More

    ಪ್ರಿಯಕರನ ವಂಚನೆಯಿಂದಾಗಿ ವೇಶ್ಯಾವಾಟಿಕೆ ಜಾಲಕ್ಕೆ ಸಿಲುಕಿ ನರಳುತ್ತಿದ್ದ ಯುವತಿ ಪೊಲೀಸರಿಂದ ರಕ್ಷಣೆ

    ಬೆಳಗಾವಿ: ವೇಶ್ಯಾವಾಟಿಕೆ ಅಡ್ಡೆ ಮೇಲೆ ಇತ್ತೀಚೆಗೆ ದಾಳಿ ನಡೆಸಿ, ಎಪಿಎಂಸಿ ಪೊಲೀಸರು ರಕ್ಷಿಸಿದ ಯುವತಿ ಪೋಷಕರನ್ನು ಮಂಗಳವಾರ ಸೇರಿದ್ದಾಳೆ.

    ಫೆ. 7ರಂದು ಇನ್ಸ್‌ಪೆಕ್ಟರ್ ಜಾವೇದ ಮುಶಾಪುರಿ ನೇತೃತ್ವದ ತಂಡ ಸ್ಥಳೀಯ ಸದಾಶಿವ ನಗರದ ಬಾಡಿಗೆ ಮನೆ ಮೇಲೆ ದಾಳಿ ನಡೆಸಿ ಇಬ್ಬರು ಯುವತಿಯರನ್ನು ರಕ್ಷಿಸಿ, ಇಬ್ಬರು ವ್ಯಕ್ತಿ ಯನ್ನು ವಶಕ್ಕೆ ಪಡೆದು ತನಿಖೆ ಕೈಕೊಂಡಿದ್ದರು. ರಕ್ಷಿಸಿದ ಯುವತಿಯ ರನ್ನು ಮಹಿಳಾ ಕಲ್ಯಾಣ ಸಂಸ್ಥೆಯ ಉಜ್ವಲಾ ಮಹಿಳೆಯರ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರಕ್ಕೆ ಹಸ್ತಾಂತರಿಸಲಾಗಿತ್ತು.

    ಉ.ಪ್ರ. ಮೂಲದ ಯುವತಿ: ಅಲ್ಲಿಯ ಯೋಜನಾಧಿಕಾರಿ ಸುರೇಖಾ ಪಾಟೀಲ ಅವರು ಸಮಾಲೋಚನೆ ನಡೆಸಿ, ಪೊಲೀಸರ ಸಹಾಯದೊಂದಿಗೆ ರಕ್ಷಣೆಗೊಳಪಟ್ಟ ಉತ್ತರ ಪ್ರದೇಶ ಮೂಲದ ಯುವತಿಯ ವಿಳಾಸ ಪತ್ತೆ ಹಚ್ಚಿದ್ದಾರೆ. ಮೂಲ ವಿಳಾಸ ವ್ಯಾಪ್ತಿಯ ಪೊಲೀಸ್ ಠಾಣೆ ಸಿಬ್ಬಂದಿ ಮೂಲಕ ಯುವತಿಯ ತಂದೆಗೆ ಮಾಹಿತಿ ತಲುಪಿಸಿದ್ದು, ಆಕೆಯ ತಂದೆ ಬಂದು ಮಗಳನ್ನು ತಮ್ಮೂರಿಗೆ ಕರೆದೊಯ್ದಿದ್ದಾರೆ.

    ಕೈಕೊಟ್ಟ ಪ್ರೇಮಿ: ತಮ್ಮ ಪಕ್ಕದೂರಿನ ಯುವಕನ್ನು ಪ್ರೀತಿಸುತ್ತಿದ್ದ ಯುವತಿಯು ಆತನೊಂದಿಗೆ ಮನೆಬಿಟ್ಟು ಉತ್ತರ ಪ್ರದೇಶದದಿಂದ ಹೊರಟು, ಬಳಿಕ ಬೆಳಗಾವಿಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆಯಲ್ಲಿ ಸಿಲುಕಿದ ಘಟನೆ ಮನಕಲಕುವಂತಿದೆ. ಪ್ರೀತಿಸುತ್ತಿದ್ದ ಯುವಕನಿಗಾಗಿ ಹೆತ್ತವರನ್ನು ತೊರೆದು ಬಂದಿದ್ದ ಆಕೆ ಜತೆಗೆ ಆತ 8 ದಿನ ಕಳೆದು, ಬೇರೆಡೆ ಹೋಗಿ ಜೀವನ ಮಾಡೋಣ ಎಂದು ನಂಬಿಸಿ ಕರೆ ತಂದಿದ್ದಾನೆ. ಬಳಿಕ ಉತ್ತರ ಪ್ರದೇಶದ ರೈಲ್ವೆ ನಿಲ್ದಾಣದಲ್ಲಿ ಬಿಟ್ಟು ಕಾಲ್ಕಿತ್ತಿದ್ದಾನೆ. ಪ್ರಿಯಕರ ಕೈ ಕೊಟ್ಟಿದ್ದರಿಂದ ಮನೆಯವರಿಗೆ ಮುಖ ತೋರಿಸಲಾಗದೆ ಹಾಗೂ ಮನೆಗೆ ತೆರಳಲು ಹಿಂಜರಿದು ರೈಲಿನಲ್ಲಿ ಕುಳಿತು ಮುಂಬೈಗೆ ಬಂದಿಳಿದಿದ್ದಾಳೆ.

    ಪಾಲಕರಿಂದ ದೂರು: 2017ರಲ್ಲಿ ಯುವತಿಯ ಪಾಲಕರು, ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿ, ಹುಡುಕಾಟಕ್ಕಾಗಿ ಊರೂರು ಅಲೆಯುತ್ತಿದ್ದರು. ಇತ್ತ ಯುವಕನಿಂದ ಮೋಸಹೋದ ಯುವತಿ ಮುಂಬೈನಲ್ಲಿ ದುರುಳರ ಕೈಗೆ ಸಿಲುಕಿ ಹೊಟ್ಟೆ ಪಾಡಿಗಾಗಿ ಬಾರ್ ಡಾನ್ಸರ್ ಆಗಿ ಕೆಲಸ ಮಾಡಬೇಕಾಯಿತು. ಅಲ್ಲಿನ ಮಹಿಳೆಯೊಬ್ಬಳು ನಾಲ್ಕು ತಿಂಗಳ ಬಳಿಕ ಯುವತಿಯನ್ನು ಪುಣೆಗೆ ಕಳುಹಿಸಿ ಅಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಸಂದರ್ಭ ಸೃಷ್ಟಿಸುತ್ತಾರೆ. ಅಲ್ಲಿ ಈ ವರೆಗೆ ಕಾಲ್‌ಗರ್ಲ್ ಆಗಿ ಯುವತಿ ದಕ್ಷಿಣ ಭಾರತದ ನಗರಗಳಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಳು. ಹೀಗೆ ಇತ್ತೀಚೆಗೆ ಫೆ. 7ರಂದು ಬೆಳಗಾವಿಗೆ ಬಂದಾಗ ಪೊಲೀಸರು ಕಾರ್ಯಾಚರಣೆ ನಡೆಸಿ, ಯುವತಿಯನ್ನು ರಕ್ಷಿಸಿದ್ದರು.

    ಸಾಮಾನ್ಯವಾಗಿ ವೇಶ್ಯಾವಾಟಿಕೆ ದಾಳಿ ಸಂದರ್ಭದಲ್ಲಿ ಯುವತಿಯರನ್ನು ಅಲ್ಲಿಂದ ಕರೆತಂದು ಹೊರಬಿಡುತ್ತಿದ್ದರು ಅಷ್ಟೇ. ಆದರೆ, ಈ ಪ್ರಕರಣದಲ್ಲಿ ಯುವತಿಯನ್ನು ಪಾಲಕರಿಗೆ ಒಪ್ಪಿಸಬೇಕು ಎಂಬ ಉದ್ದೇಶ ಹೊಂದಲಾಗಿತ್ತು. ಅದರಂತೆ ಆಕೆಯನ್ನು ಮತ್ತೆ ಮನೆ ತಲುಪಿಸಿದ ಕಾರ್ಯ ನಿಜಕ್ಕೂ ಶ್ಲಾಘನೀಯ. ಎಪಿಎಂಸಿ ಪೊಲೀಸರ ಈ ಕಾರ್ಯಾಚರಣೆಗೆ ಪೊಲೀಸ್ ಆಯುಕ್ತ ಡಾ. ಕೆ.ತ್ಯಾಗರಾಜನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts