More

    ಗಾಂಧಿ ಕುಟುಂಬದ ಸಲಹೆ, ಮಾರ್ಗದರ್ಶನ ಪಡೆಯಲು ನಾಚಿಕೆಯೇನಿಲ್ಲ: ಮಲ್ಲಿಕಾರ್ಜುನ ಖರ್ಗೆ ಸಮರ್ಥನೆ

    ಬೆಂಗಳೂರು: ಒಂದೆರಡು ಚುನಾವಣೆಗಳಲ್ಲಿ ಹಿನ್ನಡೆಯಾಗಿದೆ ಎಂದ ಮಾತ್ರಕ್ಕೆ ಗಾಂಧಿ ಕುಟುಂಬವನ್ನು ಕಡಿಮೆ ಅಂದಾಜು ಮಾಡಬಾರದು. ಗಾಂಧಿ ಕುಟುಂಬದ ಸಲಹೆ, ಮಾರ್ಗದರ್ಶನ ಪಡೆಯಲು ನಾಚಿಕೆಯೇನಿಲ್ಲ ಎಂದು ಎಐಸಿಸಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಸಮರ್ಥಿಸಿಕೊಂಡರು.

    ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಕರೆದ ಸುದ್ದಿಗೋಷ್ಠಿ‌ಯಲ್ಲಿ ಮಾತನಾಡಿದ ಅವರು, ಗಾಂಧಿ ಕುಟುಂಬದ ರಿಮೋಟ್ ಕಂಟ್ರೋಲ್ ಖರ್ಗೆ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತದೆ. ಅದಕ್ಕೆ ಇನ್ನೂ ಕೆಲವರು ದನಿಗೂಡಿಸುತ್ತಿದ್ದಾರಷ್ಟೇ. ಇಂತಹಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

    ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿವರೆಗೆ ಆ ಕುಟುಂಬದ ತ್ಯಾಗ, ದೇಶಕ್ಕೆ ನೀಡಿದ ಕೊಡುಗೆ ದೊಡ್ಡದು. ಬಡವರು, ಶೋಷಿತರು, ದುರ್ಬಲರ ಏಳಿಗೆ, ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದದ್ದನ್ನು ಯಾರೂ ಮರೆಯುವಂತಿಲ್ಲ ಎಂದು ತಿವಿದರು‌.

    ಪ್ರಾಯೋಜಿತ ಅಭ್ಯರ್ಥಿ
    ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಗಾಂಧಿ ಕುಟುಂಬದವರು ಸ್ಪರ್ಧೆ ಮಾಡುವುದಿಲ್ಲ. ಯಾರೂ ಬೇಕಾದರೂ ಸ್ಪರ್ಧಿಸಲು ಮುಕ್ತ ಅವಕಾಶವಿದೆ ಎಂಬ ಅಭಿಪ್ರಾಯ ನೀಡಿದರು. ಪಕ್ಷದ ಹಿರಿಯರು, ಪ್ರತಿನಿಧಿಗಳ ಒತ್ತಾಸೆಗೆ ಸ್ಪಂದಿಸಿ, ಅವರ ಪ್ರಾಯೋಕತ್ವದ ಅಭ್ಯರ್ಥಿಯಾಗಿರುವೆ. ಪಕ್ಷದ ಸಂಘಟನೆಗೆ ಕಳೆದ 55 ವರ್ಷಗಳಿಂದ ದುಡಿಯುತ್ತಿದ್ದು, ನಿರ್ದಿಷ್ಟ ಸ್ಥಾನಮಾನ ಎಂದೂ ನಿರೀಕ್ಷಿಸಿಲ್ಲ. ತಳಹಂತದಿಂದ ಪಕ್ಷ ಕಟ್ಟುತ್ತಾ ಬೆಳೆದಿದ್ದು, ವಹಿಸಿದ ಜವಾಬ್ದಾರಿ ಪ್ರಾಮಾಣಿಕವಾಗಿ ನಿರ್ವಹಿಸಿರುವೆ. ನಮ್ಮ ಮನೆಯೊಳಗಿನ ಚುನಾವಣೆಯಿದು. ಪ್ರತಿಸ್ಪರ್ಧಿ ಶಶಿ ತರೂರ್ ಬಗ್ಗೆ ಯಾವುದೇ ಹೇಳಿಕೆ ನೀಡಿ ವಿವಾದ ಹುಟ್ಟಿಹಾಕಲು ಬಯಸುವುದಿಲ್ಲ. ಇದೊಂದು ಫ್ರೆಂಡ್ಲಿ ಫೈಟ್ ಎಂದು ಖರ್ಗೆ ವ್ಯಾಖ್ಯಾನಿಸಿದರು.

    ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಕಲ್ಯಾಣ ಕರ್ನಾಟಕ ಪ್ರವೇಶಿಸಿದ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಭೇಟಿ ನೀಡಿದ್ದು, ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿರುವ ನನಗೆ ಪಕ್ಷದ ಎಲ್ಲ ಪ್ರತಿನಿಧಿಗಳು ಬೆಂಬಲಿಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದರು.

    ಪ್ರತಿ 12 ವರ್ಷಕ್ಕೊಮ್ಮೆ ನಿಗದಿತವಾಗಿ ಕುಂಭಮೇಳ ಮಾಡಲು ಸರ್ಕಾರಿ ಆದೇಶ ಮಾಡಿಸುತ್ತೇನೆ: ಸಿಎಂ ಬೊಮ್ಮಾಯಿ

    ಟಿ20 ವಿಶ್ವಕಪ್​: ಇಂಡೋ-ಪಾಕ್​ ಹೈವೋಲ್ಟೇಜ್​ ಪಂದ್ಯಕ್ಕೆ ಎದುರು ನೋಡ್ತಿದ್ದೀರಾ? ಇಲ್ಲಿದೆ ಬ್ಯಾಡ್​ ನ್ಯೂಸ್​…

    ಭಾರಿ ಮಳೆಯಿಂದ ರಸ್ತೆಗೆ ಹಾನಿ: ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ವಾಹನ ಸಂಚಾರ ಸ್ಥಗಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts