More

    ಲಾಕ್‌ಡೌನ್ ಇಫೆಕ್ಟ್, ಮದ್ಯ ಸಿಗದೆ ಆತ್ಮಹತ್ಯೆಗೆ ಶರಣಾಗುತ್ತಿರುವ ವ್ಯಸನಿಗಳು!

    ಅವಿನ್ ಶೆಟ್ಟಿ, ಉಡುಪಿ
    ಕರೊನಾ ವೈರಾಣು ತಡೆಗಟ್ಟಲು ಕೇಂದ್ರ ಸರ್ಕಾರ ದೇಶವನ್ನೇ ಲಾಕ್‌ಡೌನ್ ಮಾಡಿದೆ. ಪರಿಣಾಮ, ಎಲ್ಲ ವಿಧದ ಮದ್ಯದ ಅಂಗಡಿಗಳು ಮುಚ್ಚಿವೆ. ಅಕ್ರಮ ಮದ್ಯ ಮಾರಾಟಕ್ಕೂ ಬ್ರೇಕ್ ಬಿದ್ದಿದೆ. ಪ್ರತಿನಿತ್ಯ ಮದ್ಯ ಸೇವಿಸುವ ಮದ್ಯ ವ್ಯಸನಿಗಳು ತೀವ್ರ ಖಿನ್ನತೆಗೆ ಒಳಗಾಗಿದ್ದಾರೆ. ದಿನಂಪ್ರತಿ ಬೆಳಗ್ಗೆ, ಮಧ್ಯಾಹ್ನ, ಸಾಯಂಕಾಲ ಮದ್ಯ ಸೇವಿಸುವ ವರ್ಗವನ್ನು ಈ ಸಮಸ್ಯೆ ಗಂಭೀರವಾಗಿ ಕಾಡುತ್ತಿದೆ.
    ಮದ್ಯ ಸಿಗದೆ ಅಸಹಾಯಕರಾಗಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವ ಪ್ರಕರಣ ನಡೆಯುತ್ತಿದೆ. ಕೆಲವರಿಗೆ ಲಾಕ್‌ಡೌನ್ ಮತ್ತು ಕರೊನಾ ಸಾಂಕ್ರಮಿಕ ರೋಗದ ಅರಿವೇ ಇಲ್ಲವಾಗಿದ್ದು, ಮದ್ಯಪಾನದ್ದೇ ಚಿಂತೆಯಾಗಿದೆ. ಈ ಬಗ್ಗೆ ಸರಿಯಾಗಿ ತಿಳಿಯದೆ ಬೆಳಗ್ಗೆ, ಸಾಯಂಕಾಲ ಬಸ್ ನಿಲ್ದಾಣ, ಪ್ರಮುಖ ಬೀದಿಗಳಲ್ಲಿರುವ ಮದ್ಯದಂಗಡಿಗಳು ತೆರೆಯಬಹುದು, ಮದ್ಯ ಖರೀದಿಸಬಹುದು ಎಂದು ಮದ್ಯಪಾನಿಗಳು ಕಾತರದಿಂದ ಕಾಯುವಂತಾಗಿದೆ. ಈ ನಡುವೆ ಪೊಲೀಸರಿಂದ ಲಾಠಿ ಪೆಟ್ಟನ್ನೂ ತಿನ್ನುತ್ತಿದ್ದಾರೆ. ಮದ್ಯ ಸಿಗದ ಪರಿಣಾಮ ಮದ್ಯಪಾನಿಗಳು ಊಟ, ನಿದ್ದೆಯನ್ನೂ ಸರಿಯಾಗಿ ಮಾಡದೆ ಮನೆಯಲ್ಲೂ ಗಲಾಟೆ, ಜಗಳ ಮಾಡುತ್ತಿರುವ ಘಟನೆಗಳು ನಡೆಯುತ್ತಿವೆ.

    ಅವಿಭಜಿತ ದ.ಕದಲ್ಲಿ ಐವರು ಆತ್ಮಹತ್ಯೆ: ಲಾಕ್‌ಡೌನ್ ಹಿನ್ನೆಲೆಯಲ್ಲಿ ದೇಶಾದ್ಯಂತ ಮದ್ಯ ಸಿಗದೆ ಮದ್ಯವ್ಯಸನಿಗಳು ಆತ್ಮಹತ್ಯೆ ಶರಣಾದ ಘಟನೆಗಳು ವರದಿಯಾಗುತ್ತಿವೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೆ ಐವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮದ್ಯಪಾನ ಚಟ ಹೊಂದಿದ್ದ, ಕಾರ್ಕಳ ದುರ್ಗಾ ಗ್ರಾಮದ ತೆಳ್ಳಾರು ಬೆದ್ರಪಲ್ಕೆ ನಿವಾಸಿ ನಾಗೇಶ್ ಆಚಾರ್ಯ(37), ದಕ್ಷಿಣ ಕನ್ನಡ ಜಿಲ್ಲೆಯ ಕಡಬ ನಿವಾಸಿ ಟೋನಿ ಥಾಮಸ್(50), ಉಡುಪಿ ಜಿಲ್ಲೆ ಉದ್ಯಾವರ ಬೋಳಾರಗುಡ್ಡೆ ನಿವಾಸಿ ಗಣೇಶ(42), ಹೆಮ್ಮಾಡಿ, ಸಂತೋಷ ನಗರ ನಿವಾಸಿ ರಾಘವೇಂದ್ರ(37), ಕಾಪು ಪಡುಗ್ರಾಮದ ರಾಮ ನಗರ ನಿವಾಸಿ ಶಶಿಧರ ಸುವರ್ಣ(46) ಆತ್ಮಹತ್ಯೆ ಮಾಡಿಕೊಂಡವರು.

    ವೈದ್ಯರು ಏನು ಹೇಳುತ್ತಾರೆ ?:ಪ್ರತೀದಿನ ಮದ್ಯಪಾನ ಮಾಡುವವರಿಗೆ ಮದ್ಯ ಸಿಗದಿದ್ದಾಗ ಸಮಸ್ಯೆಯಾಗುತ್ತದೆ. ಎರಡು ಹಂತಗಳಲ್ಲಿ ವರ್ತನೆ ಗುರುತಿಸುವ ಮೂಲಕ ಆರೋಗ್ಯ ಸುಧಾರಣೆಗೆ ತರಬಹುದು ಎಂದು ಮನೋವೈದ್ಯ ಡಾ.ಪಿ.ವಿ ಭಂಡಾರಿ ತಿಳಿಸಿದ್ದಾರೆ. ಸರಳ ಚಿಹ್ನೆಗಳ ಲಕ್ಷಣ: ಕೈಕಾಲು ನಡುಗುವುದು, ಸರಿಯಾಗಿ ನಿದ್ರೆ ಬಾರದೆ ಇರುವುದು, ಚಡಪಡಿಸುತ್ತಿರುವುದು. ಸಂಕೀರ್ಣ ಚಿಹ್ನೆಗಳ ಲಕ್ಷಣ: ಪ್ರಾಣಿಗಳನ್ನು, ವಿಕೃತ ರೂಪವನ್ನು ಕಂಡಹಾಗೆ ಭಾವಿಸುವುದು. ಯಾರೋ ಕರೆದಂತೆ, ಕೂಗಿದ ಹಾಗೆ ಅನಿಸುವುದು, ವಿಪರೀತ ಭಯ, ಫಿಡ್ಸ್ ಬರುವುದು. ಸರಳ ಚಿಹ್ನೆಗಳ ಲಕ್ಷಣ ಕಾಣಿಸಿಕೊಂಡರೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ. ಪ್ರತೀದಿನ ಜಾಸ್ತಿ ನೀರು ಕುಡಿಯುತ್ತಿರಬೇಕು. 3-4 ದಿನದಲ್ಲಿ ಇದು ಸರಿಯಾಗಲಿದೆ. ಸಂಕೀರ್ಣ ಚಿಹ್ನೆಗಳ ಲಕ್ಷಣ ವ್ಯಕ್ತಿಯ ಜೀವಕ್ಕೆ ಆಪಾಯದ ಸ್ಥಿತಿ. ತುರ್ತು ವೈದ್ಯಕೀಯ ಚಿಕಿತ್ಸೆ, ಸಲಹೆ ಅಗತ್ಯ ಇರುತ್ತದೆ.

    ಮದ್ಯಪಾನ ಮಾಡುವವರಿಗೆ ಸಂಕೀರ್ಣ ಚಿಹ್ನೆಗಳ ಲಕ್ಷಣ ಕಂಡುಬರುತ್ತಿದ್ದಲ್ಲಿ, ತುರ್ತು ಚಿಕಿತ್ಸೆ ಅಗತ್ಯ. ಮದ್ಯವ್ಯಸನಿಗಳಿಗೆ ಮದ್ಯಪಾನದ ಸೇವನೆ ಬಿಡಲು ಈ ಸಮಯ ಉತ್ತಮ ಅವಕಾಶವಾಗಿದೆ. ಕರೊನಾ ತಡೆಗಾಗಿ ಯಾರು ಸಹ ಮನೆಯಿಂದ ಹೊರ ಬಾರದೆ ಜಾಗ್ರತೆ ವಹಿಸಬೇಕು.
    – ಡಾ.ಪಿ.ವಿ ಭಂಡಾರಿ, ಮನೋವೈದ್ಯ, ವೈದ್ಯಕೀಯ ನಿರ್ದೇಶಕ, ಬಾಳಿಗ ಆಸ್ಪತ್ರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts