More

    ಭಕ್ತರು ಬೇಡಿದ್ದನ್ನು ಕರುಣಿಸುವ ಮಹದೇಶ್ವರ

    ಹಾದನೂರು ಚಂದ್ರ ಸರಗೂರು
    ಸರಗೂರು ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಬೇಡಿದ್ದನ್ನು ಕರುಣಿಸುವ ನಂಬಿಕೆಯ ದೈವವಾಗಿ ಕಂದೇಗಾಲದಲ್ಲಿ ಮಹದೇಶ್ವರಸ್ವಾಮಿ ನೆಲೆಸಿದ್ದಾನೆ.
    ಉತ್ತಮ ಫಸಲಿಗಾಗಿ, ವಿವಾಹ ಭಾಗ್ಯಕ್ಕಾಗಿ, ಸಂತಾನ, ಉದ್ಯೋಗಕ್ಕಾಗಿ ಸುತ್ತಮುತ್ತಲ ಗ್ರಾಮದಿಂದ ಭಕ್ತರು ಬಂದು ಮಹದೇಶ್ವರನಿಗೆ ನಮಿಸುತ್ತಾರೆ, ಹರಕೆ ಹೊತ್ತುಕೊಳ್ಳುತ್ತಾರೆ. ಕಂದೇಗಾಲ, ನಂದಿನಾಥಪುರ, ಗದ್ದೆಹಳ್ಳ, ಬಿದರಹಳ್ಳಿ, ಚನ್ನಿಪುರ, ಸಾಗರೆ, ಆಗತ್ತೂರು ಗ್ರಾಮಗಳಿಂದ ಭಕ್ತರು ನಿತ್ಯ ಆಗಮಿಸಿ ಪೂಜೆ ಸಲ್ಲಿಸಿ ಬೇಡಿಕೊಳ್ಳುತ್ತಾರೆ.

    ಪ್ರತಿ ಸೋಮವಾರ, ಶುಕ್ರವಾರ ವಿಶೇಷ ಪೂಜೆ ಇರುತ್ತದೆ. ಫೆಬ್ರವರಿ ತಿಂಗಳಲ್ಲಿ ಮಹದೇಶ್ವರನಿಗೆ ಜಾತ್ರಾ ಮಹೋತ್ಸವ ನೆರವೇರಿಸಲಾಗುತ್ತದೆ. ಮೂರು ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಸುತ್ತಮುತ್ತಲಿನ ಹಳ್ಳಿಗಳ ಜನರು ಪಾಲ್ಗೊಂಡು ಸಂಭ್ರಮದಿಂದ ಆಚರಿಸುತ್ತಾರೆ. ಮೊದಲಿನ ಮಹದೇಶ್ವರನಿಗೆ ಊರಿನವರು ಸೇರಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ.

    ಎರಡನೇ ದಿನ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಉತ್ಸವ ಮೂರ್ತಿಯನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯದೊಂದಿಗೆ ಮೆರವಣಿಗೆ ನಡೆಸಲಾಗುತ್ತದೆ. ನಂತರ ಕೊಂಡೋತ್ಸವ ನಡೆಸಲಾಗುತ್ತದೆ. ಮೂರನೇ ದಿನದ ಜಾತ್ರಾ ಮಹೋತ್ಸವದಲ್ಲಿ ಜಾನುವಾರುಗಳ ಪ್ರದರ್ಶನ-ಬಹುಮಾನ ವಿತರಣೆ ಹಾಗೂ ವಿವಿಧ ಆಟೋಟಗಳ ನಡೆಸಲಾಗುತ್ತದೆ.

    ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಹರಕೆ ಹೊತ್ತ ಭಕ್ತರು ಧಾನ್ಯ, ಬಂಗಾರಗಳನ್ನು ದೇವರಿಗೆ ಅರ್ಪಿಸುತ್ತಾರೆ.

    ದೇವಾಲಯದ ಹಿನ್ನೆಲೆ: ಸಂತ ಮಹದೇಶ್ವರರು 600 ವರ್ಷಗಳ ಹಿಂದೆ ತಪಸ್ಸಿಗಾಗಿ ಇಲ್ಲಿ ಬಂದು ನೆಲೆಸಿ ಲಿಂಗ ರೂಪ ತಾಳಿದ್ದಾರೆ ಎಂಬೂದು ಇಲ್ಲಿನ ಜನತೆಯ ನಂಬಿಕೆ. ಈ ಸಂದರ್ಭದಲ್ಲಿ ಗ್ರಾಮದ ಅರಸು ಕುಟುಂಬದ ಹಸು ಬೆಳಗ್ಗೆ ಮೇಯಲು ತೆರಳಿದ ಸಂದರ್ಭ ಲಿಂಗರೂಪಕ್ಕೆ ಹಾಲನ್ನು ಸುರಿಸಿ ಬರುತ್ತಿತ್ತು. ಮನೆಯವರು ಹಾಲು ಕರೆಯುವಾಗ ಹಾಲು ಬಾರದೆ ರಕ್ತ ಬರುತ್ತಿದ್ದನ್ನು ಗಮನಿಸಿ ಒಂದು ದಿನ ಹಸುವನ್ನು ಪರೀಕ್ಷಿಸಲು ಹಿಂಬಾಲಿಸಿದಾಗ ಹಸು ಲಿಂಗಕ್ಕೆ ಹಾಲೆರೆಯುವುದನ್ನು ಗಮನಿಸಿ ನಂತರ ಗ್ರಾಮಸ್ಥರು ಒಟ್ಟು ಸೇರಿ ಇದೇ ಸ್ಥಳದಲ್ಲಿ ಗುಡಿ ನಿರ್ಮಿಸಿ ಪೂಜಿಸಲು ಪ್ರಾರಂಭಿಸಿದರು ಎಂದು ಹಿರಿಯರು ಹೇಳುತ್ತಾರೆ. ಮಹದೇಶ್ವರರು ಶಿವನ ಅವತಾರ ಎಂದು ಸ್ಥಳೀಯರು ನಂಬುತ್ತಾರೆ.

    ದೇಗುಲ ನಿರ್ಮಾಣ: ಕಂದೇಗಾಲ ಗ್ರಾಮಕ್ಕೆ ದಿ.ಮಾಜಿ ಶಾಸಕ ಎಂ.ಪಿ. ವೆಂಕಟೇಶ್ 1999-2000ರಲ್ಲಿ ಭೇಟಿ ನೀಡಿದ ಸಂದರ್ಭ ಗ್ರಾಮಸ್ಥರ ಮನವಿ ಮೇರೆಗೆ ನೀಡಿದ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ ನೆರವು ಹಾಗೂ ಗ್ರಾಮಸ್ಥರು ಒಟ್ಟು ಸೇರಿ ಮಹದೇಶ್ವರನಿಗೆ ಗುಡಿ ನಿರ್ಮಿಸಿದರು. ಇದನ್ನು ಕಂದೇಗಾಲ ಮಹದೇಶ್ವರ ಎಂದೇ ಕರೆಯಲಾಗುತ್ತಿದೆ. ನಂತರದ ದಿನಗಳಲ್ಲಿ ಅರ್ಚಕರನ್ನು ನೇಮಿಸಿ ನಿತ್ಯ ಪೂಜಾ ಕೈಂಕರ್ಯ ನೆರವೇರಿಸಲಾಗುತ್ತಿದೆ. ಸುತ್ತಮುತ್ತಲ ಗ್ರಾಮಗಳ ಜನರು ಒಟ್ಟು ಸೇರಿ ದೇವಾಲಯ ಸಮಿತಿ ರಚಿಸಿ ಮಹದೇಶ್ವರ ಜಾತ್ರಾ ಮಹೋತ್ಸವ ಹಾಗೂ ದನಗಳ ಜಾತ್ರೆ ವಿಜೃಂಭಣೆಯಿಂದ ನೆರವೇರಿಸುತ್ತಾ ಬಂದಿದ್ದಾರೆ. ಅರಣ್ಯದ ನಡುವೆ ನಿರ್ಮಾಣವಾಗಿರುವ ದೇಗುಲ ಭಕ್ತಿಯ ಜತೆಗೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಸರಗೂರಿನಿಂದ ಸಾಗರ ಮಾರ್ಗದ 10 ಕಿಲೋಮೀಟರ್ ದೂರದಲ್ಲಿ ಕಂದೇಗಾಲ ಸಿಗುತ್ತದೆ. ಇಲ್ಲಿಗೆ ತೆರಳಲು ಸಾರಿಗೆ ವ್ಯವಸ್ಥೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts