More

    ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳ ಅರಿವು ಮೂಡಿಸಿ

    ಶಿಕಾರಿಪುರ: ಪಠ್ಯಕ್ಕೆ ನೀಡಿದಷ್ಟು ಮಹತ್ವವನ್ನು ಪಠ್ಯೇತರ ಚಟುವಟಿಕೆಗಳಿಗೂ ನೀಡಬೇಕು. ಸಾಂಸ್ಕೃತಿಕ ಉತ್ಸವಗಳಿಂದ ಮಕ್ಕಳಲ್ಲಿರುವ ಕಲೆಗಳ ಅನಾವರಣವಾಗುತ್ತದೆ. ಇದು ಮಕ್ಕಳಿಗೆ ಸಂಭ್ರಮದ ದಿನ ಎಂದು ಬಿಇಒ ಜಿ.ಎಸ್.ಶಶಿಧರ್ ಹೇಳಿದರು.

    ಗುರುವಾರ ಆಯೋಜಿಸಿದ್ದ ಮೈತ್ರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಅರಿವು ಮತ್ತು ಜ್ಞಾನ ನೀಡುವುದರ ಜತೆಗೆ ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸುವವರು. ಇದಕ್ಕೆ ಪಾಲಕರು ಪೂರಕವಾಗಿರಬೇಕು. ಇಂದು ಹಳ್ಳಿಗಾಡಿನ ಮಕ್ಕಳು ಸಿಟಿ ಮಕ್ಕಳಿಗೆ ಸ್ಪರ್ಧೆಯೊಡ್ಡುತ್ತಿದ್ದಾರೆ. ಶಿಕ್ಷಣದಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದರು.
    ಮಕ್ಕಳಲ್ಲಿ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳ ಅರಿವು ಹಾಗೂ ಸಾಮಾಜಿಕ ಕಳಕಳಿಯನ್ನು ಮೂಡಿಸಬೇಕು. ಶಿಕ್ಷಣ ಕೇವಲ ಅಂಕಗಳಿಗೆ ಸೀಮಿತವಾಗದೆ ಮಕ್ಕಳ ವ್ಯಕ್ತಿತ್ವವನ್ನೂ ರೂಪಿಸಬೇಕು. ಮಕ್ಕಳಲ್ಲಿ ರಾಷ್ಟ್ರ ಪ್ರೇಮ ಸೃಜಿಸುವಂತೆ ಮಾಡಬೇಕು. ನೆಲ, ಜಲ, ಭಾಷೆಯ ಬಗ್ಗೆ ಅಭಿಮಾನ ಮೂಡಿಸಬೇಕು. ಕುಮದ್ವತಿ ವಿದ್ಯಾಸಂಸ್ಥೆ ಸಂಸ್ಕಾರಯುತವಾದ ಶಿಕ್ಷಣ ನೀಡುತ್ತಿದೆ. ಮಕ್ಕಳಲ್ಲಿ ವ್ಯಕ್ತಿತ್ವ ನಿರ್ಮಾಣ ಮಾಡುತ್ತಿದೆ. ಈ ಸಂಸ್ಥೆಗೆ ನ್ಯಾಕ್ ಸಮಿತಿ ಎ ಗ್ರೇಡ್ ನೀಡಿದೆ. ಇದು ಈ ಸಂಸ್ಥೆಯ ಶಿಕ್ಷಕರು ಮತ್ತು ಆಡಳಿತ ಮಂಡಳಿಯ ಪರಿಶ್ರಮದ ಫಲ ಎಂದು ಹೇಳಿದರು.
    ಸೋಲಿರಲಿ, ಗೆಲುವಿರಲಿ ಆರೋಗ್ಯಕರವಾದ ಸ್ಪರ್ಧೆ ಇರಬೇಕು. ಒಂದು ಸೋಲು ಹತ್ತು ಗೆಲುವನ್ನು ತಂದು ಕೊಡಬಲ್ಲಷ್ಟು ಛಲವನ್ನು ನಮ್ಮಲ್ಲಿ ಹುಟ್ಟುವಂತೆ ಮಾಡುತ್ತದೆ. ಪ್ರತಿ ವಿದ್ಯಾರ್ಥಿಯ ಯಶಸ್ಸಿನ ಹಿಂದೆ ಶಿಕ್ಷಕರ, ಪಾಲಕರ ಮತ್ತು ಆ ಸಂಸ್ಥೆ ಯ ಪಾಲಿರುತ್ತದೆ. ವಿದ್ಯೆ ಯಾವತ್ತೂ ಸಾಧಕನ ಸೊತ್ತು. ಶಿಕ್ಷಣದಿಂದ ಮಾತ್ರ ದೇಶದ ಪ್ರಗತಿ. ಉತ್ತಮ ಶಿಕ್ಷಣ ನಮ್ಮನ್ನು ಸತ್ಪ್ರಜೆಗಳನ್ನಾಗಿ ರೂಪಿಸುತ್ತದೆ ಎಂದರು.
    ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಿ.ಎಸ್.ಶಿವಕುಮಾರ್ ಮಾತನಾಡಿ, ಕುಮದ್ವತಿ ಶಿಕ್ಷಣ ಸಂಸ್ಥೆಗೆ ಇದೀಗ ರಜತೋತ್ಸವದ ಸಂಭ್ರಮ. ಗ್ರಾಮಾಂತರ ಪ್ರದೇಶಗಳ ಮಕ್ಕಳಿಗೆ ಉನ್ನತವಾದ ಸಂಸ್ಕಾರಯುತ ಶಿಕ್ಷಣ ದೊರೆಯಬೇಕೆಂಬ ಆಡಳಿತ ಮಂಡಳಿಯ ಅಪೇಕ್ಷೆಯಂತೆ ಪ್ರಾರಂಭವಾದ ಸಂಸ್ಥೆ ಇಂದು ತ್ರಿವಿಕ್ರಮನಂತೆ ಬೆಳೆದು ನಿಂತಿದೆ. ಗುಣಮಟ್ಟದಲ್ಲಿ ತನ್ನದೇ ಸ್ಥಾನವನ್ನು ಸಂಸ್ಥೆ ಪಡೆದಿದೆ ಎಂದು ತಿಳಿಸಿದರು.
    ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು. ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಬಿ.ಶಿವಕುಮಾರ್, ಆಡಳಿತಾಧಿಕಾರಿ ಆರ್.ಎಂ.ಕುಬೇರಪ್ಪ, ಮೈತ್ರಿ ಶಾಲೆಯ ಪ್ರಾಚಾರ್ಯ ವಿಶ್ವನಾಥ್, ಮುಖ್ಯಶಿಕ್ಷಕ ಪ್ರಶಾಂತ್ ಕುಬುಸದ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts