More

    ಕ್ರಿಮಿನಲ್ ಕೇಸ್ ಎಚ್ಚರಿಕೆ ನಂತರವೂ ನಿಲ್ಲದ ಲೂಟಿ!; 2020ರಲ್ಲೇ ಇಂಜಿನಿಯರ್​ಗಳ ಗೋಲ್ಮಾಲ್ ಬಯಲು

    | ಕೀರ್ತಿನಾರಾಯಣ ಸಿ. ಬೆಂಗಳೂರು

    ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಕೊಳವೆಬಾವಿ ಯೋಜನೆಯಲ್ಲಿನ ಅಕ್ರಮಗಳ ಕುರಿತು ಬಗೆದಷ್ಟೂ ಸ್ಪೋಟಕ ಸಂಗತಿ ಹೊರಬರುತ್ತಿವೆ. ಬೋರ್​ವೆಲ್​ಗಳನ್ನು ಕೊರೆದಿರುವುದಾಗಿ ಫೋಟೋಶಾಪ್ ಮಾಡಿರುವ ಚಿತ್ರಗಳನ್ನು ಸಲ್ಲಿಸಿ, ಹಣ ಬಿಡುಗಡೆಗೆ ಯತ್ನಿಸಿರುವ ಸಂಗತಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಂತರಿಕ ತನಿಖೆಯಲ್ಲಿ ದೃಢಪಟ್ಟು, ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವ ಎಚ್ಚರಿಕೆ ಕೊಟ್ಟು ನೋಟಿಸ್ ಜಾರಿ ಮಾಡಿದ ನಂತರವೂ ಅವ್ಯವಹಾರ ಮುಂದುವರಿಸಿರುವ ವಿಚಾರ ಬಹಿರಂಗವಾಗಿದೆ.

    ಬೋರ್​ವೆಲ್ ಯೋಜನೆಯಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ 2020ರ ಏಪ್ರಿಲ್​ನಲ್ಲಿ ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೇತೃತ್ವದಲ್ಲಿ ಪ್ರತ್ಯೇಕ ಸಭೆ ನಡೆಸಲಾಗಿತ್ತು. ಬೋರ್​ವೆಲ್​ಗಳನ್ನು ಕೊರೆದಿರುವುದಾಗಿ ಬಿಲ್ಲುಗಳಿಗಾಗಿ ಸಲ್ಲಿಸಿರುವ ದಾಖಲೆಗಳಲ್ಲಿ ಫೋಟೋಶಾಪ್ ಮಾಡಿರುವ ನಕಲಿ ಚಿತ್ರಗಳನ್ನು ಸಲ್ಲಿಸಿರುವುದು ಪರಿಶೀಲನೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಶಾಖಾಧಿಕಾರಿ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿತ್ತು. ಕರ್ತವ್ಯಲೋಪ ಆರೋಪದಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಗಳು 1957ರ ಅನ್ವಯ ಕ್ರಮ ಕೈಗೊಳ್ಳುವ ಜತೆಗೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿಯೂ ಎಚ್ಚರಿಕೆ ಕೊಡಲಾಗಿತ್ತು. ನಂತರವೂ ಕೊರೆಯದ ಕೊಳವೆಬಾವಿಗಳಿಗೆ ಕೊರೆದಿರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಲ್ಲಿಸಿರುವುದು ತನಿಖೆಯಲ್ಲಿ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಅಪರಾಧ ಪ್ರಕರಣ ಯಾಕೆ ದಾಖಲಿಸಬಾರದು ಎಂದು ಕಾರಣ ಕೇಳಿ ಕೋಲಾರ ವಿಭಾಗದ ಕಾರ್ಯಪಾಲಕ ಅಭಿಯಂತರರು ನೋಟಿಸ್ ಜಾರಿ ಮಾಡಿದ್ದರೆಂಬ ವಿಚಾರವೂ ಈಗ ಬೆಳಕಿಗೆ ಬಂದಿದೆ. ಕೋಲಾರದ ಬಂಗಾರಪೇಟೆ ತಾಲೂಕು ಒಂದರಲ್ಲೇ 30 ಬೋರ್​ವೆಲ್ ಕೊರೆಯಲು ಮೆ.ಸ್ವಾಮಿ ಬೋರ್​ವೆಲ್ ಏಜೆನ್ಸಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ಸ್ವಾಮಿ ಬೋರ್​ವೆಲ್ ಏಜೆನ್ಸಿ ಸಲ್ಲಿಸಿರುವ 10 ಬೋರ್​ವೆಲ್​ಗಳ ಫೋಟೋಗಳೇ ನಕಲಿ ಎಂಬುದು ಆಂತರಿಕ ತನಿಖೆಯಲ್ಲಿ ದೃಢಪಟ್ಟಿತ್ತು. ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಯಲ್ಲೂ ಇದೇ ರೀತಿಯ ಬೋರ್​ವೆಲ್​ಗಳ ಅವ್ಯವಹಾರಕ್ಕೆ ಸಾಕ್ಷ್ಯವಿದೆ.

    ನೋಟಿಸ್​ಗೆ ಕೊಟ್ಟ ಉತ್ತರವೇ ಸುಳ್ಳು!: ನಕಲಿ ದಾಖಲೆ ಸಲ್ಲಿಸಿರುವ ಬಗ್ಗೆ ಸಹಾಯಕ ಇಂಜಿನಿಯರ್ ಎಂ.ರವೀಂದ್ರ ಕುಮಾರ್ ಎಂಬುವರ ವಿರುದ್ಧ ಕಾರ್ಯಪಾಲಕ ಇಂಜಿನಿಯರ್ ನೋಟಿಸ್ ಜಾರಿ ಮಾಡಿದ್ದರು. 2020ರ ನ.27 ಹಾಗೂ 2021ರ ಮಾ.4ರಂದು ಎರಡು ವಿಭಿನ್ನ ರೀತಿಯ ಅಸಂಬದ್ಧ ಉತ್ತರಗಳನ್ನು ರವೀಂದ್ರ ಕುಮಾರ್ ಕೊಟ್ಟಿದ್ದಾರೆ. ಮೊದಲ ನೋಟಿಸ್​ಗೆ 6 ತಿಂಗಳ ಹಿಂದೆ ಕೊರೆದಿರುವ ಕೊಳವೆಬಾವಿಗಳಾಗಿದ್ದು, ರಾತ್ರಿ ಸಮಯದಲ್ಲಿ ಫೋಟೋ ತೆಗೆದಿದ್ದರಿಂದ ಫೋಟೋಶಾಪ್ ಮಾಡಿದಂತೆ ಕಾಣುತ್ತಿವೆ ಎಂದು ಸಮಜಾಯಿಷಿ ಕೊಟ್ಟಿದ್ದರು. 6 ತಿಂಗಳ ಹಿಂದೆ ತೆಗೆದ ಫೋಟೋಗಳಾಗಿದ್ದಲ್ಲಿ ಅಕ್ಷಾಂಶ ರೇಖಾಂಶ ಹಾಗೂ ದಿನಾಂಕಗಳನ್ನು ಒಳಗೊಂಡ ಫೋಟೋಗಳನ್ನು ಒದಗಿಸುವಂತೆ ಪುನಃ ಇನ್ನೊಂದು ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಫೋಟೋಗಳು ಬೆಳಗ್ಗೆ 10.30ರಲ್ಲಿ ತೆಗೆದಿರುವುದು ನಂತರ ದೃಢಪಟ್ಟಿತ್ತು. ನಂತರ ಕೆಲಸದ ಒತ್ತಡ ಹಾಗೂ ನನ್ನ ಕಣ್ತಪ್ಪಿನಿಂದ ಫೋಟೋಶಾಪ್ ಚಿತ್ರಗಳನ್ನು ಸಲ್ಲಿಸಲಾಗಿದೆ ಎಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಚ್.ಡಿ.ಶೇಷಾದ್ರಿ ಸಮಜಾಯಿಷಿ ಕೊಟ್ಟಿದ್ದರು.

    ಒಂದೇ ತಾಲೂಕಿನ 10ರಲ್ಲಿ ಅಕ್ರಮ: ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಚಿಕ್ಕಅಂಕಂಡಹಳ್ಳಿ ಪಂಚಾಯಿತಿಯ ಬೈರನಾಯಕನಹಳ್ಳಿಯಲ್ಲಿ ಕೊರೆದ ಬೋರ್​ವೆಲ್​ಗೆ 3.41 ಲಕ್ಷ, ವಂಟ್ರಿಕುಂಟೆಯ 2.81 ಲಕ್ಷ ರೂ., ಪಾಕರಹಳ್ಳಿಯ 2.90 ಲಕ್ಷ ರೂ., ನಾರಾಯಣಪುರದ 3.22 ಲಕ್ಷ ರೂ., ಎ.ಜ್ಯೋತೇನಹಳ್ಳಿ ಪಂಚಾಯಿತಿಯ ಬನಹಳ್ಳಿ 3.26 ಲಕ್ಷ ರೂ., ಗಾಜಗ ಗ್ರಾಮದ 2.75 ಲಕ್ಷ ರೂ., ಜುಂಬನಹಳ್ಳಿಯ 2.28 ಲಕ್ಷ ರೂ, ಚಿನ್ನಕೋಟೆ ಪಂಚಾಯಿತಿಯ ದಾಸರಹೊಸಹಳ್ಳಿ 3.64 ಲಕ್ಷ ರೂ., ಕತ್ತಿಹಳ್ಳಿಯ 3.30 ಲಕ್ಷ ರೂ., ತಮ್ಮೇನಹಳ್ಳಿಯಲ್ಲಿ ಕೊರೆದಿರುವ ಬೋರ್​ವೆಲ್​ಗೆ 2.41 ಲಕ್ಷ ರೂ.ನಂತೆ ಒಟ್ಟು 30.59 ಲಕ್ಷ ರೂ. ಬಿಡುಗಡೆಗೆ ಕೋರಿ ಸಲ್ಲಿಸಿರುವ ಬಿಲ್​ಗಳು ನಕಲಿ ಎಂಬುದು ದೃಢಪಟ್ಟಿತ್ತು.

    10 ಬಿಲ್​ಗಳಿಗೆ ಲಗತ್ತಿಸಿದ ಫೋಟೋಗಳು ನಕಲಿ!: ಬಿಲ್ಲುಗಳ ಬಿಆರ್ ಸಂಖ್ಯೆ 600/28-10-2020, 301/27-10-2020, 604/28-10-2020, 605/28-10-2020, 606/28-10-2020, 607/28-10-2020, 608/28-10-2020, 609/28-10-2020, 609/28-10-2020, 603/27-10-2020, 602/28-10-2020ರಲ್ಲಿ ಲಗತ್ತಿಸಿರುವ ಬೋರ್​ಗಳ ಫೋಟೋಗಳು ನೈಜವಲ್ಲ. ಫೋಟೋಶಾಪ್ ಮಾಡಿದ ಚಿತ್ರಗಳನ್ನು ಸಲ್ಲಿಸಿರುವುದು ಆಂತರಿಕೆ ತನಿಖೆಯಲ್ಲಿ ದೃಢಪಟ್ಟಿದೆ.

    ತುಂಡಾದ ಕಾಲಿನೊಂದಿಗೆ ಆಸ್ಪತ್ರೆಗೆ ಬಂದ ಗಾಯಾಳು; ಯಶಸ್ವಿಯಾಗಿ ಜೋಡಿಸಿದ ವೈದ್ಯರು..

    3,064 ಕಾನ್‌ಸ್ಟೆಬಲ್ ನೇಮಕಾತಿ; ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts