More

    ಒಂದು ಕೋಟಿ ಗೆಲ್ಲಲು ಕೇಂದ್ರ ನೀಡಿದೆ ಸುವರ್ಣಾವಕಾಶ: ಆ್ಯಪ್‌ ತಯಾರಿಸಿ, ಬಹುಮಾನ ಗೆಲ್ಲಿ!

    ನವದೆಹಲಿ: ‘ಅಲ್ಪ ಕಾಲದಲ್ಲಿಯೇ ಭಾರಿ ಜನಪ್ರಿಯತೆ ಪಡೆದುಕೊಂಡಿರುವ ಚೀನಾ ನಿರ್ಮಿತ ‘ಝೂಮ್‌‘ ವೀಡಿಯೋ ಕಾಲಿಂಗ್‌ ಆ್ಯಪ್‌ ಅತ್ಯಂತ ಅಪಾಯಕಾರಿ ಎಂದು ಕೇಂದ್ರ ಸರ್ಕಾರ ಘೋಷಿಸಿರುವ ಬೆನ್ನಲ್ಲೇ, ಈಗ ಇದಕ್ಕೆ ಸೆಡ್ಡು ಹೊಡೆಯುವಂಥ ಆ್ಯಪ್‌ ಒಂದನ್ನು ತಯಾರಿಸಲು ಭಾರತೀಯರಿಗೆ ಕರೆ ಕೊಟ್ಟಿದೆ.

    ಭಾರತೀಯ ಮೂಲದ್ದೇ ಆ್ಯಪ್‌ ಬೇಕೆಂದು ಬಯಸಿರುವ ಕೇಂದ್ರ ಸರ್ಕಾರ, ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದ ಅಡಿ ಒಂದು ಅಪ್ಲಿಕೇಶನ್ ಅಭಿವೃದ್ಧಿಪಡಿಸಲು ಅಪ್ಲಿಕೇಶನ್ ಡೆವಲಪರ್‌ಗಳಿಗೆ ಕರೆ ನೀಡಿದೆ, ಮಾತ್ರವಲ್ಲದೇ ಇದಕ್ಕಾಗಿ ಒಂದು ಕೋಟಿ ರೂಪಾಯಿ ಬಹುಮಾನವನ್ನೂ ಮೀಸಲು ಇಟ್ಟಿದೆ.

    ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಲವಾರು ಸಂಘ-ಸಂಸ್ಥೆಗಳು, ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ‘ವರ್ಕ್‌ ಫ್ರಂ ಹೋಂ’ ಕೊಟ್ಟಿರುವ ಕಾರಣ ಎಲ್ಲರೂ ಹೆಚ್ಚಾಗಿ ಆನ್‌ಲೈನ್ ವೀಡಿಯೋಗಾಗಿ ಝೂಮ್‌ ಆ್ಯಪ್‌ ಬಳಸುತ್ತಿದ್ದರು. ಆದರೆ ಸೈಬರ್ ಭದ್ರತೆಯ ದೃಷ್ಟಿಯಿಂದ ಅದನ್ನು ಬಳಸದಂತೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿತ್ತು. ಇದರ ಬದಲಿಗೆ ಪರ್ಯಾಯವಾಗಿ ಮನೆಯಿಂದಲೇ ಕೆಲಸ ಮಾಡುವವರಿಗೆ ನೆರವಾಗುವಂಥ ವಿಡಿಯೊ ಕಾನ್ಫರೆನ್ಸಿಂಗ್ ಪ್ಲ್ಯಾಟ್‌ಫಾರ್ಮ್ ರಚನೆಗೆ ಆಹ್ವಾನಿಸುತ್ತಿದ್ದೇವೆ ಎಂದು ಕೇಂದ್ರ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

    ಈ ಅಪ್ಲಿಕೇಷನ್‌ಗಳ ವಿವರಣೆ ನೀಡಿರುವ ಸಚಿವಾಲಯವು, ಆ್ಯಪ್‌ ಒಳಗೊಂಡಿರಬೇಕಿರುವ ಕೆಲವೊಂದು ಲಕ್ಷಣಗಳ ಬಗ್ಗೆ ವಿವರಿಸಿದೆ. ಅದೇನೆಂದರೆ, ವೀಡಿಯೋ ಮತ್ತು ಆಡಿಯೋಗಳು ಒಳ್ಳೆಯ ಗುಣಮಟ್ಟದಿಂದ ಕೂಡಿರಬೇಕು, ಅನೇಕ ಮಂದಿ ವೀಡಿಯೋ ಕಾನ್ಫರೆನ್ಸ್‌ ಮಾಡಲು ಹಾಗೂ ಚಾಟಿಂಗ್‌ ಮಾಡಲು ಅನುಕೂಲವಾಗಿರಬೇಕು, ಯಾವುದೇ ಮೊಬೈಲ್‌ ಸಾಧನದಲ್ಲಿಯೂ ಕಾರ್ಯ ನಿರ್ವಹಿಸುವಂತಿರಬೇಕು, ಹೊರಗಿನ ಹಾರ್ಡ್‌ವೇರ್‌ ಅವಲಂಬನೆ ಇರಬಾರದು, ವಿದ್ಯುತ್ ಮತ್ತು ಪ್ರೊಸೆಸರ್ ಬಳಕೆ ಕನಿಷ್ಠ ಮಟ್ಟದಲ್ಲಿರಬೇಕು, ಬ್ರೌಸರ್ ಹಾಗೂ ಆ್ಯಪ್ ಆಧಾರಿತ ಇಂಟರ್‌ಫೇಸ್‌ ಹೊಂದಿರಬೇಕು, ಆಡಿಯೊ ಮತ್ತು ವಿಡಿಯೊ ರೆಕಾರ್ಡಿಂಗ್ ಸೌಕರ್ಯ ಇರಬೇಕು.ಸ್ಕ್ರೀನ್‌ ಮತ್ತು ಫೈಲ್‌ ಹಂಚಿಕೊಳ್ಳುವ ಸಾಮರ್ಥ್ಯ ಇರಬೇಕು ಎಂದಿದೆ.

    ಈಗಾಗಲೇ ಇದಕ್ಕೆ ಅರ್ಜಿ ಕರೆಯಲು ಆರಂಭಿಸಲಾಗಿದ್ದು ಕೊನೆಯ ದಿನ ಏ.30 ಆಗಿದೆ. ಆಯ್ದವರ ಹೆಸರನ್ನು ಜುಲೈ 29ರಂದು ಕೇಂದ್ರ ಸರ್ಕಾರ ಪ್ರಕಟಿಸಲಿದೆ. ಆಯ್ಕೆಯಾದವರಿಗೆ ಒಂದು ಕೋಟಿ ಮೊತ್ತದ ಜತೆಗೆ ಕೇಂದ್ರ ಸರ್ಕಾರದ ಪ್ರಮಾಣ ಪತ್ರವೂ ಸಿಗಲಿದೆ.

    ಹೆಚ್ಚಿನ ಮಾಹಿತಿಗೆ https://bit.ly/3br4PvT ವೆಬ್‌ಸೈಟ್‌ ನೋಡಬಹುದು. (ಏಜೆನ್ಸೀಸ್‌)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts