More

    ರೈತರಿಗೆ ಶೇ.3ರ ಬಡ್ಡಿದರದಲ್ಲಿ ಸಾಲ – ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಹೇಳಿಕೆ

    ಬಸವನಬಾಗೇವಾಡಿ: ಕೃಷಿ ಸಾಲ ಹಾಗೂ ಕೃಷಿ ಉಪಕರಣಗಳಿಗೆ ಶೇ. 3ರ ಬಡ್ಡಿದರಲ್ಲಿ ಸಾಲ ನೀಡುತ್ತಿದ್ದು, ರೈತರು ಇದರ ಸದುಪಯೋಗ ಪಡೆಯಬೇಕು ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.

    ಪಟ್ಟಣದ ಬಸವನಬಾಗೇವಾಡಿ ತಾಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಸಭಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ 60ನೇ ವಾರ್ಷಿಕ ಮಹಾಸಭಾದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಬ್ಯಾಂಕ್‌ನಿಂದ ಸಾಲ ಪಡೆದ ಗ್ರಾಹಕರು ಸಕಾಲದಲ್ಲಿ ಮರಳಿಸಿದರೆ ಸಹಕಾರಿ ಸಂಘಗಳು ಅಭಿವೃದ್ಧಿಯಾಗುತ್ತವೆ ಎಂದರು. ನಮ್ಮ ದೇಶ ಕೃಷಿ ಪ್ರಧಾನವಾಗಿದೆ. ರೈತ ಮತ್ತು ಕೃಷಿ ಅಭಿವೃದ್ಧಿಯಾದಾಗ ಮಾತ್ರ ದೇಶದಲ್ಲಿನ ಆರ್ಥಿಕ ಸಂಪನ್ಮೂಲ ಹೆಚ್ಚುತ್ತದೆ. ಆ ನಿಟ್ಟಿನಲ್ಲಿ ಬ್ಯಾಂಕಿನಿಂದ ರೈತರಿಗೆ ದ್ರಾಕ್ಷಿ, ದಾಳಿಂಬೆ, ಬಾಳೆ ಸೇರಿ ಕೃಷಿ ಚಟುವಟಿಕೆಗೆ ಅಗತ್ಯ ಉಪಕರಣಗಳ ಖರೀದಿಗೆ ಸಾಲ ನೀಡಲಾಗುತ್ತಿದೆ ಎಂದರು.

    ಬ್ಯಾಂಕ್ ವ್ಯವಸ್ಥಾಪಕ ಎಸ್.ಬಿ.ಮಂತ್ರಿ ಮಾತನಾಡಿ, ನಮ್ಮ ಬ್ಯಾಂಕ್ 41.93 ಕೋಟಿ ರೂ.ದುಡಿಯುವ ಬಂಡವಾಳ ಹೊಂದಿದೆ. ಕೃಷಿ ಸಾಲದೊಂದಿಗೆ ಪಿಗ್ಮಿ ಹಾಗೂ ಠೇವುಗಳ ಮೇಲೆ ದ್ವಿಚಕ್ರ ವಾಹನ, ವ್ಯಾಪಾರ ಸಾಲಗಳನ್ನೂ ನೀಡಲಾಗುತ್ತಿದೆ. ಗ್ರಾಹಕರು ಸಕಾಲದಲ್ಲಿ ಅಸಲು ಮತ್ತು ಬಡ್ಡಿ ಬ್ಯಾಂಕಿಗೆ ಪಾವತಿಸಿದ ಹಿನ್ನೆಲೆಯಲ್ಲಿ ಸಾಲ ವಸೂಲಾತಿಯಲ್ಲಿ 2021/22ನೇ ಸಾಲಿನಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದೆ ಎಂದು ತಿಳಿಸಿದರು.

    ಬ್ಯಾಂಕ್ ಉಪಾಧ್ಯಕ್ಷ ಬಿ.ಎಸ್.ಪೂಜಾರಿ, ನಿರ್ದೇಶಕರಾದ ಎ.ಎ.ಬಿರಾದಾರ, ರಾಮನಗೌಡ ಪಾಟೀಲ, ಬಿ.ಜಿ.ನ್ಯಾಮಗೊಂಡ, ಎಂ.ಬಿ.ಪಾಟೀಲ, ಸಿದ್ದರಾಮ ಪಾತ್ರೋಟಿ, ಎನ್.ಪಿ.ಬಿಸನಾಳ, ಆರ್.ಐ.ಬಾವೂರ, ನಿರ್ದೇಶಕಿ ಯು.ಜಿ.ವಿವೇಕಿ ಉಪಸ್ಥಿತರಿದ್ದರು. ಕಿರಿಯ ಕ್ಷೇತ್ರಾಧಿಕಾರಿ ಎಚ್.ಜಿ.ಜಾಲಗೇರಿ ವರದಿ ವಾಚಿಸಿದರು. ಎಸ್.ಬಿ.ಮಂತ್ರಿ ಸ್ವಾಗತಿಸಿ, ವಂದಿಸಿದರು. ಎ.ಜಿ.ಲಮಾಣಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts