More

    ಕಾವೇರುತ್ತಿದೆ ವಿಲೇಜ್ ಫೈಟ್ ಮೈದಾನ!

    ಬೆಳಗಾವಿ: ಕರೊನಾ, ಅತಿವೃಷ್ಟಿ, ಗ್ರಾಮ ಪಂಚಾಯಿತಿ ಸದಸ್ಯರ ಅವಧಿ ಮುಕ್ತಾಯ, ಆಡಳಿತಾಧಿಕಾರಿ ನೇಮಕ ಇತ್ಯಾದಿ ಬೆಳವಣಿಗೆಗಳ ಮಧ್ಯೆಯೇ ಗ್ರಾಮ ಪಂಚಾಯಿತಿ ಚುನಾವಣೆಯ ಕಾವು ಹಳ್ಳಿಗಳಲ್ಲಿ ನಿಧಾನಕ್ಕೆ ಕಾವೇರತೊಡಗಿದೆ. ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ಸಮಾಜ ಸೇವೆ ಹೆಸರಿನಲ್ಲಿ ಮತದಾರರನ್ನು ಒಲಿಸಿಕೊಳ್ಳಲು ಈಗಿಂದಲೇ ಪ್ರಯತ್ನಿಸುತ್ತಿದ್ದಾರೆ.

    ಗ್ರಾಮೀಣ ಭಾಗಗಳಲ್ಲಿ ಸದ್ಯ ಚುನಾವಣೆ, ಅಭ್ಯರ್ಥಿಗಳ ಆಯ್ಕೆ ವಿಷಯ ಚರ್ಚೆಯಲ್ಲಿದೆ. ಅಲ್ಲದೆ, ಗ್ರಾಪಂನ ಮಾಜಿ ಸದಸ್ಯರು, ಹೊಸ ಆಕಾಂಕ್ಷಿಗಳು ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಪೈಪೋಟಿ ಆರಂಭ: ಜಿಲ್ಲೆಯ 506 ಗ್ರಾಪಂಗಳ ಪೈಕಿ 484 ಗ್ರಾಪಂ ಸದಸ್ಯರ 5 ವರ್ಷದ ಅವಧಿ 2020ಮೇ, ಜುಲೈನ್‌ನಲ್ಲಿ ಪೂರ್ಣಗೊಂ ಡಿದೆ. ಹೀಗಾಗಿ ಚುನಾವಣಾ ಆಯೋಗವು ವಾರ್ಡ್ ಮೀಸಲಾತಿ, ಮತದಾರರ ಪಟ್ಟಿ, ಮತಗಟ್ಟೆ ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಿದೆ. 2015ರ ಚುನಾವಣೆಯ ವಾರ್ಡ್ ಮೀಸಲಾತಿ ಯಥಾವತ್ತಾಗಿದೆ. ಆದರೆ, ಮೀಸಲಾತಿಯಿಂದ ವಾರ್ಡ್‌ಗಳಲ್ಲಿ ಮಹಿಳೆ ಮತ್ತು ಪುರುಷರ ಕೆಲ ಸ್ಥಾನಗಳು ಅದಲು ಬದಲಾಗಿವೆ. ಆದರೂ ಆಕಾಂಕ್ಷಿಗಳಲ್ಲಿ ತೀವ್ರ ಪೈಪೋಟಿ ಆರಂಭವಾಗಿದೆ.

    ಕಾರ್ಯಕರ್ತರಿಗೆ ಆದ್ಯತೆ: ಗ್ರಾಪಂ ಚುನಾವಣೆ ಸ್ವತಂತ್ರವಾಗಿ ನಡೆಯಲಿದ್ದು, ಪಕ್ಷದ ಚಿನ್ಹೆ ಆಧಾರದಲ್ಲಿ ನಡೆಯುವುದಿಲ್ಲ. ಹಾಗಾಗಿ ಯಾರು ಬೇಕಾದರೂ ಸ್ವತಂತ್ರವಾಗಿ ಸ್ಪರ್ಧಿಸಬಹುದು. ಗ್ರಾಮೀಣ ಮಟ್ಟದಲ್ಲಿ ಪಕ್ಷ ಸಂಘಟನೆಗಾಗಿ ಶ್ರಮಿಸುತ್ತಿರುವ ಯುವ ಕಾರ್ಯಕರ್ತರಿಗೆ ಗ್ರಾಪಂ ಚುನಾವಣೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತಿದೆ. ಅಲ್ಲದೆ, ಕ್ಷೇತ್ರದ ಶಾಸಕರು, ಮುಖಂಡರು, ಸ್ಥಳೀಯ ನಾಯಕರು ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಮುಖಂಡ ಈರಣ್ಣ ಅಂಗಡಿ ತಿಳಿಸಿದ್ದಾರೆ.

    ಯುವಕರು ಸ್ಪರ್ಧಿಸುವ ನಿರೀಕ್ಷೆ: 2015 ರಿಂದ 2020ರ ಅವಧಿಯಲ್ಲಿ 484 ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ 3.66 ಲಕ್ಷದಷ್ಟು ಯುವ ಮತದಾರರು ಮತಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಒಟ್ಟು 25,70,790 ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಇವರಲ್ಲಿ 13.07 ಲಕ್ಷ ಪುರುಷ, 12.62 ಲಕ್ಷ ಮಹಿಳೆಯರಿದ್ದಾರೆ. 2015-16ನೇ ಸಾಲಿನಲ್ಲಿ 472 ಗ್ರಾಪಂಗಳಿಗೆ ನಡೆದ ಚುನಾವಣೆ ಯಲ್ಲಿ ಪುರುಷ-9,35,043, ಮಹಿಳೆ-8,59,417 ಸೇರಿ ಒಟ್ಟು- 17,94,460 ಮತ ಚಲಾವಣೆಗೊಂಡಿದ್ದವು. ಈ ಬಾರಿ ಪಟ್ಟಿಯಲ್ಲಿ ಮತದಾರರ ಸಂಖ್ಯೆ ಏರಿಕೆ ಕಂಡಿದ್ದು, ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಗೆ ಮುಂದಾಗಿದೆ ಎನ್ನಲಾಗಿದೆ
    ಹೀಗಾಗಿ ಸ್ಪರ್ಧೆ ತೀವ್ರಗೊಳ್ಳುವ ಸಾಧ್ಯತೆ ಇದೆ.

    ಗ್ರಾಪಂಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ವಾರ್ಡ್ ಮೀಸಲಾತಿ ಪಟ್ಟಿ ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ. ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಶೀಘ್ರದಲ್ಲೇ ಚುನಾವಣೆ ನಡೆಯುವ ದಿನಾಂಕ ಘೋಷಣೆಯಾಗಲಿದ್ದು, ಪೂರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
    | ಎಂ.ಜಿ. ಹಿರೇಮಠ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts