More

    ದುಡಿಯುವ ಜನತೆಯ ಮಹಾಧರಣಿ ಅಂತ್ಯ

    ಬೆಂಗಳೂರು: ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಂಯುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ಮೂರು ದಿನಗಳ ಕಾಲ ನಡೆದ ‘ದುಡಿಯುವ ಜನತೆಯ ಮಹಾಧರಣಿ’ ಮಂಗಳವಾರ ಅಂತ್ಯಗೊಂಡಿತು. ಧರಣಿಯ ಫಲವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತ, ಕಾರ್ಮಿಕ ಸಂಘಟನೆಗಳ ಮುಖಂಡರ ಜತೆ ಸಭೆ ನಡೆಸಲು ಡಿ.19ರಂದು ಸಮಯ ನಿಗದಿ ಮಾಡಿದ್ದಾರೆ. ಈ ಕುರಿತ ಒಪ್ಪಿಗೆ ಪತ್ರವನ್ನು ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಧರಣಿ ಸ್ಥಳಕ್ಕೆ ತಂದು ಸಮಿತಿ ಮುಖಂಡರಿಗೆ ಹಸ್ತಾಂತರಿಸಿದರು.

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೂ ತಮ್ಮ ಬೇಡಿಕೆ, ನಿರ್ಣಯ ಹಾಗೂ ನಿಲುವುಗಳನ್ನು ತಿಳಿಸಿ ಈಡೇರಿಸಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಈ ವೇಳೆ ಕ್ರಾಂತಿ ಗೀತೆಗಳನ್ನು ಹಾಡಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ಪ್ರತಿಕೃತಿ ದಹಿಸುವ ಮೂಲಕ ಧರಣಿ ಅಂತ್ಯಗೊಳಿಸಿದರು.

    ಧರಣಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ (ಹಸಿರು ಸೇನೆ), ಅಖಿಲ ಭಾರತ ಕಿಸಾನ್ ಸಭಾ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ, ಮಹಿಳಾ ಸಂಘಟನೆಗಳು, ಕರ್ನಾಟಕ ಜನಶಕ್ತಿ ಸಂಘ, ಕರ್ನಾಟಕ ರೈತ ಸಂಘ, ಭಾರತೀಯ ಕೃಷಿಕ್ ಸಮಾಜ್ (ಸಂಯುಕ್ತ), ಕರ್ನಾಟಕ ಶ್ರಮಿಕ ಶಕ್ತಿ, ಜನಾಂದೋಲನ ಮಹಾಮೈತ್ರಿ, ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿ ಸೇರಿ ಹಲವು ಸಂಘ, ಸಂಸ್ಥೆಗಳು ಪಾಲ್ಗೊಂಡು ಬೆಂಬಲ ಸೂಚಿಸಿದವು.

    ಬೃಹತ್ ಆಂದೋಲನ : ಕೇಂದ್ರದಲ್ಲಿ ಅಧಿಕಾರದಲ್ಲಿರುವ ರೈತ, ಕಾರ್ಮಿಕ ವಿರೋಧಿ ಸರ್ಕಾರವನ್ನು 2024ರ ಚುನಾವಣೆಯಲ್ಲಿ ಮಣ್ಣು ಮುಕ್ಕಿಸಲು ನಾಳೆಯಿಂದಲೇ ಕೆಲಸ ಮಾಡಬೇಕೆಂದು ಸಮಿತಿ ಮುಖಂಡರು ಕರೆ ನೀಡಿದರು. ಈ ನಿಟ್ಟಿನಲ್ಲಿ ಸಮಾನ ಮನಸ್ಕ ಸಮುದಾಯಗಳು, ಸಂಘಟನೆಗಳ ಜತೆ ಸಮಾಲೋಚನೆ ನಡೆಸಿ ಬೃಹತ್ ಆಂದೋಲನ ರೂಪಿಸಿ ಮನೆ ಮನೆಗೆ ಕೊಂಡೊಯ್ಯುವ ಮೂಲಕ ದಿಲ್ಲಿಗಿಂತ ಹಳ್ಳಿ ಬಲಶಾಲಿ, ಬಂಡವಾಳಿಗರಿಗಿಂತ ದುಡಿಯುವವರು ಬಲಶಾಲಿಗಳು ಎಂಬುವುದನ್ನು ತೋರಿಸುವ ಪ್ರತಿಜ್ಞೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts