More

    ಕಿರುಸಾಲ ಯೋಜನೆ ಸದುಪಯೋಗಪಡಿಸಿ: ಶಶಿಕಲಾ ವಿ. ಟಿಂಗಳೆ ಮನವಿ

    ಉಡುಪಿ: ಕಿರು ಉದ್ಯಮ, ವ್ಯಾಪಾರ ನಡೆಸಲು ಅನುಕೂಲವಾಗುವಂತೆ ಮಹಿಳೆಯರಿಗೆ 2 ರಿಂದ 5 ಲಕ್ಷ ರೂಪಾಯಿ ಕಿರುಸಾಲ ನೀಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಲು ಕ್ರಮ ವಹಿಸಿ ಪ್ರಸ್ತಾವನೆ ಕಳುಹಿಸಬೇಕು ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ. ಟಿಂಗಳೆ ಹೇಳಿದರು.

    ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಉದ್ಯೋಗಿನಿ, ಸಮೃದ್ಧಿ, ಕಿರುಸಾಲ, ಧನಶ್ರೀ, ಚೇತನ, ಲಿಂಗತ್ವ ಅಲ್ಪಸಂಖ್ಯಾತ, ಮಹಿಳೆಯರಿಗೆ ಕೌಶಲ ತರಬೇತಿ, ಮಹಿಳಾ ಸ್ವ-ಉದ್ಯೋಗ ಮಾರ್ಗದರ್ಶನ ಕೇಂದ್ರ ಯೋಜನೆ, ಪರಿಶಿಷ್ಟ ಜಾತಿ, ಪಂಗಡ ಉಪಯೋಜನೆಗಳನ್ನು ಪ್ರತಿಶತ ನೂರರಷ್ಟು ಅನುಷ್ಠಾನಗೊಳಿಸಬೇಕು ಎಂದರು.

    ಎಲ್ಲ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾದ ಯೋಜನೆಗಳಿಂದ ಉಳಿಕೆಯಾದ 12 ಕೋಟಿ ರೂ. ಹಣವನ್ನು ಮಹಿಳಾ ಅಭಿವೃದ್ಧಿ ನಿಗಮದ 24,802 ಫಲಾನುಭವಿಗಳಿಗೆ ಕೋವಿಡ್ ಸಂಕಷ್ಟದಲ್ಲಿ ತಲಾ 10,000 ರೂ. ಹಂಚಿಕೆ ಮಾಡಲಾಗಿದೆ ಎಂದರು. ಸ್ವ- ಉದ್ಯೋಗ ಕೈಗೊಳ್ಳಲು ವಾಣಿಜ್ಯ ಬ್ಯಾಂಕುಗಳ ಮೂಲಕ ಸಬ್ಸಿಡಿ ಲೋನ್ ಪಡೆದವರು ಅದನ್ನು ಸದ್ಬಳಕೆ ಮಾಡಿಕೊಳ್ಳುವ ಜತೆಗೆ ನಿಗದಿತ ಅವಧಿಯೊಳಗೆ ಮರುಪಾವತಿ ಮಾಡಲು ಮುಂದಾದಲ್ಲಿ ವಾಣಿಜ್ಯ ಬ್ಯಾಂಕುಗಳು ಹೆಚ್ಚಿನ ನೆರವು ನೀಡಲು ಸಾಧ್ಯ ಎಂದರು.

    ಎಚ್‌ಐವಿ ಸೋಂಕಿತರ ಮಕ್ಕಳಿಗೆ ಗೌರವಯುತ ಬದುಕು ರೂಪಿಸಲು, ಶಿಕ್ಷಣಕ್ಕೆ ಅನುಕೂಲವಾಗುವಂತೆ ಸ್ಕಾಲರ್‌ಶಿಪ್ ಸಹಿತ ಹೊಸ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.

    ಲಿಂಗತ್ವ ಅಲ್ಪಸಂಖ್ಯಾತರ ಅಸಮಾಧಾನ: ಹಲವಾರು ವರ್ಷಗಳಿಂದ ನಿವೇಶನ ಕೊಡುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗುತ್ತಿದೆ. ಆದರೆ ಈವರೆಗೆ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ಲಿಂಗತ್ವ ಅಲ್ಪಸಂಖ್ಯಾತರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಲಿಂಗತ್ವ ಅಲ್ಪಸಂಖ್ಯಾತರಿಗೆ ಸ್ವ-ಉದ್ಯೋಗ, ಹೈನುಗಾರಿಕೆ ಕೈಗೊಳ್ಳಲು ಹಾಗೂ ಅವರಿಗೆ ನಿವೇಶನ ಒದಗಿಸುವ ಕುರಿತಂತೆ ಜಿಲ್ಲಾಧಿಕಾರಿ ಜತೆ ಚರ್ಚಿಸಿ ಸರ್ಕಾರದ ಜಮೀನು ನೀಡಲು ಮನವಿ ಮಾಡಲಾಗಿದೆ ಎಂದು ನಿಗಮದ ಅಧ್ಯಕ್ಷೆ ಶಶಿಕಲಾ ವಿ.ಟೆಂಗಳೆ ಭರವಸೆ ನೀಡಿದರು.

    ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕಿರಣ್ ಫಡ್ನೇಕರ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್ ಶೇಷಪ್ಪ, ಲೀಡ್‌ಬ್ಯಾಂಕ್ ಮ್ಯಾನೇಜರ್ ಸಿ ರುದ್ರೇಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶಿಲ್ಪಾ ಸುವರ್ಣ ಸಭೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts