More

    ಸಾಲ ತೀರಿಸಿದರೂ ತಗ್ಗಲಿಲ್ಲ ಹೊರೆ: ಸಾಫ್ಟ್​ವೇರ್ ತಂದ ಫಜೀತಿ, ಭೋಜಾ ತೆರವಿಗಾಗಿ ಪರದಾಟ

    ಹುಬ್ಬಳ್ಳಿ: ಮನೆ, ಆಸ್ತಿ ಖರೀದಿಗಾಗಿ ಪಡೆದಿದ್ದ ಸಾಲವನ್ನು ತೀರಿಸಿದರೂ ಸಾಲದ ಹೊರೆ ಮಾತ್ರ ಇಳಿಯದ ವಿಚಿತ್ರ ಪರಿಸ್ಥಿತಿಗೆ ರಾಜ್ಯದ ಜನ ಕಂಗಾಲಾಗಿದ್ದಾರೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಳೆದ ಆಗಸ್ಟ್​ನಲ್ಲಿ ಕಾವೇರಿ ಸಾಫ್ಟ್​ವೇರ್​ನಲ್ಲಿ ಮಾಡಿದ ಬದಲಾವಣೆಯೇ ಈ ಫಜೀತಿಗೆ ಮೂಲ ಕಾರಣ.

    ಸಾಲ ಮುಕ್ತಾಯ ಪ್ರಮಾಣಪತ್ರ ನೀಡುವ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯ ಮುಖ್ಯಸ್ಥನ ‘ಆಧಾರ್’ ದಾಖಲೆಯನ್ನು ಈಗ ಕಡ್ಡಾಯಗೊಳಿಸಲಾಗಿದೆ. ಆದರೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಮುಖ್ಯಸ್ಥರು ಆಧಾರ್ ದಾಖಲೆ ನೀಡಲು ಹಿಂದೇಟು ಹಾಕುತ್ತಿರುವುದರಿಂದ ಈ ಸ್ಥಿತಿ ನಿರ್ವಣವಾಗಿದೆ. ಜತೆಗೆ ರಾಜ್ಯಾದ್ಯಂತ ಉಪ ನೋಂದಣಿ ಕಚೇರಿಯ ದಾಖಲೆಗಳಲ್ಲಿ ಆಸ್ತಿ ಮೇಲಿನ ಭೋಜಾ (ಪ್ಲೆಜ್ ಅಥವಾ ಹೈಪೊಥಿಕೇಷನ್) ತೆರವುಗೊಳ್ಳದೆ ಲಕ್ಷಾಂತರ ಪ್ರಕರಣಗಳು ಬಾಕಿ ಉಳಿದುಕೊಂಡಿವೆ.

    ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಇತರ ಖಾಸಗಿ ಹಣಕಾಸು ಸಂಸ್ಥೆಗಳ ಗ್ರಾಹಕರು ಈ ಸಂಕಷ್ಟದಿಂದ ಕಂಗಾಲಾಗಿದ್ದಾರೆ. ಹುಬ್ಬಳ್ಳಿಯೊಂದರಲ್ಲಿಯೇ ಇಂತಹ ಸಾವಿರಾರು ಪ್ರಕರಣಗಳಿವೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಒಂದು ಸುತ್ತೋಲೆಗೆ ಪ್ರಾಮಾಣಿಕ ಸಾಲಗಾರನ ಜತೆಗೆ ಸಾಲ ನೀಡಿದ ಬ್ಯಾಂಕ್ ಅಧಿಕಾರಿಗಳು ಪರದಾಡುವಂತಾಗಿದೆ.

    ಬ್ಯಾಂಕ್ ಸಿಬ್ಬಂದಿ ಅಸಮಾಧಾನ: ಸಾಲ ನೀಡುವುದು ಬ್ಯಾಂಕ್, ಸಾಲ ತೀರಿಸುವುದು ಬ್ಯಾಂಕ್​ಗೆ. ಹಾಗೆಯೇ ಮುಕ್ತಾಯ ಪ್ರಮಾಣಪತ್ರ ನೀಡುವುದು ಅಧಿಕಾರಿಯ ಕರ್ತವ್ಯ. ಹಾಗಿದ್ದಲ್ಲಿ ಅಧಿಕಾರಿಯ ಆಧಾರ್ ಪ್ರತಿ, ವೈಯಕ್ತಿಕ ದಾಖಲೆ ಏಕೆ ಎಂಬುದು ಬ್ಯಾಂಕ್ ಅಧಿಕಾರಿಗಳ ಪ್ರಶ್ನೆ. ಆಧಾರ್ ಪ್ರತಿ ನೀಡುವುದರಿಂದ ತಮ್ಮ ದಾಖಲೆ ಸೋರಿಕೆಯಾಗಬಹುದೆಂಬ ಆತಂಕವೂ ಇದೆ. ಮಹಿಳಾ ಅಧಿಕಾರಿಗಳಂತೂ ಆಧಾರ್​ನಲ್ಲಿನ ಮೊಬೈಲ್ ಸಂಖ್ಯೆ, ಇತರ ವಿವರ ಬಹಿರಂಗಗೊಂಡರೆ ಕಿರುಕುಳ ಉಂಟಾಗಬಹುದೆಂಬ ಭಯದಲ್ಲಿದ್ದಾರೆ. ಭೋಜಾ ಕಡಿಮೆಯಾಗದೆ ಬೇರೆಡೆ ಸಾಲ ಸೌಲಭ್ಯ ಸಿಗುವುದಿಲ್ಲ ಎನ್ನುವ ಸಮಸ್ಯೆ ಜನರದ್ದು.

    ಯಾಕೆ ಈ ಷರತ್ತು?: ಸಹಕಾರಿ ಬ್ಯಾಂಕ್ ಅಥವಾ ಖಾಸಗಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಆಸ್ತಿ ಖರೀದಿಸಿದ್ದ ಕೆಲವರು, ಬ್ಯಾಂಕ್ ವ್ಯವಸ್ಥಾಪಕರ ನಕಲಿ ಪ್ರಮಾಣಪತ್ರ ತಯಾರಿಸಿ ಫೋರ್ಜರಿ ಸಹಿ ಮಾಡಿ ಉಪ ನೋಂದಣಿ ಕಚೇರಿಗೆ ತಂದು ಆಸ್ತಿ ಮೇಲಿನ ಭೋಜಾ ತೆರವುಗೊಳಿಸಿಕೊಂಡಿದ್ದರು.

    ಇನ್ನೂ ಕೆಲವರು ತಮ್ಮ ಸಿಬಿಲ್ ದರ ಹೆಚ್ಚಿಸಿಕೊಳ್ಳುವುದಕ್ಕಾಗಿ ಖಾಸಗಿ ಹಣಕಾಸು ಸಂಸ್ಥೆಗಳಿಂದ ಮುಕ್ತಾಯ ಪ್ರಮಾಣಪತ್ರ ಪಡೆದು ಉಪ ನೋಂದಣಿ ಕಚೇರಿಗೆ ಸಲ್ಲಿಸಿರುವ ಹಲವಾರು ಪ್ರಕರಣಗಳು ರಾಜ್ಯದ ವಿವಿಧೆಡೆ ವರದಿಯಾಗಿದ್ದರಿಂದ ಹಣಕಾಸು ಸಂಸ್ಥೆಯ ವ್ಯವಸ್ಥಾಪಕರ ಆಧಾರ್ ಪ್ರತಿ ಪಡೆಯುವುದನ್ನು ಪ್ರಾರಂಭಿಸಲಾಯಿತೆಂದು ನೋಂದಣಿ ಇಲಾಖೆಯ ಉನ್ನತ ಅಧಿಕಾರಿ ವಿಜಯವಾಣಿಗೆ ತಿಳಿಸಿದ್ದಾರೆ.

    ಋಣಭಾರ ಯಥಾಪ್ರಕಾರ

    ಹೊರ ರಾಜ್ಯಗಳಿಂದ ಬಂದ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು ಆಧಾರ್ ನಕಲು ನೀಡಲು ಒಪು್ಪತ್ತಿಲ್ಲ. ಉಪ ನೋಂದಣಿ ಕಚೇರಿಗೆ ತೆರಳಲೂ ಅವರಿಗೆ ಆಗುತ್ತಿಲ್ಲ. ಈ ಮಧ್ಯೆ ಅವರಿಗಿರುವ ಭಾಷೆ ಸಮಸ್ಯೆ ಬೇರೆ. ಈ ವಿಷಯ ಉನ್ನತ ಅಧಿಕಾರಿ ಮತ್ತು ಸಚಿವರ ಗಮನಕ್ಕೆ ಬಂದಿದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ಸಾವಿರಾರು ಪ್ರಕರಣದ ಭೋಜಾ ತೆರವಾಗದೆ ಉಳಿದಿವೆ. ಪ್ರಾಮಾಣಿಕವಾಗಿ ಸಾಲ ಪಾವತಿಸಿದವರು ಋಣಭಾರ ಇಳಿಸಿಕೊಳ್ಳಲಾಗದೇ ಪರದಾಡುತ್ತಿದ್ದಾರೆ.

    ಬದಲಾವಣೆ ಆಗಿದ್ದೇನು?

    ಈ ಮೊದಲು ಸಾಲ ತೀರಿದ ಬಗ್ಗೆ ಬ್ಯಾಂಕ್​ಗಳು ಮುಕ್ತಾಯ ಅಥವಾ ತೀರುವಳಿ ಪ್ರಮಾಣಪತ್ರ ನೀಡಿದ್ದರೆ ಸಾಕಾಗುತ್ತಿತ್ತು. ಅದನ್ನು ಗ್ರಾಹಕ ಉಪ ನೋಂದಣಿ ಕಚೇರಿಗೆ ನೀಡಿದರೆ, ಆತನ ಆಸ್ತಿ ದಾಖಲೆಗಳಲ್ಲಿದ್ದ ಭೋಜಾ ತೆರವುಗೊಳ್ಳುತ್ತಿತ್ತು. ಆದರೆ, ಬದಲಾದ ನಿಯಮದ ಪ್ರಕಾರ ಬ್ಯಾಂಕ್ ಅಧಿಕಾರಿಗಳು ಮುಕ್ತಾಯ ಪ್ರಮಾಣಪತ್ರದ ಜತೆಗೆ ತಮ್ಮ ಆಧಾರ್ ಕಾರ್ಡ್ ನಕಲು ಪ್ರತಿ (ಸೆಲ್ಪ್ ಅಟೆಸ್ಟೆಡ್) ನೀಡುವುದು ಕಡ್ಡಾಯ. ಇಲ್ಲದಿದ್ದರೆ ಪ್ರತಿ ಬಾರಿ ಸಾಲಗಾರರು ಸಾಲ ತೀರಿಸಿದಾಗ ಬ್ಯಾಂಕ್ ಅಧಿಕಾರಿಗಳು ಉಪ ನೋಂದಣಿ ಕಚೇರಿಗೆ ತೆರಳಿ ತಮ್ಮ ಭಾವಚಿತ್ರ, ಆಧಾರ್ ಸಂಖ್ಯೆ ನೀಡಬೇಕಾಗುತ್ತದೆ. ಬ್ಯಾಂಕ್ ಕೆಲಸದ ಮಧ್ಯೆ ಮೇಲಿಂದ ಮೇಲೆ ಉಪ ನೋಂದಣಿ ಕಚೇರಿಗೆ ತೆರಳುವುದು ಅಧಿಕಾರಿಗಳಿಗೆ ಕಷ್ಟವಾಗುತ್ತಿದೆ.

    ಸಾಫ್ಟ್​ವೇರ್​ನಲ್ಲಿ ಬದಲಾವಣೆ ಮಾಡಿದ ನಂತರ ಕೆಲ ಬ್ಯಾಂಕ್ ವ್ಯವಸ್ಥಾಪಕರು ಆಧಾರ್ ಪ್ರತಿ ನೀಡುತ್ತಿದ್ದಾರೆ. ಇನ್ನು ಕೆಲವರು ಬ್ಯಾಂಕ್ ಗುರುತಿನ ಪತ್ರದ ಮೇಲೆ ತಮ್ಮ ಆಧಾರ್ ಮತ್ತು ಮೊಬೈಲ್ ಸಂಖ್ಯೆ ಬರೆದುಕೊಡುತ್ತಿದ್ದಾರೆ. ಆಧಾರ್ ಬೇಕೆಂಬುದು ರಾಜ್ಯಮಟ್ಟದಲ್ಲಿ ಆಗಿರುವ ಆದೇಶ.
    | ಹಿರಿಯ ಉಪ ನೋಂದಣಿ ಅಧಿಕಾರಿ ಹುಬ್ಬಳ್ಳಿ (ಉತ್ತರ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts