More

    ಮಲೆನಾಡ ಗಿಡ್ಡ ಗೋವು ಸಂಪತ್ತು

    ಗಂಗಾಧರ ಕಲ್ಲಪಳ್ಳಿ ಸುಳ್ಯ
    ಈ ಮನೆಯ ಅಂಗಳಕ್ಕೆ ಬಂದರೆ ಓಡೋಡಿ ಬಂದು ನಮ್ಮನ್ನು ಸ್ವಾಗತಿಸುವುದು ಮುದ್ದು ಮುದ್ದಾದ ಕರುಗಳು. ಇಲ್ಲಿನ ಪರಿಸರದಲ್ಲಿ ಎಲ್ಲೆಡೆ ಕೇಳಿಸುವುದು ಅಂಬಾ ಕೂಗಿನ ಪ್ರತಿಧ್ವನಿ. ಹೀಗೆ ಮಲೆನಾಡ ಗಿಡ್ಡ ತಳಿಯ ಗೋವುಗಳ ಕಲರವ ತುಂಬಿದ ನಂದಗೋಕುಲದಂತೆ ಭಾಸವಾಗುವುದು ಸುಳ್ಯ ತಾಲೂಕಿನ ಐವರ್ನಾಡಿನ ಕೊಯಿಲದ ಕೃಷಿಕ ವಿಶ್ವನಾಥ ಪೈ ಅವರ ಮನೆ.

    5 ದಶಕಗಳಿಂದ ಪ್ರೀತಿಯಿಂದ ಸಾಕಿ ಸಲಹುವ ಮಲೆನಾಡ ಗಿಡ್ಡ ತಳಿಯ ಗೋವುಗಳೇ ಈ ಮನೆಯ ಸಂಪತ್ತು. ಒಂದಲ್ಲ, ಎರಡಲ್ಲ ತನ್ನ ಮಕ್ಕಳಂತೆ ಸಾಕಿ ಸಲಹುವ 84 ಗೋವುಗಳು ಈ ಮನೆಯನ್ನು ಬೆಳಗಿವೆ. ತನಗೆ ಪಿತ್ರಾರ್ಜಿತವಾಗಿ ದೊರೆತ ಎರಡು ದನಗಳಿಂದ ಇಂದು ಮನೆ ತುಂಬಾ ಗೋ ಸಂಪತ್ತು ಬೆಳೆದಿದೆ. 1969ರಲ್ಲಿ ಇವರ ಕುಟುಂಬದ ಆಸ್ತಿ ಜತೆಗೆ ಎರಡು ಗೋವುಗಳು ದೊರೆತವು. ಇವು ಬೆಳೆದು ಕಪ್ಪು, ಬಿಳಿ, ಕೆಂಪು, ಕಂದು ಹೀಗೆ ವಿವಿಧ ಬಣ್ಣದ ಮತ್ತು ವಿವಿಧ ಗಾತ್ರದ ಹಸುಗಳು, ಕರುಗಳು ವೈವಿಧ್ಯತೆಯನ್ನು ಸಾರಿದೆ.

    ಹಸು ಸಾಕಣೆಯನ್ನು ಎಂದೂ ಇವರು ಲಾಭದಾಯಕ ದೃಷ್ಟಿಯಿಂದ ನೋಡುವುದಿಲ್ಲ. ಇವರು ದನಗಳನ್ನು ಮಾರಾಟ ಮಾಡುವುದಾಗಲಿ, ಇನ್ನೊಬ್ಬರಿಗೆ ನೀಡುವುದಾಗಲಿ ಇಲ್ಲ. ಹಾಲನ್ನು ಕೂಡ ಮಾರಾಟ ಮಾಡುವುದಿಲ್ಲ. ತಮ್ಮ ಮನೆಯ ಅಗತ್ಯಕ್ಕೆ ತಕ್ಕ ಹಾಲು ಕರೆದು ಉಳಿದದನ್ನು ಕರುಗಳಿಗೆ ಕುಡಿಯಲು ಬಿಡುತ್ತಾರೆ. ತಮ್ಮ ಮಕ್ಕಳಂತೆ, ಕುಟುಂಬದ ಸದಸ್ಯರಂತೆ ಗೋವುಗಳನ್ನು ಪಾಲನೆ ಮಾಡುತ್ತಾರೆ. ಆರೋಗ್ಯಕ್ಕೆ ಹಿತವಾದ ಸಮೃದ್ಧ ಹಾಲು ದೊರೆಯುವುದರ ಜತೆಗೆ ತಮ್ಮ 4.70 ಎಕರೆ ಅಡಕೆ ತೋಟಕ್ಕೆ ಬೇಕಾಗುವ ಸಾವಯವ ಗೊಬ್ಬರವೂ ಇವರಿಗೆ ದೊರೆಯುತ್ತದೆ. ಕರು ಬಿಡುವ 10 ಹಸುಗಳು, 30 ಹೋರಿಗಳು ಇವರ ಹಟ್ಟಿಯನ್ನು ತುಂಬಿದೆ.

    ಶಿಸ್ತಿನ ಸಿಪಾಯಿಗಳು: ವಿಶ್ವನಾಥ ಪೈಗಳ ಮನೆಯ ಮಲೆನಾಡ ಗಿಡ್ಡ ದನಗಳನ್ನು ಬೆಳಗ್ಗೆ ಗುಡ್ಡಕ್ಕೆ ಮೇಯಲು ಬಿಟ್ಟರೆ ಹುಲ್ಲು ಮೇಯ್ದು ಶಿಸ್ತಿನ ಸಿಪಾಯಿಗಳಂತೆ ಸಂಜೆ ವೇಳೆಗೆ ಮರಳಿ ಹಟ್ಟಿಗೆ ಬಂದು ಸೇರುತ್ತವೆ. ಬೆಳಗ್ಗೆ ಮತ್ತು ಸಂಜೆ ಅಕ್ಕಿ ಮಡ್ಡಿ, ಹಸಿಹುಲ್ಲು, ಬೈಹುಲ್ಲು ಮತ್ತು ಹಿಂಡಿಯನ್ನು ಪೈಗಳು ಪ್ರೀತಿಯಿಂದ ದನಗಳಿಗೆ ನೀಡುತ್ತಾರೆ. ಹುಲ್ಲು ಬೆಳೆಯುವುದಕ್ಕೆ ಒಂದು ಎಕರೆ ಜಾಗ ಮೀಸಲಿರಿಸಿದ್ದಾರೆ. ತನ್ನ 73ನೇ ವಯಸ್ಸಿನಲ್ಲಿಯೂ ಹಸುಗಳ ಹಾಲು ಕರೆಯುವುದು, ಹುಲ್ಲು ಹಾಕುವುದು ಸೇರಿದಂತೆ ದನಗಳ ಕೆಲಸವನ್ನು ವಿಶ್ವನಾಥ ಪೈಗಳೇ ಮಾಡುತ್ತಾರೆ. ಅವರ ಪತ್ನಿ ನಿವೇದಿತಾ ಪೈ, ಪುತ್ರ ವಿಕ್ರಂ ಪೈ ಗೋವುಗಳ ಆರೈಕೆಯಲ್ಲಿ ಕೈ ಜೋಡಿಸುತ್ತಾರೆ.

    ದನಗಳನ್ನು ಸಾಕಿ ಸಲಹುವುದು, ಅವುಗಳ ಕೆಲಸ ಮಾಡುವುದು ಮನಸ್ಸಿಗೆ ಖುಷಿ ಕೊಡುವ ವಿಚಾರ. ನಮ್ಮ ಮನೆಗೆ ಈ ಗೋವುಗಳೇ ಸಂಪತ್ತು. ಮಲೆನಾಡ ಗಿಡ್ಡ ತಳಿಯನ್ನು ಪ್ರತಿ ಮನೆಯಲ್ಲಿಯೂ ಸಾಕಿ ಸಲಹುವ ಕೆಲಸ ಆಗಬೇಕಾಗಿದೆ.
    ವಿಶ್ವನಾಥ ಪೈ

    ನಮ್ಮ ಮನೆಯಲ್ಲಿರುವ ಗೋವುಗಳು ಮನೆಯ ಸದಸ್ಯರಿದ್ದಂತೆ. ಆದ್ದರಿಂದಲೇ ಅಷ್ಟೇ ಪ್ರೀತಿ ವಾತ್ಸಲ್ಯದಿಂದ ಅವುಗಳನ್ನು ಸಾಕಿ ಸಲಹುತ್ತಿದ್ದೇವೆ. ಗೋವುಗಳನ್ನು ಸಾಕುವ ಪರಂಪರೆಯನ್ನು ಮುಂದುವರಿಸುತ್ತೇವೆ. ಮಲೆನಾಡ ಗಿಡ್ಡ ತಳಿಗಳನ್ನು ಪೋಷಿಸಿ ಉಳಿಸಲು ಕೃಷಿಕರಿಗೆ ಸರ್ಕಾರದಿಂದಲೂ ಪ್ರೋತ್ಸಾಹ, ಸಹಕಾರ ಅಗತ್ಯ.
    ವಿಕ್ರಂ ಪೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts