಗೆದುಕೊಳ್ಳಲಾಗಿದೆ. ಇದಕ್ಕಾಗಿ ಆರೋಗ್ಯ ಕೇಂದ್ರಗಳಿಗೆ ಹೆಚ್ಚುವರಿಯಾಗಿ ತಾತ್ಕಾಲಿಕ ಪ್ರಯೋಗಾಲಯ ತಂತ್ರಜ್ಞರನ್ನು ಪಾಲಿಕೆ ವತಿಯಿಂದ ನೇಮಕ ಮಾಡಿಕೊಂಡು ಸಂಚಾರಿ ಗಂಟಲು ದ್ರವ ಮಾದರಿ ಸಂಗ್ರಹ ತಂಡ ರಚಿಸಲಾಗಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದರು.

    ನಗರ ಆರೋಗ್ಯ ಕೇಂದ್ರಗಳಿಗೆ ನೋಡೆಲ್ ಅಧಿಕಾರಿಗಳನ್ನೂ ನೇಮಿಸಿದ್ದು, ಅವರು ಹಾಗೂ ವಾರ್ಡ್ ನೋಡೆಲ್ ಅಧಿಕಾರಿಗಳು ಪ್ರತಿದಿನ ಬೆಳಗ್ಗೆ ಕೋವಿಡ್ ಪಾಸಿಟಿವ್ ಪ್ರಕರಣದ ಪಟ್ಟಿಯಲ್ಲಿ ತಮ್ಮ ವಾರ್ಡ್‌ಗೆ ಸಂಬಂಧಿಸಿದ ಸೋಂಕಿತರ ಪಟ್ಟಿ ಪ್ರತ್ಯೇಕಿಸಿ, ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹೆಚ್ಚಿ ಪರೀಕ್ಷೆಗೆ ಒಳಪಡಿಸುತ್ತಾರೆ ಎಂದು ಪಾಲಿಕೆ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಸ್ಥಳೀಯ ಮನಪಾ ಸದಸ್ಯರ ಸಹಕಾರದಿಂದ ವಾರ್ಡ್ ಮಟ್ಟದ ಟಾಸ್ಕ್‌ಫೋರ್ಸ್ ರಚಿಸಲಾಗಿದೆ. ಪ್ರತಿಯೊಂದು ವಾರ್ಡ್‌ಗೆ ಪಾಲಿಕೆ ಅಧಿಕಾರಿಗಳನ್ನು ನೋಡೆಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ. ಕೋವಿಡ್ ಖಚಿತ ಪ್ರಕರಣಗಳು ಇರುವ ಮನೆಗಳಲ್ಲಿನ ಹೋಂ ಐಸೊಲೇಶನ್‌ನಲ್ಲಿರುವವರ ಬಗ್ಗೆ ನಿಗಾ ವಹಿಸುವುದು. ಅಂಥ ಮನೆಗಳನ್ನು ಕಂಟೇನ್ಮೆಂಟ್ ಜೋನ್ ಎಂದು ಪರಿಗಣಿಸಿ ಸ್ಟಿಕ್ಕರ್ ಹಾಕುವುದು ಹಾಗೂ ಐಸೋಲೇಶನ್‌ನಲ್ಲಿರುವವರ ಮೇಲೆ ನಿಗಾ ವಹಿಸಿ ಸುತ್ತಮುತ್ತಲಿನವರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದರು.

    ಆರೋಗ್ಯ ಕೇಂದ್ರಗಳು ಡಿಟಿಸಿಗಳಾಗಿ ಘೋಷಣೆ: ಸರ್ಕಾರದ ಆದೇಶದಂತೆ ವಿಕೇಂದ್ರೀಕೃತ ಚಿಕಿತ್ಸಾ ಕೇಂದ್ರಗಳನ್ನು ರೂಪಿಸಲು ಮಾರ್ಗಸೂಚಿ ಹೊರಡಿಸಲಾಗಿದೆ. ಇದರಂತೆ ಕರೊನಾ ಸೋಂಕಿತರ ಆರೋಗ್ಯ ಮೇಲ್ವಿಚಾರಣೆ ಮಾಡಿ ಹೋಂ ಐಸೊಲೇಶನ್‌ನಲ್ಲಿರಲು ಅಥವಾ ಕೋವಿಡ್ ಕೇರ್ ಸೆಂಟರ್, ಆಸ್ಪತ್ರೆಗಳಿಗೆ ದಾಖಲಾಗುವಂತೆ ಸಲಹೆ ನೀಡಲು ಈ ವಿಕೇಂದ್ರೀಕೃತ ಚಿಕಿತ್ಸಾ ಕೇಂದ್ರ(ಡಿಟಿಸಿ) ಸ್ಥಾಪಿಸಲಾಗಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು. ನಗರ ಆರೋಗ್ಯ ಕೇಂದ್ರಗಳನ್ನು ಮುಂದಿನ ಆದೇಶದವರೆಗೆ ಡಿಟಿಸಿಯನ್ನಾಗಿ ಘೋಷಿಸಿ ಆದೇಶಿಸಲಾಗಿದೆ. ವೈದ್ಯಕೀಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವೈದ್ಯಕೀಯ ಕಾಲೇಜುಗಳ ಸಹಯೋಗದೊಂದಿಗೆ ಹೋಂ ಐಸೊಲೇಶನ್‌ನಲ್ಲಿರುವ ಸೋಂಕಿತರಿಗೆ ಆರೈಕೆಗಾಗಿ ಪಾಲಿಕೆ ವತಿಯಿಂದಲೇ ಹೆಲ್ತ್‌ಕಿಟ್(ಅಗತ್ಯ ಔಷಧ) ಪೂರೈಸಲು ಕ್ರಮ ವಹಿಸಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts