More

    ಮಂಗಳೂರು ಮೀನುಗಾರಿಕೆ ದಕ್ಕೆಯಲ್ಲಿ ಚಟುವಟಿಕೆ ಶುರು

    ಭರತ್ ಶೆಟ್ಟಿಗಾರ್, ಮಂಗಳೂರು
    ಸುಮಾರು ಒಂದೂವರೆ ತಿಂಗಳಿಂದ ಮೀನುಗಾರಿಕಾ ಚಟುವಟಿಕೆ ಇಲ್ಲದೆ ಭಣಗುಡುತ್ತಿದ್ದ ಮಂಗಳೂರಿನ ಮೀನುಗಾರಿಕಾ ದಕ್ಕೆಯಲ್ಲಿ ಸದ್ಯ ಸ್ವಲ್ಪ ಮಟ್ಟಿಗೆ ಜನ ಓಡಾಟ ಆರಂಭವಾಗಿದ್ದು, ಸಾಂಪ್ರದಾಯಿಕ ಮೀನುಗಾರಿಕೆಯ ನಾಡದೋಣಿಗಳು ದಕ್ಕೆಯತ್ತ ಬರುತ್ತಿದ್ದು, ಹರಾಜು-ಮಾರಾಟ ಪ್ರಕ್ರಿಯೆ ಜೋರಾಗಿಯೇ ನಡೆಯುತ್ತಿದೆ.

    ಯಾಂತ್ರೀಕೃತ ಆಳ ಸಮುದ್ರ ಮೀನುಗಾರಿಕೆ ರಜೆ ಮುಗಿಯಲು ಇನ್ನೂ ಹತ್ತು ದಿನಗಳು ಬಾಕಿ ಇವೆ. ಇದರಿಂದಾಗಿ ಯಾಂತ್ರೀಕೃತ ಬೋಟುಗಳೆಲ್ಲ ದಕ್ಕೆಯಲ್ಲೇ ಲಂಗರು ಹಾಕಿದ್ದು, ಅವುಗಳಿಗೆ ಸಂಬಂಧಿಸಿದ ಮೀನುಗಾರ ಕಾರ್ಮಿಕರೂ ತಮ್ಮ ಊರುಗಳಿಗೆ ತೆರಳಿದ್ದಾರೆ. ಮಳೆಯೂ ಇದ್ದುದರಿಂದ ಹಲವು ದಿನಗಳಲ್ಲಿ ದಕ್ಕೆಯಲ್ಲಿ ಜನರ ಓಡಾಟವೇ ಇರಲಿಲ್ಲ. ಸಮುದ್ರಲ್ಲಿಯೂ ಬಲವಾದ ಗಾಳಿ ಇದ್ದ ಕಾರಣ, ನಾಡದೋಣಿ ಮೀನುಗಾರಿಕೆಯೂ ಅಷ್ಟಾಗಿ ನಡೆದಿರಲಿಲ್ಲ. ಸದ್ಯ ಮಳೆ ಕಡಿಮೆಯಾಗಿ ಸಮುದ್ರ ಶಾಂತವಾಗಿದ್ದು, ಮೀನುಗಾರಿಕೆ ನಡೆಯುತ್ತಿದೆ. ಅಳಿವೆಯಲ್ಲೂ ಸಣ್ಣ ದೋಣಿಗಳ ಸಂಚಾರ ಮಾಡುತ್ತಿರುವುದರಿಂದ ನವಮಂಗಳೂರು ಬಂದರಿನ ಬದಲಿಗೆ ದಕ್ಕೆಗೆ ಬಂದು ವಿಲೇವಾರಿ ನಡೆಯುತ್ತಿದೆ. ಇದರಿಂದ ಸಾಕಷ್ಟ ಸಂಖ್ಯೆಯಲ್ಲಿ ಮೀನುಗಾರರು ಮತ್ತು ವ್ಯಾಪಾರಿಗಳು ದಕ್ಕೆಯಲ್ಲಿ ಸೇರುತ್ತಿದ್ದಾರೆ. ಗೌಜಿ ಗದ್ದಲವೂ ಕೇಳಿ ಬರುತ್ತಿದೆ.

    ಹೊರ ರಾಜ್ಯದಿಂದ ಮೀನು: ಯಾಂತ್ರೀಕೃತ ಮೀನುಗಾರಿಕೆ ಸ್ಥಗಿತಗೊಂಡಿರುವುದರಿಂದ ಸದ್ಯ ಮಂಗಳೂರಿನ ದಕ್ಕೆಗೆ ಹೊರ ರಾಜ್ಯಗಳಿಂದಲೂ ಮೀನು ಬರುತ್ತಿದೆ. ಮುಖ್ಯವಾಗಿ ಆಂಧ್ರ- ತಮಿಳುನಾಡು ಕರಾವಳಿ, ಜತೆಗೆ ಗುಜರಾತ್, ಕೇರಳ, ಗೋವಾ ಹೀಗೆ, ಯಾವ ಭಾಗದಲ್ಲಿ ಮೀನಿನ ದರ ಕಡಿಮೆ ಇದೆಯೋ ಅಲ್ಲಿಂದ ತರಿಸುತ್ತಾರೆ. ಆದರೆ ಇವುಗಳು ಐಸ್‌ಪ್ಯಾಕ್ ಮಾಡಿರುವ ಮೀನುಗಳಾಗಿರವುದರಿಂದ ತಾಜಾತನ ಇರುವುದಿಲ್ಲ. ಆದರೂ ಬೇಡಿಕೆ ಕಡಿಮೆಯಾಗಿಲ್ಲ. ಬಂಗುಡೆ, ಬೂತಾಯಿ, ನಂಗ್, ಕಲ್ಲೂರು, ಸ್ವಾಡಿಯಂತಹ ಮೀನುಗಳು ಬರುತ್ತ್ತಿವೆ. ಆಂಧ್ರದಿಂದ ಬರುವ ಬಂಗುಡೆ ಮತ್ತು ಚೆನ್ನೈನ ಬೂತಾಯಿ ಹೆಚ್ಚು ರುಚಿ. ಸದ್ಯ ಚೆನ್ನೈ ಬೂತಾಯಿ ಸಿಗುತ್ತ್ತಿಲ್ಲ, ಆಂಧ್ರ, ಕೇರಳದಿಂದಲೇ ಬರುತ್ತಿವೆ. ಗುರುವಾರ ಚಿಲ್ಲರೆ ಮಾರುಕಟ್ಟೆಯಲ್ಲಿ ಆಂಧ್ರದ ದೊಡ್ಡ ಬಂಗುಡೆಗೆ 300, ಸಣ್ಣ ಬಂಗುಡೆಗೆ 250 ರೂ. ದರವಿತ್ತು.

    ಬಿಳಿ ಸಿಗಡಿ ಬಲೆಗೆ: ನಾಡದೋಣಿ ಮೀನುಗಾರರ ಬಲೆಗೆ ಪ್ರಸ್ತತ ಬಿಳಿ ಸಿಗಡಿ ಹೆಚ್ಚಿನ ಪ್ರಮಾಣದಲ್ಲಿ ಬೀಳುತ್ತಿವೆ. ಚಿಲ್ಲರೆ ವ್ಯಾಪಾರಿಗಳು ಕೆ.ಜಿ.ಗೆ 400 ರೂ.ವರೆಗೆ ನಿಗದಿಪಡಿಸಿ ಮಾರಾಟ ಮಾಡುತ್ತಾರೆ. ಮಳೆಗಾಲ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ಪಾರ್ಟಿಗಳು ನಡೆಯುತ್ತಿಲ್ಲ. ಇದರಿಂದಾಗಿ ದರದಲ್ಲಿ ಇಳಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು. ಉಳಿದಂತೆ ಬೂತಾಯಿ, ಬಂಗುಡೆ, ಮಣಂಗ್, ಕಲ್ಲೂರು, ಏಡಿಯೂ ನಾಡದೋಣಿಯಲ್ಲಿ ಸಿಗುತ್ತಿದ್ದು, ದಕ್ಕೆಯಲ್ಲಿ ಎಲ್ಲವನ್ನೂ ಪ್ರತ್ಯೇಕಿಸಿ ಹರಾಜಿನಲ್ಲಿ ಮಾರಾಟ ಮಾಡುತ್ತಾರೆ. ಸಣ್ಣ ಮೀನುಗಳನ್ನು ‘ಬೆರಕೆ ಮೀನು’ ಹೆಸರಿನಲ್ಲಿ ಕಡಿಮೆ ಬೆಲೆಗೆ ವ್ಯಾಪಾರಿಗಳು ತೆಗೆದುಕೊಂಡು ಹೋಗುತ್ತಾರೆ.

    ನಾಡದೋಣಿ ಮೀನುಗಾರಿಕೆ ಸದ್ಯ ಆರಂಭವಾಗಿರುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಮೀನು ಲಭಿಸುತ್ತಿದೆ. ಇದರಿಂದ ದರದಲ್ಲಿಯೂ ವ್ಯತ್ಯಾಸವಾಗುತ್ತಲೇ ಇರುತ್ತದೆ. ಬೆಳಗ್ಗೆ, ಮಧ್ಯಾಹ್ನ, ಸಂಜೆ ಹೀಗೆ ಒಂದೊಂದು ದರ. ಹೊರ ರಾಜ್ಯಗಳಾದ ಆಂಧ್ರ, ತಮಿಳುನಾಡು ಕಡೆಯಿಂದ ಮೀನು ಬರುತ್ತಿದ್ದು, ಅದರ ಹರಾಜು ಪ್ರಕ್ರಿಯೆ ಬೆಳಗ್ಗೆ ಬೇಗ ನಡೆಯುತ್ತದೆ.
    ಶ್ರೀಧರ್
    – ದಕ್ಕೆ ಮೀನು ವ್ಯಾಪಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts