More

     ಹೈರಾಣಾಗಿಸುತ್ತಿದೆ ಹವಾಮಾನ, ರಾತ್ರಿ ಮಳೆ, ಹಗಲು ಬಿಸಿಲ ಬೇಗೆ

     – ಭರತ್ ಶೆಟ್ಟಿಗಾರ್ ಮಂಗಳೂರು
     ಅಬ್ಬಾ ಎಂಥಾ ಉರಿ ಬಿಸಿಲು… ನವೆಂಬರ್‌ನಲ್ಲೇ ಹೀಗಾದರೆ ಮಾರ್ಚ್ ನಂತರ ಹೇಗೋ?
     ಪ್ರಸ್ತುತ ಇಂತಹ ಪ್ರಶ್ನೆ ಕರಾವಳಿಯಲ್ಲಿ ಸಾಮಾನ್ಯವಾಗಿದೆ.
     ಬೆಳಗ್ಗೆ ಚಳಿ, ಸಾಯಂಕಾಲದವರೆಗೆ ತೀವ್ರ ಬಿಸಿಲು, ಉರಿಸೆಕೆ, ರಾತ್ರಿಯಾಗುತ್ತಿದ್ದಂತೆ ಗುಡುಗು, ಸಿಡಿಲು ಸಹಿತ ಮಳೆ. ಒಂದು ರೀತಿಯಲ್ಲಿ ವಿಚಿತ್ರ ಹವಾಮಾನ ಪರಿಸ್ಥಿತಿಯನ್ನು ಕರಾವಳಿ ಜಿಲ್ಲೆಗಳು ಎದುರಿಸುತ್ತಿದ್ದು, ಪರಿಸರ ತಿರುಗಿ ಬಿದ್ದಿರುವ ಲಕ್ಷಣಗಳು ಅನುಭವಕ್ಕೆ ಬರುತ್ತಿವೆ.
     
    ಇದು ಯಾವ ಕಾಲ?:  ಬೇಸಿಗೆಯ ಸೆಕೆ ಈಗಲೇ ಆರಂಭವಾಗಿದ್ದು, ಮಾರ್ಚ್ ಬಳಿಕ ಬಿಸಿಲಬ್ಬರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇತ್ತೀಚಿನ ವರ್ಷಗಳಲ್ಲಿ ಮಳೆ ಕಡಿಮೆಯಾಗುತ್ತಿದ್ದಂತೆ ಬಿಸಿಲ ಧಗೆ ಹೆಚ್ಚಾಗುತ್ತಿದ್ದು, ಬಿಸಿಲಿಗೆ ಮೈಯೊಡ್ಡಿ ಕೆಲಸ ಮಾಡುವವರನ್ನು ಹೈರಾಣಾಗುವಂತೆ ಮಾಡಿದೆ. ಪರಿಣಾಮ ಬೊಂಡ, ಕಬ್ಬು ಜ್ಯೂಸ್, ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಾಗಿದೆ. ಅಲ್ಲಲ್ಲಿ ಸಾಯಂಕಾಲ, ರಾತ್ರಿ ವೇಳೆ ಮಳೆಯಾದರೂ, ಹಗಲು ವೇಳೆ ಯಥಾಸ್ಥಿತಿ ಬಿಸಿಲು ಕಾಡುತ್ತಿದೆ.
     
    ಮಳೆಗಾಲದಲ್ಲಿ 27 ಡಿಗ್ರಿಯಷ್ಟಿದ್ದ ತಾಪಮಾನ ಮಳೆ ಕಡಿಮೆಯಾಗುತ್ತಿದಂತೆ 33ರಿಂದ 37ರವರೆಗೆ ಏರಿಕೆಯಾಗಿದೆ. ಬೆಳಗ್ಗೆ 9 ಗಂಟೆಯಾಗುತ್ತಿದ್ದಂತೆ ಸೆಕೆಯ ಅನುಭವವಾಗುತ್ತಿದ್ದು, ರಾತ್ರಿವರೆಗೆ ಇರುತ್ತದೆ. ಇನ್ನೊಂದೆಡೆ ಕನಿಷ್ಠ ತಾಪಮಾನ ಒಂದು ಬಾರಿ ಮಾತ್ರ 19 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಉಳಿದಂತೆ 23-24 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲೇ ದಾಖಲಾಗುತ್ತದೆ.
     
     ನವೆಂಬರ್ ಆರಂಭದಲ್ಲಿ ಒಂದೆರಡು ದಿನ ಮಾತ್ರ ಬೆಳಗ್ಗೆ-ರಾತ್ರಿ ಅವಧಿಯಲ್ಲಿ ಚಳಿ ಇತ್ತು. ಗ್ರಾಮೀಣ ಭಾಗದಲ್ಲಿ ಮಂಜು ಕವಿದ ವಾತಾವರಣ ಕಂಡು ಬರುತ್ತಿದೆ. ಡಿಸೆಂಬರ್ ಬಳಿಕ ಮತ್ತೆ ಚಳಿ ಕಚಗುಳಿ ಇಡುವ ಸಾಧ್ಯತೆಯಿದೆ ಎನ್ನುತ್ತಾರೆ ಹವಾಮಾನ ತಜ್ಞರು.
     
    ತಾಪಮಾನ ದೇಶದಲ್ಲೇ ಅಧಿಕ: ಕಳೆದ ವರ್ಷದಂತೆ ಈ ಬಾರಿಯೂ ಮಂಗಳೂರು ಗರಿಷ್ಠ ತಾಪಮಾನದಲ್ಲಿ ಒಂದೆರಡು ಬಾರಿ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. 2019ರಲ್ಲಿ ನವೆಂಬರ್ ತಿಂಗಳಲ್ಲಿ 38.8 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾರ್ವಕಾಲಿಕ ದಾಖಲೆ ನಿರ್ಮಾಣವಾಗಿತ್ತು. ಈ ಬಾರಿಯೂ 37.2 ಡಿಗ್ರಿ ಸೆಲ್ಸಿಯಸ್ ತಲುಪುವ ಮೂಲಕ ವರ್ಷದ ಅತ್ಯಧಿಕ ತಾಪಮಾನ ದಾಖಲಾಗಿದೆ.
     
    ಪರಿಸರ ನಾಶದ ಪರಿಣಾಮ:  ಅಭಿವೃದ್ಧಿ ಹೆಸರಿನಲ್ಲಿ ವ್ಯಾಪಕ ಪರಿಸರ ನಾಶ ಮಾಡಿದ ಪರಿಣಾಮವಿದು. ಒಂದೆಡೆ ಪಶ್ಚಿಮ ಘಟ್ಟಗಳ ಮೇಲೆ ಪ್ರಹಾರ, ಇನ್ನೊಂದೆಡೆ ಗ್ರಾಮೀಣ ಭಾಗದಲ್ಲೂ ಮರ-ಕಾಡು ನಾಶವಾಗಿ ಮನೆ, ಕಟ್ಟಡಗಳು ತಲೆ ಎತ್ತುತ್ತಿವೆ. ಸ್ವಚ್ಛ ಸುಂದರ ಹಸಿರು ಗ್ರಾಮೀಣ ಪ್ರದೇಶ ನಿಧಾನವಾಗಿ ಕಣ್ಮರೆಯಾಗುತ್ತಿದ್ದು, ಹಳ್ಳಿಯಲ್ಲೂ ಸೆಕೆಯಿಂದ ಪರಿತಪಿಸುವಂತಾಗಿದೆ. ಋತುವಿನಲ್ಲೂ ಬದಲಾವಣೆ ಕಂಡು ಬರುತ್ತಿದೆ. ಜೂನ್‌ನಲ್ಲಿ ಮಳೆಯಾಗದೆ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಅತಿವೃಷ್ಟಿ ಪ್ರವಾಹ ಉಂಟಾಗುತ್ತಿದೆ. ಚಳಿಗಾಲದ ಎರಡು ತಿಂಗಳು ಮುಗಿಯುತ್ತಾ ಬಂದರೂ ಇನ್ನೂ ಚಳಿಯೇ ಆರಂಭವಾಗಿಲ್ಲ. ಪ್ರಕೃತಿಯೂ ಮನುಷ್ಯನಿಗೆ ತಕ್ಕ ಉತ್ತರ ನೀಡುತ್ತಿದ್ದು, ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳು ಇನ್ನಷ್ಟು ಕಠಿಣವಾಗಲಿವೆ ಎನ್ನುವುದು ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಅಭಿಪ್ರಾಯ.
     
    ನವೆಂಬರ್ ತಾಪಮಾನ (ಡಿಗ್ರಿ): 
     ವರ್ಷ           ಗರಿಷ್ಠ          ಕನಿಷ್ಠ
     2020        37.2         19
     2019        38.8         21.3
     2018        36.4         19.8
     2017        36.2         19.6
     2016        36.2         20.5
     2015        36            21
     
     ಕಾರ್ಬನ್‌ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಗಿ ಹಸಿರು ಮನೆ ಪರಿಣಾಮ, ಅಗಾಧ ಪ್ರಮಾಣದ ಅರಣ್ಯ ನಾಶ, ಅಭಿವೃದ್ಧಿ ಹೆಸರಿನಲ್ಲಿ ಅಣೆಕಟ್ಟು ನಿರ್ಮಾಣ, ಕಾಡಿನ ಮಧ್ಯೆ ರಸ್ತೆ ನಿರ್ಮಾಣ ಮೊದಲಾದ ಪರಿಸರದ ಮೇಲಿನ ಅವೈಜ್ಞಾನಿಕ ದಾಳಿಯಿಂದ ವಾತಾವರಣದ ಮೇಲೆ ಪರಿಣಾಮ ಉಂಟಾಗುತ್ತಿದೆ. ಮಳೆಗಾಲದಲ್ಲಿ ಮಳೆ, ಚಳಿಗಾಲದಲ್ಲಿ ಚಳಿ ಇಲ್ಲ. ಬೇಸಿಗೆಯಲ್ಲಿ ಅಗಾಧ ಬಿಸಿಲು ಮೊದಲಾದ ವೈಪರೀತ್ಯ ಕಾಣುತ್ತಿದ್ದೇವೆ. ಕೆಲವು ಸಂದರ್ಭದಲ್ಲಿ ತಾಪಮಾನ ಕಡಿಮೆ ಇದ್ದರೂ, ವಾತಾವರಣದಲ್ಲಿ ಬಿಸಿ ಅಥವಾ ಉರಿ ಸೆಕೆ ಹೆಚ್ಚಿರುತ್ತದೆ. ಅತಿಯಾದ ಕಾಂಕ್ರಿಟೀಕರಣ ಪ್ರಮುಖ ಕಾರಣ. ತುಂಬಾ ವರ್ಷಗಳಿಂದ ಈ ರೀತಿಯ ಬದಲಾವಣೆ ಆಗುತ್ತಿದ್ದು, ಇದು ಸರಿಯಾಗಬೇಕಾದರೆ ಅದರ ಎರಡರಷ್ಟು ಕಾಲಾವಕಾಶ ಬೇಕು. ಇದಕ್ಕೆ ತಕ್ಷಣ ಪರಿಹಾರ ಎನ್ನುವುದಿಲ್ಲ. ಪರಿಸರವನ್ನು ಅದರ ಪಾಡಿಗೆ ಬಿಡುವುದು ನಾವು ಮೊದಲು ಮಾಡಬೇಕಾದ ಕೆಲಸ. ಪಾಶ್ಚಿಮಾತ್ಯ ಅಭಿವೃದ್ಧಿಯ ಪರಿಕಲ್ಪನೆಯನ್ನು ಅನುಸರಿಸುತ್ತಿರುವುದು ನಾವು ಮಾಡುತ್ತಿರುವ ದೊಡ್ಡ ತಪ್ಪು.
     – ಡಾ.ಎನ್.ಎ. ಮಧ್ಯಸ್ಥ, ಪರಿಸರ ವಿಜ್ಞಾನಿ
     
     ಕರಾವಳಿಯಲ್ಲಿ ಬಿಸಿಲು ಹೆಚ್ಚಾಗಿದ್ದು, ಒಂದೆರಡು ಬಾರಿ ದೇಶದಲ್ಲೇ ಗರಿಷ್ಠ ತಾಪಮಾನ ದಾಖಲಾಗಿದೆ. ಬಿಸಿಲ ವಾತಾವರಣ ನಿರಂತರವಾಗಿ ಮುಂದುವರಿಯಲಿದೆ. ಡಿಸೆಂಬರ್‌ನಲ್ಲಿ ಸ್ವಲ್ಪ ಚಳಿ ಹಾಗೂ ಮಳೆಯ ವಾತಾವರಣ ಕಂಡು ಬರುವ ಸಾಧ್ಯತೆಯಿದೆ.
     – ಸುನೀಲ್ ಗಾವಸ್ಕರ್, ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts