More

    ನಿಯಮ ಉಲ್ಲಂಘಿಸಿ ತುರ್ತು ಸಭೆ:ಪ್ರತಿಭಟನೆ

    ಮಳವಳ್ಳಿ: ಪುರಸಭೆ ಮುಖ್ಯಾಧಿಕಾರಿ ಅಧಿಕಾರ ದುರ್ಬಳಕೆ ಮಾಡಿಕೊಂಡು ನಿಯಮ ಉಲ್ಲಂಘಿಸಿ ನಾಲ್ಕು ತುರ್ತು ಸಭೆಗಳನ್ನು ನಡೆಸುವ ಮೂಲಕ ಹಲವು ನಿರ್ಣಯಗಳನ್ನು ಕೈಗೊಂಡಿದ್ದಾರೆ ಎಂದು ಸದಸ್ಯ ಟಿ.ನಂದಕುಮಾರ್ ಆರೋಪಿಸಿದರು.

    ಪುರಸಭೆ ಆಡಳಿತ ಆಸ್ತಿತ್ವದಲ್ಲಿದ್ದರೂ ಕಾನೂನುಬಾಹಿರವಾಗಿ ಸದಸ್ಯರ ಗಮನಕ್ಕೂ ತಾರದೇ ಮುಖ್ಯಾಧಿಕಾರಿ ಏಕ ಪಕ್ಷೀಯವಾಗಿ ನಿರ್ಣಯ ಮಾಡಿಕೊಂಡು ಸದಸ್ಯರ ಹಕ್ಕನ್ನು ಕಸಿದುಕೊಂಡಿದ್ದಾರೆಂದು ಆರೋಪಿಸಿ, ಪುರಸಭೆ ಆವರಣದಲ್ಲಿ ಶುಕ್ರವಾರ ಗಾಂಧೀಜಿ ಮತ್ತು ಅಂಬೇಡ್ಕರ್ ಭಾವಚಿತ್ರಗಳನ್ನಿಟ್ಟು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

    ಪುರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷ ಇಲ್ಲದಿರಬಹುದು. ಆದರೆ ಪಟ್ಟಣದ 23 ವಾರ್ಡ್‌ಗಳಲ್ಲೂ ಸದಸ್ಯರಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷರು ಇಲ್ಲದಿರುವ ಸಂದರ್ಭದಲ್ಲಿ ಆಡಳಿತಾಧಿಕಾರಿ ಯಾವುದೇ ಸಭೆಗಳನ್ನು ನಡೆಸುವಂತಿಲ್ಲ. ಆಡಳಿತ್ಮಾಕ ವಿಚಾರವಾಗಿ ಮಾಡಲೇಬೇಕಾದ ಅನಿವಾರ್ಯತೆ ಇದ್ದರೆ ಸದಸ್ಯರ ಸಾಮಾನ್ಯಸಭೆ ಕರೆದು ಚರ್ಚಿಸಿ ನಿರ್ಣಯ ಕೈಗೊಳ್ಳಬೇಕು. ಆದರೆ ಇಲ್ಲಿನ ಮುಖ್ಯಾಧಿಕಾರಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ನಾಲ್ಕು ತುರ್ತು ಸಭೆಗಳನ್ನು ನಡೆಸಿ, ತಮಗಿಷ್ಟಬಂದಂತೆ ನಿರ್ಣಯ ಬರೆದುಕೊಂಡಿದ್ದಾರೆ ಎಂದು ಆರೋಪಿಸಿದರು.

    ಪುರಸಭೆಗೆ ನಿಗದಿಯಾಗಿದ್ದ 15ನೇ ಹಣಕಾಸು ಅನುದಾನ ಹಾಗೂ ಇತರ ಯೋಜನೆಗಳನ್ನು ಅನುಮೋದನೆ ಪಡೆದುಕೊಂಡಿದ್ದಾರೆ. ಹಲವು ಅಕ್ರಮ ಖಾತೆಗಳನ್ನು ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಮುಂದಿನ ತಿಂಗಳು ನಡೆಯುವ ಸಿಡಿಹಬ್ಬ ಆಚರಣೆ ಸಂಬಂಧವೂ ಸದಸ್ಯರ ಸಹಕಾರ ಪಡೆಯದೆ ಇವರೇ ಹಬ್ಬದ ಆಚರಣೆ ಮಾಡಿಕೊಳ್ಳಲಿ. ಏನಾದರೂ ಅಹಿತಕರ ಘಟನೆಗಳು ನಡೆದರೆ ಅದರ ಹೊಣೆಗಾರಿಕೆಯನ್ನು ಪುರಸಭೆ ಆಡಳಿತಾಧಿಕಾರಿ ಹಾಗೂ ಮುಖ್ಯಾಧಿಕಾರಿಯೇ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಮುಖ್ಯಾಧಿಕಾರಿ ನಾಗರತ್ನಾ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸದಸ್ಯರ ಮನವೊಲಿಸಲು ಮುಂದಾದರು. ಆದರೆ ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿ ನಮ್ಮ ಅಹವಾಲು ಕೇಳಬೇಕೆಂದು ಪಟ್ಟು ಹಿಡಿದು ಧರಣಿ ಮುಂದುವರಿಸಿದರು. ಸದಸ್ಯರಾದ ಪುಟ್ಟಸ್ವಾಮಿ, ಪ್ರಶಾಂತ್, ಕೃಷ್ಣ, ಸಿದ್ದರಾಜು, ಕುಮಾರ್, ನೂರುಲ್ಲಾ, ಜಯಸಿಂಹ, ರಾಧಾ ನಾಗರಾಜು, ಮಣಿ ನಾರಾಯಣ, ರವಿ, ಭಾಗ್ಯಮ್ಮ, ಸವಿತಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts