More

    ರಸ್ತೆ ಅಭಿವೃದ್ಧಿಗೆ ಸ್ವಪ್ರೇರಣೆಯಿಂದ ಜಾಗ ನೀಡಿದ ಸ್ಥಳೀಯರು

    ಗೋಪಾಲಕೃಷ್ಣ ಪಾದೂರು, ಉಡುಪಿ

    ಬೈಲೂರು-ಕೊರಂಗ್ರಪಾಡಿ ರಸ್ತೆ ಅಗಲೀಕರಣಕ್ಕೆ ಸ್ಥಳೀಯರೇ ಸ್ವಯಂಪ್ರೇರಿತವಾಗಿ ಟಿಡಿಆರ್ (ಟ್ರಾನ್ಸ್‌ಫರ್ ಆಫ್ ಡೆವಲಪ್‌ಮೆಂಟ್ ರೈಟ್) ವ್ಯವಸ್ಥೆ ಅಡಿಯಲ್ಲಿ ಅಗತ್ಯ ಭೂಮಿ ನೀಡಿದ್ದು, ಗುರುವಾರ ಶಾಸಕ ಕೆ. ರಘುಪತಿ ಭಟ್ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

    ರಸ್ತೆ ಕಿರಿದಾಗಿದ್ದ ಕಾರಣ ಮಳೆಗಾಲದಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಹೀಗಾಗಿ ಅನೇಕ ವರ್ಷದ ಬೇಡಿಕೆ ಈಡೇರಿಕೆಗಾಗಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು 7 ರಿಂದ 8 ಸಭೆಗಳನ್ನು ನಡೆಸಿ ಭೂಮಾಲೀಕರ ಮನವೊಲಿಸಿ ಅಭಿವೃದ್ಧಿಗಾಗಿ ಸಹಕರಿಸುವಂತೆ ಮನವಿ ಮಾಡಿದ ಪರಿಣಾಮ 4.22 ಕೋಟಿ ರೂ. ವೆಚ್ಚದಲ್ಲಿ 1.56 ಕಿ.ಮೀ. ಉದ್ದದ ರಸ್ತೆ ನಿರ್ಮಾಣವಾಗಲಿದೆ. ಈವರೆಗೆ ಕೇವಲ 15 ಫೀಟ್ ಇದ್ದ ರಸ್ತೆಯನ್ನು 40 ಫೀಟ್‌ನಷ್ಟು ಅಗಲೀಕರಣ ಮಾಡಲು ನಗರಾಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.

    ಅಂತಿಮ ಸಭೆ: ರಸ್ತೆ ಅಗಲೀಕರಣ ಬಗ್ಗೆ ಬುಧವಾರ ಸಾಯಂಕಾಲ ಬೈಲೂರು ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಶಾಸಕ ರಘುಪತಿ ಭಟ್, ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ಪೌರಾಯುಕ್ತ ಆನಂದ್ ಸಿ. ಕಲ್ಲೋಳಿಕರ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಕೊರಂಗ್ರಪಾಡಿ ಜಂಕ್ಷನ್‌ನಿಂದ ಮಿಷನ್ ಕಾಂಪೌಂಡ್ ಜಂಕ್ಷನ್‌ವರೆಗೆ ಚರಂಡಿ ಸಹಿತ ಒಟ್ಟು 40 ಅಡಿ ಅಗಲದ ಕಾಂಕ್ರೀಟ್ ರಸ್ತೆಗೆ ಎಲ್ಲ ಸಾರ್ವಜನಿಕರ ಸಹಮತ ಪಡೆದುಕೊಳ್ಳಲಾಯಿತು. ಇದರಂತೆ ಸುಮಾರು 57 ಕುಟುಂಬಗಳು ಭೂಮಿ ನೀಡಲಿವೆ. ನಗರಾಭಿವೃದ್ಧಿ ಪ್ರಾಧಿಕಾರದ ಜಿತೇಶ್ ಉಪಸ್ಥಿತರಿದ್ದರು. ಎಇಇ ಮೋಹನ್ ರಾಜ್, ಜೆಇ ದುರ್ಗಾಪ್ರಸಾದ್ ಕಾಮಗಾರಿ ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ.

    ಏನಿದು ಟಿಡಿಆರ್ ವ್ಯವಸ್ಥೆ?: ಸರ್ಕಾರಿ ಕಾಮಗಾರಿಗೆ ಭೂಮಿ ಬಿಟ್ಟು ಕೊಟ್ಟವರಿಗೆ 40 ರಿಂದ 60 ಅಡಿ ಸರ್ಕಾರ ಟಿಡಿಆರ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಉದಾಹರಣೆ 5 ಸೆಂಟ್ಸ್ ಜಾಗದಲ್ಲಿ 1 ಸೆಂಟ್ಸ್ ಜಾಗ ಬಿಟ್ಟುಕೊಟ್ಟ ಬಳಿಕ ನಗರಾಭಿವೃದ್ಧಿ ಪ್ರಾಧಿಕಾರ ಟಿಡಿಆರ್ ಪ್ರಮಾಣಪತ್ರವನ್ನು ನೀಡುತ್ತದೆ. ಇದರ ಆಧಾರದಲ್ಲಿ 6 ಸೆಂಟ್ಸ್ ಜಾಗದ ಕಟ್ಟಡದ ನಿಯಮ ಕೇವಲ 4 ಸೆಂಟ್ಸ್‌ಗೆ ಅನ್ವಯಿಸುತ್ತದೆ. ಇದಲ್ಲದೆ ಪ್ರಮಾಣಪತ್ರವನ್ನು ಬೇರೆ ಯಾರಿಗಾದರೂ ಪರಭಾರೆ ಮಾಡಬಹುದು. ಇದರಿಂದ ಕಟ್ಟಡ ನಿರ್ಮಾಣ ಮಾಡುವವರು ಹೆಚ್ಚುವರಿ ಒಂದು ಮಹಡಿ ಪಡೆಯಬಹುದು.

    ಬೈಲೂರು-ಕೊರಂಗ್ರಪಾಡಿ ರಸ್ತೆ ಅಗಲೀಕರಣಕ್ಕೆ ಸಹಮತ ವ್ಯಕ್ತಪಡಿಸಿದ ಸ್ಥಳೀಯರಿಗೆ ವಿಶೇಷ ಅಭಿನಂದನೆ ಸಲ್ಲಿಸಬೇಕು. ಕಾಮಗಾರಿ ಈಗಾಗಲೇ ಪ್ರಾರಂಭವಾಗಿದ್ದು, ಮೇ ತಿಂಗಳ ಅಂತ್ಯದ ಒಳಗೆ ಮುಗಿಯಲಿದೆ. ಭೂಮಿ ನೀಡಿದವರಿಗೆ ಸರ್ಕಾರದಿಂದ ಯಾವುದೇ ಪರಿಹಾರ ನೀಡಿಲ್ಲ. ಹೀಗಾಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅವರಿಗೆ ಟಿಡಿಆರ್ ನಿಯಮದಡಿ ಪ್ರಮಾಣಪತ್ರವನ್ನು ಹಸ್ತಾಂತರಿಸಲಾಗುತ್ತದೆ.

    ಕೆ.ರಘುಪತಿ ಭಟ್ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts