More

    ಅಧ್ಯಕ್ಷರಾಗಿ ಅಂಗಡಿ, ಉಪಾಧ್ಯಕ್ಷರಾಗಿ ಭಾಟ ಆಯ್ಕೆ

    ಮಹಾಲಿಂಗಪುರ: ಸೋಮವಾರ ನಡೆದ ಸ್ಥಳೀಯ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿಯ ಸ್ನೇಹಲ್ ಅಂಗಡಿ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಬಿಜೆಪಿ ಸದಸ್ಯೆ ಗೋದಾವರಿ ಭಾಟ ಆಯ್ಕೆಯಾದರು.

    ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯ ಶಾಸಕ ಸಿದ್ದು ಸವದಿ, ಸಂಸದ ಪಿ.ಸಿ ಗದ್ದಿಗೌಡರ ಸೇರಿ 12 ಸದಸ್ಯರು ಹಾಜರಿದ್ದರೆ, ಕಾಂಗ್ರೆಸ್ ಪರವಾಗಿ ಬಿಜೆಪಿ ಬೆಂಬಲಿತ ಇಬ್ಬರು ಸದಸ್ಯರು ಸೇರಿ 12 ಜನ ಸದಸ್ಯರು ಉಪಸ್ಥಿತರಿದ್ದರು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಸ್ನೇಹಲ್ ಅಂಗಡಿ, ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಿ ಮಮದಾಪುರ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಬೆಂಬಲಿತ ಬಿಜೆಪಿ ಸದಸ್ಯೆ ಸವಿತಾ ಹುರಕಡ್ಲಿ ಅಧ್ಯಕ್ಷ ಸ್ಥಾನಕ್ಕೆ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಬಿಜೆಪಿ ಸದಸ್ಯೆ ಗೋದಾವರಿ ಬಾಟ್ ನಾಮಪತ್ರ ಸಲ್ಲಿಸಿದ್ದರು.

    ಚೀಟಿ ಹಾರಿಸುವ ಮೂಲಕ ಆಯ್ಕೆ
    ಆಯ್ಕೆ ಪ್ರಕ್ರಿಯೆಯಲ್ಲಿ ಎರಡೂ ಪಕ್ಷದವರು ತಲಾ 12 ಮತಗಳನ್ನು ಹೊಂದಿದ್ದರಿಂದ ಅನಿವಾರ್ಯವಾಗಿ ಚೀಟಿ ಎತ್ತಲಾಯಿತು. ಅಧ್ಯಕ್ಷರಾಗಿ ಬಿಜೆಪಿ ಸ್ನೇಹಲ್ ಅಂಗಡಿ ಆಯ್ಕೆಯಾದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೋದಾವರಿ ಭಾಟ ಉಪಾಧ್ಯಕ್ಷರಾಗಿ ಆಯ್ಕೆಯಾದರು.
    ಶಾಸಕ ಸಿದ್ದು ಸವದಿ ಮಾತನಾಡಿ, ನಮ್ಮ ಕ್ಷೇತ್ರದ ತೇರದಾಳ, ಮಹಾಲಿಂಗಪುರ, ರಬಕವಿಯಲ್ಲೂ ಸಹ ಬಿಜೆಪಿಗೆ ಗೆಲುವು ಬಂದಿದೆ. ಇದು ಜನರ ನಿರ್ಧಾರ ಇದನ್ನು ನಾವು ಗೌರವಿಸುತ್ತೇವೆ. ಇಲ್ಲಿ ಗಲಾಟೆ ನಡೆದಾಗ ಪೊಲೀಸ್ ಅಧಿಕಾರಿಗಳು ಶಿಸ್ತು ಕ್ರಮ ತೆಗೆದುಕೊಂಡು ಎಲ್ಲವನ್ನು ಶಾಂತಗೊಳಿಸಿದ್ದಾರೆ ಎಂದರು.

    ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿದರು. ನಂತರ ನೂತನ ಅಧ್ಯಕ್ಷೆ ಸ್ನೇಹಲ್ ಅಂಗಡಿ ಮಾತನಾಡಿ, ನಾನು ನನಗೆ ವಹಿಸಿದ ಜವಾಬ್ದಾರಿ ಹಾಗೂ ಜನರ ವಿಶ್ವಾಸವನ್ನು ಕಳೆದುಕೊಳ್ಳದಂತೆ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುವೆ ಎಂದರು.

    ಪುರಸಭೆ ಸದಸ್ಯರಾದ ಬಸವರಾಜ ಹಿಟ್ಟಿನಮಠ, ಯಲ್ಲನಗೌಡ ಪಾಟೀಲ, ಶೇಖರ ಅಂಗಡಿ, ರಾಜು ಚಮಕೇರಿ, ಬಸಪ್ಪ ಬುರುಡ, ರಾಜು ಚಮಕೇರಿ, ಜಾವೇದ್ ಬಾಗವಾನ್, ಬಲವಂತಗೌಡ ಪಾಟೀಲ, ಸವಿತಾ ಹುರಕಡ್ಲಿ, ರವಿ ಜವಳಗಿ, ಸುಜಾತಾ ಮಾಂಗ, ಶೀಲಾ ಬಾವಿಕಟ್ಟಿ, ಮುಸ್ತಾಕ್ ಚಿಕ್ಕೋಡಿ, ಬಸೀರ್ ಸೌದಾಗರ್, ಚಾಂದನಿ ನಾಯಕ, ಸರಸ್ವತಿ ರಾಮೋಜಿ, ಬಸವರಾಜ ಯರಗಟ್ಟಿ, ರಾಜು ಗೌಡಪ್ಪಗೋಳ, ಲಕ್ಷ್ಮಿ ಮುದ್ದಾಪುರ, ಬಸಪ್ಪ ಬುರುಡರಾಜು, ಭಾವನಾ ಪಾಟೀಲ, ಚುನಾವಣಾಧಿಒಕಾರಿ ಪ್ರಶಾಂತ ಚನಗೊಂಡ, ಮುಖ್ಯಾಧಿಕಾರಿ ಎಚ್.ಎಸ್. ಚಿತ್ತರಗಿ ಸೇರಿದಂತೆ ಹಲವರು ಇದ್ದರು.

    ಪ್ರಕ್ಷುಬ್ಧ ವಾತಾವರಣ
    ಬಿಜೆಪಿಯ ಮೂವರು ಸದಸ್ಯೆಯರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸುವ ವಿಚಾರವಾಗಿ ಪುರಸಭೆ ಆವರಣದಲ್ಲಿ ಮಾತಿನ ಚಕಮುಕಿ, ನೂಕಾಟ ತಳ್ಳಾಟ ನಡೆಯಿತಲ್ಲದೆ, ಎರಡು ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯಿತು. ಪುರಸಭೆ ಆವರಣದಲ್ಲಿ ಹೊರಗಡೆಯಿಂದ ಕಲ್ಲುಗಳು ತೂರಿಬಂದಿದ್ದರಿಂದ ಇಬ್ಬರು ಪೊಲೀಸ್‌ರು ಗಾಯಗೊಂಡರು. ಗದ್ದಲದಲ್ಲಿ ಕೆಳಗಡೆ ಬಿದ್ದ ಇನ್ನೋರ್ವ ಪೊಲೀಸ್ ಕೂಡ ಗಾಯಗೊಂಡಿದ್ದಾನೆ, ಪೊಲೀಸರು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರಾದರೂ ಆಯ್ಕೆ ಪ್ರಕ್ರಿಯೆ ಮುಗಿಯುವವರೆಗೆ ವಾತಾವರಣ ಪ್ರಕ್ಷುಬ್ಧವಾಗಿತ್ತು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts