More

    ಉಪ ಸಮರ | ಗೆಲ್ಲುವ ಅಭ್ಯರ್ಥಿಗಳ ಆಯ್ಕೆ ತಾಲೀಮು ಜೋರು

    ಉಪ ಚುನಾವಣೆಗೆ ಸಮಯ ನಿಗದಿಯಾಗಿದ ಬೆನ್ನಲ್ಲೇ ಹುರಿಯಾಳುಗಳನ್ನು ಅಂತಿಮಗೊಳಿಸಿರುವ ಕಸರತ್ತನ್ನು ಮೂರೂ ಪಕ್ಷಗಳು ಚುರುಕುಗೊಳಿಸಿವೆ. ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದಿರುವ ಕಾಂಗ್ರೆಸ್ ಮಸ್ಕಿ, ಬಸವಕಲ್ಯಾಣ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಧಿಕೃತಗೊಳಿಸಿದೆ. ಜತೆಗೆ ಇನ್ನೂ ಚುನಾವಣೆ ನಿಗದಿಯಾಗದ ಸಿಂದಗಿ ಕ್ಷೇತ್ರಕ್ಕೂ ಅಭ್ಯರ್ಥಿ ಪ್ರಕಟಿಸಿದ್ದು, ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆಯನ್ನಷ್ಟೇ ಬಾಕಿ ಉಳಿಸಿಕೊಂಡಿದೆ. ಜೆಡಿಎಸ್ ಸಹ ಬಸವಕಲ್ಯಾಣಕ್ಕೆ ಹುರಿಯಾಳು ಅಂತಿಮಗೊಳಿಸಿದೆ. ಮಸ್ಕಿ ಕ್ಷೇತ್ರಕ್ಕೆ ಈಗಾಗಲೆ ಹುರಿಯಾಳು ಅಂತಿಮಗೊಳಿಸಿರುವ ಬಿಜೆಪಿ, ಇನ್ನೆರಡು ಕ್ಷೇತ್ರಗಳಿಗೆ ಅಳೆದು-ತೂಗಿ ಉಮೇದುವಾರರನ್ನು ಆಯ್ಕೆ ಮಾಡುವಲ್ಲಿ ನಿರತವಾಗಿದೆ.

    ಅನುಕಂಪದ ಬೆನ್ನೇರಿ ಹೊರಟ ಕೈ ಪಡೆ

    ಬೆಂಗಳೂರು: ಉಪ ಚುನಾವಣೆ ಗೆಲುವಿಗೆ ಕಾಂಗ್ರೆಸ್ ‘ಅನುಕಂಪದ ಔಷಧ’ ಹುಡುಕಿಕೊಂಡಿದೆ. ಎರಡು ವಿಧಾನಸಭಾ ಕ್ಷೇತ್ರ ಮತ್ತು ಒಂದು ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸು ಸಾಧಿಸಿದರೆ ರಾಜ್ಯ ರಾಜಕೀಯದಲ್ಲಿ ಮತ್ತು ಪಕ್ಷದಲ್ಲಿ ಆಗಬಹುದಾದ ಬದಲಾವಣೆಗಳನ್ನು ಗ್ರಹಿಸಿರುವ ಕೈ ನಾಯಕರು ಗೆಲುವಿನ ಪತಾಕೆ ಹಾರಿಸಲೇಬೇಕೆಂದು ನಿಶ್ಚಯಿಸಿದ್ದಾರೆ.

    ಉಪ ಸಮರ | ಗೆಲ್ಲುವ ಅಭ್ಯರ್ಥಿಗಳ ಆಯ್ಕೆ ತಾಲೀಮು ಜೋರುಮಸ್ಕಿ, ಬಸವಕಲ್ಯಾಣ ಹಾಗೂ ಇನ್ನೂ ಚುನಾವಣಾ ದಿನಾಂಕ ಪ್ರಕಟವಾಗದ ಸಿಂದಗಿ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮ ಮಾಡಿರುವ ಕಾಂಗ್ರೆಸ್, ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಮಾತ್ರ ಬಾಕಿ ಉಳಿಸಿಕೊಂಡಿದೆ. ಬಸವಕಲ್ಯಾಣದಲ್ಲಿ ಶಾಸಕ ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ, ಸಿಂದಗಿಯಲ್ಲಿ ಅಶೋಕ್ ಮನಗೂಳಿ, ಮಸ್ಕಿಯಲ್ಲಿ ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋತ ಬಸನಗೌಡ ತುರವಿಹಾಳ ಅವರಿಗೆ ಟಿಕೆಟ್ ಘೋಷಿಸಿದೆ. ಮೂರು ಕ್ಷೇತ್ರಗಳಲ್ಲಿಯೂ ಅನುಕಂಪದ ಆಧಾರದಲ್ಲಿ ಗೆಲುವು ಸಾಧಿಸುವುದು ಕೈ ಪಡೆ ಉದ್ದೇಶವಾಗಿದೆ. ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಿಗೆ ಕಳಿಸಿ ಅಲ್ಲಿನ ಸ್ಥಿತಿ-ಗತಿ ವಿವರಗಳನ್ನು ತರಿಸಿಕೊಂಡಿರುವ ಕೆಪಿಸಿಸಿ, ವಿಚಾರ ವಿಮರ್ಶೆ ಮಾಡಿದೆ. ಜಾತಿ ಲೆಕ್ಕಾಚಾರ, ಸಣ್ಣ ಪುಟ್ಟ ನಾಯಕರ ಪ್ರಭಾವ, ಸ್ಥಳೀಯ ಸಮಸ್ಯೆ, ಚುನಾವಣೆ ಉದ್ದೇಶದಿಂದಲೇ ಸರ್ಕಾರ ಕೈಗೊಂಡ ತೀರ್ವನದಿಂದ ಆಗಬಹುದಾದ ಪರಿಣಾಮ ಎಲ್ಲದರ ಬಗ್ಗೆ ಅನೌಪಚಾರಿಕ ಚರ್ಚೆ ನಡೆದಿದೆ. ಮುಂದಿನ ಹಂತದಲ್ಲಿ ಉಸ್ತುವಾರಿ ಗಳನ್ನು ನೇಮಕ ಮಾಡಲು ಬಯಸಲಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಮಾ.22ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಂದು ಚುನಾವಣಾ ಕಾರ್ಯತಂತ್ರ ಚರ್ಚೆಯಾಗಲಿದೆ. ಆದರೆ ಫಿಜಿಯೋ ಥೆರಫಿಯಲ್ಲಿರುವ ಅವರಿಗೆ ಬರಲು ಸಾಧ್ಯವಾಗದಿದ್ದರೆ ಎಐಸಿಸಿ ಕಾರ್ಯದರ್ಶಿ ಮಧು ಯಕ್ಷಿಗೌಡ ಹಾಗೂ ಇತರರು ಭಾಗವಹಿಸುವ ಸಾಧ್ಯತೆಗಳಿವೆ. ಶನಿವಾರ ಬೆಳಗ್ಗೆ 11ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಹಾಲಿ ಮಾಜಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರ ಸಭೆ ಕರೆಯಲಾಗಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾರ್ಯಾಧ್ಯಕ್ಷರು, ಮುಖಂಡರು ಭಾಗವಹಿಸಿ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಿದ್ದಾರೆ.

    ಶಿರಾ ಕಲಿಸಿದ ಪಾಠ: ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರವನ್ನು ಕಳೆದ ಉಪ ಚುನಾವಣೆಯಲ್ಲಿ ತನ್ನದಾಗಿಸಿಕೊಂಡ ಬಿಜೆಪಿ, ಆ ಕ್ಷೇತ್ರದ ಇತಿಹಾಸದಲ್ಲಿ ದಾಖಲೆ ಬರೆಯಿತು. ಈ ಸೋಲನ್ನು ನಿರೀಕ್ಷಿಸದ ಕಾಂಗ್ರೆಸ್ ನಾಯಕರು ಎಲ್ಲಿ ಎಡವಿದೆವು ಎಂದು ಪದೇಪದೆ ಕನವರಿಸಿದ್ದಾರೆ. ಅಂದು ಪಕ್ಷದ ರಾಜ್ಯ ಘಟಕದಿಂದ ಶಿಫಾರಸಾಗಿದ್ದ ಅಭ್ಯರ್ಥಿ ಬಗ್ಗೆ ಹೈಕಮಾಂಡ್​ಗೆ ಒಲವಿರಲಿಲ್ಲ ಎಂಬ ಸ್ಪಷ್ಟ ಸಂದೇಶ ಬಂದಿತ್ತು. ಆದರೆ, ರಾಜ್ಯ ಘಟಕದ ಶಿಫಾರಸನ್ನು ಒಪ್ಪಿ ಕೊಳ್ಳುವ ಅನಿವಾರ್ಯತೆಯಲ್ಲಿ ಹೈಕಮಾಂಡ್ ಸಿಲುಕಿತು. ಚುನಾವಣೆ ಫಲಿತಾಂಶ ಬಂದ ಬಳಿಕ ಹೈಕಮಾಂಡ್ ಮುಂದೆ ರಾಜ್ಯ ಘಟಕ ತಲೆ ಎತ್ತದ ಸ್ಥಿತಿ ನಿರ್ವಣವಾಯಿತು. ಇದೇ ಕಾರಣಕ್ಕೆ ಈ ಬಾರಿ ಅಭ್ಯರ್ಥಿ ಆಯ್ಕೆಗೆ ಮೂರು ತಿಂಗಳಿನಿಂದಲೇ ಕಸರತ್ತು ನಡೆಸಿತು. ಮಸ್ಕಿಯಲ್ಲಿ ಬಸನಗೌಡ ತುರವಿಹಾಳಗೆ ಹೈಕಮಾಂಡ್​ನಿಂದ ಟಿಕೆಟ್ ಖಾತ್ರಿಯಾದ ಮೇಲೆಯೇ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ. ಬಸವಕಲ್ಯಾಣದಲ್ಲಿ ಶಾಸಕರಾಗಿದ್ದ ಬಿ.ನಾರಾಯಣರಾವ್ ಪತ್ನಿ ಮಲ್ಲಮ್ಮ ಬಗ್ಗೆಯೇ ರಾಜ್ಯ ನಾಯಕರಿಗೆ ಹೆಚ್ಚಿನ ಒಲವಿದ್ದುದರಿಂದ ಹೈಕಮಾಂಡ್ ಸಮ್ಮತಿಸಿತು. ಚುನಾವಣೆ ನಿಗದಿಯಾಗದ ಸಿಂದಗಿಗೆ ಇತ್ತೀಚೆಗೆ ಪಕ್ಷಕ್ಕೆ ಬಂದ ದಿ.ಮನಗೂಳಿ ಪುತ್ರ ಅಶೋಕ್ ಮನಗೂಳಿ ಅವರನ್ನು ಆಯ್ಕೆ ಮಾಡಿದೆ. ಅವರು ಪಕ್ಷಕ್ಕೆ ಸೇರುವ ಸಂದರ್ಭದಲ್ಲಿಯೇ ಟಿಕೆಟ್ ಖಾತರಿ ಮಾಡಲಾಗಿತ್ತು. ಹಾಗೆಯೇ ಬೆಳಗಾವಿ ಕ್ಷೇತ್ರದಲ್ಲಿ ಲಕ್ಷಿ್ಮೕ ಹೆಬ್ಬಾಳ್ಕರ್ ಸಹೋದರ ಚನರಾಜ್ ಸೂಕ್ತವೋ ಅಥವಾ ಜಿಲ್ಲೆಯ ಒಬ್ಬರು ಶಾಸಕರನ್ನೇ ಕಣಕ್ಕಿಳಿಸಿದರೆ ಸೂಕ್ತವೋ ಎಂಬುದನ್ನೂ ಹೈಕಮಾಂಡ್ ವಿವೇಚನೆಗೆ ಬಿಡುವ ಸಾಧ್ಯತೆ ಹೆಚ್ಚಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸ್ಪರ್ಧೆಗೆ ಒಲವು ಹೊಂದಿದ್ದಾರೆ.

    ಶಿವಸೇನೆ ಸ್ಪರ್ಧೆ: ಬೆಳಗಾವಿ ಲೋಕಸಭಾ ಕ್ಷೇತ್ರ ಸೇರಿ ರಾಜ್ಯದಲ್ಲಿ ಘೊಷಣೆಯಾಗಿರುವ ಬಸವಕಲ್ಯಾಣ ಮತ್ತು ಮಸ್ಕಿ ಕ್ಷೇತ್ರಗಳ ವಿಧಾನಸಭಾ ಉಪ ಚುನಾವಣೆಯಲ್ಲಿ ಶಿವಸೇನಾ ವತಿಯಿಂದ ಅಧಿಕೃತ ಅಭ್ಯರ್ಥಿ ಕಣಕ್ಕಿಳಿಸಲಾಗುವುದು ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಕೆ.ಪಿ ಪಾಟೀಲ ತಿಳಿಸಿದ್ದಾರೆ.

    ಉಪ ಸಮರ | ಗೆಲ್ಲುವ ಅಭ್ಯರ್ಥಿಗಳ ಆಯ್ಕೆ ತಾಲೀಮು ಜೋರು

    ಬಿಜೆಪಿ ಕಸರತ್ತು ಬಿರುಸು

    ಉಪ ಸಮರ | ಗೆಲ್ಲುವ ಅಭ್ಯರ್ಥಿಗಳ ಆಯ್ಕೆ ತಾಲೀಮು ಜೋರುಉಪ ಚುನಾವಣೆ ಗೆಲುವಿನ ಅಭಿಯಾನ ಮುಂದುವರಿಸಲು ಆಡಳಿತಾರೂಢ ಬಿಜೆಪಿ ಪಣ ತೊಟ್ಟಿದ್ದು, ವ್ಯವಸ್ಥಿತವಾಗಿ ರೂಪಿಸಿದ ಚುನಾವಣಾ ಕಾರ್ಯತಂತ್ರ ಜಾರಿಗಾಗಿ ಬಿರುಸಿನ ತಾಲೀಮು ನಡೆಸಿದೆ. ಉಪ ಚುನಾವಣೆ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ಹಿರಿಯ ನಾಯಕರು ಕಾರ್ಯಪ್ರವೃತ್ತರಾಗಿದ್ದಾರೆ. ಮಾ.20ರ ಬೆಳಗ್ಗೆ 8.30ಕ್ಕೆ ಪಕ್ಷದ ರಾಜ್ಯ ಕಚೇರಿಯಲ್ಲಿ ಪ್ರಮುಖರ ಸಮಿತಿ (ಕೋರ್ ಕಮಿಟಿ) ಸಭೆ ನಿಗದಿಯಾಗಿದೆ. ಈ ಸಭೆಯಲ್ಲಿ ಪಾಲ್ಗೊಳ್ಳಲೆಂದು ಪಕ್ಷದ ರಾಜ್ಯ ಉಸ್ತುವಾರಿ ಅರುಣ್​ಸಿಂಗ್ ಶುಕ್ರವಾರ ಸಂಜೆಯೇ ಬೆಂಗಳೂರಿಗೆ ಆಗಮಿಸಲಿದ್ದಾರೆ.

    ಅಚ್ಚರಿಯ ಆಯ್ಕೆ ನಿರೀಕ್ಷೆ: ಬೆಳಗಾವಿ ಲೋಕಸಭೆ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಹೊಸಮುಖ ಹಾಗೂ ಸಾಮಾನ್ಯ ಕಾರ್ಯಕರ್ತರಿಗೆ ಮಣೆ ಹಾಕುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಕೋರ್ ಕಮಿಟಿ ಸಭೆಯಲ್ಲಿ ವಿಸõತ ಚರ್ಚೆ, ಪ್ರಭಾರಿಗಳು ನೀಡಿದ ವರದಿ ಅವಲೋಕಿಸಿ ತಲಾ 3 ಹೆಸರುಗಳನ್ನು ಅಂತಿಮಗೊಳಿಸಿ, ವರಿಷ್ಠರಿಗೆ ಶಿಫಾರಸು ಮಾಡಲಾಗುತ್ತದೆ. ಶನಿವಾರ ನಡೆಯಲಿರುವ ಸಭೆಯ ಜಾಡು ಇದೇ ತೆರನಾಗಿರುತ್ತದೆ. ಪಕ್ಷದ ಕೇಂದ್ರ ಚುನಾವಣಾ ಸಮಿತಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಕೇಂದ್ರದ ಮಾಜಿ ಸಚಿವ ದಿವಂಗತ ಸುರೇಶ್ ಅಂಗಡಿ ಕುಟುಂಬಕ್ಕೆ ನೀಡಬೇಕೆಂಬ ಒತ್ತಡ, ಪ್ರಭಾವಿಗಳು ಲಾಬಿ ನಡೆಸುತ್ತಿದ್ದು, ಹಿಂದುತ್ವವಾದಿ ಪ್ರಮೋದ್ ಮುತಾಲಿಕ್ ಬೇಡಿಕೆಯಿಟ್ಟಿದ್ದಾರೆ. ಬಸವಕಲ್ಯಾಣದಲ್ಲೂ ಆಕಾಂಕ್ಷಿಗಳ ದೊಡ್ಡ ದಂಡು ಇದೆ. ಆದರೆ ಪಕ್ಷದ ಮೇಲೆ ಹಿಡಿತ, ಒಡನಾಟ, ನಿಕಟ ಸಂಪರ್ಕವುಳ್ಳ ಹೊಸಮುಖ, ಸಾಮಾನ್ಯ ಕಾರ್ಯಕರ್ತನಿಗೆ ಆದ್ಯತೆ ನೀಡಲಿದೆ.

    ವಿಜಯೇಂದ್ರಗೆ ಸಿದ್ಧಗೊಂಡ ಮನೆ

    ಉಪ ಸಮರ | ಗೆಲ್ಲುವ ಅಭ್ಯರ್ಥಿಗಳ ಆಯ್ಕೆ ತಾಲೀಮು ಜೋರುರಾಯಚೂರು: ಮಸ್ಕಿ ವಿಧಾನಸಭೆ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರರ ವಾಸ್ತವ್ಯಕ್ಕಾಗಿ ಲಿಂಗಸುಗೂರು ತಾಲೂಕಿನ ಮುದಗಲ್​ನಲ್ಲಿ ಮನೆಯೊಂದನ್ನು ಸಿದ್ಧಪಡಿಸಲಾಗಿದೆ. ಮುದಗಲ್ ಪಟ್ಟಣದ ಹೊರವಲಯದ ತಾವರಗೇರಾ ಕ್ರಾಸ್ ಬಳಿಯಿರುವ ಇಲಕಲ್ ಶಾಸಕ ದೊಡ್ಡನಗೌಡ ಪಾಟೀಲ್​ರಿಗೆ ಸೇರಿದ ಗೆಸ್ಟ್​ಹೌಸ್​ನಲ್ಲಿ ವಿಜಯೇಂದ್ರ ತಂಗಲಿದ್ದಾರೆ. ಈ ಮನೆಯು ಮಸ್ಕಿ ಕ್ಷೇತ್ರದ ವ್ಯಾಪ್ತಿಗೆ ಬರುವ ಗ್ರಾಮದಿಂದ ಕೇವಲ ಮೂರು ಕಿ.ಮೀ. ದೂರದಲ್ಲಿದೆ. ಮಸ್ಕಿ ಪಟ್ಟಣದಿಂದ ಕೇವಲ 22 ಕಿ.ಮೀ. ಅಂತರವಿದೆ. ಹೀಗಾಗಿ ವಿಜಯೇಂದ್ರ ಸುಲಭವಾಗಿ ಕ್ಷೇತ್ರದಲ್ಲಿ ಸಂಚರಿಸಲು ಅನುಕೂಲವಾಗುವಂತೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.

    ಅಧಿಕೃತ ಘೊಷಣೆ ಬಾಕಿ: ಮಸ್ಕಿ ಕ್ಷೇತ್ರಕ್ಕೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅಭ್ಯರ್ಥಿ ಎಂದು ಅಧಿಕೃತ ಘೊಷಣೆಯಷ್ಟೇ ಬಾಕಿಯಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯುವಲ್ಲಿ ಕಾರಣರಾದವರ ಪೈಕಿ ಪ್ರತಾಪಗೌಡ ಒಬ್ಬರಾಗಿದ್ದಾರೆ. ಉಪ ಚುನಾವಣೆಗೆ ಟಿಕೆಟ್ ನೀಡುವ ಜತೆಗೆ ಗೆದ್ದ ಬಳಿಕ ಮಂತ್ರಿ ಪದವಿ ನೀಡುವುದಾಗಿ ಬಿಎಸ್​ವೈ ಭರವಸೆ ನೀಡಿದ್ದು, ವರಿಷ್ಠರೂ ಸಮ್ಮತಿಸಿದ್ದಾರೆ.

    ಜೆಡಿಎಸ್ ಅಭ್ಯರ್ಥಿ ಕಣಕ್ಕೆ

    ಉಪ ಸಮರ | ಗೆಲ್ಲುವ ಅಭ್ಯರ್ಥಿಗಳ ಆಯ್ಕೆ ತಾಲೀಮು ಜೋರುಮಸ್ಕಿ ಮತ್ತು ಬಸವ ಕಲ್ಯಾಣ ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿರುವುದಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು. ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೈಯದ್ ಯಶ್ರಬ್ ಅಲಿ ಅವರನ್ನು ಬಸವಕಲ್ಯಾಣದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದೇವೆ. ಅವರು ಕಾಂಗ್ರೆಸ್​ನಲ್ಲಿದ್ದರು ಎಂದು ಹೇಳಿದರು. ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಶುಕ್ರವಾರ ಅಭ್ಯರ್ಥಿ ಘೊಷಣೆ ಮಾಡುತ್ತೇವೆ ಎಂದು ಹೇಳಿದರು. ಬಸವ ಕಲ್ಯಾಣದಲ್ಲಿ ಜೆಡಿಎಸ್ ಏಳು ಬಾರಿ ಗೆದ್ದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ವರ್ಗದ ಮೇಲೆ ಪ್ರಭಾವ ಬೀರಿದ್ದರಿಂದ ಜೆಡಿಎಸ್ 38 ಸ್ಥಾನಗಳಿಗೆ ಕುಸಿಯುವಂತಾಯಿತು ಎಂದು ತಿಳಿಸಿದರು. ರಾಯಚೂರು ಜಿಲ್ಲೆಯಲ್ಲಿ 5-7 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲಲು ಜೆಡಿಎಸ್​ಗೆ ಸಾಮರ್ಥ್ಯವಿದೆ. ಮುಸ್ಲಿಂ ಸಮಾಜಕ್ಕೆ ನಮ್ಮ ಪಕ್ಷದ ಬಗ್ಗೆ ಬೇರೆ ರೀತಿಯ ಭಾವನೆ ಮೂಡಿಸಿದ್ದಾರೆ. ಹಾಗಾಗಿಯೇ ಇಡೀ ರಾಜ್ಯಕ್ಕೆ ಒಂದು ಸಂದೇಶ ರವಾನೆಯಾಗಬೇಕು ಎಂಬ ಕಾರಣಕ್ಕೆ ಬಸವಕಲ್ಯಾಣವನ್ನು ಸವಾಲಾಗಿ ಸ್ವೀಕರಿಸಿ ಮುಸ್ಲಿಂ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದ್ದೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts