More

    ರೈತರ ಬೇಡಿಕೆ ಈಡೇರಿಕೆ

    ಮಹಾಲಿಂಗಪುರ: ಅಂದಾಜು 50 ವರ್ಷಗಳ ಹಿಂದೆ ಮಾಡಿದ ಕಾಲುವೆಯ ಸಿಮೆಂಟ್ ಲೈನಿಂಗ್ ಹಾಳಾಗಿ ನೀರು ಪೋಲಾಗುತ್ತಿರುವುದನ್ನು ದುರಸ್ತಿ ಮಾಡಿಸಬೇಕೆಂಬ ರೈತರ ಬೇಡಿಕೆ ಹಿನ್ನೆಲೆ 19 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

    ಇಲ್ಲಿಗೆ ಸಮೀಪದ ರನ್ನ ಬೆಳಗಲಿಯ ಜಿಎಲ್‌ಬಿಸಿ ಮುಖ್ಯ ಕಾಲುವೆ ಕಾಮಗಾರಿಯನ್ನು ಭಾನುವಾರ ಪರಿಶೀಲಿಸಿ ಮಾಧ್ಯಮದವರೊಂದಿಗೆ ಮಾತನಾಡಿ, ರೈತರ ಬೇಡಿಕೆಯಂತೆ ಈ ಹಿಂದೆ ನಾನು ಆಗಮಿಸಿ ಕಾಲುವೆ ಪರಿಶೀಲನೆ ಮಾಡಿದ ಪ್ರಕಾರ ಕಾಲುವೆ ಕಾಮಗಾರಿಯನ್ನು ಇಬ್ಬರಿಗೆ ಗುತ್ತಿಗೆ ನೀಡಲಾಗಿದೆ. ಮುಗಳಖೋಡ, ಮಳಲಿ, ನಾಗರಾಳ ಮತ್ತು ಅಕ್ಕಿಮರಡಿ ಗ್ರಾಮಗಳ ಭೂಮಿಗೆ ಮುಂಗಾರಿನಲ್ಲಿ 94 ಕ್ಯೂಸೆಕ್ ನೀರು ಹರಿಯುತ್ತದೆ. ಅಂದಾಜು 19 ಕೋಟಿ ರೂ. ವೆಚ್ಚದಲ್ಲಿ ಕಾಲುವೆ ಲೈನಿಂಗ್ ಮತ್ತು ರಿಪೇರಿ ಕೆಲಸ ಪ್ರಾರಂಭ ಮಾಡಿದ್ದೇವೆ. ಮೊದಲ ಹಂತದಲ್ಲಿ ಡಿಸ್ಟ್ರಿಬೂಟರ್ ಕಾಲುವೆ 1 ರಿಂದ 5 ಕಿ.ಮೀ.ವರೆಗಿನ ಕಾಮಗಾರಿ 3.50 ಕೋಟಿ ರೂ. ಹಾಗೂ 6 ರಿಂದ 10 ರವರೆಗಿನ ಕಾಮಗಾರಿ 3.20 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದೆ. ಎರಡನೇ ಹಂತದ ಕಾಮಗಾರಿಗೆ 12 ಕೋಟಿ ರೂ. ವೆಚ್ಚದ ಟೆಂಡರ್ ಕರೆಯಲಾಗಿದೆ ಎಂದು ಸಚಿವರು ಹೇಳಿದರು.

    ಕಾಲುವೆ ಬದಿಯ ಸರ್ವಿಸ್ ರಸ್ತೆಯನ್ನು ಕೂಡ 5 ಕೋಟಿ ರೂ. ವೆಚ್ಚದಲ್ಲಿ ರಿಪೇರಿ ಮಾಡಲಾಗುವುದು. ಕರೊನಾ ಹಿನ್ನೆಲೆ ಕಾಮಗಾರಿ ಬಂದ್ ಆಗಿತ್ತು. ಈಗ ತ್ವರಿತವಾಗಿ ಕೆಲಸ ಪ್ರಾರಂಭಿಸಲಾಗುವುದು. 10 ಕೋಟಿ ರೂ. ವೆಚ್ಚದಲ್ಲಿ ರನ್ನ ಬೆಳಗಲಿ ಕೆರೆ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದು, ಸಮಗ್ರ ಬೆಳಗಲಿಯ ಜನತೆ ಹಾಗೂ ರೈತರ ಹಿತ ಕಾಪಾಡುವ ಕಾರ್ಯ ಮಾಡುವುದಾಗಿ ಭರವಸೆ ನೀಡಿದರು.

    ಬೆಳಗಲಿ ಪಪಂ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಎಚ್.ಡಿ. ಆಲೂರ, ಗಣ್ಯರಾದ ಅರುಣ ಕಾರಜೋಳ, ಆರ್.ಟಿ. ಪಾಟೀಲ, ಚಿಕ್ಕಪ್ಪ ನಾಯಿಕ, ರಾಮನಗೌಡ ಪಾಟೀಲ, ಪುಟ್ಟು ಕುಲಕರ್ಣಿ, ರಂಗಪ್ಪ ಒಂಟಗೋಡಿ, ಅಶೋಕ ಸಿದ್ದಾಪುರ, ಸಿದ್ದು ಪಾಟೀಲ, ಮಹಾಲಿಂಗಪ್ಪ ಲಾಗದವರ, ಪಂಡಿತ ಪೂಜೇರಿ ಮುಂತಾದವರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts