More

    ಕೊರೊನಾ ವೈರಸ್​ ಬಂದಿರಬಹುದೆಂಬ ಹೆದರಿಕೆಗೇ ಆತ್ಮಹತ್ಯೆ ಮಾಡಿಕೊಂಡ: ಕುಟುಂಬವನ್ನು ರಕ್ಷಿಸಲೆಂದು ಈ ಕಠಿಣ ನಿರ್ಧಾರ

    ಹೈದರಾಬಾದ್​: ಚೀನಾದಲ್ಲಿ ಮಹಾಮಾರಿಯಾಗಿ ಕಾಡುತ್ತಿರುವ ಕೊರೊನಾ ವೈರಸ್​(ಸಿಒವಿಐಡಿ-19) ತನಗೆ ಬಂದಿರಬಹುದು ಎನ್ನುವ ಭಯದಿಂದಲೇ ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರ್​ ಜಿಲ್ಲೆಯಲ್ಲಿ ನಡೆದಿದೆ. ತನಗೆ ಕೊರೊನಾ ವೈರಸ್​ ಬಂದಿದ್ದು ಅದು ತನ್ನ ಕುಟುಂಬಸ್ಥರಿಗೆ ಹರಡದಿರಲಿ ಎಂಬ ಕಾರಣಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

    ಶೇಷಮಾ ನಾಯ್ಡು ಕಂಡ್ರಿಗ ಎಂಬ ಹಳ್ಳಿಯಲ್ಲಿ ವಾಸಿಸುತ್ತಿರುವ ಬಾಲಕೃಷ್ಣ (50) ವ್ಯಕ್ತಿಗೆ ಕಳೆದ ವಾರ ತಂಡಿ ಮತ್ತು ಜ್ವರ ಕಾಣಿಸಿಕೊಂಡಿತ್ತಂತೆ. ತಿರುಪತಿ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗಿದ್ದು, ಭಾನುವಾರದಂದು ಚೇತರಿಸಿಕೊಂಡಿದ್ದ ಬಾಲಕೃಷ್ಣರನ್ನು ವೈದ್ಯರು ಡಿಸ್ಚಾರ್ಜ್​ ಮಾಡಿ ಕಳಿಸಿದ್ದಾರೆ. ಕಳಿಸುವ ವೇಳೆ ಆತನಿಗೆ ಕೊರೊನಾ ಇಲ್ಲ, ವೈರಲ್​ ಫೀವರ್​ ಇರುವುದಾಗಿ ರೋಗಿಯ ಎದುರೇ ಸ್ಪಷ್ಟ ಪಡಿಸಿದ್ದ ವೈದ್ಯರು ಮಾಸ್ಕ್​ ಧರಿಸುವಂತೆ ತಿಳಿಸಿದ್ದಾರೆ. ಮಾಸ್ಕ್​ ಧರಿಸಬೇಕು ಎಂದು ಹೇಳಿದ್ದರಿಂದ ತನಗೆ ಕೊರೊನಾ ಇದೆ ಎಂದು ಭಯಬಿದ್ದ ಬಾಲಕೃಷ್ಣ ಸೋಮವಾರದಂದು ಮನೆಯ ಹತ್ತಿರವಿರುವ ಮರವೊಂದಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.

    ಭಾನುವಾರದಂದು ಆಸ್ಪತ್ರೆಯಿಂದ ಮನೆಗೆ ಬಂದ ಬಾಲಕೃಷ್ಣ ಕುಟುಂಬಸ್ಥರ ಜತೆ ಬೇರೆಯದ್ದೇ ರೀತಿಯಲ್ಲಿ ವರ್ತಿಸಲಾರಂಭಿಸಿದ್ದ. ನನಗೆ ಕೊರೊನಾ ಇದೆ ಯಾರೂ ನನ್ನ ಹತ್ತಿರ ಬರಬೇಡಿ ಎಂದು ಬೈಯಲಾರಂಭಿಸಿದ್ದ. ಯಾರೇ ಹತ್ತಿರ ಬಂದರೂ ಅವರಿಗೆ ಕಲ್ಲು ಹೊಡೆದು, ಹತ್ತಿರವಿದ್ದ ವಸ್ತುವಿನಿಂದ ಹೊಡೆದು ದೂರ ಓಡಿಸುವ ಪ್ರಯತ್ನ ಮಾಡುತ್ತಿದ್ದ. ಕೊನೆಗೆ ಕೋಣೆಯೊಳಗೆ ಸೇರಿಕೊಂಡುಬಿಡುತ್ತಿದ್ದ. ನಮ್ಮನ್ನೆಲ್ಲ ರಕ್ಷಿಸುವ ಸಲುವಾಗಿ ನನ್ನ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಮಗ ಬಾಲಮುರಳಿ ತಿಳಿಸಿದ್ದಾರೆ.

    ಕುಟುಂಬಸ್ಥರು ದೂರು ನೀಡಲು ನಿರಾಕರಿಸುವುದರಿಂದಾಗಿ ಯಾವುದೇ ರೀತಿಯ ದೂರನ್ನು ದಾಖಲಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts