More

    ಜೆಡಿಎಸ್‌ಗೆ ಮೂರು, ಬಿಜೆಪಿಯಿಂದ ಮತ್ತೊಂದು

    ಬೆಂಗಳೂರು: ಲೋಕಸಭೆ ಚುನಾವಣಾ ರಾಜಕೀಯ ದಿನೇ ದಿನೆ ಗರಿಗೆದರುತ್ತಿದ್ದು, ಮೈತ್ರಿ ಪಕ್ಷದಲ್ಲಿ ಮಹತ್ವದ ಬೆಳವಣಿಗೆಗಳು ಗೋಚರಿಸುತ್ತಿವೆ.
    ಮಾಜಿ ಪ್ರಧಾನಿ ದೇವೇಗೌಡ ಅವರ ಅಳಿಯ ಡಾ.ಸಿ.ಎನ್.ಮಂಜುನಾಥ್ ಬಿಜೆಪಿಯಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹುರಿಯಾಳಾಗುವುದು ಬಹುತೇಕ ಫಿಕ್ಸ್ ಆಗಿದೆ.

    ದೇವೇಗೌಡರ ಕುಟುಂಬದವರಾದರೂ ಜೆಡಿಎಸ್ ಬಿಟ್ಟು ಬಿಜೆಪಿಯಿಂದ ಸ್ಪರ್ಧಿಸುತ್ತಿರುವುದು ನಾನಾ ಚರ್ಚೆಗಳನ್ನು ಹುಟ್ಟು ಹಾಕಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್‌ಗಿಂತಲೂ ಬಿಜೆಪಿಯಿಂದ ಸ್ಪರ್ಧಿಸಿದರೇ ಗೆಲುವು ಸಾಧ್ಯ ಎಂಬ ಸಮೀಕ್ಷೆಯ ವರದಿ ಕೇಂದ್ರ ನಾಯಕರ ಕೈಸೇರಿದೆ. ಹಾಗಾಗಿ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡದೇ ಡಾ.ಮಂಜುನಾಥ್ ಅವರನ್ನೇ ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಕಣಕ್ಕಿಳಿಸುವ ತಯಾರಿ ನಡೆಸಲಾಗಿದೆ.

    ಈ ಬೆಳವಣಿಗೆಯ ನಡುವೆಯೇ ಮಾಜಿ ಸಿಎಂ ಕುಮಾರಸ್ವಾಮಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಆಕ್ಟೀವ್ ಆಗಿದ್ದಾರೆ. ತಮ್ಮ ಪಾಲಿಗೆ ಬರಬಹುದಾದ ಮೂರು ಕ್ಷೇತ್ರಗಳಲ್ಲು ಗೆಲ್ಲಲು ತಂತ್ರಗಾರಿಕೆ ಆರಂಭಿಸಿದ್ದಾರೆ. ಸಂಘಟನೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಲು, ಕಾರ್ಯಕರ್ತರನ್ನು ಒಗ್ಗೂಡಿಸಲು, ಭಿನ್ನಾಭಿಪ್ರಾಯ ತಲೆದೋರದಂತೆ ಸಮನ್ವಯ ಸಾಧಿಸಲು ಕುಮಾರಸ್ವಾಮಿ ಕಸರತ್ತು ಆರಂಭಿಸಿದ್ದಾರೆ.

    ಕೋಲಾರದಲ್ಲಿ ಮಹಿಳಾ ಸಮಾವೇಶ ನಡೆಸಲು ತೀರ್ಮಾನಿಸಿದ್ದಾರೆ. ಹಾಸನದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಕಾರ್ಯಕರ್ತರಲ್ಲಿ ಇರುವ ಅಸಮಾಧಾನ ಶಮನಕ್ಕೆ ಕಾರ್ಯತಂತ್ರ ಹೆಣೆಯುತ್ತಿದ್ದಾರೆ. ಮಂಡ್ಯವನ್ನೂ ಇನ್ನೂ ಕುತೂಹಲದ ಸ್ಥಿತಿಯಲ್ಲೇ ಇಟ್ಟಿದ್ದಾರೆ.

    ದೆಹಲಿಯಲ್ಲಿ ಶುಕ್ರವಾರ ಸಭೆ

    ಈ ವಿದ್ಯಾಮಾನಗಳ ನಡುವೆ ಗುರುವಾರ ಸಂಜೆ ಸೀಟು ಹಂಚಿಕೆ ಕುರಿತು ಬಿಜೆಪಿ ಹೈಕಮಾಂಡ್ ಜತೆ ಚರ್ಚಿಸಲು ಕುಮಾರಸ್ವಾಮಿ ನವದೆಹಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಸೀಟು ಖಾತ್ರಿಪಡಿಸಿಕೊಳ್ಳಲಿದ್ದಾರೆ.

    ಅಭ್ಯರ್ಥಿಗಳೂ ಈ ಸಭೆಯಲ್ಲೇ ಅಂತಿಮ

    ಈಗಾಗಲೇ ಅಭ್ಯರ್ಥಿಗಳ ಪಟ್ಟಿಯೊಂದನ್ನು ಕುಮಾರಸ್ವಾಮಿ ಸಿದ್ಧಪಡಿಸಿಟ್ಟುಕೊಂಡಿದ್ದು, ಬಿಜೆಪಿ ಹೈಕಮಾಂಡ್ ಮುಂದಿಟ್ಟು ಚುನಾವಣಾ ಕಾರ್ಯತಂತ್ರ ವಿವರಿಸಿ ಒಪ್ಪಿಗೆ ಕೂಡ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

    ಸಮನ್ವಯದ ಸಮಾಲೋಚನೆ

    ಟಿಕೆಟ್ ನೀಡಿಕೆ ನಂತರ ಉಭಯ ಪಕ್ಷಗಳಲ್ಲಿ ಸಮನ್ವಯ ಸಾಧಿಸಿ, ಚುನಾವಣಾ ಪ್ರಚಾರ ನಡೆಸುವ ಕುರಿತು ಈ ಸಂದರ್ಭದಲ್ಲಿ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts