More

    ಪ್ರೇಮಕಥೆ: ಸಫಲ ಪ್ರೇಮದ ಮಧುರ ಪಯಣದಿ…

    ಬದುಕಿನಲ್ಲಿ ಒಮ್ಮೆಯಾದರೂ ಎಲ್ಲರ ಎದೆಗೂಡಿನಲ್ಲಿ ಅರಳುವ ಪ್ರೇಮ ಒಂದು ಮಧುರ ಕ್ಷಣ. ಪ್ರೇಮ ನಿವೇದನೆಯ ತಲ್ಲಣಗಳು, ಅದಕ್ಕೆ ಬರುವ ಸಕಾರಾತ್ಮಕ ಪ್ರತಿಕ್ರಿಯೆ… ಅದರ ಪರಿಣಾಮವಾಗಿ ಉಂಟಾಗುವ ಉಲ್ಲಾಸ ಇನ್ನಷ್ಟು ಮಧುರ. ಆ ದಿನಗಳ ವಿರಹವೂ ಮಧುರ ಯಾತನೆಯೇ. ಅವೆಲ್ಲವನ್ನೂ ದಾಟಿ ಮದುವೆ ಎಂಬಲ್ಲಿಗೆ ಬಂದು ನಿಂತರೆ ಅದೇ ದೊಡ್ಡ ಖುಷಿ. ಮದುವೆಯ ನಂತರವೂ ಪ್ರೀತಿ ತಾಜಾ ಆಗಿಯೇ ಉಳಿದರಂತೂ ಅದು ಅಮರಪ್ರೇಮ. ಅಂಥ ಪ್ರೇಮದ ಬಗ್ಗೆ ಬರೆದು ಕಳಿಸಿ ಎಂದು ‘ವಿಜಯವಾಣಿ’ ನೀಡಿದ್ದ ಕರೆಗೆ ಸಾವಿರಾರು ಓದುಗರು ಸ್ಪಂದಿಸಿದ್ದಾರೆ. ಆಯ್ದ ಯಶಸ್ವೀ ನೈಜ ಪ್ರೇಮಕಥೆಗಳು ಇಲ್ಲಿವೆ.

    ಆಗಿನ್ನೂ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನಾನು. ಹಲವು ತಿಂಗಳುಗಳಿಂದ ನನ್ನನ್ನೇ ಹಿಂಬಾಲಿಸುತ್ತಿದ್ದ ಸಹಪಾಠಿಯ ಜೋಡಿಕಂಗಳ ತುಂಟನೋಟದ ಆಳಕ್ಕೆ ಬಿದ್ದು, ಇಂದಿಗೂ ಅದೇ ಕಣ್ಗಳ ಪ್ರೇಮಲೋಕದಲ್ಲಿ ಮಿಂದೇಳುತ್ತಿರುವ ಅದೃಷ್ಟವಂತೆ ನಾನು. ಪ್ರೀತಿ ಪ್ರೇಮದ ಕನಸೇ ಕಂಡಿರದ ಮನಸ್ಸು, ಸರಿತಪ್ಪುಗಳ ತೊಳಲಾಟಗಳ ನಡುವೆಯೂ ಪ್ರೀತಿಯನ್ನು ಒಪ್ಪಿಕೊಂಡುಬಿಟ್ಟಿತ್ತು. ಮುಂದಿನ ವಿದ್ಯಾಭ್ಯಾಸ, ಬೇರೆ ಬೇರೆ ಊರುಗಳತ್ತ ಪಯಣ ನಮ್ಮದಾದರೂ, ಮನಸುಗಳು ಪ್ರೇಮಲೋಕದ ಕನಸಿನ ಪಯಣ ಮುಂದುವರಿಸಿದ್ದವು. ಪುಟಗಟ್ಟಲೆ ಬರೆಯುತ್ತಿದ್ದ ಪ್ರೇಮಪತ್ರಗಳು, ಸಣ್ಣಪುಟ್ಟ ಪ್ರೇಮದ ಕಾಣಿಕೆಗಳು, ದಿನಗಟ್ಟಲೆ ಕಾದು ಮಾಡುತ್ತಿದ್ದ ದೂರವಾಣಿ ಕರೆಗಳು, ತಿಂಗಳುಗಟ್ಟಲೆ ಕಾದು ಭೇಟಿಯಾಗುತ್ತಿದ್ದ ಮಧುರ ಕ್ಷಣಗಳು ಇದಕ್ಕೆ ಸಾಕ್ಷಿಯಾಗಿದ್ದವು. ಎಲ್ಲ ಕಾತರಗಳಿಗೆ, ತುಡಿತಮಿಡಿತ, ಮಧುರ ಯಾತನೆಗಳಿಗೆ, ಹಿರಿಯರೆಲ್ಲರೂ ಸಂಭ್ರಮದಿಂದ ಒಪ್ಪಿ ಮದುವೆ ಎಂಬ ಭದ್ರಮುದ್ರೆಯನ್ನು ನೀಡಿದಾಗ ಏಳು ವರ್ಷಗಳ ಪ್ರೀತಿಯ ಪಯಣ ಸಾರ್ಥಕವಾಗಿತ್ತು. ಪ್ರೇಮಲೋಕದ ಸಾರ್ಥಕ ಪಯಣ 19 ವರ್ಷಗಳನ್ನು ಪೂರೈಸಿದೆ. 12 ವರ್ಷಗಳ ಸಹಬಾಳ್ವೆಯಲ್ಲಿ ಹಲವು ಸರಸವಿರಸಗಳ ಮಧುರ ಕ್ಷಣಗಳೂ ಸೇರಿಹೋಗಿವೆ. ಮುದ್ದಾದ ಇಬ್ಬರು ಮಕ್ಕಳು, ಹರಸುವ ಹಿರಿಯರೊಂದಿಗೆ, ಬಾಳಸಂಗಾತಿಯ ಒಲವಿನ ಕಂಗಳೊಳಗೆ ಇನ್ನೂ ಹಲವು ವರ್ಷಗಳ ಮಧುರ ಪಯಣ ಮುಂದುವರಿಸುವ ಹಂಬಲ ನನಗೆ.

    | ಡಾ. ಸ್ವಪ್ನ ನವೀನ್ ದೇರೆಬೈಲ್ ಕೊಂಚಾಡಿ, ಮಂಗಳೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts