More

    ಲಾಕ್‌ಡೌನ್ ಭಯ, ಸ್ವ-ಗ್ರಾಮದತ್ತ ಕಾರ್ಮಿಕರು

    ಮಾಂಜರಿ: ಕಬ್ಬು ಕಟಾವು ಮಾಡುವ ಮಹಾರಾಷ್ಟ್ರದ ಕೂಲಿ ಕಾರ್ಮಿಕರು ಕಳೆದ ವರ್ಷ ಜಾರಿಗೊಳಿಸಿದ್ದ ಲಾಕ್‌ಡೌನ್‌ನಿಂದ ತಮ್ಮ ಊರಿಗೆ ಹೋಗಲಾಗದೆ ಮಾರ್ಗಮಧ್ಯದಲ್ಲೇ ಪರದಾಡಿದ್ದರು. ಈಗ ಮಹಾರಾಷ್ಟ್ರದಲ್ಲಿ ಮತ್ತೆ ಕರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿರುವ ಕಾರ್ಮಿಕರು ಆತಂಕಕ್ಕೊಳಗಾಗಿದ್ದಾರೆ. ಮತ್ತೆ ಲಾಕ್‌ಡೌನ್ ಮಾಡಿದರೆ ಮಾರ್ಗ ಮಧ್ಯದಲ್ಲಿ ಸಿಲುಕಬಾರದು ಎಂಬ ಉದ್ದೇಶದಿಂದ ಹೆಂಡತಿ-ಮಕ್ಕಳ ಜತೆ ದಿನನಿತ್ಯ ಬಳಕೆ ವಸ್ತುಗಳು, ಜಾನುವಾರುಗಳನ್ನು ಟ್ರಕ್ ಮತ್ತು ಟ್ರಾೃಕ್ಟರ್‌ನಲ್ಲಿ ತುಂಬಿಕೊಂಡು ತವರಿನತ್ತ ತೆರಳುತ್ತಿದ್ದಾರೆ.

    ಕೆಲ ಕಾರ್ಮಿಕರು ಭಯದಲ್ಲಿಯೇ ದಿನ ದೂಡುವ ಪ್ರಸಂಗ ಬಂದೊದಗಿದೆ. ಪ್ರಸಕ್ತ ಸಾಲಿನ ಕಬ್ಬು ನುರಿಯುವ ಹಂಗಾಮು ಮುಕ್ತಾಯದ ಹಂತಕ್ಕೆ ಬಂದಿದೆ. ಮಾಹರಾಷ್ಟ್ರದಿಂದ ಅಕ್ಟೋಬರ್ ತಿಂಗಳಲ್ಲಿ ಕರ್ನಾಟಕಕ್ಕೆ ಆಗಮಿಸಿದ್ದ ಕಬ್ಬು ಕಟಾವು ಕಾರ್ಮಿಕರು ಕರೊನಾ ಅಂಜಿಕೆಯಿಂದ ಎರಡು ದಿನಗಳಿಂದ ಸ್ವ-ಗ್ರಾಮಗಳಿಗೆ ತೆರಳುತ್ತಿದ್ದಾರೆ.

    ಪ್ರಯಾಸದಜೀವನ: ಒಂದು ಗುಂಪಿನಲ್ಲಿ 15ರಿಂದ 20 ಜನ ಕೂಲಿಗಳಿರುವ ಅವರ ಬದುಕೇ ವಿಲಕ್ಷಣ. ಕಬ್ಬು ಕಟಾವಿಗೆ ಹೋಗುವ ಪ್ರದೇಶದಲ್ಲಿಯೇ ಮೂರುಕಲ್ಲಿನ ಒಲೆ, ವಾಸ್ತವ್ಯಕ್ಕೆ ರವದಿಯ ಮನೆ, ಜತೆಗೆ ಅಲ್ಯೂಮಿನಿಯಂ ಬಕೆಟ್, ಧಾನ್ಯ, ಮಸಾಲೆ,
    ಅಡುಗೆ ಪದಾರ್ಥ ಸೇರಿ ಕೆಲ ಪಾತ್ರೆಗಳೊಂದಿಗೆ ಅವರ ಸಂಸಾರ ಸಾಗುತ್ತದೆ. ದಿನವೀಡಿ ಕುಟುಂಬದ ಸದಸ್ಯರೆಲ್ಲ ಕಬ್ಬು ಕಟಾವು ಮಾಡುತ್ತಾರೆ. ರಾತ್ರಿ ಬರುವ ಲಾರಿಗಳಿಗೆ ಕಬ್ಬು ತುಂಬಿ ಕಾರ್ಖಾನೆಗೆ ಸಾಗಿಸಲು ಚಳಿ ಲೆಕ್ಕಿಸದೆ ದುಡಿಯುತ್ತಾರೆ.

    ಸತತ ನಾಲ್ಕು ತಿಂಗಳು ಇಲ್ಲಿಯೇ ಕಾಯಕ

    ಮಾ. 21ರಂದು ಚಿದಾನಂದಕೋರೆ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಹಂಗಾಮು ಮುಕ್ತಾಯಗೊಳಿಸಿದೆ. 8-10 ದಿನಗಳಲ್ಲಿ ಬಹುತೇಕ ಎಲ್ಲ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಹಂಗಾಮು ಮುಗಿಸಲಿವೆ. ಗುತ್ತಿಗೆ ಅವಧಿ ಪೂರ್ಣಗೊಂಡ ಕಾರ್ಮಿಕರು ಮನೆಗಳತ್ತ ಮುಖ ಮಾಡುತ್ತಿದ್ದಾರೆ. ಜೀವನ ಸಾಗಿಸಲು ಕಬ್ಬು ಕಟಾವು ಮಾಡುವ ಕಾರ್ಮಿಕರು ಜಿಲ್ಲೆಯಿಂದ ಜಿಲ್ಲೆಗೆ ಮತ್ತು ರಾಜ್ಯದ ಗಡಿಭಾಗದಿಂದ ತಮ್ಮ ಸಾಮಗ್ರಿಗಳೊಂದಿಗೆ ಮಹಾರಾಷ್ಟ್ರದ ಭೀಡ, ಉಸ್ಮಾನಾಬಾದ, ಜತ್ತ, ಪಂಡರಪುರ ಇತರ ಜಿಲ್ಲೆಗಳಿಂದ ಕಬ್ಬು ಕಟಾವಿಗೆ ಕುಟುಂಬ ಸಮೇತ ಆಗಮಿಸಿದ್ದರು. ಸತತ 4 ತಿಂಗಳು ಕಬ್ಬು ಕಟಾವು ಮಾಡಿದ್ದಾರೆ.

    ಕಳೆದ ಸಾಲಿನಲ್ಲಿ ಕಟಾವು ಮಾಡಿ ಮನೆಗೆ ತೆರಳುವಾಗ ಕೇಂದ್ರ ಸರ್ಕಾರ ಲಾಕ್‌ಡೌನ್ ಜಾರಿ ಮಾಡಿದ್ದರಿಂದ ಸ್ವ-ಗ್ರಾಮಕ್ಕೆ ತೆರಳಲು ಪರದಾಡಬೇಕಾಯಿತು. ಈ ವರ್ಷ ಮಹಾರಾಷ್ಟ್ರದಲ್ಲಿ ಕರೊನಾ ಹೆಚ್ಚಾಗುತ್ತಿದೆ. ಬೇಗ ಮನೆಗಳಿಗೆ ಸೇರಲು ಪ್ರಯತ್ನಿಸುತ್ತಿದ್ದೇವೆ.
    | ಅಮೋಲ ಮುರಾರಿ, ಸುನೀತಾ ಮುರಾರಿ ಕಾರ್ಮಿಕರು ಭೀಡ ಜಿಲ್ಲೆ

    | ಸಂತೋಷಕುಮಾರ ಕಾಮತ, ಮಾಂಜರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts