More

    ಮಹಾರಾಜ ಟ್ರೋಫಿ; ರಾಯಚೂರು ಜೋನ್ ಆಟಗಾರರಿಗೆ ಲಕ್

    ಕೃಷ್ಣ ಕುಲಕರ್ಣಿ ಕಲಬುರಗಿ
    ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಆಯೋಜಿಸುವ ಪ್ರತಿಷ್ಠಿತ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ-20 ಟೂರ್ನಿ ಸೀಸನ್-1 ಯಶಸ್ವಿಯಾಗಿ ನಡೆದಿದ್ದು, ಇದೀಗ ಸೀಸನ್-2ಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಆಟಗಾರರ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ಭಾನುವಾರ ನಡೆದಿದ್ದು, ರಾಯಚೂರು ಜೋನ್‌ನ 8 ಆಟಗಾರರು ಭರ್ಜರಿ ಮೊತ್ತಕ್ಕೆ ಸೇಲ್ ಆಗಿದ್ದಾರೆ.

    ರಾಯಚೂರು ಜಿಲ್ಲೆ ಸಿಂಧನೂರಿನ ಮನೋಜ ಭಾಂಡಗೆ, ಯರಮರಸ್ ಕ್ಯಾಂಪ್‌ನ ವಿದ್ಯಾಧರ ಪಾಟೀಲ್, ರಾಯಚೂರು ಸಿಟಿಯ ತಿಪ್ಪಾರೆಡ್ಡಿ, ಶರಣಗೌಡ, ಕಲಬುರಗಿ ಜಿಲ್ಲೆ ಶಹಾಬಾದ್‌ನ ಆನಂದ ದೊಡ್ಡಮನಿ, ಯಾದಗಿರಿಯ ಅವಿನಾಶ ದೊಡ್ಡಮನಿ, ಕಲಬುರಗಿಯ ಶಶಿಕುಮಾರ ಕಾಂಬ್ಳೆ, ಶ್ರೇಯಷ್ ಪುರಾಣಿಕ ಹರಾಜಿನಲ್ಲಿ ವಿವಿಧ ತಂಡ ಸೇರಿಕೊಂಡಿದ್ದಾರೆ.

    ಕಳೆದ ಬಾರಿ ಗುಲ್ಬರ್ಗ ಮೈಸ್ಟಿಕ್ಸ್ನಲ್ಲಿದ್ದ ಮನೋಜ ಭಾಂಡಗೆ ಈ ಸಲ 9 ಲಕ್ಷ ರೂ.ಗೆ ಮೈಸೂರು ವಾರಿಯರ್ಸ್ ತಂಡ ಸೇರುವ ಮೂಲಕ ಜೋನ್‌ನಲ್ಲಿ ಅತ್ಯಧಿಕ ಮೊತ್ತಕ್ಕೆ ಸೇಲ್ ಆದ ಆಟಗಾರ ಎನಿಸಿದ್ದಾನೆ. ಈಗಾಗಲೇ ಬೆಳಗಾವಿ ಪ್ಯಾಂಥರ್ಸ್, ಶಿವಮೊಗ್ಗ ಸ್ಟ್ರೈಕರ್ಸ್ ಟೀಮ್‌ಗಾಗಿ ಆಟವಾಡಿದ ರೈಟ್ ಆರ್ಮ್ ಬೌಲರ್ ಅವಿನಾಶ ದೊಡ್ಡಮನಿ ಈ ಬಾರಿ ಬರೋಬ್ಬರಿ 5.3 ಲಕ್ಷ ರೂ.ಗೆ ಗುಲ್ಬರ್ಗ ಮೈಸ್ಟಿಕ್ಸ್ ತಂಡವನ್ನು ಸೇರಿಕೊಂಡಿದ್ದಾನೆ. ಇದು ಜಿಲ್ಲೆಯ ಆಟಗಾರನೊಬ್ಬ ಪಡೆದ ಅತ್ಯಧಿಕ ಮೊತ್ತ. 27 ವರ್ಷದ ಬೌಲರ್ ಆನಂದ ದೊಡ್ಡಮನಿ ಮೈಸೂರು ವಾರಿಯರ್ಸ್, ಬೆಳಗಾವಿ ಪ್ಯಾಂಥರ್ಸ್, ಬೆಂಗಳೂರು ಬ್ಲಾಸ್ಟರ್ಸ್, ರೈಲ್ವೇಸ್, ಹುಬ್ಬಳ್ಳಿ ಟೈಗರ್ಸ್ ತಂಡಗಳನ್ನು ಪ್ರತಿನಿಧಿಸಿದ್ದು, ಪ್ರಸಕ್ತ ಸಾಲಿನಲ್ಲಿ 95 ಸಾವಿರ ರೂ.ಗಳಿಗೆ ಮಂಗಳೂರು ಡ್ರ್ಯಾಗನ್ಸ್ ತಂಡಕ್ಕೆ ಸೇಲ್ ಆಗಿದ್ದಾನೆ.

    ಶಿವಮೊಗ್ಗ ತಂಡದಲ್ಲೇ ಉಳಿದ ಶ್ರೇಯಸ್: ಕಲಬುರಗಿ ಸಿಟಿಯ ಆಲ್‌ರೌಂಡರ್ ಆಟಗಾರ ಶ್ರೇಯಸ್ ಪುರಾಣಿಕ ಕಳೆದ ಸೀಸನ್‌ನಲ್ಲಿ 50 ಸಾವಿರ ರೂ.ಗೆ ಶಿವಮೊಗ್ಗ ಲಯನ್ಸ್ ತಂಡ ಸೇರಿದ್ದ. ಈ ಬಾರಿಯೂ ಅದೇ ತಂಡದಲ್ಲಿ ಮುಂದುವರಿದಿದ್ದಾನೆ. ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಶ್ರೇಯಸ್ ಅಂಡರ್-19 ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ. ವಿವಿಧ ಕ್ಲಬ್‌ಗಳ ಪರ ಭರ್ಜರಿ ಪ್ರದರ್ಶನ ನೀಡಿದ್ದಾನೆ.

    ಮಹಾರಾಜ ಟ್ರೋಫಿ; ರಾಯಚೂರು ಜೋನ್ ಆಟಗಾರರಿಗೆ ಲಕ್

    ರಣಜಿ ಸಂಭವನೀಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಶಶಿ ಮೈಸೂರು ತೆಕ್ಕೆಗೆ: ಕಲಬುರಗಿಯ ಗುಲಾಬ್‌ವಾಡಿ ಬಡಾವಣೆಯ ಶಶಿಕುಮಾರ ಕಾಂಬ್ಳೆ ಅಂಡರ್-16, 19, 23ರಲ್ಲಿ ರಾಜ್ಯ ಪ್ರತಿನಿಧಿಸಿ ಗಮನ ಸೆಳೆದಿದ್ದ. ಬಿಸಿಸಿಐ ನಡೆಸಿದ್ದ ಅಂಡರ್-19 ಕೂಚ್ ಬಿಹಾರ್ ಟ್ರೋಫಿ ಟೂರ್ನಿಯ ಮೂರು ಪಂದ್ಯಗಳಲ್ಲಿ 29 ವಿಕೆಟ್ ಪಡೆದು ಅತ್ಯುತ್ತಮ ಪ್ರದರ್ಶನ ನೀಡಿದ್ದ. ಅಲ್ಲದೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಡಿ ಕಾರ್ಯನಿರ್ವಹಿಸುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯ ಅಂಡರ್-23 ತಂಡದ ತರಬೇತಿ ಕ್ಯಾಂಪ್‌ಗೂ ಆಯ್ಕೆಯಾಗಿದ್ದಾನೆ. ಇತ್ತೀಚೆಗೆ ಕರ್ನಾಟಕ ರಣಜಿ ತಂಡದ ಸಂಭವನೀಯ ಆಟಗಾರರ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದ. ಕಳೆದ ಬಾರಿ ಮಹಾರಾಜ ಟ್ರೋಫಿಯಲ್ಲಿ ಮಂಗಳೂರು ಯುನೈಟೆಡ್‌ಗೆ ಸೇಲ್ ಆಗಿದ್ದ, ಈ ಬಾರಿ ಮೈಸೂರು ವಾರಿಯರ್ಸ್ ಟೀಮ್ 50 ಸಾವಿರ ರೂ. ನೀಡಿ ಖರೀದಿಸಿದೆ.

    ಹೀಗಿದೆ ಕಲಬುರಗಿ ಮೈಸ್ಟಿಕ್ಸ್ ಟೀಮ್: ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ-20 ಕ್ರಿಕೆಟ್ ಟೂರ್ನಿಯ ಮೊದಲ ಸೀಸನ್‌ನಲ್ಲೇ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿರುವ ಗುಲ್ಬರ್ಗ ಮೈಸ್ಟಿಕ್ಸ್ ತಂಡ ಎರಡನೇ ಸೀಸನ್‌ಗೆ ತಯಾರಾಗಿದೆ. ಬೆಂಗಳೂರಿನಲ್ಲಿ ಶನಿವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಹೊಸ ಹೊಸ ಪ್ರತಿಭೆಗಳನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಈ ಹಿಂದೆ ತಂಡದಲ್ಲಿದ್ದ ದೇವದತ್ತ ಪಡಿಕ್ಕಲ್, ಅಭಿಲಾಶ ಶೆಟ್ಟಿ ಅವರನ್ನು ಉಳಿಸಿಕೊಳ್ಳಲಾಗಿದೆ. ಪಡಿಕ್ಕಲ್‌ಗೆ 13 ಲಕ್ಷ ರೂ. ಕೊಟ್ಟರೆ, ಶೆಟ್ಟಿಗೆ 1 ಲಕ್ಷ ರೂ. ನೀಡಿ ಖರೀದಿಸಿದೆ. ಇನ್ನುಳಿದಂತೆ ಪ್ರತಿಭಾನ್ವಿತ ಆಟಗಾರರಾದ ಅಪ್ಪಣ್ಣ ಕೆ.ಪಿ., ವೈಶಾಕ ವಿ., ಶರತ್ ಶ್ರೀನಿವಾಸ, ಚೇತನ್ ಎಲ್.ಆರ್., ಎಂಡಿ ಅಖಿನ್ ಜಾವೇದ್, ಸ್ಮರಣ್ ಆರ್., ಅನೀಶ್ ಕೆ.ವಿ., ಮ್ಯಾಕ್ನೀಲ್ ನೊರೊನ್ಹಾ, ಶರಣಗೌಡ, ಹಾರ್ದಿಕ್ ರಾಜ್, ಶಿಮೋನ್ ಲೂಯಿಸ್, ಅವಿನಾಶ ದೊಡ್ಡಮನಿ, ಯಶೋವರ್ದನ್ ಪಿ., ಆದರ್ಶ ಪ್ರಜ್ವಲ್, ಎಸ್.ಟಿ. ಜೋಸೆಫ್ ಟೀಮ್ ಸೇರಿದ್ದಾರೆ. ಕಳೆದ ಸೀಸನ್‌ನಲ್ಲಿ ಸಹಾಯಕ ಕೋಚ್ ಆಗಿದ್ದ ರಾಜಶೇಖರ ಶಾನಭಾಳ ಮುಖ್ಯ ಕೋಚ್ ಆಗಿ ಬಡ್ತಿ ಪಡೆದರೆ, ಕಲಬುರಗಿಯವರಾದ ಇಮ್ರಾನ್ ಖಾನ್ ಸಹಾಯಕ ಕೋಚ್ ಆಗಿದ್ದಾರೆ. ಇನ್ನುಳಿದಂತೆ ಜಾಹೂರ್ ಫಾರೂಕ್ ಬೌಲಿಂಗ್, ಭರತ್ ಚಿಪ್ಲಿ ಬ್ಯಾಟಿಂಗ್ ಕೋಚ್ ಆಗಿದ್ದಾರೆ. ದಿಲೀಪ ತರನಿ ಟೀಮ್ ಮ್ಯಾನೇಜರ್, ಸಚಿನ್ ಘೋರ್ಪಡೆ ಟ್ರೇನರ್, ಡಾ.ಸಭ್ಯಸಾಚಿ ಫಿಸಿಯೋಥೆರಪಿಸ್ಟ್, ಅಕ್ಷಯ ಹಿರೇಮಠ ಪರ್ಫಾರ್ಮೆನ್ಸ್ ಅನಾಲೈಸಿಸ್ಟ್ ಆಗಿ ಕೆಲಸ ಮಾಡಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts