More

    ಜಾನುವಾರು ಚಿಕಿತ್ಸೆಗೆ ಪರದಾಟ

    ಸೋಮೇಶ್ವರ ಲದ್ದಿಮಠ ರೋಣ

    ಕೃಷಿ ಪ್ರಧಾನ ತಾಲೂಕು ರೋಣ. ರೈತಾಪಿ ಜನರ ಜೀವನಾಡಿಯಾದ ಹಸುಗಳು ಅಥವಾ ಕುರಿಗಳಿಗೆ ಅನಾರೋಗ್ಯ ಉಂಟಾದರೆ ಚಿಕಿತ್ಸೆ ಕೊಡಿಸಲು ಪಶು ವೈದ್ಯರನ್ನು ಅರಸುತ್ತ ಊರೂರು ತಿರುಗುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಕಾರಣ ಪಶು ವೈದ್ಯರ ಕೊರತೆ.

    ರೈತರು ತಮ್ಮ ದನಕರುಗಳಿಗೆ ಅನಾರೋಗ್ಯ ಉಂಟಾದರೆ ಖಾಸಗಿ ವೈದ್ಯರಿಂದ ಔಷಧೋಪಚಾರ ಮಾಡಿಸಲು ಸಾವಿರಾರು ರೂ. ವ್ಯಯಿಸುತ್ತಿದ್ದಾರೆ. ಆದರೂ, ಆರೋಗ್ಯ ಸುಧಾರಣೆಯಾಗದೆ ದನಕರುಗಳ ಸಾವನ್ನಪ್ಪುತ್ತಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.

    ತಾಲೂಕಿನಾದ್ಯಂತ 22 ಪಶು ಆಸ್ಪತ್ರೆಗಳಿವೆ. ಆದರೆ, ಐದು ಪಶು ವೈದ್ಯಾಧಿಕಾರಿಗಳು ಮಾತ್ರ ಕರ್ತವ್ಯ ನಿಭಾಯಿಸುತ್ತಿದ್ದಾರೆ. 17 ಪಶು ವೈದ್ಯರ ಹುದ್ದೆಗಳು ಖಾಲಿ ಇವೆ. ಹೀಗಾಗಿ, ರೈತರು ಅನಾರೋಗ್ಯ ಪೀಡಿತ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ಪರದಾಡುವಂತಾಗಿದೆ. ಇರುವ ಐದು ವೈದ್ಯರು ಎಲ್ಲಿದ್ದಾರೆ ಎಂದು ಹುಡುಕಿಕೊಂಡು ಹೋಗಿ ಜಾನುವಾರುಗಳಿಗೆ ಚಿಕಿತ್ಸೆ ನೀಡಿ ಎಂದು ದುಂಬಾಲು ಬೀಳುವ ಪರಿಸ್ಥಿತಿ ನಿರ್ವಣವಾಗಿದೆ.

    ರೈತರು ಅನಾರೋಗ್ಯ ಪೀಡಿತ ಹಸುಗಳನ್ನು ಹೊಡೆದುಕೊಂಡು ಹತ್ತಾರು ಕಿ.ಮೀ. ದೂರದಲ್ಲಿರುವ ಪಶು ಆಸ್ಪತ್ರೆಗೆ ಹೋದರೆ, ಅಲ್ಲಿ ವೈದ್ಯರು ಲಭ್ಯವಾಗದೇ ತಮ್ಮ ಜಾನುವಾರುಗಳೊಂದಿಗೆ ನಿರಾಸೆಯಿಂದ ಸ್ವಗ್ರಾಮಕ್ಕೆ ಬರುವುದು ಸಾಮಾನ್ಯವಾಗಿಬಿಟ್ಟಿದೆ.

    ತಾಲೂಕಿನಲ್ಲಿ 60 ಸಾವಿರ ದನ-ಕರುಗಳು, 1.5 ಲಕ್ಷ ಕುರಿ, ಆಡು ಹಾಗೂ 65 ಸಾವಿರ ಕೋಳಿ, 10 ಸಾವಿರ ನಾಯಿಗಳಿವೆ. ಇವುಗಳಿಗೆ ರೋಗಬಾಧೆ ಉಂಟಾದರೆ ಚಿಕಿತ್ಸೆ ನೀಡಲು ಪರದಾಡುವಂತಾಗಿದೆ.

    ಸರ್ಕಾರಿ ಪಶು ವೈದ್ಯರ ಕೊರತೆಯಿಂದ ರೈತರು ಪರದಾಡುತ್ತಿರುವ ಪರಿಸ್ಥಿತಿಯ ದುರುಪಯೋಗ ಪಡೆದುಕೊಳ್ಳುತ್ತಿರುವ ಕೆಲ ನಕಲಿ ನಾಟಿ ವೈದ್ಯರು ಜಾನುವಾರು ಮಾಲೀಕರಿಂದ ಸಾವಿರಾರ ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ತಾಲೂಕಿನ ಈ ಸಮಸ್ಯೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹಾಗೂ ಶಾಸಕ ಕಳಕಪ್ಪ ಬಂಡಿ ಸರ್ಕಾರದ ಗಮನಕ್ಕೆ ತಂದು, ಪಶು ವೈದ್ಯರ ನಿಯುಕ್ತಿಗೆ ಮುಂದಾಗಬೇಕು ಎಂದು ರೈತರ ಒತ್ತಾಯಿಸುತ್ತಿದ್ದಾರೆ.

    ಡಿಡಿ ಅಸಮಾಧಾನ: ನಾನು ಗದಗ ಜಿಲ್ಲಾ ಪಶು ವೈದ್ಯಕೀಯ ಡಿಡಿ ಆಗಿ ಅಧಿಕಾರ ವಹಿಸಿಕೊಂಡು ಆರು ತಿಂಗಳಾಯಿತು. ನಮ್ಮಲ್ಲಿ ಪಶು ವೈದ್ಯರ ಕೊರತೆಯಿಂದ ಜಾನುವಾರುಗಳು ಅನುಭವಿಸುತ್ತಿರುವ ಯಾತನೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ, ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಗದಗ ಜಿ.ಪಂ. ಸಾಮಾನ್ಯ ಸಭೆಯಲ್ಲಿ ನಿರಂತರವಾಗಿ ಈ ವಿಷಯ ಪ್ರಸ್ತಾಪಿಸಿದ್ದೇನೆ. ಯಾರೂ ಸ್ಪಂದಿಸುತ್ತಿಲ್ಲ. ಒಬ್ಬ ಪಶು ವೈದ್ಯ ಒಂದು ದಿನಕ್ಕೆ ಕನಿಷ್ಠ ಮೂರರಿಂದ ನಾಲ್ಕು ಆಸ್ಪತ್ರೆಗಳ ನಿರ್ವಹಣೆ ಮಾಡುವುದರ ಜೊತೆಗೆ ಜಾನುವಾರುಗಳು ಮೃತಪಟ್ಟರೆ ಕಡ್ಡಾಯವಾಗಿ ಅವುಗಳ ಮರಣೋತ್ತರ ಪರೀಕ್ಷೆ ಮಾಡಿ ವರದಿ ನೀಡಬೇಕು. ಈ ಪರಿಸ್ಥಿತಿ ಕುರಿತು ನನಗೂ ಸಾಕಷ್ಟು ಬೇಸರವಿದೆ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಗದಗ ಪಶು ವೈದ್ಯಕೀಯ ಇಲಾಖೆಯ ಡಿಡಿ ಚೆನ್ನಕೇಶವ.

    ಜನಪ್ರತಿನಿಧಿಗಳು ತಾಲೂಕಿನ ಪ್ರತಿ ಗ್ರಾ.ಪಂ. ವ್ಯಾಪ್ತಿಗೊಂದರಂತೆ ಪಶು ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಿ ಕೈ ತೊಳೆದುಕೊಂಡಿದ್ದಾರೆ. ಈ ಆಸ್ಪತ್ರೆಗಳಲ್ಲಿ ವೈದ್ಯರೇ ಇಲ್ಲ. ಹೀಗಾಗಿ, ಅನಿವಾರ್ಯವಾಗಿ ರೈತರು ತಮ್ಮ ಜಾನುವಾರುಗಳ ರಕ್ಷಣೆಗಾಗಿ ನಾಟಿ ವೈದ್ಯರ ಮೊರೆ ಹೋಗುತ್ತಿದ್ದಾರೆ. ಕೆಲ ನಾಟಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಲಭ್ಯವಾಗದ ಕಾರಣ ಜಾನುವಾರುಗಳು ಅಸುನೀಗುತ್ತಿವೆ. ಇದರಿಂದಾಗಿ ಹೈನುಗಾರಿಕೆ ಹಾಗೂ ಕುರಿಗಾರಿಕೆಯನ್ನೇ ನಂಬಿ ಜೀವನ ಸಾಗಿಸುವ ರೈತ ಕುಟುಂಬಗಳು ಸಂಕಷ್ಟ ಅನುಭವಿಸುವಂತಾಗಿದೆ.

    | ಮತ್ತಣ್ಣಾ ಕುರಿ, ರೈತ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts