More

    ಬದುಕಿಗೆ ಆಸರೆ ನಿರಾಶ್ರಿತ ಕೇಂದ್ರ

    ಬದುಕಿಗೆ ಆಸರೆ ನಿರಾಶ್ರಿತ ಕೇಂದ್ರ

    ಚಿಕ್ಕಮಗಳೂರು: ಕರೊನಾ ಲಾಕ್​ಡೌನ್ ಸಂಕಷ್ಟಕ್ಕೆ ಸಿಲುಕಿದ ನಿರ್ಗತಿಕರು, ಅಸಹಾಯಕರು, ಅಶಕ್ತರು, ಮದ್ಯ ವ್ಯಸನಿಗಳು ಹಾಗೂ ಬುದ್ಧಿಮಾಂಧ್ಯರಿಗೆ ಆಸರೆಯಾದ ನಿರಾಶ್ರಿತರ ಶಿಬಿರ ಅವರಿಗೆಲ್ಲ ಉದ್ಯೋಗದ ಮಾರ್ಗ ತೋರಿಸುವ ಮೂಲಕ ನಗರವನ್ನು ಭಿಕ್ಷುಕರಿಂದ ಮುಕ್ತವಾಗಿಸುವತ್ತ ಹೆಜ್ಜೆ ಇಟ್ಟಿದೆ.

    ಸ್ನಾನವಿಲ್ಲದೆ ಕೊಳಕಾಗಿದ್ದವರನ್ನು ಶಿಬಿರಕ್ಕೆ ಕರೆತಂದು ಶೇವಿಂಗ್, ಕಟ್ಟಿಂಗ್ ಜತೆಗೆ ಸ್ನಾನವನ್ನೂ ಅಸಹ್ಯಪಟ್ಟುಕೊಳ್ಳದೆ ಮಾಡಿಸಿ, ಉಗುರಿನಿಂದ ಆರಂಭವಾಗಿ ಕಿವಿಯ ಗುಗ್ಗೆ ತೆಗೆಯುವವರೆಗೂ ಸೇವೆ ಮಾಡಿರುವ ಸ್ವಯಂಸೇವಕರ ಮನಸ್ಥಿತಿಯೇ ವಿಶೇಷ.

    ಹಲವರು ಶಿಬಿರದ ವಾತಾವರಣದಲ್ಲಿ ಸ್ಪೂರ್ತಿ ಪಡೆದು ಉದ್ಯೋಗದಲ್ಲಿ ನೆಲೆ ಕಂಡುಕೊಂಡಿದ್ದರೆ, ಇನ್ನು ಕೆಲವರು ಪರಿವರ್ತನೆ ಪಡೆದಿದ್ದಾರೆ. ರಾತ್ರೋರಾತ್ರಿ ಶಿಬಿರದಿಂದ ಕಾಲ್ಕಿತ್ತವರನ್ನು ಕರೆತಂದು ಮತ್ತೆ ಮನವೊಲಿಸಿದ ನಿದರ್ಶನವೂ ಇಲ್ಲಿದೆ. ಈ ಮಹತ್ಕಾರ್ಯಕ್ಕೆ ನಿಂತ ರೂಬೆನ್ ಮೋಸಸ್ ನೇತೃತ್ವದ ನಿಸ್ವಾರ್ಥ ಮನಸಿನ ಯುವಕರ ತಂಡದ ಮಾನವೀಯತೆ ಇಲ್ಲಿ ಅನಾವರಣಗೊಂಡಿದೆ.

    ನಗರದ ಎಐಟಿ ವೃತ್ತದ ಸಮೀಪ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಿರಾಶ್ರಿತರಿಗೆ ಆಸರೆ ನೀಡಲಾಗಿದೆ. ಸ್ವಯಂ ಸೇವಕರು ಸೇರಿದಂತೆ ಹತ್ತಾರು ದಾನಿಗಳು ಔದಾರ್ಯದಿಂದ ಕೈಜೋಡಿಸಿದ ಫಲವಾಗಿ 38ಕ್ಕೂ ಹೆಚ್ಚು ನಿರ್ಗತಿಕರು ಹಾಗೂ ಅಸಹಾಯಕರಿಗೆ ಈ ಶಿಬಿರ ಭರವಸೆಯ ಊರುಗೋಲು.

    ಸುಮಾರು ಒಂದೂವರೆ ತಿಂಗಳು ಒಗ್ಗೂಡಿ ಬೆಳೆದ ಒಡಹುಟ್ಟಿದವರಂತಿರುವವರು ಲಾಕ್​ಡೌನ್ ಸಡಿಲಗೊಳ್ಳುತ್ತಿದ್ದಂತೆ ಶಿಬಿರದಿಂದ ಹೊರ ನಡೆಯುವುದು ಅನಿವಾರ್ಯ. ಹೀಗಿರುವಲ್ಲಿ ದುಡಿವವರಿಗೆ ಉದ್ಯೋಗ ಕಲ್ಪಿಸುವುದು, ವೃದ್ಧರಿಗೆ ವೃದ್ಧಾಶ್ರಮದಲ್ಲಿ ಆಸರೆ ಒದಗಿಸುವುದು, ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆ ಕೊಡಿಸುವುದು, ಕೆಲವು ಭಿಕ್ಷುಕರ ಬಂಧುಗಳನ್ನು ಹುಡುಕಿ ಮತ್ತೆ ಕುಟುಂಬಕ್ಕೆ ಸೇರಿಸುವ ಚಿಂತನೆ ನಡೆಸಿದ ಯುವಕರ ತಂಡ ಅದರಲ್ಲಿ ಯಶಸ್ವಿಯೂ ಆಗಿದೆ. ಶಿಬಿರ ಮುಚ್ಚಿದರೂ ಅವರು ಮತ್ತೆ ಬೀದಿ ಪಾಲಾಗಬಾರದು ಎನ್ನುವುದು ಶಿಬಿರದ ರೂವಾರಿಗಳ ಉದ್ದೇಶ.

    ದಿಕ್ಕು ತೋಚದ ಕುಟುಂಬಕ್ಕೆ ಆಶ್ರಯ: ಇಬ್ಬರು ಪುಟ್ಟ ಮಕ್ಕಳಿರುವ ದಾದು ಮತ್ತು ಅಂಜು ಕುಟುಂಬ ದಾವಣಗೆರೆಯ ರಾಣೆಬೆನ್ನೂರಿನಿಂದ ಕೆಲಸ ಅರಸಿ ಬಂದವರು. ಅನಿರೀಕ್ಷಿತವಾಗಿ ಎದುರಾದ ಲಾಕ್​ಡೌನ್ ವೇಳೆ ಆಸರೆಯ ಸೆಲೆಯಾದ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆದು 45 ದಿನಗಳ ಶಿಬಿರವಾಸದ ಬಳಿಕ ಇದೀಗ ಕೆಸುವಿನ ಮನೆಯ ಕಾಫಿ ತೋಟದಲ್ಲಿ ರೂಬೆನ್ ಮೋಸಸ್ ತಂಡದ ಪ್ರಯತ್ನದಿಂದ ವಸತಿ ಜತೆಗೆ ಕೆಲಸ ಸಿಕ್ಕಿದೆ. ಮಾಲೀಕರಿಗೂ ಅವರ ಕೆಲಸ ತೃಪ್ತಿ ತಂದಿದೆ. ಮಕ್ಕಳನ್ನು ಶಾಲೆಗೆ ಸೇರಿಸುವ ಚಿಂತನೆ ಸಹ ನಡೆದಿದೆ.

    ನಿತ್ಯ ದುಡಿದು ಅಂದಿನದು ಅಂದಿಗೆ ಎಂದುಕೊಂಡಿದ್ದ ನಾಗೇನಹಳ್ಳಿಯ 67 ವರ್ಷದ ಕೆಂಪಯ್ಯ ಹಾಗೂ ಇಲ್ಲಿನ ಜ್ಯೋತಿ ಸರ್ಕಲ್​ನ ಕೃಷ್ಣಮೂರ್ತಿ ಲಾಕ್​ಡೌನ್ ಊಟವೂ ಇಲ್ಲದೆ ದಾರಿ ಕಾಣದಾದಾಗ ನೆರವಿಗೆ ಬಂದದ್ದು ಈ ಶಿಬಿರ. ದುಡಿಯಲು ಸಿದ್ಧರಿರುವ ಕೆಂಪಯ್ಯ ಹಾಗೂ ಕೃಷ್ಣಮೂರ್ತಿಗೆ ಶಿಬಿರದ ಮುಖ್ಯಸ್ಥರ ಪ್ರಯತ್ನದಿಂದ ಸಖರಾಯಪಟ್ಟಣ ಸಮೀಪದ ಬುಕ್ಕಸಾಗರದ ಪ್ರವೀಣ್​ಕುಮಾರ್ ತೋಟದಲ್ಲಿ ಕೆಲಸ ಸಿಕ್ಕಿದೆ.

    ತಮಿಳುನಾಡಿನ ಸೇಲಂ ಜಿಲ್ಲೆಯ ಅಜಯ್ ನಗರದ ರೈಲ್ವೆ ನಿಲ್ದಾಣದಲ್ಲಿ ಪಾರ್ಶ್ವವಾಯು ಪೀಡಿತನಾಗಿ ಬಿದ್ದಿದ್ದ. ಈತನನ್ನು ಕರೆತಂದು ವೈದ್ಯಕೀಯ ಚಿಕಿತ್ಸೆ ಒದಗಿಸಿ ಈಗ ಸಂಪೂರ್ಣ ಗುಣಮುಖನಾಗಿರುವ ಈತ ನಗರದ ಚಿಪ್ಸ್ ಅಂಗಡಿಯ ಕೆಲಸಗಾರ. ತಮಿಳು ಮಾತ್ರ ಆತನಿಗೆ ತಮಿಳು ಮೂಲದವರೇ ಮಾಲೀಕರು ಎನ್ನುವುದು ಆತನಿಗೂ ಸಮಾಧಾನ.

    ಆರ್​ಎಂಪಿ ವೈದ್ಯರು ಈಗ ಅನಾಥ: 106ರ ಹರೆಯದ ಅಬ್ದುಲ್ ನಜೀರ್ ಅಹಮ್ಮದ್ ಹಿಂದೆ ಆರ್​ಎಂಪಿ ವೈದ್ಯರಂತೆ. ಇಳಿವಯಸ್ಸಿನಲ್ಲಿ ಅನಾಥರಾದವರು. ಕೆಎಸ್​ಆರ್​ಟಿಸಿಯಲ್ಲಿ ಉದ್ಯೋಗಿಯಾಗಿದ್ದ ವೆಂಕಟೇಶಯ್ಯ ಇದ್ದ ಹಣ ಮುಗಿದ ಬಳಿಕ ಮನೆಯಿಂದ ಪರಿತ್ಯಕ್ತರಾದವರು. ಹಾಗೆಯೇ ರಾಮಣ್ಣ ಹಾಗೂ ಮಲ್ಲಮ್ಮ ಇನ್ನೊಂದು ಬಗೆಯ ಆಘಾತ ಅನುಭವಿಸಿದವರು. ಇವರನ್ನು ವೃದ್ಧಾಶ್ರಮಕ್ಕೆ ಸೇರಿಸಲಾಗುತ್ತಿದೆ.

    ಲಾಕ್​ಡೌನ್ ಸಡಿಲಗೊಂಡು ಹೋಟೆಲ್​ಗಳು ಆರಂಭಗೊಂಡರೆ ಇಲ್ಲಿರುವ ನಾಲ್ಕೈದು ಜನರಿಗೂ ಉದ್ಯೋಗ ಕೊಡಿಸುವ ಭರವಸೆ ಹಲವು ಮಾಲೀಕರಿಂದ ದೊರಕಿದೆ. ಏಳೆಂಟು ಮಂದಿ ಕಟ್ಟಡ ಕಾರ್ವಿುಕರು ಅವಕಾಶ ಸಿಗುವ ತನಕ ಶಿಬಿರದ ಆಸರೆಯಲ್ಲಿರಲಿದ್ದಾರೆ. ಇನ್ನು ಮನೆ ಮಂದಿ ಇದ್ದರೂ ಇಚ್ಛೆ ಬಂದಂತೆ ಭಿಕ್ಷೆಗೆ ಬರುತ್ತಿದ್ದ ಲಕ್ಷ್ಮಿದೇವಿ, ಯಾರೂ ಇಲ್ಲದ ಬಾಬು ಮತ್ತು ಮೂವರು ಬುದ್ಧಿ ಮಾಂಧ್ಯರನ್ನು ಮಾನಸಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಲಿದ್ದು, ಈಗಾಗಲೇ ಮಾತುಕತೆ ನಡೆದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts