More

    ಖರಾಬು ಭೂಮಿ ನುಂಗಿ ಲುಲು ಮಾಲ್ ನಿರ್ಮಾಣ; ಶೀಘ್ರವೇ ದಾಖಲೆ ಬಿಡುಗಡೆ: ಕುಮಾರಸ್ವಾಮಿ

    ಬೆಂಗಳೂರು: ಮಿನರ್ವ ಮಿಲ್ಲಿನ 24 ಎಕರೆ ಖರಾಬು ಭೂಮಿಯನ್ನು ನುಂಗಿ ನೀರು ಕುಡಿದಿರುವ ಲುಲು ಮಾಲ್ ಬಗ್ಗೆಯೂ ಈ ಸರ್ಕಾರ ತನಿಖೆ ನಡೆಸಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.

    ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಶೀಘ್ರವೇ ಲುಲು ಮಾಲಿನ ಅಕ್ರಮವನ್ನು ದಾಖಲೆ ಸಮೇತ ಬಯಲು ಮಾಡುತ್ತೇನೆ ಎಂದು ಗುಡುಗಿದರು.

    ಜಂತಕಲ್ ಮೈನಿಂಗ್ ಇರಬಹುದು ಅಥವಾ ಬಿಡದಿಯ ನನ್ನ ಜಮೀನು ಇರಬಹುದು, ಯಾವುದರ ಬಗ್ಗೆಯೇ ಆಗಲಿ, ತನಿಖೆ ಮಾಡಿಸಲಿ. ಆದಷ್ಟು ಬೇಗ ಇದನ್ನು ಮಾಡಿಸಲಿ ಎಂದು ನಾನೂ ಕಾಯುತ್ತಿದ್ದೇನೆ ಎಂದು ಹೇಳಿದರು.

    ಬಿಡದಿ ತೋಟದ ಮನೆ ಜಮೀನು ಒತ್ತುವರಿ ಆಗಿದೆ.ಈ ಬಗ್ಗೆ ತನಿಖೆ ಮಾಡಿಸಬೇಕು ಎಂಬ ಚೆಲುವರಾಯಸ್ವಾಮಿ ಹೇಳಿಕೆ ನೀಡಿದ್ದಾರೆ. ನಾನು ಅವರಲ್ಲಿ ಮನವಿ ಮಾಡುತ್ತೇನೆ, ಆದಷ್ಟು ಬೇಗ ತನಿಖೆ ಮಾಡಿಸಲಿ. ನನ್ನ ಒಟ್ಟಾರೆ ಭೂಮಿಯಲ್ಲಿ ಮೂರ್ನಾಲ್ಕು ಎಕರೆ ಕಡಿಮೆ ಬರುತ್ತಿದೆ. ಅವರು ಹುಡುಕಿಸಿ ಕೊಡಲಿ ಎಂದು ಟಾಂಗ್ ಕೊಟ್ಟರು.

    ಗುಪ್ತ ಸಭೆ ಮಾಡಿದ್ದು ನನಗೆ ಗೊತ್ತಿದೆ

    ಗುರುವಾರ ಸಂಪುಟ ಸಭೆ ಆದ ಮೇಲೆ ಯಾರು ಯಾರು ಇನ್ನೊಂದು ಸಭೆ ಮಾಡಿದರು ಎಂದು ನನಗೆ ಗೊತ್ತಿದೆ. ಅದನ್ನು ನನಗಾಗಿ, ನನ್ನನ್ನು ಕಟ್ಟಿ ಹಾಕಲು ಮಾಡಿದ ಸಂಪುಟ ಸಭೆ. ಆ ಇನ್ನರ್ ಮೀಟಿಂಗ್‌ನಲ್ಲಿ ಏನು ಆಯಿತು ಎನ್ನುವುದು ನನಗೆ ಗೊತ್ತಿದೆ. ಬಿಡದಿದು ಭೂಮಿಯ ಬಗ್ಗೆ ತನಿಖೆ ಆಗಬೇಕು ಎಂದು ಅಲ್ಲಿ ಸಚಿವರೊಬ್ಬರು ಹೇಳಿದ್ದಾರೆ. 38 ವರ್ಷ ಆಯ್ತು ಅ ಜಾಗವನ್ನು ನಾನು ಖರೀದಿ ಮಾಡಿ. ರಾಮಕೃಷ್ಣ ಹೆಗಡೆ ಅವರ ಕಾಲದಿಂದಲೂ ಈ ಬಗ್ಗೆ ಎಷ್ಟು ತನಿಖೆ ಆಗಿದೆ ಎನ್ನುವುದರ ಬಗ್ಗೆ ಗ್ರಂಥವನ್ನೇ ಬರೆಯಬಹುದು ಎಂದರು.

    ದಾಖಲೆ ಹೇಗೆ ಸುಟ್ಟು ಹಾಕಿದರು

    ಲುಲು ಮಾಲ್ ಇರುವ 24 ಎಕರೆ ಜಾಗ ಖರಾಬು ಭೂಮಿ. 1934ರಲ್ಲಿ ಮಿನರ್ವ ಮಿಲ್ ಗೆ ಆ ಜಾಗವನ್ನು ನೀಡಲಾಗಿತ್ತು. ಆ ದಾಖಲೆ ಹೇಗೆ ಸುಟ್ಟು ಹಾಕಿದರು ಎನ್ನುವುದು ನನಗೆ ಗೊತ್ತಿದೆ. ಲುಲು ಮಾಲ್ ಕರಾಬ್ ಲ್ಯಾಂಡ್. ಅದು ಸತ್ಯ. ಅದನ್ನು ಅಕ್ರಮವಾಗಿ ಖರೀದಿ ಮಾಡಿ ಮಾಲ್ ಕಟ್ಟಿದ್ದಾರೆ. ಇದೆಲ್ಲವನ್ನೂ ಮುಂದೆ ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದರು

    ಜಂತಕಲ್ ಮೈನಿಂಗ್ ತನಿಖೆ ಬೇಗ ಮಾಡಿಸಿ

    ಜಂತಕಲ್ ಮೈನಿಂಗ್ ಪ್ರಕರಣದ ಮರು ತನಿಖೆ ಮಾಡೋದಾದರೆ ಮಾಡಲಿ. ಆದಷ್ಟು ಬೇಗ ತನಿಖೆ ಮಾಡಿ. ನಾನೇನು ಹೆದರಿ ಓಡಿ ಹೋಗುವುದಿಲ್ಲ ಎಂದರು.
    ಹುಬ್ಲೋಟ್ ವಾಚ್ ಪ್ರಕರಣ ಪ್ರಸ್ತಾಪ ಮಾಡಿದಾ ನನ್ನನ್ನು ಬಂಧನ ಮಾಡುವುದಕ್ಕೆ ಹಿಂದಿನ ಇದೇ ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸಿತ್ತು. ಪೊಲೀಸ್ ಅಧಿಕಾರಿಗಳಾದ ಚರಣ್‌ರೆಡ್ಡಿ, ಕೆಂಪಯ್ಯ ನನಗೆ ನೊಟೀಸ್ ನೀಡಿದ್ದರು. ಕುಮಾರಸ್ವಾಮಿಯನ್ನು ಒಂದು ದಿನವಾದರೂ ಜೈಲಿಗೆ ಕಳಿಸಬೇಕು ಎಂದು ಚರ್ಚೆ ಮಾಡಿದ್ದರು. ನಾನು ನಿರೀಕ್ಷಿಣಾ ಜಾಮೀನು ಪಡೆಯಲ್ಲ ಎಂದು ವಕೀಲರಿಗೆ ಹೇಳಿದ್ದೆ. ನನ್ನ ವಕೀಲರು, ಹುಡುಗಾಟ ಆಡಬೇಡಿ ಎಂದು ಹೇಳಿದ್ದರು. ಬಂಧನ ಮಾಡಿದರೆ ಕುಮಾರಸ್ವಾಮಿಯನ್ನು ಬಂಧಿಸಿದರು ಎಂದಾಗುತ್ತದೆ, ಏನಕ್ಕೂ ಬಂಧಿಸಿದರು, ಅದರ ಒಳ ಹುನ್ನಾರ ಏನು ಎಂಬುದು ಯಾರೂ ಹೇಳುವುದಿಲ್ಲ. ವರ್ಚಸ್ಸಿಗೆ ಧಕ್ಕೆ ತರುತ್ತಾರೆ. ಹೀಗಾಗಿ ನಿರೀಕ್ಷಣಾ ಜಾಮೀನು ಪಡೆದೆ ಎಂದು ಹೇಳಿದರು.

    ಲುಲು ಮಾಲ್ ಬಿಲ್ ಕಟ್ಟಿದ್ದಾರಾ?

    ಲುಲು ಮಾಲ್ ಆರಂಭಕ್ಕೆ ಮೊದಲು 6 ತಿಂಗಳು ವಿದ್ಯುತ್ ಬಿಲ್ ಕಟ್ಟಲು ಬಿಟ್ಟಿಲ್ಲ. ಹಾಗಾದರೆ, ಅವರು ಎಲ್ಲಿಂದ ವಿದ್ಯುತ್ ಬಳಿಸಿದರು. ಆಕಾಶದಿಂದ ವಿದ್ಯುತ್ ಉತ್ಪಾದನೆ ಮಾಡಿದರಾ? ಯೋಗ್ಯತೆಗೆ ನನ್ನನ್ನು ಕಳ್ಳ ಕಳ್ಳ ಅಂತಾರೆ ಎಂದು ಕುಮಾರಸ್ವಾಮಿ ಆರೋಪ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts