More

    ಮಾಗಡಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸಮಸ್ಯೆಗಳ ಸದ್ದು: ಕುಡಿಯುವ ನೀರಿನ ಕೊರತೆ ನೀಗಿಸಲು, ಅಕ್ರಮ ತಡೆಗಟ್ಟಲು ಪಟ್ಟು

    ಮಾಗಡಿ: ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ, ಚಿರತೆ ಹಾವಳಿ, ಆಧಾರ್ ಕಾರ್ಡ್ ತಿದುಪಡ್ಡಿಗೆ ವಿಳಂಬ, ಕಾಮಗಾರಿಯಲ್ಲಿ ಅಕ್ರಮ ಈ ಎಲ್ಲ ವಿಷಯಗಳ ಕುರಿತ ಪ್ರಶ್ನೆಗಳು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಕೇಳಿಬಂದವು.

    ತಾಲೂಕಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸರಕಾರ ಹೋಬಳಿವಾರು ಕೊಳವೆ ಬಾವಿ ಕೊರೆಯಲು ಟೆಂಡರ್ ಕರೆದು ಏಜೆನ್ಸಿ ನೀಡಿದೆ. ಆದರೆ ಸರ್ಕಾರ ಆದೇಶ ನೀಡುವವರೆಗೂ ಕೊಳವೆ ಬಾವಿ ಕೊರೆಯುವುದಿಲ್ಲ ಎಂದು ಗುತ್ತಿದಾರರು ಹೇಳುತ್ತಿದ್ದಾರೆ. ಹೀಗಾದರೆ ಜನರ ಪಾಡೇನು ಎಂದು ತಾಲೂಕು ಪಂಚಾಯಿತಿ ಸದಸ್ಯ ನಾರಾಯಣಪ್ಪ ಅಧಿಕಾರಿಗಳನ್ನು ಪ್ರಶ್ನಿಸಿದರು.

    ಕಲ್ಯಾ, ತಿಪ್ಪಸಂದ್ರ, ಬೆಳಗುಂಬ, ಮೋಟಗಾನಹಳ್ಳಿ, ಬಾಚೇನಹಟ್ಟಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಪಂಚಾಯ್ತಿ ವ್ಯಾಪ್ತಿಗೆ ಒಂದೊಂದು ಬೋನು ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು. ಪ್ರಾದೇಶಿಕ ವಲಯ ಅರಣ್ಯ ಅರಣ್ಯಾಧಿಕಾರಿಗಳು ಬೇರೆ ನೆಪವೊಡ್ಡಿ ಸಭೆಗೆ ಹಾಜರಾಗುತ್ತಿಲ್ಲ ಎಂದು ತಾಪಂ ಸದಸ್ಯ ಶಿವರಾಜು ಸಭೆಯ ಗಮನಕ್ಕೆ ತಂದರು.

    ತಾಲೂಕಿನ ಬಾಚೇನಹಟ್ಟಿ ಮತ್ತು ಮಾಡಬಾಳ್‌ನ ಒಂದು ಕಡೆ ಕೆಪಿಎಸ್ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. ತಾಲೂಕಿನ 32 ಗ್ರಾಪಂ ಕೇಂದ್ರ ಸ್ಥಾನದಲ್ಲಿ ಆಂಗ್ಲ ಶಾಲೆ ಪ್ರಾರಂಭಿಸುವಂತೆ ಮನವಿ ಮಾಡಲಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಕ್ರಮ ತಡೆಗಟ್ಟಲು ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದು ಶಿಕ್ಷಣ ಅಧಿಕಾರಿ ವಿರೂಪಾಕ್ಷ ಸಭೆಗೆ ತಿಳಿಸಿದರು.
    ಕುದೂರು ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಲ್ಲಿ ಕಾಮಗಾರಿಗಳಲ್ಲಿ ಅಕ್ರಮ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸದಸ್ಯೆ ಆಶಾರಾಣಿ ಒತ್ತಾಯಿಸಿದರು.

    ತಾಪಂ ಅಧ್ಯಕ್ಷೆ ಗೀತಾ, ಸದಸ್ಯರಾದ ನರಸಿಂಹಮೂರ್ತಿ, ಶಂಕರ್, ಹನುಮಂತರಾಯಪ್ಪ, ಗಂಗಮ್ಮ, ರತ್ನಮ್ಮ ಶ್ರೀನಿವಾಸ್, ಎಲ್.ಸುಧಾ, ಹನುಮೇಗೌಡ, ತಾಪಂ ಕಾರ್ಯ ನಿರ್ವಹಣಾಧಿಕಾರಿ ಟಿ. ಪ್ರದೀಪ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಶಂಕರ, ವಲಯ ಅರಣ್ಯಾಧಿಕಾರಿ ಆಶಾ, ತೋಟಗಾರಿಕೆ ಅಧಿಕಾರಿ ನಾಗರಾಜು, ಸಮಾಜ ಕಲ್ಯಾಣ ಅಧಿಕಾರಿ ಕುಮಾರಸ್ವಾಮಿ, ಅಕ್ಷರ ದಾಸೋಹ ನಿರ್ದೇಶಕ ಗಂಗಾಧರ್ ಇತರರು ಇದ್ದರು.

    ಹೋಬಳಿಗೊಂದು ಆಧಾರ್ ಕೇಂದ್ರ: ತಾಲೂಕು ಕಚೇರಿಯಲ್ಲಿ ಪ್ರತಿದಿನ 25 ಮಂದಿಗೆ ಮಾತ್ರ ಹೊಸ ಆಧಾರ್ ಕಾರ್ಡ್ ಮತ್ತು ತಿದ್ದುಪಡಿ ಮಾಡಿಕೊಡಲಾಗುತ್ತಿದೆ. ಹೀಗಾಗಿ ಆಧಾರ್ ಕಾರ್ಡ್ ಪಡೆಯಲು ತಿಂಗಳುಗಟ್ಟಲೇ ಕಾಯುವಂತಾಗಿದೆ. ಹೋಬಳಿಗೊಂದು ಆಧಾರ್ ಕೇಂದ್ರ ತೆರೆಯಲು ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ಇಒ ಪ್ರದೀಪ್‌ಗೆ ತಾಪಂ ಸದಸ್ಯ ನಾರಾಯಣಪ್ಪ ಮನವಿ ಮಾಡಿದರು.

    ರಾಗಿ ಖರೀದಿ ಕೇಂದ್ರ ಆರಂಭಿಸಲಾಗಿದ್ದು, ಈಗಾಗಲೇ 4,499 ರೈತರು ರಾಗಿ ಮಾರಾಟಕ್ಕೆ ನೋಂದಣಿ ಮಾಡಿಸಿದ್ದಾರೆ, 4,500 ರೈತರಿಂದ ಮಾತ್ರ ರಾಗಿ ಖರೀದಿಗೆ ಸರ್ಕಾರ ಆದೇಶಿಸಿದೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ನೋಂದಣಿಗೆ ಬರುತ್ತಿದ್ದು, ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು.
    -ಶ್ರೀನಿವಾಸ್ ಶಿರಸ್ತೇದಾರ್, ಆಹಾರ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts