More

    ಮಾದಪ್ಪನಿಗೆ ಮಹಾಲಯ ಅಮಾವಾಸ್ಯೆ ಪೂಜೆ

    ಎಸ್.ಲಿಂಗರಾಜು ಮಂಗಲ ಹನೂರು

    ತಾಲೂಕಿನ ಮಲೈಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಶನಿವಾರ ಮಹಾಲಯ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜೆ ನಡೆದವು. ಲಕ್ಷಾಂತರ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು.

    ಅಮಾವಾಸ್ಯೆ ಹಿನ್ನಲೆ ದೇಗುಲವನ್ನು ವಿವಿಧ ಪುಷ್ಪ, ತಳೀರು ತೋರಣಗಳಿಂದ ಸಿಂಗರಿಸಲಾಗಿತ್ತು. ಅಲ್ಲದೆ, ಗೋಪುರ ಹಾಗೂ ದೇವಸ್ಥಾನದ ಆವರಣವನ್ನು ವಿವಿಧ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು ಕಣ್ಮನ ಸೆಳೆಯಿತು. ಬೆಳಗಿನ ಜಾವ 3 ಗಂಟೆಯಿಂದ 6.30 ರವರೆಗೆ ಸ್ವಾಮಿಗೆ ಪ್ರಥಮ ಹಾಗೂ ದ್ವಿತೀಯ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಉಪವಾಸವಿದ್ದ ಬೇಡಗಂಪಣ ಸರದಿ ಅರ್ಚಕರು ಛತ್ರಿ ಚಾಮರ ವಾದ್ಯಮೇಳದೊಂದಿಗೆ ನಂದನವನದ ಮಜ್ಜನ ಬಾವಿಗೆ ತೆರಳಿ ಆಗ್ರೋದಕ ಹಾಗೂ ಬಾಯಿಗೆ ಬಟ್ಟೆ ಕಟ್ಟಿಕೊಂಡು ಕರೆದ ಹಾಲನ್ನು ದೇಗುಲಕ್ಕೆ ತಂದರು. ಬಳಿಕ ಸ್ವಾಮಿಗೆ ಸಂಕಲ್ಪಾಧಿ, ಗಣಪತಿ ಪೂಜೆ, ಪಂಚಕಳಸ ಪೂಜೆ, ಏಕವಾರು ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಎಳನೀರು, ಜೇನುತುಪ್ಪ, ಮೊಸರು, ಸಕ್ಕರೆ, ಖರ್ಜೂರ, ದ್ರಾಕ್ಷಿಯ ಮೂಲಕ ಹಾಲಿನ ಅಭಿಷೇಕ ನೆರವೇರಿಸಿದರು.

    ಬಳಿಕ ಸ್ವಾಮಿಯ ಮೂರ್ತಿಗೆ ನವರತ್ನ ಕಿರೀಟ ಧಾರಣೆಯ ಜತೆಗೆ ಕಾವಿ ವಸ್ತ್ರ, ರುದ್ರಾಕ್ಷಿ, ಭಸ್ಮ ಹಾಗೂ ಶ್ರೀಗಂಧದಿಂದ ಅಲಂಕಾರ ಮಾಡಿ ನಗಾರಿ, ಜಾಗಟೆ ಹಾಗೂ ವಾದ್ಯಮೇಳದೊಂದಿಗೆ ಧೂಪ, ದೀಪದಾರತಿ ಜತೆಗೆ ಮಹಾ ಮಂಗಳಾರತಿ ಬೆಳಗಿಸಿ ದೀವಾಟಿಕೆ ಸೇವೆಯನ್ನು ನೆರವೇರಿಸಲಾಯಿತು. ಪೂಜಾ ವಿಧಿವಿಧಾನಗಳು ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ನೆರವೇರಿದವು.

    ಶೇಷಣ್ಣ ಗದ್ದುಗೆಗೂ ವಿಶೇಷ ಪೂಜೆ: ಇದೇ ವೇಳೆ ನಡುಗುಡಿಯ ಬಂಡಳ್ಳಿ ಬಸವ, ಬೇಡರಕಣ್ಣಪ್ಪ ಸ್ವಾಮಿ, ಶ್ರೀಕಾಳ ಹಸ್ತೇಶ್ವರಸ್ವಾಮಿ, ಗಾಳಿ ಬಸವೇಶ್ವರ ಸ್ವಾಮಿ, ಆಲಂಬಾಡಿ ಬಸವ, ಮಹಾಗಣಪತಿ ಹಾಗೂ ಕಾರಯ್ಯ, ಬಿಲ್ಲಯ್ಯ ಮೂರ್ತಿಗೂ ಪೂಜೆ ಸಲ್ಲಿಸಲಾಯಿತು. ಜತೆಗೆ ಅಂತರಗಂಗೆಯ ಬಳಿ ಇರುವ ಶೇಷಣ್ಣ ಒಡೆಯರ ಗದ್ದುಗೆಗೂ ವಿಶೇಷ ಅಭಿಷೇಕದ ಪೂಜಾ ಕಾರ್ಯಗಳು ನಡೆದವು.

    ಉತ್ಸವದಲ್ಲಿ ಭಾಗಿಯಾದ ಭಕ್ತರು: ಭಕ್ತರು ಸರತಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು. ಒಂದಷ್ಟು ಭಕ್ತರು 250 ರೂ. ಹಾಗೂ 500 ರೂ. ಟಿಕೆಟ್ ಪಡೆದು ವಿಶೇಷ ಕೌಂಟರ್ ಮೂಲಕ ತೆರಳಿ ಸ್ವಾಮಿಯ ದರ್ಶನ ಪಡೆದರು. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪ್ರತ್ಯೇಕ ಕೌಂಟರ್ ತೆರೆಯಲಾಗಿತ್ತು. ಇನ್ನು ಭಕ್ತರು ಹುಲಿವಾಹನ, ರುದ್ರಾಕ್ಷಿವಾಹನ ಹಾಗೂ ಬಸವ ವಾಹನವನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸುವುದರ ಮೂಲಕ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಈ ಉತ್ಸವಗಳು ಬೆಳಗ್ಗೆಯಿಂದ ಸಂಜೆಯವರೆಗೆ ಜರುಗಿತು. ಉತ್ಸವದ ವೇಳೆ ಹರಕೆ ಹೊತ್ತ ಭಕ್ತರು ದಂಡಿನ ಕೋಲನ್ನು ಹೊತ್ತರು. ಉಘೇ ಮಾದಪ್ಪ, ಜೈ ಮಹತ್ ಮಲೆಯಾ ಘೋಷಣೆಗಳನ್ನು ಕೂಗಿದರು.

    ಸೇವೆಗಳಲ್ಲಿ ಭಾಗಿ: ಹರಕೆ ಹೊತ್ತಿದ್ದ ಭಕ್ತರು ಮುಡಿಸೇವೆ, ಉರುಳುಸೇವೆ, ಪಂಜಿನಸೇವೆ ಹಾಗೂ ರಜಾ ಹೊಡೆಯುವ ಸೇವೆಯನ್ನು ನೆರವೇರಿಸಿದರು. ತಮಿಳುನಾಡು ಸೇರಿದಂತೆ ಚಾಮರಾಜನಗರ, ಮೈಸೂರು, ಮಂಡ್ಯ, ಬೆಂಗಳೂರು, ಬಿಡದಿ, ರಾಮನಗರ, ಕನಕಪುರ, ಚನ್ನಪಟ್ಟಣ, ಮದ್ದೂರು, ಮಳವಳ್ಳಿ ಸೇರಿದಂತೆ ಇನ್ನಿತರೆ ಕಡೆಗಳಿಂದ ಲಕ್ಷಾಂತರ ಭಕ್ತರು ಮ.ಬೆಟ್ಟಕ್ಕೆ ಭೇಟಿ ನೀಡಿದ್ದರು. ಇದರಲ್ಲಿ ಶಕ್ತಿ ಯೋಜನೆಯ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರು. ಭಕ್ತರ ಸಂಖ್ಯೆಗೆ ಅನುಗುಣವಾಗಿ ಬಸ್ ಸೌಕರ್ಯ ಒದಗಿಸಲಾಗಿತ್ತು.

    ರಂಗಮಂದಿರಲ್ಲಿ ಬೀಡು ಬಿಟ್ಟಿದ್ದ ಭಕ್ತರು: ಅಮಾವಾಸ್ಯೆ ಹಿನ್ನೆಲೆಯಲ್ಲಿ ಮ.ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಇದರ ಜತೆಗೆ ಕಳೆದ 3-4 ದಿನಗಳ ಹಿಂದೆ ಸಾವಿರಾರು ಭಕ್ತರು ಕಾಲ್ನಡಿಗೆಯ ಮೂಲಕ ಆಗಮಿಸಿದ್ದು, ರಂಗಮಂದಿರ ಹಾಗೂ ಶಾಮಿಯಾನ ವ್ಯವಸ್ಥೆ ಕಲ್ಪಿಸಲಾಗಿದ್ದ ರಾಜಗೋಪುರದ ಮುಂಭಾಗದಲ್ಲಿ ಭಕ್ತರು ಉಳಿದುಕೊಂಡಿದ್ದರು. ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಅವರು ಕಳೆದ 3 ದಿನಗಳಿಂದ ಮ.ಬೆಟ್ಟದಲ್ಲೇ ಮೊಕ್ಕಾಂ ಹೂಡಿದ್ದು, ನಿರಂತರ ದಾಸೋಹ, ಕುಡಿಯುವ ನೀರು, ನೆರಳಿನ ವ್ಯವಸ್ಥೆ ಸೇರಿದಂತೆ ಭಕ್ತರಿಗೆ ಮೂಲ ಸೌಕರ್ಯಕ್ಕೆ ಕೊರತೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts