More

    ಕೌಶಲ್ಯಾಭಿವೃದ್ಧಿ ಕುರಿತು ಎಎಂಡಿ ಕಂಪನಿ ಜತೆ ಚರ್ಚೆ; ಎಂ ಬಿ ಪಾಟೀಲ

    ಬೆಂಗಳೂರು: ಕೌಶಲ್ಯಾಭಿವೃದ್ಧಿ, ಉತ್ಕೃಷ್ಟತಾ ಕೇಂದ್ರ ಮತ್ತು ನವೋದ್ಯಮ ಕಾರ್ಯ ಪರಿಸರ ಸುಧಾರಣೆ ಕುರಿತು ಜಾಗತಿಕ ಮಟ್ಟದ ಕಂಪನಿಯಾದ ಎಎಂಡಿ ನೆಟ್ವರ್ಕಿಂಗ್ ಟೆಕ್ನಾಲಜಿ ಮತ್ತು ಸೊಲ್ಯೂಷನ್ ಗ್ರೂಪ್ ಜತೆ ಶುಕ್ರವಾರ ಇಲ್ಲಿ ವಿಸ್ತೃತ ಚರ್ಚೆ ನಡೆಸಲಾಯಿತು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.

    ಕರ್ನಾಟಕದಿಂದ ಬಂದಿರುವ ನಿಯೋಗದಲ್ಲಿ ಐಟಿ- ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರೂ ಇದ್ದಾರೆ. ಸೆಮಿಕಂಡಕ್ಟರ್ ವಲಯದಲ್ಲಿ ದೊಡ್ಡ ಹೆಸರು ಹೊಂದಿರುವ ಎಎಂಡಿ, ಕಂಪ್ಯೂಟರ್ ಪ್ರೊಸೆಸರ್ಸ್ ಮತ್ತು ಗ್ರಾಫಿಕ್ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿದೆ. ಇವುಗಳ ಜತೆಗೆ ಫ್ಲ್ಯಾಶ್ ಮೆಮೊರೀಸ್, ಗ್ರಾಫಿಕ್ಸ್ ಪ್ರೊಸೆಸರುಗಳು, ಮದರ್ ಬೋರ್ಡ್ ಚಿಪ್ ಸೆಟ್ ತಯಾರಿಕೆಯಲ್ಲೂ ಇದು ಅಗ್ರಪಂಕ್ತಿಯಲ್ಲಿದೆ. ಈ ಕಂಪನಿಯೊಂದಿಗೆ ಸಹಭಾಗಿತ್ವ ಹೊಂದಬೇಕೆನ್ನುವುದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯಾಗಿದೆ ಎಂದಿದ್ದಾರೆ.

    ಎಎಂಡಿ ಕಂಪನಿ ಪ್ರಧಾನವಾಗಿ ಮೈಕ್ರೋ ಪ್ರೊಸೆಸರುಗಳು, ಎಂಬೆಡೆಡ್ ಪ್ರೊಸೆಸರುಗಳು, ಗ್ರಾಫಿಕ್ ಪ್ರೊಸೆಸರುಗಳಿಗೆ ಖ್ಯಾತಿ ಹೊಂದಿದೆ. ಮುಂಬರುವ ದಿನಗಳಲ್ಲಿ ಈ ಕಂಪನಿಯು ಡೇಟಾ ಸೆಂಟರುಗಳು, ಕಂಪ್ಯೂಟಿಂಗ್ ಮಾರುಕಟ್ಟೆ ಮತ್ತು ಗೇಮಿಂಗ್ ಮಾರುಕಟ್ಟೆಗಳಲ್ಲಿ ತನ್ನ ಛಾಪು ಮೂಡಿಸಲು ತೀರ್ಮಾನಿಸಿದೆ. ಸದ್ಯಕ್ಕೆ ಅದು ಕೃತಕ ಬುದ್ಧಿಮತ್ತೆ ಆಧಾರಿತ ಚಿಪ್ ತಯಾರಿಸುವ ಯೋಜನೆಯಲ್ಲಿ ತೊಡಗಿಸಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

    ಈ ಕಂಪನಿಯು 2001ರಿಂದಲೂ ಭಾರತದ ಸೆಮಿ ಕಂಡಕ್ಟರ್ ವಲಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ದೆಹಲಿಯಲ್ಲಿ ತನ್ನ ಕಚೇರಿ ಹೊಂದಿದೆ. ಕರ್ನಾಟಕದಲ್ಲಿ ಸಹಭಾಗಿತ್ವ ಸ್ಥಾಪಿಸಿಕೊಂಡರೆ ಉದ್ಯೋಗಸೃಷ್ಟಿ ಮತ್ತು ಸೆಮಿ ಕಂಡಕ್ಟರ್ ವಲಯದ ಬೆಳವಣಿಗೆ ಎರಡಕ್ಕೂ ಮೌಲಿಕ ಕೊಡುಗೆ ಸಾಧ್ಯವಾಗಲಿದೆ ಎನ್ನುವುದನ್ನು ಕಂಪನಿಯ ಪ್ರತಿನಿಧಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

    ಮಾತುಕತೆಯಲ್ಲಿ ಕಂಪನಿಯ ಪರವಾಗಿ ಹಿರಿಯ ಉಪಾಧ್ಯಕ್ಷ ಜಯ್ ಹಿರೇಮಠ, ಸಹ ಸಂಸ್ಥಾಪಕ ಸೋನಿ ಜಿಯಾಂದಾನಿ ಭಾಗವಹಿಸಿದ್ದರು. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್, ಐಟಿಬಿಟಿ ಇಲಾಖೆ ಕಾರ್ಯದರ್ಶಿ ಏಕ್‌ರೂಪ್ ಕೌರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts