More

    ಮಣ್ಣನ್ನು ಬದುಕಿಸುವ ಕೆಲಸವಾಗಲಿ

    ಬಾಳೆಹೊನ್ನೂರು: ಮಣ್ಣು ಚಿನ್ನಕ್ಕಿಂತ ಮಿಗಿಲಾಗಿದ್ದು, ಜೀವಸಂಕುಲದ ಪ್ರಮುಖ ವಸ್ತು ಮಣ್ಣಾಗಿದೆ ಎಂದು ಪರಿಸರವಾದಿ ಗಜೇಂದ್ರ ಗೊರಸುಕೊಡಿಗೆ ಹೇಳಿದರು.
    ಪಟ್ಟಣದ ಲಯನ್ಸ್ ಭವನದಲ್ಲಿ ಲಯನ್ಸ್ ಕ್ಲಬ್ ಹಾಗೂ ನೆಟ್‌ಸರ್ಫ್ ಕಮ್ಯೂನಿಕೇಶನ್‌ನಿಂದ ಗುರುವಾರ ಆಯೋಜಿಸಿದ್ದ ಮಣ್ಣು ಪರೀಕ್ಷಾ ಶಿಬಿರದಲ್ಲಿ ಅವರು ಮಾತನಾಡಿದರು.
    ಕೃಷಿಕರು ಇಂದು ಕವಲು ದಾರಿಯಲ್ಲಿದ್ದು ಶೇ.99 ಕೃಷಿಕರಿಗೆ ಕೃಷಿ ಹೊರತುಪಡಿಸಿ ಬೇರೆ ಉದ್ಯೋಗ ಗೊತ್ತಿಲ್ಲ. ಕೃಷಿಯಲ್ಲಿ ಬದುಕುವ ಅನಿವಾರ್ಯ ಪರಿಸ್ಥಿತಿ ಇದೆ. 60 ವರ್ಷಗಳ ಹಿಂದೆ ಕೃಷಿಕರಿಗೆ ಅಪ್ಯಾಯಮಾನವಾಗಿ ಬಂದಿರುವುದೇ ರಾಸಾಯನಿಕ ಕೃಷಿ ಪದ್ಧತಿಯಾಗಿದೆ. ರಾಸಾಯನಿಕ ಕೃಷಿ ಪದ್ಧತಿ ರೈತರ ಕುತ್ತಿಗೆಗೆ ಉರುಳಾಗುತ್ತಿದೆ. ಮಣ್ಣು ರೈತನಿಗೆ ಉರುಳಾಗದಂತೆ ಬಳಸಬೇಕಿದೆ ಎಂದರು.
    ಎಲ್ಲ ಸ್ಪರ್ಧೆಗಳ ನಡುವೆ ಇಂದು ಕೃಷಿ ಗೆಲ್ಲಬೇಕಿದೆ. ದೇಶದಲ್ಲಿ ಇಂದು ಜನಸಂಖ್ಯೆ ನಾಗಾಲೋಟದಲ್ಲಿ ಸಾಗುತ್ತಿದ್ದು ಜನರ ಹೊಟ್ಟೆ ತುಂಬಿಸುವ ಕೃಷಿ ಭೂಮಿ ಕಡಿಮೆಯಾಗುತ್ತಿದೆ. ರಾಸಾಯನಿಕ ಮುಕ್ತ ಕೃಷಿಯ ಕಡೆಗೆ ಗಮನಹರಿಸಬೇಕಿದ್ದು ವೈಜ್ಞಾನಿಕ ಕೃಷಿ ಚಟುವಟಿಕೆಗಳು ನಡೆಯಬೇಕಿದೆ ಎಂದು ತಿಳಿಸಿದರು.
    ಕೇಂದ್ರ ಸರ್ಕಾರದಿಂದ ಸಾಯಿಲ್ ಕಾರ್ಡ್‌ಗಳನ್ನು ರೈತರಿಗೆ ವಿತರಣೆ ಮಾಡಿದ್ದರೂ ಸಹ ಹಲವರು ಇದರ ಪ್ರಯೋಜನ ಪಡೆದಿಲ್ಲ. ಈ ಕುರಿತು ಬೃಹತ್ ಜಾಗೃತಿ ಅಭಿಯಾನ ನಡೆಯಬೇಕಿದೆ. ರೈತರಿಗೆ ಸಕಾಲದಲ್ಲಿ ಮಣ್ಣು ಪರೀಕ್ಷೆಯ ವರದಿಗಳು ದೊರೆಯುತ್ತಿವೆ. ಕೃಷಿಯಲ್ಲಿ ಹಲವು ದೇಶಗಳು ಇಂದು ನ್ಯಾನೋ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ಭಾರತ ಸಹ ಇತ್ತೀಚೆಗೆ ಈ ತಂತ್ರಜ್ಞಾನಕ್ಕೆ ಕಾಲಿಟ್ಟಿದೆ ಎಂದು ಹೇಳಿದರು.
    ನೆಟ್‌ಸರ್ಪ್ ಕಂಪೆನಿಯ ಮುಖ್ಯಸ್ಥ ಕಿರಣ್ ಮಾತನಾಡಿ, ಮಣ್ಣು ಪರೀಕ್ಷೆ ನಡೆಸುವುದರಿಂದ ರೈತರಿಗೆ ತಮ್ಮ ಜಮೀನುಗಳ ಮಣ್ಣಿ ಸಾರ ತಿಳಿಯಲಿದ್ದು, ಪ್ರತಿಯೊಬ್ಬ ರೈತರೂ ಇದನ್ನು ಮಾಡಬೇಕಿದೆ. ನೆಟ್‌ಸರ್ಪ್ ಸಂಸ್ಥೆಯು ನ್ಯಾನೋ ತಂತ್ರಜ್ಞಾನದ ಮೂಲಕ ಮಣ್ಣು ಪರೀಕ್ಷೆ ನಡೆಸುವ ಹೊಸ ಆವಿಷ್ಕಾರ ಮಾಡಿದೆ ಎಂದು ತಿಳಿಸಿದರು.
    ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಡಿ.ಶಿವರಾಮ್, ಪ್ರಾಂತೀಯ ಅಧ್ಯಕ್ಷ ಎಂ.ಆರ್.ಮಂಜುನಾಥ್, ವಲಯ ಅಧ್ಯಕ್ಷ ಎನ್.ಸುಬ್ರಹ್ಮಣ್ಯ, ಎಂ.ವಿ.ಶ್ರೀನಿವಾಸಗೌಡ, ಪ್ರಶಾಂತ್ ಶಾಸ್ತ್ರಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts