More

  ಖಾನಾಪುರ: ಮಹಾಲಕ್ಷ್ಮೀ ಸಹಕಾರಿಗೆ ರಜತ ಸಂಭ್ರಮ

  ಖಾನಾಪುರ: ತಾಲೂಕಿನ ತೋಪಿನಕಟ್ಟಿಯಲ್ಲಿ 25 ವರ್ಷಗಳ ಹಿಂದೆ ಕೇವಲ 340 ರೂ.ಬಂಡವಾಳದೊಂದಿಗೆ ಆರಂಭವಾದ ಶ್ರೀ ಮಹಾಲಕ್ಷ್ಮೀ ಗ್ರುಪ್ ಮತ್ತು ಶ್ರೀ ಮಹಾಲಕ್ಷ್ಮೀ ವಿವಿಧೋದ್ದೇಶಗಳ ಸಹಕಾರಿ ಸಂಸ್ಥೆ ಈ ವರ್ಷ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಇದರ ಅಂಗವಾಗಿ ಮಾ. 6ರಿಂದ 10ರ ವರೆಗೆ ಪಟ್ಟಣದ ಶಾಂತಿನಿಕೇತನ ಶಾಲೆಯ ಆವರಣದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀ ಮಹಾಲಕ್ಷ್ಮೀ ಗ್ರುಪ್ ಸಂಸ್ಥಾಪಕ ವಿಠ್ಠಲ ಹಲಗೇಕರ ತಿಳಿಸಿದ್ದಾರೆ.

  ಪಟ್ಟಣದ ಹೊರವಲಯದ ಶಾಂತಿನಿಕೇತನ ಪಬ್ಲಿಕ್ ಶಾಲೆಯ ಆವರಣದಲ್ಲಿ ಶುಕ್ರವಾರ ರಜತ ಮಹೋತ್ಸವ ಕಾರ್ಯಕ್ರಮದ ವೇದಿಕೆ ನಿರ್ಮಾಣದ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಉದ್ಘಾಟನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಸುರೇಶ ಅಂಗಡಿ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಂಸದರಾದ ಅನಂತಕುಮಾರ ಹೆಗಡೆ, ಅಣ್ಣಾಸಾಹೇಬ ಜೊಲ್ಲೆ, ಸಚಿವರಾದ ಶಶಿಕಲಾ ಜೊಲ್ಲೆ, ಜಗದೀಶ ಶೆಟ್ಟರ್, ಶ್ರೀರಾಮುಲು, ಶ್ರೀಮಂತ ಪಾಟೀಲ, ರಮೇಶ ಜಾರಕಿಹೊಳಿ, ವಿಧಾನ ಪರಿಷತ್‌ನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಸೇರಿ ರಾಜ್ಯದ ಹಾಲಿ-ಮಾಜಿ ಸಚಿವರು, ಹಾಲಿ-ಮಾಜಿ ಶಾಸಕರು, ಜನಪ್ರತಿನಿಧಿಗಳು, ಬಿಜೆಪಿ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಆಗಮಿಸಲಿದ್ದಾರೆ.

  ಮಹಿಳಾ ದಿನಾಚರಣೆ ವಿಶೇಷ ಆಕರ್ಷಣೆಯಾಗಿ ಮರಾಠಿ ಚಿತ್ರರಂಗದ ಪ್ರಸಿದ್ಧ ಅಭಿನೇತ್ರಿ, ಸೈರಾಟ್ ಚಿತ್ರದ ನಟಿ ರಿಂಕು ರಾಜಗುರು ಆಗಮಿಸುವರು. ಅವರು ಮಹಿಳಾ ಸಬಲೀಕರಣದ ಕುರಿತು ಮಹಿಳೆಯರು ಮತ್ತು ಯುವತಿಯರೊಂದಿಗೆ ಸಂವಾದ ನಡೆಸಲಿದ್ದಾರೆ. ಅಲ್ಲದೆ, ನಾಲ್ಕು ದಿನಗಳ ಕಾಲ ಬೆಳಗಾವಿ ಜಿಲ್ಲೆಯ ರೈತರಿಗಾಗಿ ವಿಶೇಷವಾಗಿ ಕೃಷಿ ಹಾಗೂ ಜಾನುವಾರು ಮೇಳ ಮತ್ತು ಕೃಷಿ ಪರಿಣತರಿಂದ ಕಾರ್ಯಾಗಾರ ಆಯೋಜಿಸಲಾಗಿದೆ.

  ಸಾಂಸ್ಕೃತಿಕ ಕಾರ್ಯಕ್ರಮ: ಐದು ದಿನ ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಸ್ಥೆಯ ರಜತ ಮಹೋತ್ಸವ ಆಚರಣೆ ಉದ್ಘಾಟನೆ, ಸಮಾರೋಪ ಸಮಾರಂಭ, ಶಾಂತಿನಿಕೇತನ ಶಾಲೆಯ ವಾರ್ಷಿಕೋತ್ಸವ, ಭವ್ಯ ಕೃಷಿ ಹಾಗೂ ಜಾನುವಾರು ಮೇಳ, ಸಂಘದ ಸದಸ್ಯರ ಸಮಾವೇಶ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಕಾರ್ಯಾಗಾರ ಮತ್ತು ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮೀ ಗೌರವ ಪುರಸ್ಕಾರ ವಿತರಣೆ ಮತ್ತು ತಾಲೂಕಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
  ತೋಪಿನಕಟ್ಟಿ ಸಿದ್ಧಾಶ್ರಮದ ರಾಮದಾಸ ಮಹಾರಾಜರು, ತೋಪಿನಕಟ್ಟಿ ಮಹಾಲಕ್ಷ್ಮೀ ಗ್ರುಪ್‌ನ ಚಾಂಗಪ್ಪ ನಿಲಜಕರ, ಯಲ್ಲಪ್ಪ ತಿರವೀರ, ತುಕಾರಾಮ ಹುಂದ್ರೆ, ವಿಠ್ಠಲ ಕರಂಬಳಕರ, ನಾರಾಯಣ ಹಲಗೇಕರ, ಸುರೇಶ ಭೋಸಲೆ, ಅರುಣ ಕಾಕತಕರ, ಗುಂಡು ಪಾಖರೆ, ರಾಜು ಕರಂಬಳಕರ, ಶಂಕರ ಶಹಾಪುರಕರ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts