More

    ರಸ್ತೆಗಳಿಗೆ ಜೀವನಾಡಿಗಳ ಹೆಸರು ನಾಮಕರಣ

    ಕನಕಗಿರಿ: ಒಣ ಬೇಸಾಯವನ್ನು ಆಶ್ರಯಿಸಿರುವ ಮತ್ತು ತುಂಗಭದ್ರಾ ಎಡದಂಡೆ ಕಾಲುವೆಯ ನೀರಿನಿಂದ ಭತ್ತ ಬೆಳೆಯುವ ತಾಲೂಕಿನ ಗಡಿ ಗ್ರಾಪಂ ಕೇಂದ್ರ ಚಿಕ್ಕ ಡಂಕನಕಲ್‌ನ ರಸ್ತೆಗಳಿಗೆ ತುಂಗಭದ್ರಾ ಸೇರಿ ನಾನಾ ನದಿಗಳ ಹೆಸರುಗಳನ್ನು ನಾಮಕರಣ ಮಾಡಿ ವಿಶೇಷತೆ ಮೆರೆಯಲಾಗಿದೆ.

    ಸಾಮಾನ್ಯವಾಗಿ ನಗರದ ರಸ್ತೆಗಳು ಮತ್ತು ವೃತ್ತಗಳಿಗೆ ಸ್ವಾತಂತ್ರ್ಯ ಹೋರಾಟಗಾರರು, ರಾಜಕೀಯ ನಾಯಕರು ಅಥವಾ ಸಿನಿಮಾ ನಟರ ಹೆಸರಿಡುವುದು ಸಾಮಾನ್ಯ. ಆದರೆ, ತಾಲೂಕಿನ ಚಿಕ್ಕಡಂಕನಕಲ್ ಗ್ರಾಮ ಭಿನ್ನ ನಡೆ ಅನುಸರಿಸುವ ಮೂಲಕ ಮಾದರಿಯಾಗಿದೆ.

    ಗ್ರಾಮದ ಪ್ರಮುಖ ರಸ್ತೆಗಳಿಗೆ ದೇಶದ ಸರ್ವ ಶ್ರೇಷ್ಠ ನದಿಗಳ ಹೆಸರುಗಳನ್ನು ನಾಮಕರಣ ಮಾಡುವ ಮೂಲಕ ಗ್ರಾಮೀಣ ಭಾಗದಲ್ಲಿ ನದಿಗಳ ಶ್ರೇಷ್ಠತೆ ಮತ್ತು ಮೌಲ್ಯವನ್ನು ಸಾರುವ ಕಾರ್ಯವನ್ನು ಚಿಕ್ಕಡಂಕನಲ್ ಗ್ರಾಮಾಡಳಿತ ಮಾಡಿದೆ.

    ಗ್ರಾಪಂ ಅನುದಾನದಲ್ಲಿ ಗ್ರಾಮದ 10 ರಸ್ತೆಗಳಿಗೆ ಹೇಮಾವತಿ, ತುಂಗಭದ್ರಾ, ಕೃಷ್ಣಾ , ವೇದಾವತಿ, ಗೋದಾವರಿ, ನೇತ್ರಾವತಿ, ಪಂಚಗಂಗಾ, ಶರಾವತಿ, ಕಪಿಲ, ಕಾವೇರಿ ನದಿ ಹೆಸರನ್ನೊಳಗೊಂಡ ನಾಮಫಲಕಗಳನ್ನು ಅಳವಡಿಸಲಾಗಿದೆ.

    ಸಚಿವರ ಸೂಚನೆ ಪಾಲನೆ

    ಕ್ಷೇತ್ರದ ಶಾಸಕರೂ ಆಗಿರುವ ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಈ ಹಿಂದೆ ನಡೆದ ಪಿಡಿಒಗಳ ಸಭೆಯಲ್ಲಿ ಮಾದರಿ ಗ್ರಾಮಗಳನ್ನಾಗಿ ಮಾಡಿ ಅಲ್ಲಿನ ರಸ್ತೆಗಳು ಹಾಗೂ ವೃತ್ತಗಳಿಗೆ ಕವಿಗಳ, ದಾರ್ಶನಿಕರ ಹಾಗೂ ನದಿಗಳ ಹೆಸರುಗಳನ್ನು ಇಟ್ಟು ಗೌರವ ಸಲ್ಲಿಸಲು ಸೂಚಿಸಿದ್ದರು. ಇದರಿಂದ ಪ್ರೇರಿತವಾದ ಗ್ರಾಮಾಡಳಿತ ಮಂಡಳಿ, ಗ್ರಾಮದ ರಸ್ತೆಗಳಿಗೆ ಪ್ರಮುಖ ನದಿಗಳ ಹೆಸರುಗಳನ್ನು ನಾಮಕರಣ ಮಾಡಿ ಗಮನ ಸೆಳೆಯುತ್ತಿದೆ.

    ಸಚಿವ ಶಿವರಾಜ ತಂಗಡಗಿ ನಿರ್ದೇಶನದ ಮೇರೆಗೆ ಗ್ರಾಮದ ಪ್ರಮುಖ 10 ರಸ್ತೆಗಳಿಗೆ ನದಿಗಳ ಹೆಸರುಳ್ಳ ನಾಮಫಲಕ ಅಳವಡಿಸಿದ್ದೇವೆ. ಇದರಿಂದ ಗ್ರಾಮಸ್ಥರು ಖುಷಿಯಾಗಿದ್ದಾರೆ. ಗ್ರಾಪಂ ಅನುದಾನದಲ್ಲಿ ನಾಮಫಲಕಗಳನ್ನು ಅಳವಡಿಸಲಾಗಿದೆ.
    ಹನುಮಂತಪ್ಪ ಪಿಡಿಒ
    ಚಿಕ್ಕಡಂಕನಕಲ್ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts