More

    ಹಡಿಲು ಭೂಮಿ ಹಸಿರುಮಯ

    ಅನ್ಸಾರ್ ಇನೋಳಿ ಉಳ್ಳಾಲ
    25 ವರ್ಷಗಳಿಂದ ಕಾಡಾಗಿ ಬೆಳೆದಿದ್ದ ಬರಡು ಭೂಮಿಯೀಗ ಹಸಿರುಮಯವಾಗಿದೆ. ಲಾಕ್‌ಡೌನ್ ಸಂದರ್ಭ ಸ್ಥಳೀಯ ಉತ್ಸಾಹಿ ಕೃಷಿಕರ ಸಾಹಸ ಫಲ ನೀಡುವ ಹಂತದಲ್ಲಿದೆ.
    ಕೊಣಾಜೆ ಕೆಳಗಿನಮನೆ ಎಂಬಲ್ಲಿರುವ ಎರಡು ಎಕರೆ ಗದ್ದೆ ಮತ್ತು ತೋಟವನ್ನು 25 ವರ್ಷಗಳ ಹಿಂದೆ ಕುತ್ತಾರ್ ನಿವಾಸಿ ಲವೀನಾ ರೇಷ್ಮಾ ಡಿಸೋಜ ಮತ್ತು ವಿಲ್ಫಿ ಡಿಸೋಜ ಎಂಬುವರು ಖರೀದಿಸಿದ್ದರು. ಆದರೆ ಅವರು ಈ ಜಮೀನನ್ನು ಸಮರ್ಪಕವಾಗಿ ಬಳಸದ ಕಾರಣ ಗದ್ದೆ ತೋಟ ಮಾಯವಾಗಿ ಆ ಜಾಗದಲ್ಲಿ ಗಿಡ, ಮರಗಳು ಬೆಳೆದು ಕಾಡಿನ ರೂಪ ತಾಳಿತ್ತು.

    ಲಾಕ್‌ಡೌನ್ ಘೋಷಿಸಲ್ಪಟ್ಟಾಗ ಆ ಸಮಯವನ್ನು ಸದುಪಯೋಗಪಡಿಸಲು ಮುಂದಾದ ಕೃಷಿಕ ಹಾಗೂ ಕೊಣಾಜೆ ಗ್ರಾಪಂ ಮಾಜಿ ಅಧ್ಯಕ್ಷ ಅಚ್ಚುತ ಗಟ್ಟಿ, ಸ್ಥಳೀಯ ಕೃಷಿಕರಾದ ದಯಾನಂದ ಗಟ್ಟಿ, ಸೀತಾರಾಮ ಗಟ್ಟಿ ಹಾಗೂ ಮಹಾಬಲ ಗಟ್ಟಿ ಎಂಬುವರು ಸಂಬಂಧಪಟ್ಟವರಲ್ಲಿ ಮಾತನಾಡಿ ಒಪ್ಪಿಗೆ ಪಡೆದು, ತಕ್ಷಣ ಗಿಡಮರಗಳನ್ನು ಕಡಿದು ಜಮೀನಿಗೆ ವಿಶೇಷ ರೂಪ ನೀಡಿದರು. 2 ಎಕರೆ ಜಮೀನಿನ ಪೈಕಿ ಒಂದೂವರೆ ಎಕರೆಯಲ್ಲಿ ಭತ್ತ ಬೆಳೆಯಲು ಮುಂದಾದಾಗ ಕಾಂಗ್ರೆಸ್ ಕಾರ್ಯಕರ್ತರು ಸಾಥ್ ನೀಡಿದರು. ಉಳಿದ ಅರ್ಧ ಎಕರೆ ಜಮೀನಿನಲ್ಲಿ ಬೆಂಡೆಕಾಯಿ, ಎರಡು ಜಾತಿಯ ಗೆಣಸು, ಅಲಸಂಡೆ, ಮುಳ್ಳು ಸೌತೆ, ಹರಿವೆ, ಬಸಳೆ, ಸೋರೆಕಾಯಿ, ಹೀರೇಕಾಯಿ ಹೀಗೆ ತರಕಾರಿ ಬೀಜ ಬಿತ್ತಲಾಗಿತ್ತು. ಈ ಕಾರ್ಯಕ್ಕೆ ಸ್ಥಳೀಯರಿಂದಲೇ ಸ್ಥಾಪನೆಗೊಂಡಿರುವ ನಾಗಬ್ರಹ್ಮ ಪ್ರಗತಿಪರ ಸ್ವಸಹಾಯ ಸಂಘದ ಸದಸ್ಯರು ಸಾಥ್ ನೀಡಿದರು. ಸುಮಾರು 25 ವರ್ಷ ಪಾಳು ಬಿದ್ದಿದ್ದ ಜಮೀನು ಈಗ ಹಸಿರಿನಿಂದ ನಳನಳಿಸುತ್ತಿದ್ದು, ಸ್ಥಳೀಯ ನಾಲ್ವರು ಕೃಷಿಕರ ಛಲ, ಸಂಘ, ಕಾಂಗ್ರೆಸ್ ಕಾರ್ಯಕರ್ತರ ಸಹಕಾರಕ್ಕೆ ಸಾಕ್ಷಿಯಾಗಿದೆ.

    ಪರಿಹಾರಕ್ಕೆ ಮನವಿ: ಭತ್ತದ ಬೀಜ ಬೆಳೆದು ನಾಟಿ ಕಾರ್ಯ ನಡೆದಿದೆ. ತರಕಾರಿ ಗಿಡಗಳು ಹೂವು ಬಿಡಲು ಆರಂಭಿಸಿವೆ. ಆದರೆ ವಿಚಿತ್ರ ರೋಗದಿಂದಾಗಿ ಬೆಂಡೆಕಾಯಿ ಮತ್ತು ಹರಿವೆ ಗಿಡಗಳು ಹೂವು ಬಿಡುವ ಸಂದರ್ಭದಲ್ಲೇ ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಇದು ಇತರ ತರಕಾರಿ ಗಿಡಗಳಿಗೂ ಹರಡುವ ಭೀತಿ ಎದುರಾಗಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ತಜ್ಞರೇ ಇದಕ್ಕೊಂದು ಪರಿಹಾರ ರೂಪಿಸಬೇಕು ಎನ್ನುವುದು ಸ್ಥಳೀಯರ ಮನವಿ.

    ಈ ವರ್ಷ ಬಂದಿಲ್ಲ ವಿದ್ಯಾರ್ಥಿಗಳು: ಪ್ರತಿ ವರ್ಷ ಮಂಗಳೂರು ವಿಶ್ವವಿದ್ಯಾಲಯ ಅಧೀನ ಕಾಲೇಜುಗಳ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆ ಭಾಗವಾಗಿ ಕೊಣಾಜೆ ಕೆಳಗಿನಮನೆ ಪ್ರದೇಶಕ್ಕೆ ಆಗಮಿಸಿ ಆಸುಪಾಸಿನ ಗದ್ದೆಗಳಲ್ಲಿ ಉತ್ತುವುದು, ನೇಜಿ ನಾಟಿ ಮಾಡುವ ಮೂಲಕ ಭತ್ತ ಕೃಷಿ ಬಗ್ಗೆ ಮಾಹಿತಿ ಪಡೆಯುವುದು ಸಾಮಾನ್ಯವಾಗಿತ್ತು. ಈ ವರ್ಷ ಲಾಕ್‌ಡೌನ್ ಅಡ್ಡಿಯಾದ ಕಾರಣ ವಿದ್ಯಾರ್ಥಿಗಳ ನೆರವು ದೊರಕಿಲ್ಲ.

    ಹಳ್ಳಿಗಳಲ್ಲೂ ಗದ್ದೆ ಹಡಿಲು ಬೀಳುವುದು ಬೇಸರದ ವಿಚಾರ. ಲಾಕ್‌ಡೌನ್ ಸಂದರ್ಭ ಇಲ್ಲಿನ ಹಡಿಲು ಭೂಮಿಯಲ್ಲಿ ಕೃಷಿ ಮಾಡಿ ಪುನರ್ಜೀವಗೊಳಿಸಲು ಯೋಚಿಸಿದಾಗ ಜಮೀನಿನ ಮಾಲೀಕರು ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಈಗ ಹಳದಿ ರೋಗ ಕಾಣಿಸಿಕೊಂಡಿದ್ದು, ಕೃಷಿ ಇಲಾಖೆ ಅಧಿಕಾರಿಗಳು ಪರಿಹಾರ ಸೂಚಿಸಿದರೆ ಉತ್ತಮ.
    ಅಚ್ಚುತ ಗಟ್ಟಿ, ಕೊಣಾಜೆ ಗ್ರಾಪಂ ಮಾಜಿ ಅಧ್ಯಕ್ಷ

    ಪ್ರತಿವರ್ಷದಂತೆ ಈ ವರ್ಷವೂ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಬಂದರೆ ಹಡೀಲು ಭೂಮಿಯಲ್ಲಿ ಕೃಷಿ ಮಾಡಿಸಬಹುದಿತ್ತು. ಆದರೆ, ಲಾಕ್‌ಡೌನ್‌ನಿಂದ ಸಾಧ್ಯವಾಗಿಲ್ಲ. ಎರಡು ಎಕರೆ ಜಮೀನಿನಲ್ಲಿ ಕೃಷಿಗೆ ಸುಮಾರು 50 ಸಾವಿರ ರೂ. ಖರ್ಚು ಮಾಡಲಾಗಿದೆ. ಆದರೆ ವಿಚಿತ್ರ ರೋಗ ಬಂದಿರುವುದು ಬೇಸರ ತಂದಿದೆ.
    ದಯಾನಂದ ಗಟ್ಟಿ, ಸ್ಥಳೀಯ ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts