More

    ಸಂಸದೆ ಪರ ಬಿಜೆಪಿಗರಿಗಿಲ್ಲ ಒಲವು: ಅಭಿಪ್ರಾಯ ಸಂಗ್ರಹದಲ್ಲಿ ವಿರೋಧದ ಮಾತು

    ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ನನ್ನ ಸ್ಪರ್ಧೆ ಖಚಿತವೆಂದು ಹಾಲಿ ಸಂಸದೆ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಆದರೆ ಬಿಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸಂಸದೆ ಸ್ಪರ್ಧೆ ಬಗ್ಗೆ ಒಲವಿಲ್ಲ ಎನ್ನುವುದು ಇತ್ತೀಚೆಗೆ ಅಭಿಪ್ರಾಯ ಸಂಗ್ರಹದ ವೇಳೆ ಬಯಲಾಗಿದೆ.
    ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಯಿಂದ ಅಭ್ಯರ್ಥಿಯ ಆಯ್ಕೆ ಕುರಿತು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅದೇ ರೀತಿ ಮಾ.2ರಂದು ಜಿಲ್ಲೆಯಲ್ಲಿಯೂ ಅಭಿಪ್ರಾಯ ಪಡೆಯುವ ಪ್ರಕ್ರಿಯೆ ನಡೆದಿದೆ. ಮಾಜಿ ಸಚಿವ ಎನ್.ಮಹೇಶ್ ಹಾಗೂ ಮಂಗಳೂರು ಶಾಸಕ ಡಾ.ಭರತ್ ಶೆಟ್ಟಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರಿಂದ ವಿವರ ಪಡೆದುಕೊಂಡಿದ್ದಾರೆ. ಈ ಸಮಯದಲ್ಲಿ ಒಂದಿಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲ ಸಂಸದೆ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.
    ಸಂಸದೆ ವಿರೋಧಿ ಅಲೆ: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ರೈತರ ಸಂಘದ ನೇರ ಬೆಂಬಲ ಹಾಗೂ ಕಾಂಗ್ರೆಸ್‌ನ ಪರೋಕ್ಷ ಸಹಕಾರದಿಂದಾಗಿ ನಿಖಿಲ್ ಕುಮಾರಸ್ವಾಮಿಯನ್ನು ಬರೋಬರಿ 1,25,876 ಮತಗಳ ಅಂತರದಿಂದ ಸೋಲಿಸಿ ಸಂಸದೆಯಾದರು. ಆದರೆ ಕ್ಷೇತ್ರದ ಜನರಿಟ್ಟುಕೊಂಡಿದ್ದ ನಿರೀಕ್ಷೆಗಳೆಲ್ಲ ಹುಸಿ ಎನ್ನುವುದನ್ನು ತಿಳಿಯಲು ಹೆಚ್ಚು ದಿನ ತೆಗೆದುಕೊಳ್ಳಲಿಲ್ಲ. ಅಭಿವೃದ್ಧಿಗಿಂತ ಜೆಡಿಎಸ್ ನಾಯಕರನ್ನು ಟೀಕೆ ಮಾಡಿಕೊಂಡೇ ಕಾಲ ಕಳೆದ ಸಂಸದೆ, ಐದು ವರ್ಷದಲ್ಲಿ ಜಿಲ್ಲೆಯಲ್ಲಿ ವಾಸ್ತವ್ಯವಿದ್ದುಕೊಂಡು ಜನರ ಕಷ್ಟ ಸುಖ ಆಲಿಸಲಿಲ್ಲ. ಒಟ್ಟಾರೆ ಕ್ಷೇತ್ರದ ಜನರ ಪಾಲಿಗೆ ಗಗನ ಕು‘ಸುಮ’ವಾಗಿದ್ದರು.
    ಇದೆಲ್ಲವೂ ಕ್ಷೇತ್ರದಲ್ಲಿ ಸಂಸದೆಯ ವಿರೋಧಿ ಅಲೆ ಹೆಚ್ಚಾಗಲು ಕಾರಣವಾಯಿತು. ಈ ನಡುವೆ ಚುನಾವಣೆಯಲ್ಲಿ ಸಹಕಾರ ನೀಡಿದ್ದ ಕಾಂಗ್ರೆಸ್ ಹಾಗೂ ರೈತ ಸಂಘದ ಕಾರ್ಯಕರ್ತರನ್ನು ಬದಿಗೊತ್ತಿ ಕೆಲ ತಿಂಗಳ ಹಿಂದೆ ಬಿಜೆಪಿಗೆ ಬೇಷರತ್ ಬೆಂಬಲ ನೀಡಿದ್ದರು. ಇದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡಮಟ್ಟದಲ್ಲಿಯೇ ಅನುಕೂಲವಾಗಲಿದೆ ಎನ್ನುವ ಲೆಕ್ಕಾಚಾರವೂ ಇತ್ತು. ಆದರೆ ಅದ್ಯಾವುದೂ ನಡೆಯಲಿಲ್ಲ. ಇನ್ನು ಪಕ್ಷವನ್ನು ಸೇರಲು ತಾಂತ್ರಿಕ ಕಾರಣವೆಂದು ಹೇಳಿಕೊಳ್ಳುತ್ತಿರುವ ಸಂಸದೆ, ಇತ್ತ ಬಿಜೆಪಿ ಸಂಘಟನೆ ವಿಚಾರದಲ್ಲಿಯೂ ಅಷ್ಟೇನೂ ಗಮನಹರಿಸಿಲ್ಲ ಎನ್ನುವ ಬೇಸರ ಪಕ್ಷದೊಳಗಿದೆ.
    ಇನ್ನು ಚುನಾವಣೆ ವಿಚಾರಕ್ಕೆ ಬಂದರೆ ಅಂದು ಮಿತ್ರನಂತಿದ್ದ ಕಾಂಗ್ರೆಸ್ ಇಂದು ಸಂಸದೆಗೆ ಎದುರಾಳಿಯಾಗಿ ನಿಂತಿದೆ. ವಿಧಾನಸಭಾ ಚುನಾವಣೆಯ ಮೈತ್ರಿಯ ಕಾರಣಕ್ಕೆ ರೈತ ಸಂಘ ಕೂಡ ಕಾಂಗ್ರೆಸ್‌ಗೆ ಬೆಂಬಲಿಸುವ ಸಾಧ್ಯತೆ ಇದೆ. ಇತ್ತ ಕಳೆದ ಲೋಕಸಭಾ ಚುನಾವಣೆಯ ಸೋಲಿನ ಜತೆಗೆ ಅಧಿಕಾರವಾಧಿಯಲ್ಲಿ ನಿರಂತರವಾಗಿ ಜೆಡಿಎಸ್ ಅನ್ನು ಕಟು ಟೀಕೆ ಮಾಡಿದ್ದನ್ನು ಮುಖಂಡರು, ಕಾರ್ಯಕರ್ತರು ಮರೆತಿಲ್ಲ. ಅಭಿವೃದ್ಧಿ ಕೆಲಸವೂ ಹೇಳಿಕೊಳ್ಳುವಂತೆ ಆಗಿಲ್ಲದಿರುವುದು ಜನರಿಗೆ ಅತೃಪ್ತಿ ಇದೆ. ಈ ಎಲ್ಲವೂ ಸಂಸದೆ ವಿರೋಧಿ ಅಲೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸ್ಪರ್ಧೆಗೆ ಅವಕಾಶ ನೀಡಿದರೆ ಪಕ್ಷಕ್ಕೆ ಹೊಡೆತ ಬೀಳಲಿದೆ ಎನ್ನುವ ಅಭಿಪ್ರಾಯವನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
    ಮತ್ತೊಂದೆಡೆ ಸಂಸದೆ ಪರ ಬೆರಳೆಣಿಕೆಯಷ್ಟು ಜನರು ಮಾತ್ರ ಬ್ಯಾಟ್ ಬೀಸಿದ್ದಾರೆ. ಪ್ರಮುಖವಾಗಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ತಮಗೆ ಅಥವಾ ಸಂಸದೆಗೆ ಅವಕಾಶ ಕೊಡಿ ಎಂದಿದ್ದಾರೆ. ಇವರೊಟ್ಟಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದವರ ಪೈಕಿ ಕೆಲವರು ಕೂಡ ಸಂಸದೆ ಪರ ಅಭಿಪ್ರಾಯ ನೀಡಿದ್ದಾರೆ. ಸ್ಪರ್ಧೆಗೆ ಅವಕಾಶ ಕೊಟ್ಟರೆ ಚುನಾವಣೆಯನ್ನು ಯಶಸ್ವಿಯಾಗಿ ಮಾಡುವುದಾಗಿ ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ.
    ಒಟ್ಟಾರೆ ಚುನಾವಣೆ ವಿಚಾರಕ್ಕೆ ಬರುವುದಾದರೆ ಬಿಜೆಪಿಯಲ್ಲಿನ ಬೆಳವಣಿಗೆ ‘ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯಿತು’ ಎನ್ನುವ ಮಾತಿನಂತಾಗಿದೆ. ಆದರೆ ಯಾವುದೇ ಅಭಿಪ್ರಾಯವಾದರೂ ಮೈತ್ರಿ ಒಪ್ಪಂದದಂತೆ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಬಿಟ್ಟುಕೊಟ್ಟಾಗ ಮಾತ್ರ ಪರಿಗಣನೆಗೆ ಬರಲಿದೆ.

    ಸಂಸದೆ ಪರ ಬಿಜೆಪಿಗರಿಗಿಲ್ಲ ಒಲವು: ಅಭಿಪ್ರಾಯ ಸಂಗ್ರಹದಲ್ಲಿ ವಿರೋಧದ ಮಾತು

    ಸಿದ್ದರಾಮಯ್ಯ ಪರವೇ ಹೆಚ್ಚು
    ಇನ್ನು ಗಮನಾರ್ಹ ವಿಷಯವೆಂದರೆ ಬಹುತೇಕ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಅವರ ಪರ ಹೆಚ್ಚು ಒಲವು ತೋರಿದ್ದಾರೆ. ಒಂದು ವೇಳೆ ಕ್ಷೇತ್ರ ಉಳಿಸಿಕೊಂಡರೆ ಸಿದ್ದರಾಮಯ್ಯಗೆ ಅವಕಾಶ ನೀಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
    2018ರಲ್ಲಿ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ 2,44,404 ಮತ ಸಿದ್ದರಾಮಯ್ಯ ಪಡೆದಿದ್ದರು. ಇದಾದ ಬಳಿಕ ಪಕ್ಷ ನೀಡಿದ ಹಲವು ಜವಾಬ್ದಾರಿಯನ್ನು ನಿರ್ವಹಣೆ ಮಾಡಿದ್ದಾರೆ. ಪಕ್ಷ ಸಂಘಟನೆಯೊಂದಿಗೆ ತನ್ನದೇ ಆದ ಬೆಂಬಲಿಗರ ಬಳಗವನ್ನು ಹೊಂದಿದ್ದಾರೆ. 2009ರಿಂದ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಡೆದಿರುವ ಚುನಾವಣೆ ಪೈಕಿ ಬಿಜೆಪಿಯಿಂದ ಸ್ಪರ್ಧಿಸಿ ಹೆಚ್ಚು ಮತಗಳನ್ನು ಗಳಿಸಿದ ಹೆಗ್ಗಳಿಕೆಯನ್ನು ಸಿದ್ದರಾಮಯ್ಯ ಹೊಂದಿದ್ದಾರೆ. 2009ರಲ್ಲಿ ಎಲ್.ಆರ್.ಶಿವರಾಮೇಗೌಡ 1,44,875 ಮತ ಪಡೆದಿದ್ದರು. 2014ರಲ್ಲಿ ಪ್ರೊ.ಬಿ.ಶಿವಲಿಂಗಯ್ಯ ಅವರು 86,993 ಮತ ಗಳಿಸಿದ್ದರು. 20009ರಲ್ಲಿ ಶೇ.14.04ರಷ್ಟಿದ್ದ ಬಿಜೆಪಿಯ ಮತ ಗಳಿಕೆ 2018ರಲ್ಲಿ ಶೇ.27.36ಕ್ಕೆ ಏರಿಕೆಯಾಗಿತ್ತು. ಈ ಅಂಶದ ಜತೆಗೆ ಪಕ್ಷಕ್ಕೆ ದುಡಿದಿರುವ ಸೇವೆ ಪರಿಗಣಿಸಿ ಸಿದ್ದರಾಮಯ್ಯ ಅವರಿಗೆ ಅವಕಾಶ ನೀಡಬೇಕು. ಇದರಿಂದಾಗಿ ಪಕ್ಷಕ್ಕೂ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
    ಇನ್ನು ಲೋಕಸಭಾ ಚುನಾವಣೆಗೆ ಸ್ಪರ್ಧಾಕಾಂಕ್ಷಿಯೂ ಆಗಿರುವ ಡಾ.ಸಿದ್ದರಾಮಯ್ಯ ಫೆ.2ರಂದು ನಗರದಲ್ಲಿ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರ ಸಭೆ ಆಯೋಜಿಸಿದ್ದರು. ನಿರೀಕ್ಷೆಗೂ ಮೀರಿದ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡುವಲ್ಲಿಯೂ ಯಶಸ್ವಿಯಾಗಿದ್ದರು. ಈ ವೇಳೆ ಪಕ್ಷದ ಪ್ರಮುಖ ಮುಖಂಡರು ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದವರು ಕೂಡ ಭಾಗವಹಿಸಿ ಬೆಂಬಲ ಸೂಚಿಸಿದ್ದನ್ನು ಸ್ಮರಿಸಬಹುದು.

    ಸಂಸದೆ ಪರ ಬಿಜೆಪಿಗರಿಗಿಲ್ಲ ಒಲವು: ಅಭಿಪ್ರಾಯ ಸಂಗ್ರಹದಲ್ಲಿ ವಿರೋಧದ ಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts