More

    ನ್ಯಾಯಬೆಲೆ ಅಂಗಡಿಗೆ ಮುಗಿಬೀಳುತ್ತಿರುವ ಜನ, ಪಡಿತರ ಚೀಟಿದಾರರಿಗೆ ಅಕ್ಕಿ ವಿತರಣೆ

    ಮಂಗಳೂರು: ಸರ್ಕಾರದ ಆದೇಶ ನಿರ್ಲಕ್ಷಿಸಿ ಜನರು ಪಡಿತರ ಸಾಮಗ್ರಿ ಖರೀದಿಗೆ ಮುಗಿಬೀಳುತ್ತಿರುವುದು ಇಲಾಖೆ ಅಧಿಕಾರಿಗಳು ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕರು- ಸಿಬ್ಬಂದಿಗೆ ತಲೆನೋವು ತಂದಿದೆ.
    ಪಡಿತರ ಖರೀದಿ ವೇಳೆಯಲ್ಲೂ ಸಾಮಾಜಿಕ ಅಂತರ ಪಾಲಿಸಬೇಕು ಎನ್ನುವುದು ಸರ್ಕಾರದ ಸೂಚನೆ. ಆದರೆ ಜನರು ಹಿಂದೆಂದೂ ಕಾಣದ ರೀತಿ ಜನ ಮುಗಿಬೀಳುತ್ತಿದ್ದಾರೆ.

    ದ.ಕ ಜಿಲ್ಲೆಯಲ್ಲಿ ಏ .2ರಂದು ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ವಿತರಣೆ ಆರಂಭಗೊಂಡಿದ್ದು, ವಾರದೊಳಗೆ 1,35,681 (ಶೇ.51) ಕಾರ್ಡುದಾರರಿಗೆ ವಿತರಣೆ ಪೂರ್ಣಗೊಂಡಿದೆ. ಸಾಮಾನ್ಯ ಸಮಯದಲ್ಲಿ ಇಷ್ಟು ದಿನಗಳ ಅವಧಿಯಲ್ಲಿ ಸುಮಾರು ಶೇ.2 ಮಾತ್ರ ಅಕ್ಕಿ ವಿತರಣೆಯಾಗಿರುತ್ತಿತ್ತು , ಈಗ ಜನರ ಒತ್ತಡ ಅಧಿಕವಾಗಿದೆ ಎನ್ನುತ್ತಾರೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.
    ಜನ ಆತಂಕ ಪಡುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಪಡಿತರ ಅಕ್ಕಿಯ ಸಂಗ್ರಹ ಸಾಕಷ್ಟಿದ್ದು, ಅರ್ಹ ಫಲಾನುಭವಿಗಳು ತಿಂಗಳ ಕೊನೆಯವರೆಗೂ ಕೊಂಡೊಯ್ಯಲು ಅವಕಾಶವಿದೆ ಎನ್ನುವುದು ಅವರ ಮನವಿ.

    ಉಡುಪಿ ಜಿಲ್ಲೆಯ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ. ಪ್ರಸ್ತಾವಿತ ಅವಧಿಯಲ್ಲೇ ಇಲ್ಲಿನ 94 ಸಾವಿರ (ಶೇ.48) ಕಾರ್ಡುದಾರರು ಅಕ್ಕಿ ಪಡೆದಿದ್ದಾರೆ.ಅಲ್ಲೂ ಅಷ್ಟೇ ಮೊದಲ ವಾರ ಸುಮಾರು ಶೇ.2 ಜನರು ಮಾತ್ರ ಖರೀದಿ ಮಾಡುತ್ತಿದ್ದರು. ಎಪಿಲ್, ಬಿಪಿಎಲ್ ಒಳಗೊಂಡು 1,91,000 ಕಾರ್ಡುಗಳು ಉಡುಪಿಯಲ್ಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಪಿಎಲ್ 1,59,993, ಬಿಪಿಎಲ್ 2,50,749 ಪಡಿತರ ಕಾರ್ಡುದಾರರು ಇದ್ದಾರೆ.

    ಕರಾವಳಿ ಭಾಗದ ಜನ ಪಡಿತರ ಅಕ್ಕಿ ಹೊರಗೆ ಮಾರಾಟ ಮಾಡುತ್ತಾರೆ ಎಂಬ ಆರೋಪಗಳಿವೆ. ಅದಕ್ಕೆ ಕಾರಣ ಪಡಿತರ ಮೂಲಕ ಬೆಳ್ತಿಗೆ ಅಕ್ಕಿ ವಿತರಣೆ ಮಾಡುವುದು. ಜನ ನ್ಯಾಯಬೆಲೆ ಅಂಗಡಿಗಳಲ್ಲಿ ದೊರೆಯುವ ಅಕ್ಕಿಯನ್ನು ಅಂಗಡಿಗಳಲ್ಲಿ ಮಾರಾಟ ಮಾಡಿ ಕುಚ್ಚಲು ಕಜೆ ಅಕ್ಕಿಯನ್ನು ಖರೀದಿಸುತ್ತಾರೆ. ಪಡಿತರ ಮೂಲಕ ಕೆಲವೊಮ್ಮೆ ವಿತರಣೆಯಾಗುವ ಕುಚ್ಚಲು ಅಕ್ಕಿಯ ಗುಣಮಟ್ಟದ ಬಗ್ಗೆಯೂ ಇಲ್ಲಿನ ಜನ ತಕರಾರು ಇದೆ. ರುಚಿ ಮಾತ್ರವಲ್ಲ, ಇದರ ಊಟದಿಂದ ಆರೋಗ್ಯದಲ್ಲಿ ಏರುಪೇರು ಆಗುತ್ತದೆ ಎನ್ನುವುದು ಜನರ ದೂರು.

    ಕುಚ್ಚಲು ಅಕ್ಕಿಗೆ ಬೇಡಿಕೆ: ಈ ತಿಂಗಳು ಕಾರ್ಡುದಾರರಿಗೆ ಬೆಳ್ತಿಗೆ ಅಕ್ಕಿ ವಿತರಿಸಲಾಗಿದೆ. ಮುಂದಿನ ಸ್ಟಾಕ್ ಬರುವ ಸಂದರ್ಭ ಶೇ.80 ಕುಚ್ಚಿಲು ಹಾಗೂ ಶೇ.20 ಬೆಳ್ತಿಗೆ ಅಕ್ಕಿ ಪೂರೈಸುವಂತೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ (ದಕ್ಷಿಣ ಕನ್ನಡ ಮತ್ತು ಉಡುಪಿ) ಜಂಟಿ ನಿರ್ದೇಶಕ ಡಾ.ಬಿ.ಟಿ.ಮಂಜುನಾಥ ವಿಜಯವಾಣಿಗೆ ತಿಳಿಸಿದ್ದಾರೆ.

    ಪಡಿತರ ಸಾಮಗ್ರಿ ವಿತರಣೆ ಸುಗಮವಾಗಿ ನಡೆಯುತ್ತಿದೆ. ಸಾಮಾನ್ಯವಾಗಿ ಜಿಲ್ಲೆಯಲ್ಲಿ ಶೇ.87- 88ರಷ್ಟು ಫಲಾನುಭವಿಗಳು ಪಡಿತರ ಪಡೆಯುತ್ತಾರೆ. ಹೆಚ್ಚಿನ ಜನರು ಮನೆಯಲ್ಲೇ ಇರುವುದು ಮತ್ತು ಆಹಾರ ಸಾಮಗ್ರಿ ಶೇಖರಿಸಿಡುವ ಹಂಬಲದಿಂದ ಇರಬಹುದು. ಈ ಬಾರಿ ಪಡಿತರ ಅಕ್ಕಿಯನ್ನು ಜನರು ಸ್ವಲ್ಪ ಬೇಗನೇ ಪಡೆದುಕೊಂಡಿದ್ದಾರೆ.
    ಬಿ.ಟಿ.ಮಂಜುನಾಥ, ಜಂಟಿ ನಿರ್ದೇಶಕರು, ನಾಗರಿಕ ಸರಬರಾಜು ಇಲಾಖೆ (ದಕ್ಷಿಣ ಕನ್ನಡ ಮತ್ತು ಉಡುಪಿ).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts