More

    VIDEO | ವಲಸೆ ಅಪರಾಧಿಗಳೆಂದು ಭಾರತೀಯರ ಬಂಧನ… ಬಿಡುಗಡೆ ಕೋರಿ ರಸ್ತೆಗಿಳಿದ ಸ್ಥಳೀಯರು !

    ಲಂಡನ್: ಸ್ಕಾಟಿಷ್ ನಗರವಾದ ಗ್ಲಾಸ್​​ಗೋವ್​​ನಲ್ಲಿ ‘ಶಂಕಿತ ವಲಸೆ ಅಪರಾಧ’ದ ಮೇಲೆ ನಿನ್ನೆ ಇಬ್ಬರು ಭಾರತೀಯರನ್ನು ಬಂಧಿಸುವ ಪ್ರಯತ್ನ ಮಾಡಲಾಯಿತು. ಆದರೆ ನೆರೆಹೊರೆಯವರು ನೂರಾರು ಸಂಖ್ಯೆಯಲ್ಲಿ ಸೇರಿ ಎಂಟು ಗಂಟೆಗಳ ಕಾಲ ರಸ್ತೆಯಲ್ಲಿ ಡಿಟೆನ್ಷನ್ ವ್ಯಾನ್​ಅನ್ನು ಅಡ್ಡಹಾಕಿ ನಡೆಸಿದ ಪ್ರತಿಭಟನೆಯ ನಂತರ, ಅವರನ್ನು ಬಿಡುಗಡೆ ಮಾಡಲಾಯಿತು.

    ಮೂವತ್ತರ ಹರೆಯದ ಒಬ್ಬ ಶೆಫ್ ಸುಮಿತ್ ಸೆಹ್ದೇವ್ ಮತ್ತು ಮೆಕ್ಯಾನಿಕ್ ಲಖ್ವೀರ್ ಸಿಂಗ್ ಎಂಬುವರು 10 ವರ್ಷಗಳಿಂದ ಇಂಗ್ಲೆಂಡಿನಲ್ಲಿದ್ದರು. ಆದರೆ, ಅವರು ವಲಸೆ ಕಾನೂನುಗಳನ್ನು ಸರಿಯಾಗಿ ಪಾಲಿಸಿಲ್ಲ ಎಂಬ ಅನುಮಾನದ ಮೇಲೆ ಗುರುವಾರ ದಿಢೀರನೇ ಸ್ಕಾಟ್ಲೆಂಡ್‌ ಪೊಲೀಸರ ಬೆಂಬಲದೊಂದಿಗೆ ಆರು ಇಂಗ್ಲೆಂಡ್​​ನ ಇಮ್ಮಿಗ್ರೇಷನ್ ಎನ್​​ಫೋರ್ಸ್​ಮೆಂಟ್​ ಅಧಿಕಾರಿಗಳು ಅವರನ್ನು ಗ್ಲ್ಯಾಸ್​​ಗೋದ ಪೊಲೊಕ್‌ಶೀಲ್ಡ್ಸ್ ಪ್ರದೇಶದಲ್ಲಿರುವ ತಮ್ಮ ಮನೆಯಿಂದ ಹೊರಗೆಳೆದು ಜೈಲಿಗೆ ಕರೆದುಕೊಂಡು ಹೋಗಲು ವ್ಯಾನ್‌ಗೆ ಹಾಕಿದರು ಎನ್ನಲಾಗಿದೆ.

    ಆದರೆ ಶೀಘ್ರದಲ್ಲೇ ಅವರನ್ನು ಮುಕ್ತಗೊಳಿಸಲು ನಿಶ್ಚಯ ಮಾಡಿಕೊಂಡ ಸ್ಥಳೀಯ ನಿವಾಸಿಗಳು, ದೊಡ್ಡ ಗುಂಪು ಸೇರಿ ಪ್ರತಿಭಟನೆ ಆರಂಭಿಸಿದರು. ಡಿಟೆನ್ಷನ್​ ವ್ಯಾನ್​ಅನ್ನು ಸುತ್ತುವರಿದು, ‘ರೆಫ್ಯೂಜೀಸ್​ ಆರ್​​ ವೆಲ್ಕಮ್​’, ‘ಕಾಪ್ಸ್​ ಗೋ ಹೋಂ’, ‘ಲೀವ್ ಅವರ್​ ನೈಬರ್ಸ್​’ ಮುಂತಾದ ಫಲಕಗಳನ್ನು ಹಿಡಿದು ಪ್ರದರ್ಶನ ಆರಂಭಿಸಿದರು. ಜೊತೆಗೇ, ಈ ಇಬ್ಬರು ಭಾರತೀಯರನ್ನು ಬಿಡುಗಡೆ ಮಾಡಿಸಲು ಪಾಕಿಸ್ತಾನ ಮೂಲದ ಮಾನವ ಹಕ್ಕುಗಳ ವಕೀಲ ಆಮೆರ್​ ಅನ್ವರ್ ​ಎಂಬುವರು ಕಾನೂನುರೀತ್ಯ ಕ್ರಮ ತೆಗೆದುಕೊಳ್ಳಲು ಆರಂಭಿಸಿದರು ಎನ್ನಲಾಗಿದೆ.

    ಕೊನೆಗೆ, ಸ್ಕಾಟ್​​ಲೆಂಡ್​ ಪೊಲೀಸಿನವರು ಜಾಮೀನು ನೀಡಿ ಮನೆಗೆ ಕಳುಹಿಸುವ ನಿರ್ಧಾರ ಮಾಡಿದ್ದು, ಇಬ್ಬರೂ ಬಂಧಮುಕ್ತರಾಗಿ ತಮ್ಮ ವಕೀಲರೊಂದಿಗೆ ಹೊರನಡೆದರು. ನೆರೆದಿದ್ದ ನೂರಾರು ಜನ ಸ್ಥಳೀಯರು ಚಪ್ಪಾಳೆ ಮತ್ತು ಹರ್ಷೋದ್ಗಾರಗಳಿಂದ ಅವರನ್ನು ಸ್ವಾಗತಿಸಿದರು ಎನ್ನಲಾಗಿದೆ. ಆ ಕ್ಷಣದ ವಿಡಿಯೋ ತುಣುಕನ್ನು ಕ್ಲಾಡಿಯ ವೆಬ್​ ಎಂಬುವರು ಟ್ವೀಟ್​ ಮಾಡಿದ್ದಾರೆ.

    “ಈದ್​​ನ ದಿನದಂದು ಗೃಹ ಕಛೇರಿಯವರು ಈ ರೀತಿ ಕ್ರಮ ತೆಗೆದುಕೊಂಡ ಬಗ್ಗೆ ಎಲ್ಲರಿಗೆ ಅಸಮಾಧಾನವಾಯಿತು. ಈ ನಗರವನ್ನು ನಿರಾಶ್ರಿತರ ಬೆನ್ನಿನ ಮೇಲೆ ನಿರ್ಮಿಸಲಾಗಿದೆ. ಈ ನಗರವನ್ನು ನಿರ್ಮಿಸಲು ಅವರು ತಮ್ಮ ರಕ್ತ, ಬೆವರು ಮತ್ತು ಕಣ್ಣೀರನ್ನು ನೀಡಿದ್ದಾರೆ. ನಾವು ಅವರೊಂದಿಗೆ ದೃಢವಾಗಿ ನಿಲ್ಲುತ್ತೇವೆ” ಎಂದು ವಕೀಲ ಅನ್ವರ್ ಐಟಿವಿ ನ್ಯೂಸ್​​ಗೆ ಹೇಳಿದ್ದಾರೆ. (ಏಜೆನ್ಸೀಸ್)

    ವಾಡಿಕೆಗಿಂತ ಮುಂಚೆಯೇ ರಾಜ್ಯಕ್ಕೆ ಮುಂಗಾರು ಆಗಮನ !

    ಸೌದೆಗಾಗಿ ಮರ ಕಡಿಯಲು ಬಿಡೋಲ್ಲ ಎಂದು ಗ್ರಾಮಸ್ಥರ ಪ್ರತಿಭಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts