More

    ಮೂಲನಿವಾಸಿಗಳಿಗೆ ಕಳಪೆ ಅಕ್ಕಿ

    ಸಂದೀಪ್ ಸಾಲ್ಯಾನ್ ಬಂಟ್ವಾಳ
    ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ಮೂಲನಿವಾಸಿ ಕೊರಗ ಮತ್ತು ಮಲೆಕುಡಿಯ ಜನಾಂಗದವರಿಗೆ ಉಚಿತ ಪೌಷ್ಟಿಕ ಆಹಾರ ಯೋಜನೆಯಡಿ ಕಳಪೆ ಗುಣಮಟ್ಟದ ಅಕ್ಕಿ ವಿತರಣೆ ಮಾಡುತ್ತಿದೆ.
    ಸರ್ಕಾರ ನೀಡುತ್ತಿರುವ ಕಪ್ಪು ಬಣ್ಣಕ್ಕೆ ತಿರುಗಿದ ಕೆಂಪು ಕುಚ್ಚಲು ಅಕ್ಕಿಯನ್ನು ಬೇಯಿಸಿ, ಉಣ್ಣಲು ಸಾಧ್ಯವಾಗದೆ ಕೊರಗ ಸಮುದಾಯದವರು ಅಂಗಡಿಯಿಂದಲೇ ಹಣ ಕೊಟ್ಟು ಅಕ್ಕಿ ಖರೀದಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಪ್ರತೀ ತಿಂಗಳ ದಿನಸಿಯಲ್ಲೂ ಇಂತಹ ಒಂದಲ್ಲ ಒಂದು ಲೋಪದೋಷಗಳು ಕಂಡುಬರುತ್ತಿದ್ದು, ಇಲಾಖಾಧಿಕಾರಿಗಳ ಗಮನಕ್ಕೆ ತಂದರೂ ಮತ್ತೆ ಅದೇ ಲೋಪ ಮರುಕಳಿಸುತ್ತಿದೆ ಎಂಬ ದೂರು ಕೇಳಿಬಂದಿದೆ.

    ಬುಟ್ಟಿ ಹೆಣೆಯುವ ಮೂಲ ಕಸುಬನ್ನು ನಂಬಿ ಬದುಕುತ್ತಿರುವ ಕೊರಗ ಹಾಗೂ ಮಲೆಕುಡಿಯ ಜನಾಂಗದವರಿಗೆ ಪೌಷ್ಟಿಕ ಆಹಾರ ಒದಗಿಸಬೇಕು ಎನ್ನುವ ಸಮುದಾಯದ ಜನರ ಬೇಡಿಕೆಗೆ ಅನುಗುಣವಾಗಿ ಸರ್ಕಾರ ಕಳೆದ ಕೆಲವು ವರ್ಷಗಳಿಂದ ಅಕ್ಕಿ ಸಹಿತ ವಿವಿಧ ದಿನಸಿಗಳನ್ನು ಒದಗಿಸುತ್ತಿದೆ. 12 ಕೆ.ಜಿ. ಅಕ್ಕಿ, ತಲಾ ಒಂದು ಕೆ.ಜಿ.ಯಂತೆ ತೊಗರಿ ಬೇಳೆ, ಕಡಲೆ ಕಾಳು, ಶೇಂಗ ಬೀಜ, ಅಲಸಂಡೆ ಕಾಳು, ಹುರುಳಿಕಾಳು, ಹೆಸರುಕಾಳು, ಸಕ್ಕರೆ, ಬೆಲ್ಲ, 30 ಮೊಟ್ಟೆ, 2 ಲೀಟರ್ ಶುದ್ಧೀಕರಿಸಿದ ಸೂರ್ಯಕಾಂತಿ ಎಣ್ಣೆ, ಅರ್ಧ ಕೆ.ಜಿ. ನಂದಿನಿ ತುಪ್ಪ ಮಳೆಗಾಲದ 6 ತಿಂಗಳು ಕೊರಗ ಸಮುದಾಯದವರಿಗೆ ಸಿಗುತ್ತಿದೆ.

    ಆರಂಭಿಕ ಹಂತದಲ್ಲಿ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ನೀಡುತ್ತಿದ್ದರೆ ಇತ್ತೀಚಿನ ಕೆಲ ಸಮಯದಿಂದ ಕಳಪೆ ಗುಣಮಟ್ಟದ ದಿನಸಿ ಪೂರೈಕೆಯಾಗುತ್ತಿದೆ ಎಂದು ಸಮುದಾಯದವರು ಆರೋಪಿಸಿದ್ದಾರೆ.

    ಮಳೆಗಾಲದ ದಿನಸಿ ಬೇಸಿಗೆಯಲ್ಲಿ: ಬುಟ್ಟಿ ಹೆಣೆಯುವ ಮೂಲ ಕಸುಬುದಾರರಾದ ಕೊರಗ ಹಾಗೂ ಮಲೆಕುಡಿಯ ಸಮುದಾಯವರಿಗೆ ಮಳೆಗಾಲದಲ್ಲಿ ಉದ್ಯೋಗ ಇಲ್ಲದೆ ಆರ್ಥಿಕ ಸಂಕಷ್ಟ ಇರುವುದರಿಂದ ಸರ್ಕಾರದ ವತಿಯಿಂದಲೇ ಆಹಾರ ಸಾಮಗ್ರಿ ವಿತರಿಸಲಾಗುತ್ತಿದೆ. ಆದರೆ ಮಳೆಗಾಲದಲ್ಲಿ ವಿತರಣೆಯಾಗಬೇಕಾದ ಆಹಾರ ಈ ವರ್ಷ ಬೇಸಿಗೆಯಲ್ಲಿ ಅಂದರೆ ಜನವರಿಯಿಂದ ಪೂರೈಕೆಯಾಗುತ್ತಿದೆ. ಯಾವ ಉದ್ದೇಶಕ್ಕೆ ಸರ್ಕಾರ ಆಹಾರ ನೀಡುತ್ತಿತ್ತೋ ಆ ಉದ್ದೇಶವನ್ನೇ ಮರೆತಿದೆ.

    ಕಳಪೆ ಕುಚ್ಚಲು ಅಕ್ಕಿ: ಈ ಬಾರಿ ವಿತರಣೆಯಾದ ಕೆಂಪು ಕುಚ್ಚಲು ಅಕ್ಕಿ ಕಪ್ಪು ಬಣ್ಣಕ್ಕೆ ತಿರುಗಿದೆ. ಅಕ್ಕಿಗಿಂತ ಹೆಚ್ಚಾಗಿ ಜೊಳ್ಳು ನಿಂಗಲ್ ಇದರಲ್ಲಿದೆ. ಈ ಹಿಂದೆ ಅಲಸಂಡೆ ಬೀಜ ಫಿನಾಯಿಲ್ ವಾಸನೆ ಬರುತ್ತಿದ್ದು, ದೂರು ನೀಡಿದ ಬಳಿಕ ಗುಣಮಟ್ಟದ ಅಲಸಂಡೆ ಬೀಜ ವಿತರಣೆಯಾಗಿದೆ. ಬೆಲ್ಲದಲ್ಲಿ ಉಪ್ಪಿನಾಂಶ ಜಾಸ್ತಿಯಾಗಿದ್ದು ದೂರವಾಣಿ ಮೂಲಕ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎನ್ನುತ್ತಾರೆ ಮಣಿನಾಲ್ಕೂರಿನ ಸೋಮು. ಈ ಅಕ್ಕಿಯನ್ನು ಬೇಯಿಸಿದ ಎರಡು ಗಂಟೆಯಲ್ಲೇ ಅದು ತಂಗಳನ್ನದ ವಾಸನೆ ಬರುತ್ತಿರುವುದರಿಂದ ಆ ಅನ್ನವನ್ನು ಸೇವಿಸುತ್ತಿಲ್ಲ. ಅನ್ನಕ್ಕೆ ರುಚಿಯೂ ಇಲ್ಲ. ಅಂಗಡಿಯಿಂದ ಗುಣಮಟ್ಟದ ಅಕ್ಕಿ ಖರೀದಿಸಿ ತರುತ್ತಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.

    ಮಳೆಗಾಲದಲ್ಲಿ ಸಿಗಬೇಕಾದ ಆಹಾರ ಸಾಮಗ್ರಿಯನ್ನು ಬೇಸಿಗೆಯಲ್ಲಿ ನೀಡುತ್ತಿದ್ದಾರೆ. ಅದೂ ಪ್ರಯೋಜನಕ್ಕಿಲ್ಲದಂತಾಗಿದೆ. ಈ ಬಾರಿ ಸಿಕ್ಕಿರುವ ಅಕ್ಕಿಯನ್ನು ಬೇಯಿಸಿ ಊಟ ಮಾಡಲು ಸಾಧ್ಯವಿಲ್ಲದೆ ಅಂಗಡಿಯಿಂದ ತರುತ್ತಿದ್ದೇವೆ.
    ಭಾಗಿ, ಅಜ್ಜಿಬೆಟ್ಟು
    ……….
    ಮೂಲ ನಿವಾಸಿಗಳಾಗಿರುವ ಕೊರಗ ಸಮುದಾಯದವರು ತೀರಾ ಮುಗ್ಧರು. ಅವರ ಆರೋಗ್ಯವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಸರ್ಕಾರ ಉಚಿತವಾಗಿ ನೀಡುವ ಪೌಷ್ಟಿಕ ಆಹಾರದಲ್ಲಿ ಅನ್ಯಾಯ ಎಸಗುವುದು ಸರಿಯಲ್ಲ. ಈ ಬಗ್ಗೆ ಸರ್ಕಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.
    – ಭಾನುಚಂದ್ರ ಕೃಷ್ಣಾಪುರ, ಜಿಲ್ಲಾಧ್ಯಕ್ಷ, ಡಿಕೆ ಡಿಸ್ಟ್ರಿಕ್ಟ್ ಫೋರಂ ಫಾರ್ ಸೋಷಿಯಲ್ ಜಸ್ಟಿಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts