More

    ಮಾಗಡಿ ಪುರಸಭೆಗೆ 66.80 ಲಕ್ಷ ರೂ. ಉಳಿತಾಯ : 2.31 ಕೋಟಿ ರೂ. ಆದಾಯ ನಿರೀಕ್ಷೆ

    ಮಾಗಡಿ :  ಈ ಬಾರಿ 66.80 ಲಕ್ಷ ರೂ. ಉಳಿತಾಯ ಮಾಡಲಾಗಿದೆ ಎಂದು ಪುರಸಭಾಧ್ಯಕ್ಷೆ ಭಾಗ್ಯಮ್ಮ ತಿಳಿಸಿದರು.
    ಪುರಸಭೆ ಸಭಾಂಗಣದಲ್ಲಿ ಶನಿವಾರ 2021-22ನೇ ಸಾಲಿನ ಬಜೆಟ್ ಮಂಡಿಸಿ ಮಾತನಾಡಿ, ಪ್ರತಿಯೊಂದು ಕೆಲಸವನ್ನು ಕೈಗೆತ್ತಿಕೊಳ್ಳುವಾಗ ಖರ್ಚು ವೆಚ್ಚ, ಸಾಧಕ ಬಾಧಕಗಳ ಬಗ್ಗೆ ಯೋಚಿಸಲಾಗುತ್ತದೆ. ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಆಯವ್ಯಯ ಮಂಡಿಸಲಾಗುತ್ತದೆ ಎಂದರು.

    ಈ ಬಾರಿ ಬಜೆಟ್‌ನಲ್ಲಿ ಮನೆ ಕಂದಾಯದಿಂದ 1.42 ಕೋಟಿ ರೂ., ಪುರಸಭೆ ಮಳಿಗೆಗಳ ಬಾಡಿಗೆ 39 ಲಕ್ಟ ರೂ., ನೀರಿನ ತೆರಿಗೆ 52.50 ಲಕ್ಷ ರೂ., ಪುರಸಭೆ ಅಧಿಕಾರಾತ್ಮಕ ಆದಾಯದಿಂದ 43 ಲಕ್ಷ ರೂ., ಉದ್ದಿಮೆ ಪರವಾನಗಿಯಿಂದ 8.55 ಲಕ್ಷ ರೂ., ಸಂತೆ, ಕುರಿ, ಕೋಳಿ, ಖಾಸಗಿ ಬಸ್‌ನಿಲ್ದಾಣದ ಹರಾಜು ಸುಂಕದಿಂದ 45 ಲಕ್ಷ ರೂ. ಹಾಗೂ ಇನ್ನಿತರ ಮೂಲಗಳಿಂದ ಒಟ್ಟು ಕೋಟಿ 2.31 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ ಎಂದರು.

    ಖರ್ಚು: ಆರೋಗ್ಯ ಮತ್ತು ನೈರ್ಮಲ್ಯಕ್ಕಾಗಿ 1.70 ಕೋಟಿ ರೂ., ಕುಡಿಯುವ ನೀರು ಸರಬರಾಜಿ 1.50 ಕೋಟಿ ರೂ., ಬೀದಿ ದೀಪ ನಿರ್ವಹಣೆ 50 ಲಕ್ಷ ರೂ., ವೇತನ ಮತ್ತು ಆಡಳಿತಾತ್ಮಕ ವೆಚ್ಚ 1.75 ಕೋಟಿ ರೂ., ಕುಡಿಯುವ ನೀರು ಮತ್ತು ವಿದ್ಯುತ್ ವೆಚ್ಚಕ್ಕಾಗಿ 1.50 ಕೋಟಿ ರೂ., ಮಹಿಳಾ ಸಬಲೀಕರಣ 5.50 ಲಕ್ಷ ರೂ., ಪರಿಶಿಷ್ಟ ಜಾತಿ/ಪಂಗಡ ಸಮಾಜದ ಅಭಿವೃದ್ಧಿ ಕಾರ್ಯಕ್ರಮಗಳಿಗೆ 40 ಲಕ್ಷ ರೂ. ಹಾಗೂ ಇತರ ಕಾರ್ಯಕ್ರಮಗಳಿಗೆ ಹಣ ಮೀಸಲಿಟ್ಟಿದ್ದು, ಒಟ್ಟು 66.80 ಲಕ್ಷ ರೂ. ಉಳಿತಾಯ ಮಾಡಲಾಗಿದೆ ಎಂದು ಭಾಗ್ಯಮ ವಿವರಿಸಿದರು.

    ತೆರಿಗೆ ವಸೂಲಿಗೆ ಕ್ರಮ ಸೂಚಿಸಿಲ್ಲ: ಈ ಭಾರಿ ಪುರಸಭೆಯಲ್ಲಿ ಮಂಡಿಸಿರುವ ಬಜೆಟ್ ನಿರಾಶದಾಯಕವಾಗಿದೆ, ಇದರಲ್ಲಿ ಜನಸಾಮಾನ್ಯರಿಗೆ ಯಾವುದೇ ಅನುಕೂಲವಿಲ್ಲ, ಯಾವ ಮೂಲದಿಂದ ನಿಧಿ ಸಂಗ್ರಹಿಸಲಾಗುವುದು ಎಂದು ತೋರಿಸಿಲ್ಲ. ಬಾಕಿ ತೆರಿಗೆ ವಸೂಲಿಗೆ ಕ್ರಮ ಸೂಚಿಸಿಲ್ಲ. ಇದೊಂದು ಪೊಳ್ಳು ಬಜೆಟ್ ಎಂದು ಸದಸ್ಯ ರಂಗಹನುಮಯ್ಯ ಲೇವಡಿ ಮಾಡಿದರು.

    ಪಟ್ಟಣದಲ್ಲಿ ರಸ್ತೆಬದಿ ವ್ಯಾಪಾರ ಮಾಡುವ 950 ಮಂದಿ ಇದ್ದಾರೆ, ಟಿಎಪಿಸಿಎಂಎಸ್ ಮುಂಭಾಗದಲ್ಲಿ ನಿರ್ಮಿಸುತ್ತಿರುವ ಅಂಗಡಿ ಮಳಿಗೆಗಳಲ್ಲಿ ಎಷ್ಟು ಜನರಿಗೆ ಮಳಿಗೆ ನೀಡಬಹುದು ಎಂಬ ಬಗ್ಗೆ ಮಾಹಿತಿ ಒದಗಿಸಿ ಎಂದು ಸದಸ್ಯ ವೆಂಕಟರಾಮು ಸಭೆಯ ಗಮನ ಸೆಳೆದರು.

    ಸದಸ್ಯ ಅಶ್ವತ್ಥ್ ಮಾತನಾಡಿ, ಪಟ್ಟಣದಲ್ಲಿ 19 ತರಕಾರಿ ಮಂಡಿಗಳಿದ್ದು, 14 ಮಂಡಿಗೆ ಪರವಾನಗಿ ನೀಡಲಾಗಿದೆ. ಉಳಿದವರು ಅನಧಿಕೃತವಾಗಿ ವಹಿವಾಟು ನಡೆಸುತ್ತಿದ್ದಾರೆ. ಸುಂಕ ವಸೂಲಿಗೆ ಕ್ರಮ ಕೈಗೊಳ್ಳಬೇಕು. ಪುರಸಭೆ ಮಳಿಗೆಗಳ ಬಾಡಿಗೆ ಹೆಚ್ಚಿಸಬೇಕು ಎಂದರು.

    ಸದಸ್ಯ ಅನಿಲ್ ಕುಮಾರ್ ಮಾತನಾಡಿ, ಜನಸಾಮಾನ್ಯರಿಗೆ ಪೂರಕವಾಗಿ ಉತ್ತಮ ಬಜೆಟ್ ಮಂಡಿಸಲಾಗಿದೆ, ಕರೋನಾ ನಡುವೆಯೂ ಉಳಿತಾಯ ಮಾಡಲಾಗಿದೆ.

    ಪುರಸಭಾ ಉಪಾಧ್ಯಕ್ಷ ರೆಹಮತ್, ಸದಸ್ಯರಾದ ವಿಜಯಲಕ್ಷ್ಮೀ, ಜಯರಾಮ್, ರಿಯಾಜ್, ಶಬ್ಬೀರ್, ಕಾಂತರಾಜು, ಶಿವರುದ್ರಮ್ಮ, ರೇಖಾ, ಹೇಮಲತಾ, ನಾಗರತ್ನಮ್ಮ, ಮುಖ್ಯಾಧಿಕಾರಿ ಎಂ.ಎನ್. ಮಹೇಶ್, ನಾಗೇಂದ್ರ, ಕುಸುಮ, ಸುಷ್ಮಾ ಮತ್ತಿತರರು ಇದ್ದರು.

    ಕಾಂಗ್ರೆಸ್ ಸದಸ್ಯರ ಬೇಸರ
    ಕಾಂಗ್ರೆಸ್ ಸದಸ್ಯ ಎಚ್.ಜೆ.ಪುರುಷೋತ್ತಮ್ ಮಾತನಾಡಿ,6 ತಿಂಗಳಾದರೂ ಸಭೆಯನ್ನು ಕರೆಯುವುದಿಲ್ಲ, ಹಿಂದುಳಿದ ವರ್ಗಗಳಿಗೆ ಮೀಸಲಿಟ್ಟ ಅನುದಾನವನ್ನು ಸಮರ್ಪಕವಾಗಿ ವಿನಿಯೋಗ ಮಾಡುತ್ತಿಲ್ಲ. ಯಾವುದಾದರೂ ತುರ್ತು ಅನುಮೋದನೆ ಬೇಕಾದಾಗ ಮಾತ್ರ ಮುಖ್ಯಾಧಿಕಾರಿಗಳು ವಿಶೇಷ ಸಭೆ ಕರೆಯುತ್ತಾರೆ. ಕಳೆದ ಬಜೆಟ್‌ನಲ್ಲಿ ಕಾರ್ಯಕ್ರಮಗಳೇ ಇನ್ನು ಅನುಷ್ಠಾನವಾಗಿಲ್ಲ ಹಾಗೂ ಪುರಸಭೆಯಿಂದ ಜನರಿಗೆ ಸಣ್ಣಪುಟ್ಟ ಸಹಾಯವೂ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts