

ನವದೆಹಲಿ: ಕರೊನಾ ದೇಶಾದ್ಯಂತ ಹಬ್ಬುತ್ತಿದೆ. ಸೋಂಕು ನಿಯಂತ್ರಣಕ್ಕೆ ಮತ್ತು ಸೋಂಕಿತರಿಗೆ ಚಿಕಿತ್ಸೆ ನೀಡಲು ಸಹಕಾರವಾಗಲೆಂದು ಅನೇಕರು ಪಿಎಂ ಕೇರ್ಸ್ ನಿಧಿಗೆ ಹಣ ದೇಣಿಗೆ ನೀಡುತ್ತಿದ್ದಾರೆ. ಅದೇ ರೀತಿ ಸಮಾಜಕ್ಕಾಗಿ 2.51 ಲಕ್ಷ ರೂಪಾಯಿಯನ್ನು ಪಿಎಂ ಕೇರ್ಸ್ಗೆ ದೇಣಿಗೆ ರೂಪದಲ್ಲಿ ನೀಡಿದ್ದ ವ್ಯಕ್ತಿಯೊಬ್ಬನ ತಾಯಿಯೂ ಕರೊನಾ ಸೋಂಕಿಗೆ ತುತ್ತಾಗಿದ್ದು, ಆಕೆಗೆ ಬೆಡ್ ಸಿಗದೆಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಅಹಮದಾಬಾದ್ ಮೂಲದ ವಿಜಯ್ ಪರಿಕ್ ಹೆಸರಿನ ವ್ಯಕ್ತಿ ಈ ಹಿಂದೆ ಕರೊನಾ ನಿಯಂತ್ರಣಕ್ಕಾಗಿ ಪಿಎಂ ಕೇರ್ಸ್ಗೆ 2.51 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರಂತೆ. ಅದಾದ ಮೇಲೆ ಅವರ ತಾಯಿ ಸೋಂಕಿಗೆ ತುತ್ತಾಗಿದ್ದಾರೆ. ಆಕ್ಸಿಜನ್ ಅವಶ್ಯಕತೆ ಇದ್ದ ಅವರಿಗೆ ಆಕ್ಸಿಜನ್ ಬೆಡ್ಗಾಗಿ ಸಾಕಷ್ಟು ಹುಡುಕಲಾಗಿದೆಯಾದರೂ ಎಲ್ಲಿಯೂ ಒಂದೇ ಒಂದು ಬೆಡ್ ಕೂಡ ಸಿಕ್ಕಿಲ್ಲ. ಕೊನೆಗೆ ಉಸಿರಾಟ ತೊಂದರೆ ಹೆಚ್ಚಾಗಿ ತಾಯಿ ಪ್ರಾಣ ಬಿಟ್ಟಿದ್ದಾರೆ.
ಈ ವಿಚಾರವನ್ನು ಅವರ ಮಗ ನೋವಿನಿಂದ ಟ್ವಿಟ್ಟರ್ನಲ್ಲಿ ಹೇಳಿಕೊಂಡಿದ್ದಾರೆ. "ಪಿಎಂ ಕೇರ್ಸ್ ನಿಧಿಗೆ ನಾನು 2.51 ಲಕ್ಷ ರೂಪಾಯಿ ದೇಣಿಗೆ ನೀಡಿದ್ದೇನೆ. ಆದರೆ ಸಾಯುತ್ತಿದ್ದ ನನ್ನ ತಾಯಿಗೆ ಆಕ್ಸಿಜನ್ ಬೆಡ್ ಸಿಗಲೇ ಇಲ್ಲ. ಕರೊನಾದ ಮೂರನೇ ಅಲೆಯಲ್ಲಿ ಆಕ್ಸಿಜನ್ ಬೆಡ್ ಕಾಯ್ದಿರಿಸಿಕೊಳ್ಳಬೇಕೆಂದರೆ ಎಷ್ಟು ದುಡ್ಡು ದೇಣಿಗೆ ನೀಡಬೇಕೆಂದು ತಿಳಿಸಿಬಿಡಿ. ನನ್ನ ಕುಟುಂಬದ ಸದಸ್ಯರನ್ನು ನಾನು ಕಳೆದುಕೊಳ್ಳಲು ಬಯಸುವುದಿಲ್ಲ." ಎಂದು ಬರೆದುಕೊಂಡಿದ್ದಾರೆ. ತಮ್ಮ ಟ್ವೀಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್‍ನಾಥ್ ಸಿಂಗ್, ಸ್ಮೃತಿ ಇರಾನಿ, ರಾಷ್ಟ್ರಪತಿ ಭವನವನ್ನು ಟ್ಯಾಗ್ ಮಾಡಿದ್ದಾರೆ.
ಈ ವ್ಯಕ್ತಿಯ ನೋವಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾರಂಭವಾಗಿದೆ. ಸಮಾಜಕ್ಕಾಗಿ ಚಿಂತಿಸದವನ ಕುಟುಂಬಕ್ಕೇ ಸಹಾಯ ಸಿಗದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಜನ ಮಾತನಾಡಿಕೊಳ್ಳಲಾರಂಭಿಸಿದ್ದಾರೆ. (ಏಜೆನ್ಸೀಸ್)