More

    ಹೆನ್ನಾಗರವನ್ನು ರಾಷ್ಟ್ರ ಖ್ಯಾತಿಗೇರಿಸಿದ ಮಹೇಶ್!

    ‘ಭಾರತದ ಹೃದಯ ಗ್ರಾಮೀಣ ಪ್ರದೇಶಗಳಲ್ಲಿದೆ’ ಎಂಬ ಉಕ್ತಿಗೆ ಪೂರಕವಾಗಿ ಸಾಧನೆ ಮೆರೆದವರು ಆರ್. ಮಹೇಶ್. ಆನೇಕಲ್ ತಾಲೂಕಿನ ಜಿಗಣಿ ಹೋಬಳಿ ವ್ಯಾಪ್ತಿಯ ಹೆನ್ನಾಗರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಯಾರೇ ಆದರೂ ಈ ಮಾತನ್ನು ಅನುಮೋದಿಸುತ್ತಾರೆ. 2020ರಲ್ಲಿನ ಚುನಾವಣೆಗೆ ಸ್ಪರ್ಧಿಸಿ, ಮೊದಲ ಪ್ರಯತ್ನದಲ್ಲೇ ಗೆಲುವಿನ ಪತಾಕೆ ಹಾರಿಸಿದ್ದಲ್ಲದೆ ಅಧ್ಯಕ್ಷರಾಗಿಯೂ ಆಯ್ಕೆಯಾದ ಹೆಗ್ಗಳಿಕೆ ಮಹೇಶ್ ಅವರದ್ದು. ಗ್ರಾಪಂನಲ್ಲಿ ಅತ್ಯಾಧುನಿಕ ಮೂಲಸೌಕರ್ಯ ಕಲ್ಪಿಸಿರುವ ಅವರು, 20 ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಿ ಸ್ವಚ್ಛತೆ, ಶಿಕ್ಷಣ, ಆರ್ಥಿಕ ಸ್ವಾವಲಂಬನೆಗೆ ಹೆಚ್ಚು ಒತ್ತು ನೀಡಿದ್ದಾರೆ. ಎರಡು ಬಾರಿ ರಾಷ್ಟ್ರೀಯ ಗ್ರಾಮ ಪುರಸ್ಕಾರಕ್ಕೆ ಭಾಜನವಾಗುವಲ್ಲಿ ಅಪೂರ್ವ ಕಾಣಿಕೆ ಸಲ್ಲಿಸಿದ್ದಾರೆ. ಈಗಾಗಲೇ ಗ್ರಾಪಂ ಅನ್ನು ಮಾದರಿಯಾಗಿ ರೂಪಿಸಿದ್ದು, ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಸಾಕಾರಗೊಳಿಸುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಆರ್. ಮಹೇಶ್ ಅವರ ಅನನ್ಯ ಸೇವೆಯನ್ನು ಪರಿಗಣಿಸಿ ‘ವಿಜಯವಾಣಿ’ ಪತ್ರಿಕೆ ಪ್ರತಿಷ್ಠಿತ ‘ಬೆಂಗಳೂರು ರತ್ನ’ ಪ್ರಶಸ್ತಿ ಮೂಲಕ ಗೌರವಿಸಿದೆ.

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣವನ್ನು ಮೈಗೂಡಿಸಿಕೊಂಡು ಗ್ರಾಮೀಣ ಜನರ ಬದುಕನ್ನು ಹಸನುಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜಕೀಯ ಜೀವನ ಆರಂಭಿಸಿದವರು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕು ಜಿಗಣಿ ಹೋಬಳಿ ವ್ಯಾಪ್ತಿಯಲ್ಲಿರುವ ಹೆನ್ನಾಗರ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಆರ್. ಮಹೇಶ್. ಸ್ಥಳೀಯ ನಾಯಕರ ಮಾರ್ಗದರ್ಶನ- ಸಲಹೆಯೊಂದಿಗೆ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ದೂರದೃಷ್ಟಿ ಚಿಂತನೆ, ಗ್ರಾಮೀಣಾಭಿವೃದ್ಧಿ, ಸ್ವಚ್ಛತೆ, ಶಿಕ್ಷಣ, ಆರ್ಥಿಕ ಸ್ವಾವಲಂಬನೆ… ಹೀಗೆ ಹತ್ತಾರು ಅಭಿವೃದ್ಧಿ ಕಾರ್ಯಗಳ ಮೂಲಕ ಮಾದರಿ ಪಂಚಾಯಿತಿಯನ್ನಾಗಿ ರೂಪಿಸುವಲ್ಲಿ ಸಾಕಷ್ಟು ಶ್ರಮಿಸುತ್ತಿದ್ದಾರೆ.

    2020ರಲ್ಲಿ ನಡೆದ ಪಂಚಾಯಿತಿ ಚುನಾವಣೆಯಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿರುವ ಮಹೇಶ್ ದಾಖಲೆ ಜಯ ಸಾಧಿಸಿದರು. ಪಂಚಾಯಿತಿ ವ್ಯಾಪ್ತಿಯ ಮಾಸ್ತೇನಹಳ್ಳಿ 962 ಮತಗಳಿದ್ದು, ಇದರಲ್ಲಿ 901 ಮತಗಳನ್ನು ಮಹೇಶ್ ಗಿಟ್ಟಿಸಿದ್ದರು. ಭರ್ಜರಿ ಓಪನಿಂಗ್ ಪಡೆಯುವ ಮೂಲಕ ಮೊದಲ ಬಾರಿಯ ಸದಸ್ಯತ್ವದಲ್ಲಿಯೇ ಅಧ್ಯಕ್ಷರಾಗಿದ್ದು, ಯುವ ನಾಯಕರಾಗಿರುವ ಮಹೇಶ್ ಉತ್ತಮ ರಾಜಕೀಯ ಜೀವನವನ್ನು ಆರಂಭಿಸಿದ್ದಾರೆ. ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಎಚ್.ಜೆ. ಪ್ರಸನ್ನಕುಮಾರ್, ಆರ್.ಕೆ. ಕೇಶವ ರೆಡ್ಡಿ ಮತ್ತು ಎಂ. ಮುನಿರತ್ನ ಮುನಿರಾಜು ಸಹಕಾರ, ಮಾರ್ಗದರ್ಶನ ಪಡೆದು ಹೆನ್ನಾಗರವನ್ನು ಅಕ್ಷರಶಃ ಹಿರಿದಾಗಿ ರೂಪಿಸುತ್ತಿದ್ದಾರೆ.

    ಹೆನ್ನಾಗರವನ್ನು ರಾಷ್ಟ್ರ ಖ್ಯಾತಿಗೇರಿಸಿದ ಮಹೇಶ್!

    ಪಂಚಾಯಿತಿ ಅಧ್ಯಕ್ಷರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇಡೀ ರಾಜ್ಯದಲ್ಲಿಯೇ ಅತಿಹೆಚ್ಚು ಮೊತ್ತದ (20 ಕೋಟಿ ರೂ.) ಬಜೆಟ್ ಮಂಡಿಸಿದ್ದಾರೆ. 10 ಕೋಟಿ ರೂ.ಗಳ ಕ್ರಿಯಾಯೋಜನೆಯನ್ನು ಘೋಷಿಸಿ ಅನುಷ್ಠಾನ ಮಾಡುತ್ತಿದ್ದಾರೆ. ಪಂಚಾಯಿತಿ ಹಂತಕ್ಕೆ ಹೋಲಿಸಿಕೊಂಡರೆ ಇದು ದಾಖಲೆಯೇ ಸರಿ.

    ಸಾಮಾನ್ಯ ಕುಟುಂಬದಲ್ಲಿ ಜನನ: ಮಹೇಶ್ ಅವರು 1990ರ ಅ.23ರಂದು ಮಾಸ್ತೇನಹಳ್ಳಿಯಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದರು. ತಂದೆ ಬೊಮ್ಮನಹಳ್ಳಿಯಲ್ಲಿ ಮಷಿನ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. 3 ವರ್ಷಗಳ ಹಿಂದೆ ನಿವೃತ್ತರಾಗಿದ್ದು, ತಾಯಿ ಗೃಹಿಣಿ. ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಂದೆ ಆರ್ಥಿಕವಾಗಿ ಹಿಂದುಳಿದಿದ್ದರಿಂದ ಅವರ ತಿಂಗಳ ವೇತನದಲ್ಲಿ ಕುಟುಂಬದ ಜೀವನ ನಡೆಯುತ್ತಿತ್ತು. ಅಂತಹ ಬಡತನದಲ್ಲಿಯೇ ಜೀವನ ಕಟ್ಟಿಕೊಳ್ಳುವ ಕನಸುಗಳನ್ನಿಟ್ಟುಕೊಂಡು ಮಹೇಶ್ ಹಂತಹಂತವಾಗಿ ಪ್ರಗತಿ ಸಾಧಿಸುತ್ತಿದ್ದಾರೆ. ಬಾಲ್ಯ ಹಾಗೂ ಶಿಕ್ಷಣವನ್ನು ಹಿನ್ನಕ್ಕಿಯಲ್ಲಿ ಆರಂಭಿಸಿದ ಮಹೇಶ್, 2ರಿಂದ 4ನೇ ತರಗತಿವರೆಗೆ ಮಾಸ್ತೇನಹಳ್ಳಿಯಲ್ಲಿ, 5ರಿಂದ 7ರವರೆಗೆ ಹೆನ್ನಾಗರ, 8ರಿಂದ 10ನೇ ತರಗತಿಯನ್ನು ಚಂದಾಪುರದಲ್ಲಿರುವ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಕಲಿತರು. ಪಿಯು ಮತ್ತು ಪದವಿಯನ್ನು ಬಿಟಿಎಲ್ ಕಾಲೇಜಿನಲ್ಲಿ ಪೂರ್ಣಗೊಳಿಸಿದರು.

    ಹೆನ್ನಾಗರವನ್ನು ರಾಷ್ಟ್ರ ಖ್ಯಾತಿಗೇರಿಸಿದ ಮಹೇಶ್!

    ಬಿಬಿಎಂ ಪದವೀಧರ, ಸ್ವಯಂ ಉದ್ಯೋಗಿ: ಬಿಬಿಎಂ ಪದವೀಧರರಾದ ಬಳಿಕ 2012ರಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ‘ಮಂಜುನಾಥ ಎಲೆಕ್ಟ್ರಾನಿಕ್ಸ್’ ಹೆಸರಿನಲ್ಲಿ ಉದ್ಯಮ ಆರಂಭಿಸಿದರು. ಬೋರ್​ವೆಲ್ ರಿಪೇರಿ, ಪಂಪ್ ಮೋಟಾರ್ ರಿಪೇರಿ ಕೆಲಸಗಳನ್ನು ಆರಂಭಿಸಲಾಯಿತು. ಈಗಲೂ ಅವರ ಸಹೋದರ ಅದನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

    ಶಾಲಾ ದಿನಗಳಿಂದಲೇ ನಾಯಕತ್ವ ಗುಣ: ಮಹೇಶ್ ಅವರು ಏಕಾಏಕಿ ರಾಜಕೀಯ ಪ್ರವೇಶ ಮಾಡಿಲ್ಲ. ಅವರ ಶಾಲಾ- ಕಾಲೇಜು ದಿನಗಳಿಂದಲೂ ನಾಯಕತ್ವ ಗುಣಗಳನ್ನು ಅಳವಡಿಸಿಕೊಂಡು ಬಂದಿದ್ದಾರೆ. ತರಗತಿಗಳ ಲೀಡರ್, ವಿದ್ಯಾರ್ಥಿ ಸಂಘಟನೆಗಳಲ್ಲಿ ನಾಯಕತ್ವ ಬೆಳೆಸಿಕೊಂಡಿದ್ದರು. ಶಿಕ್ಷಣ ಮುಗಿದ ನಂತರವೂ ರಾಜಕೀಯ ಪ್ರವೇಶಕ್ಕೂ ಮುನ್ನ ಗ್ರಾಮದಲ್ಲಿ ಜನರಿಗೆ ಆಗುತ್ತಿರುವ ಅನ್ಯಾಯಗಳು, ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದ್ದಾರೆ.

    ಹೆನ್ನಾಗರವನ್ನು ರಾಷ್ಟ್ರ ಖ್ಯಾತಿಗೇರಿಸಿದ ಮಹೇಶ್!

    ಆಡಳಿತ ಸುಧಾರಣೆಗೆ ಕ್ರಮ; ಪಂಚಾಯಿತಿಗೆ ಕೇಂದ್ರ ಸರ್ಕಾರದ 2 ಬಾರಿ ಗಾಂಧಿ ಗ್ರಾಮ ಪುರಸ್ಕಾರ, ಒಂದು ಬಾರಿ ಮಕ್ಕಳಸ್ನೇಹಿ ರಾಷ್ಟ್ರೀಯ ಪ್ರಶಸ್ತಿ ಸಂದಿದೆ. ಮುಂದಿನ ದಿನಗಳಲ್ಲಿಯೂ ಅಭಿವೃದ್ಧಿಯಲ್ಲಿ ಮಾದರಿಯಾಗುವ ಕೆಲಸ ಮಾಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಆಡಳಿತ ಸುಧಾರಣೆಗೆ ಇ-ಬೆಳಕು, ಮೊಬೈಲ್ ತಂತ್ರಾಂಶಗಳು, ಜಿಪಿಎಸ್​ತಂತ್ರಜ್ಞಾನ, ಫಲಾನುಭವಿ ಆಧಾರಿತ ತಂತ್ರಾಂಶಗಳು, ಫಲಾನುಭವಿ ಆಧಾರಿತ ತಂತ್ರಾಂಶಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಆಡಳಿತ ಸುಧಾರಣಾ ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ. ಪಂಚತಂತ್ರ-2, ಇ-ಗ್ರಾಮ ಸ್ವರಾಜ್, ಮಿಷನ್ ಅಂತ್ಯೋದಯ, ಜಿಪಿಡಿಪಿ ತಂತ್ರಾಂಶಗಳನ್ನು ಅನುಷ್ಠಾನ ಮಾಡಲಾಗುತ್ತಿದೆ.

    ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತು: ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಮೂಲಕ ಉನ್ನತ ಶಿಕ್ಷಣ ಪಡೆಯಲು ಪ್ರೋತ್ಸಾಹಿಸಲಾಗುತ್ತಿದೆ. ಎಸ್ಸಿ-ಎಸ್ಟಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ 7.5 ಸಾವಿರ ರೂ. ಮತ್ತು ಸಾಮಾನ್ಯ ವಿದ್ಯಾರ್ಥಿಗಳಿಗೆ 5 ಸಾವಿರ ರೂ. ವಿದ್ಯಾರ್ಥಿವೇತನ ನೀಡಲಾಗುತ್ತಿದೆ.

    20 ಕೋಟಿ ರೂ. ಬಜೆಟ್: ಪಂಚಾಯಿತಿಯಲ್ಲಿ 20 ಕೋಟಿ ರೂ. ಮೊತ್ತದ ಬಜೆಟ್ ಮಂಡನೆ ಮಾಡಲಾಗಿದ್ದು, ಇದರಲ್ಲಿ 10 ಕೋಟಿ ರೂ.ಗಳ ಕ್ರಿಯಾ ಯೋಜನೆ ರೂಪಿಸಲಾಗಿದೆ. ಶೇ.25 ಅನುದಾನವನ್ನು ಪರಿಶಿಷ್ಟ ವರ್ಗ ಮತ್ತು ಪಂಗಡಕ್ಕೆ ಮೀಸಲಿಡಲಾಗಿದೆ. 2.5 ಕೋಟಿ ರೂ. ಅನುದಾನವನ್ನು ಹೈನುಗಾರಿಕೆ, ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಮೀಸಲಿಡಲಾಗಿದೆ. ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟರಿಗೆ 102 ಹಸುಗಳನ್ನು ನೀಡಲಾಗಿದೆ. ಪ್ರತಿ ಹಸುವಿಗೆ 80 ಸಾವಿರ ರೂ. ನಿಗದಿ ಮಾಡಲಾಗಿದೆ. ಕಳೆದ ವರ್ಷ 60 ಹಸುಗಳನ್ನು ನೀಡಲಾಗಿತ್ತು. ಈ ವರ್ಷ ಒಂದು ಹೆಜ್ಜೆ ಮುಂದೆ ಹೋಗಿ 102 ಹಸುಗಳನ್ನು ವಿತರಣೆ ಮಾಡಿದ್ದಾರೆ.ಉನ್ನತ ಶಿಕ್ಷಣ ಮಾಡುತ್ತಿರುವ 18 ಜನರಿಗೆ ಲ್ಯಾಪ್​ಟಾಪ್ ವಿತರಣೆ ಮಾಡಲಾಗಿದೆ. ಹಾಗೆಯೇ ಪರಿಶಿಷ್ಟ ಮಹಿಳೆಯರ ವಿವಾಹಕ್ಕೆ 25 ಸಾವಿರ ರೂ. ಸಹಾಯ ಧನ ವಿತರಣೆ ಮಾಡಲಾಗುತ್ತಿದೆ. 15 ಅಂಗವಿಕಲರಿಗೆ ದ್ವಿಚಕ್ರ ವಾಹನ ನೀಡಲಾಗಿದೆ. ಕಾಂಕ್ರೀಟ್ ರಸ್ತೆ, ಡ್ರೖೆನೇಜ್, ಸೋಲಾರ್ ಬೀದಿ ದೀಪ ಸೇರಿ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಬಜೆಟ್​ನ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಆಡಳಿತ ವೆಚ್ಚಗಳಾದ ಸಿಬ್ಬಂದಿ ವೇತನ, ಕುಡಿಯುವ ನೀರು, ಬೀದಿದೀಪಗಳ ವಿದ್ಯುತ್ ಬಿಲ್ ನಿರ್ವಹಣೆ, ಘನ ಮತ್ತು ದ್ರವ ತ್ಯಾಜ್ಯಗಳ ನಿರ್ವಹಣೆ, ಸೆಸ್​ಗಳ ಪಾವತಿ, ಗ್ರಾಮ ಪಂಚಾಯಿತಿ ಆಡಳಿತ ಮತ್ತು ಸಭೆಗಳ ನಿರ್ವಹಣೆಗೆ ಆದ್ಯತೆ ನೀಡಲಾಗುತ್ತಿದೆ.

    ಹೆನ್ನಾಗರವನ್ನು ರಾಷ್ಟ್ರ ಖ್ಯಾತಿಗೇರಿಸಿದ ಮಹೇಶ್!

    3-4 ತಿಂಗಳಲ್ಲಿ ಕಾವೇರಿ ನೀರು: ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ 15 ಲಕ್ಷ ರೂ. ಮೊತ್ತದ 2 ಜಿಎಸ್​ಎಲ್​ಆರ್ ಕಾವೇರಿ ನೀರು ಸರಬರಾಜು ಯೋಜನೆ ಮಂಜೂರಾಗಿದೆ. ಕಾವೇರಿ ಸರಬರಾಜು ಮಾಡಲು ಪೈಪ್​ಲೈನ್ ಕಲ್ಪಿಸಲು 5ರಿಂದ 6 ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಕಂಪನಿಗಳ ಸಿಎಸ್​ಆರ್ ಅನುದಾನದಲ್ಲಿ ಪೈಪ್​ಲೈನ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಶೀಘ್ರವೇ ಗುದ್ದಲಿಪೂಜೆ ನೆರವೇರಿಸುವ ಮೂಲಕ ಯೋಜನೆಗೆ ಚಾಲನೆ ನೀಡಲಿದ್ದಾರೆ. ಯೋಜನೆ ಅನುಷ್ಠಾನವಾದಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ 8 ಗ್ರಾಮದ ಸುಮಾರು 60 ಸಾವಿರ ಜನರಿಗೆ ಕಾವೇರಿ ನೀರು ಕುಡಿಯುವ ಸೌಲಭ್ಯ ದೊರೆಯಲಿದೆ.

    ವಿಶಿಷ್ಟ ವಿನ್ಯಾಸದ ಕಟ್ಟಡ: ರಾಜ್ಯದ ಬಹುತೇಕ ಗ್ರಾಮ ಪಂಚಾಯಿತಿಗಳಿಗೆ ಇಂದಿಗೂ ಸಮರ್ಪಕ ವಿದ್ಯುತ್, ಕುಡಿಯುವ ನೀರು ಸೇರಿ ಮೂಲಸೌಕರ್ಯಗಳೇ ಇಲ್ಲ. ಆದರೆ, ಹೆನ್ನಾಗರ ಪಂಚಾಯಿತಿಯು ಕಟ್ಟಡದಿಂದಲೇ ಆಕರ್ಷಣೆಯಾಗಿದೆ. ಗೇಟಿನಿಂದ ಒಳಗಡೆ ಪ್ರವೇಶಿಸುತ್ತಲೇ ಬುದ್ಧ, ಬಸವ, ಗಾಂಧಿ ಅವರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗಿದೆ. ಪ್ರತಿಮೆ ಕೆಳಗೆ ಅವರ ಅಣಿಮುತ್ತುಗಳನ್ನು ಕೆತ್ತಲಾಗಿದೆ. ಈ ವಾಕ್ಯಗಳೇ ಪ್ರೇರಣಾದಾಯಕವಾಗಿವೆ.

    ನಕಲಿ ಮತಚೀಟಿ ಪತ್ತೆಗಾಗಿ ಹೋರಾಟ: ಚುನಾವಣೆಗೂ ಮುನ್ನ ನಕಲಿ ಮತದಾನ ಚೀಟಿಗಳನ್ನು ಪತ್ತೆಹಚ್ಚಿ ನಕಲಿ ಮಾಡುವವರ ವಿರುದ್ಧ ಹೋರಾಟ ಮಾಡಲಾಗಿತ್ತು. ನೂರಾರು ನಕಲಿ ಚೀಟಿಗಳನ್ನು ಪತ್ತೆಹಚ್ಚಿದ್ದ ಹೋರಾಟವು ರಾಜ್ಯಮಟ್ಟದಲ್ಲಿ ಚರ್ಚೆಯಾಗಿತ್ತು. ಸ್ಥಳೀಯವಾಗಿಯೂ ಉತ್ತಮ ಹೆಸರು ತಂದುಕೊಟ್ಟ ಪ್ರಮುಖ ಹೋರಾಟವಾಗಿತ್ತು. ಹಾಗೆಯೇ ಪಡಿತರ ಅಕ್ಕಿಯಲ್ಲಿ ಪ್ಲಾ್ಯಸ್ಟಿಕ್ ಅಕ್ಕಿ ನೀಡಲಾಗುತ್ತಿದೆ ಎಂಬ ಹೋರಾಟ ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಪ್ಲಾ್ಯಸ್ಟಿಕ್ ಅಕ್ಕಿ ಮಿಶ್ರಣವಾಗುತ್ತಿದೆ ಎಂಬ ಜನರ ಆತಂಕವನ್ನು ಅಧಿಕಾರಿಗಳ ಗಮನಕ್ಕೆ ತಿಂದು ಸಮಸ್ಯೆ ನಿವಾರಿಸುವ ಕೆಲಸ ಮಾಡಲಾಗಿತ್ತು. ಗ್ರಾಮದ ಅಬಿವೃದ್ಧಿ ಕೆಲಸಗಳು, ಧಾರ್ವಿುಕ ಕೆಲಸಗಳು, ಊರಿನಲ್ಲಿ ಮೆರವಣಿಗೆ, ಪೂಜೆ-ಪುನಸ್ಕಾರಗಳು ಸೇರಿ ಗ್ರಾಮದ ಪ್ರತಿ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದರು.

    ಹೆನ್ನಾಗರವನ್ನು ರಾಷ್ಟ್ರ ಖ್ಯಾತಿಗೇರಿಸಿದ ಮಹೇಶ್!

    ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಕೆಲಸ: ಪಂಚಾಯಿತಿಯಲ್ಲಿ 255 ಕೈಗಾರಿಕೆಗಳಿದ್ದು, ಇದರಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಲು ಮಾತುಕತೆ ನಡೆಸಲಾಗುತ್ತಿದೆ. ಕೈಗಾರಿಕಾ ಪ್ರದೇಶವಾಗಿರುವುದರಿಂದ ಸ್ಥಳೀಯರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಈ ಮೂಲಕ ನಿರುದ್ಯೋಗ ತೊಡೆದುಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ.

    75 ಲಕ್ಷ ರೂ. ವೆಚ್ಚದ ಗ್ರಂಥಾಲಯ: ರಾಜ್ಯದಲ್ಲಿಯೇ ಮಾದರಿಯಾಗುವಂತೆ ಅಮೆರಿಕದ ವಾಸ್ತುಶಿಲ್ಪದಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣ ಮಾಡಲಾಗುತ್ತಿದೆ. ಗ್ರಂಥಾಲಯದಲ್ಲಿ ಶಾಲಾ ವಿದ್ಯಾರ್ಥಿಗಳು, ನಾಗರಿಕರಿಗೆ ದಿನಪತ್ರಿಕೆ, ನಿಯತಕಾಲಿಕೆಗಳು ಮಾತ್ರವಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳ ವ್ಯಾಸಂಗಕ್ಕಾಗಿ ಅವಶ್ಯವಿರುವ ಪುಸ್ತಕಗಳನ್ನು ಇಡಲಾಗುತ್ತಿದೆ. ಇದರಿಂದ ಸ್ಥಳೀಯ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಸಹಕಾರಿಯಾಗಲಿದೆ. ಐಎಎಸ್/ ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೆ ತರಬೇತಿ ಕೇಂದ್ರ ಆರಂಭಿಸಲು ಸಹ ಸಿದ್ಧತೆ ನಡೆಸಲಾಗಿದೆ. ಸದ್ಯ ಶೇ.30 ಕಾಮಗಾರಿ ಮುಗಿದಿದೆ. ಉಳಿದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ.

    ಸೌಮ್ಯ ಸ್ವಭಾವದ ವ್ಯಕ್ತಿ: ರಾಜಕೀಯ ನಾಯಕರು ಎಂದಾಕ್ಷಣ ಏರುದನಿಯಲ್ಲಿ ಮಾತನಾಡುವುದು, ಹಮ್ಮು-ಬಿಮ್ಮು ತೋರಿಸುವವರೇ ಹೆಚ್ಚು. ಆದರೆ, ಮಹೇಶ್ ಇದಕ್ಕೆ ತದ್ವಿರುದ್ಧ ವ್ಯಕ್ತಿತ್ವದವರು. ಸೌಮ್ಯ ಸ್ವಭಾವದ ಸರಳ ಜೀವನಕ್ರಮವನ್ನು ಅಳವಡಿಸಿಕೊಂಡಿದ್ದಾರೆ. ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದು, ಅಧಿಕಾರಿಗಳು, ರಾಜಕೀಯ ಮುಖಂಡರು ಮತ್ತು ಜನರೊಂದಿಗೆ ಮೃದು ದನಿಯಲ್ಲಿಯೇ ಮಾತನಾಡುತ್ತಾರೆ. ‘ಮಾತು ಕಡಿಮೆ.. ಕೆಲಸ ಜಾಸ್ತಿ’ ಎಂಬುದು ಇವರ ಧ್ಯೇಯವಾಗಿದೆ. ಜನರಿಗೆ ಚಿಕ್ಕ ಪುಟ್ಟ ಸಮಸ್ಯೆಯಿಂದ ಹಿಡಿದು ಗ್ರಾಮಗಳಲ್ಲಿ ಮೂಲಸೌಕರ್ಯದಂತಹ ಸಮಸ್ಯೆಗಳನ್ನು ಬಗೆಹರಿಸಲು ದಿನದ 24 ತಾಸು ಸಮಯವನ್ನು ಮೀಸಲಿಟ್ಟಿದ್ದಾರೆ.

    ಹೆನ್ನಾಗರವನ್ನು ರಾಷ್ಟ್ರ ಖ್ಯಾತಿಗೇರಿಸಿದ ಮಹೇಶ್!

    ಡಿಜಿಟಲ್ ಪಂಚಾಯಿತಿ: ಪಂಚಾಯಿತಿಯಲ್ಲಿರುವ ಸಭಾಂಗಣವು ಸಂಪೂರ್ಣ ಡಿಜಿಟಲ್ ಮಾದರಿಯಲ್ಲಿದೆ. ಸಭೆಗಳನ್ನು ನಡೆಸಿದಾಗ ಡಿಜಿಟಲ್ ವೇದಿಕೆಯಲ್ಲಿ ಹಾಜರಾಗಲು ಕೂಡ ಅವಕಾಶ ಕಲ್ಪಿಸಿದೆ. ಸಭೆಗಳಿಗೆ ಹಾಜರಾಗಲು ಆಹ್ವಾನ ಮತ್ತು ಇತರೆ ಕಾರ್ಯಗಳಿಗೆ ಆನ್​ಲೈನ್ ಮೂಲಕವೇ ನೋಟಿಸ್ ನೀಡುವುದು, ಸಭೆಗಳನ್ನು ಡಿಜಿಟಲ್ ವೇದಿಕೆಯಲ್ಲಿ ನಡೆಸುವುದು, ಸಭಾಂಗಣದಲ್ಲಿನ ಕುರ್ಚಿಗಳಲ್ಲಿಯೇ ಮೈಕ್ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಖಾತೆ, ಕಂದಾಯ, ತೆರಿಗೆಗಳನ್ನು ಫೋನ್ ಪೇ, ಗೂಗಲ್ ಪೇ ಮೂಲಕವೇ ಪಾವತಿಸಬಹುದು. ಖಾತೆಗಳನ್ನು ಪೋಸ್ಟ್ ಮೂಲಕವೇ ಮನೆಗಳಿಗೆ ಕಳುಹಿಸಲಾಗುತ್ತದೆ.

    ಹೆನ್ನಾಗರವನ್ನು ರಾಷ್ಟ್ರ ಖ್ಯಾತಿಗೇರಿಸಿದ ಮಹೇಶ್!

    ಬೀದಿದೀಪ ನಿರ್ವಹಣೆ: ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬೀದಿ ದೀಪಗಳು ಹಾಳಾದಲ್ಲಿ ಟೋಲ್ ಫ್ರೀ ನಂಬರ್ ನೀಡಲಾಗಿದೆ. ಅದಕ್ಕೆ ಕರೆ ಮಾಡಿದರೆ, ಮಾರನೆಯ ದಿನ ಬೆಸ್ಕಾಂ ವತಿಯಿಂದ ಸಮಸ್ಯೆ ಯನ್ನು ಬಗೆಹರಿಸುವ ಕೆಲಸ ಮಾಡಲಾಗುತ್ತದೆ. ದಿನದ 24 ಗಂಟೆ ಕರೆ ಮಾಡುವ ಸೌಲಭ್ಯವನ್ನು ಕಲ್ಪಿಸಲಾಗಿದೆ.

    ಕನ್ನಡ ಭಾಷಾಭಿವೃದ್ಧಿಗೆ ಸಹಕಾರ: ಹೆನ್ನಾಗರ ಕನ್ನಡ ಕಲಾಸಂಘವು ಪ್ರತಿ ವರ್ಷ ನಡೆಸುವ ಕನ್ನಡ ಕೆಲಸಗಳಿಗೆ ಪೂರ್ಣ ಸಹಕಾರ ನೀಡಲಾಗುತ್ತದೆ. ಗಡಿನಾಡಿನಲ್ಲಿ ಕೆಲಸ ಮಾಡುತ್ತಿರುವ ರಾಮಕೃಷ್ಣ, ಪಾಪಣ್ಣರಂತಹ ಕೆಲವರಿಗೆ ಡಾಕ್ಟರೇಟ್ ಕೂಡ ಬಂದಿದೆ.

    ಹೆನ್ನಾಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಶೈಕ್ಷಣಿಕ, ಸಾಮಾಜಿಕ ಸಮಾನತೆ ತರುವ ಗುರಿಯನ್ನಿಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ. ಎಲ್ಲರಿಗೂ ಶಿಕ್ಷಣ ನೀಡುವ ಉದ್ದೇಶದಿಂದ ಗ್ರಂಥಾಲಯ, ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಇದಕ್ಕೆ ಮಹೇಶ್ ಅವರು ಕೂಡ ಸಾಕಷ್ಟು ಪ್ರೋತ್ಸಾಹ ಮತ್ತು ಬೆಂಬಲ ನೀಡುತ್ತಿದ್ದಾರೆ.

    | ಕಿರಣ್​ಕುಮಾರ್ ಹೆನ್ನಾಗರ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ

    ಮಹೇಶ್ ಅವರು ಪಂಚಾಯಿತಿ ಅಧ್ಯಕ್ಷರಾದ ಬಳಿಕ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಖಾತೆ, ಕಂದಾಯದ ಸಮಸ್ಯೆಗಳನ್ನು ಬಗೆಹರಿಸಿ ಜನರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಜನರು ಮತ್ತು ಪಂಚಾಯಿತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ.

    | ಕಾಂತರಾಜು ಮಾಸ್ತೇನಹಳ್ಳಿ ಗ್ರಾಮಸ್ಥ

    ಜನರು ಸಮಸ್ಯೆಗಳನ್ನು ಹೇಳಿಕೊಂಡು ಯಾವುದೇ ಸಂದರ್ಭದಲ್ಲಿ ಬಂದರೂ ಬೇಜಾರು ಮಾಡಿಕೊಳ್ಳದೆ ನೋವು ನಲಿವುಗಳನ್ನು ಆಲಿಸುತ್ತಾರೆ. ಕಸ ವಿಲೇವಾರಿ, ಕಾವೇರಿ ನೀರು ಸರಬರಾಜು ಸೇರಿ ಮೂಲಸೌಕರ್ಯಕ್ಕೆ ಒತ್ತು ನೀಡಿ ಮಾದರಿ ಪಂಚಾಯಿತಿ ಮಾಡುವ ಗುರಿಯನ್ನಿಟ್ಟುಕೊಂಡಿದ್ದಾರೆ.

    | ರಾಜಶೇಖರ್ ಹೆನ್ನಾಗರ ಗ್ರಾಮಸ್ಥ

    ಎರಡನೇ ಇನ್ನಿಂಗ್ಸ್​ ಆರಂಭಿಸಲಿರುವ ಮೂಗುತಿ ಸುಂದರಿ ಸಾನಿಯಾ ಮಿರ್ಜಾ? ಹೈದರಾಬಾದ್​ನಲ್ಲಿ ಬಿಸಿ ಬಿಸಿ ಚರ್ಚೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts