More

    ಲಾಕ್‌ಡೌನ್ ಆದೇಶ ಪಾಲಿಸಿ

    ಹುಕ್ಕೇರಿ: ಮಾರಕ ರೋಗ ಕರೊನಾ ತಡೆಗಟ್ಟಲು ಸರ್ಕಾರ ನೀಡಿರುವ ಆದೇಶದಿಂದ ಬದುಕು ನಡೆಸಲು ಹರಸಾಹಸ ಪಡುತ್ತಿರುವ ಬಡವರಿಗೆ ಅಕ್ಕಿ, ರವೆ, ಗೋಧಿ ಹಿಟ್ಟು, ಸಕ್ಕರೆ, ಚಹಾ ಪುಡಿ, ಅಡುಗೆ ಎಣ್ಣೆ, ಬಟ್ಟೆ ಹಾಗೂ ಸ್ನಾನದ ಸಾಬೂನುಗಳನ್ನು ಹೊಂದಿದ ಕಿಟ್ ಅನ್ನು ಶ್ರೀ ಗುರುಶಾಂತೇಶ್ವರ ಹಿರೇಮಠದಿಂದ ವಿತರಿಸಲಾಯಿತು.

    ಶುಕ್ರವಾರ ಸ್ಥಳೀಯ ಶ್ರೀಮಠದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಮಠಾಧ್ಯಕ್ಷ ಚಂದ್ರಶೇಖರ ಶಿವಾಚಾರ್ಯರು ಕಿಟ್ ಹಸ್ತಾಂತರಿಸಿದರು. ನಂತರ ಮಾತನಾಡಿದ ಶ್ರೀಗಳು, ದೈನಂದಿನ ಬದುಕು ನಿರ್ವಹಿಸಲು ಪರಿತಪಿಸುತ್ತಿರುವ ಹುಕ್ಕೇರಿ, ಸಂಕೇಶ್ವರ ಮತ್ತು ಯಮಕನಮರ್ಡಿ ಹೋಬಳಿ ವ್ಯಾಪ್ತಿಯ ಬಡಜನರಿಗೆ ಕಿಟ್ ತಲುಪಿಸುವಂತೆ ಮನವಿ ಮಾಡಿದರು. ಜಗತ್ತನ್ನು ತಲ್ಲಣಗೊಳಿಸಿರುವ ಕರೊನಾ ವೈರಸ್ ಸಾಂಕ್ರಾಮಿಕ ರೋಗ ನಿಯಂತ್ರಿಸಲು ಜನರು ತಮ್ಮ ಮನೆಯಲ್ಲಿ ಸ್ವಯಂ ದಿಗ್ಬಂಧನವನ್ನು ಏಪ್ರಿಲ್ 14ರವರೆಗೆ ಹಾಕಿಕೊಳ್ಳಬೇಕು. ಆಗ ಮಾತ್ರ ರೋಗ ತಡೆಗಟ್ಟಲು ಸಾಧ್ಯ. ಆದರೆ, ಕೆಲವರು ಅನವಶ್ಯಕವಾಗಿ ತಿರುಗಾಡುತ್ತಿರುವುದು ಕಳವಳ ಕಾರಿ ಸಂಗತಿ. ಅದಕ್ಕಾಗಿ ಪಾಲಕರು ತಮ್ಮ ಮಕ್ಕಳನ್ನು ಮನೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದರು. ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ಮಾತನಾಡಿ, ಮಾರಕ ರೋಗ ತಡೆಯಲು ಮಠಾಧೀಶರು ಹಾಗೂ ಸ್ಥಿತಿವಂತರು ಸಮಾಜದಲ್ಲಿನ ನಿರ್ಗತಿಕರು ಹಾಗೂ ದಿನದ ದುಡಿಮೆ ಅವಲಂಬಿತರಿಗೆ ನೆರವು ನೀಡಲು ಮುಂದಾಗಬೇಕು ಎಂದರು. ಪಿಎಸ್‌ಐ ಶಿವಾನಂದ ಗುಡಗನಟ್ಟಿ ಮಾತನಾಡಿ. ತಾವೇ ಖುದ್ದಾಗಿ ಕಿಟ್ ವಿತರಿಸಲು ಮುಂದಾಗದೇ ಕಾನೂನು ಪರಿಮಿತಿಯೊಳಗೆ ಪೊಲೀಸ್ ಇಲಾಖೆ ಮೂಲಕ ಫಲಾನುಭವಿಗಳಿಗೆ ವಿತರಿಸಲು ಶ್ರೀಗಳು ತಿಳಿಸಿರುವುದು ಪ್ರಶಂಸನೀಯ ಕಾರ್ಯವಾಗಿದೆ. ಕರೊನಾ ರೋಗ ತಡೆಯಲು ನಮ್ಮಷ್ಟಕ್ಕೆ ನಾವೇ ನಿಯಂತ್ರಣ ಮಾಡಿಕೊಳ್ಳಬೇಕು. ದಿನದ ದುಡಿಮೆ ಅವಲಂಬಿತರಿಗೆ ಇದು ಕಷ್ಟವೆನಿಸಿದರೂ ಭವಿಷ್ಯದ ದೃಷ್ಟಿಯಿಂದ ದಿಗ್ಬಂಧನ ಮಾಡಿಕೊಳ್ಳಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts