More

    ಬೇಡ ಜಂಗಮರ ಅವಹೇಳನ ಸಲ್ಲ

    ಲಿಂಗಸುಗೂರು: ಬೇಡಜಂಗಮರಿಗೆ ಸರ್ಕಾರ, ಸಂವಿಧಾನದ ಆಶಯದಂತೆ ಪರಿಶಿಷ್ಟ ಜಾತಿ ಮೀಸಲಾತಿ ಕಲ್ಪಿಸಿದೆ. ಆದರೆ, ಸಮುದಾಯದ ಆಚರಣೆ, ರೀತಿ ನೀತಿಗಳ ವಿರುದ್ಧ ವಿಧಾನಸಭೆ ಕಲಾಪದಲ್ಲಿ ಅವಹೇಳನ ಮಾಡಿರುವುದು ಸರಿಯಲ್ಲ ಎಂದು ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ವಿಭಾಗೀಯ ಕಾರ್ಯದರ್ಶಿ ಕಿಡಿಗಣಯ್ಯಸ್ವಾಮಿ ಉಮಳಿಹೊಸೂರು ಹೇಳಿದರು.

    ಪಟ್ಟಣದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸರ್ಕಾರ ಬೇಡ ಜಂಗಮರ ಕುರಿತು ಕುಲಶಾಸ್ತ್ರ ಅಧ್ಯಯನ ನಡೆಸಿದೆ. ಬೇಡ ಜಂಗಮರು ಎಂದರೆ ಲಿಂಗಾಯತ ಪಂಥದ ಬೇಡಜಂಗಮರು ಎಂದು ಕರ್ನಾಟಕ ಗೆಜೆಟೀಯರ್‌ನಲ್ಲಿ ವರದಿ ಇದೆ. ಆದರೆ ವಿಧಾನಸಭೆ ಕಲಾಪದಲ್ಲಿ ಶಾಸಕರಾದ ಪಿ.ರಾಜೀವ್, ಪ್ರಿಯಾಂಕ್ ಖರ್ಗೆ ಹಾಗೂ ಇತರ ಶಾಸಕರು ಸದನಕ್ಕೆ ತಪ್ಪು ಮಾಹಿತಿ ನೀಡಿ ಅಸಂವಿಧಾನಿಕವಾಗಿ ನಡೆದುಕೊಂಡಿದ್ದಾರೆ ಎಂದರು.

    ಕೆಲ ಶಾಸಕರು ಸ್ವಜನ ಪಕ್ಷಪಾತ, ದುರುದ್ದೇಶ ಹಾಗೂ ಹತಾಶ ಮನೋಭಾವನೆಯಿಂದ ಕಲಾಪದ ಗೌರವ ಹಾಳು ಮಾಡಿದ್ದಾರೆ. ಸರ್ಕಾರ ಕೂಡಲೇ ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದಿದ್ದರೆ, ಒಕ್ಕೂಟದಿಂದ ಏ.14 ರಂದು ವಿಧಾನಸೌಧದ ಮುಂದೆ 500 ಮಠಾಧೀಶರು, ಹರಗುರು ಚರಮೂರ್ತಿಗಳ ನೇತೃತ್ವದಲ್ಲಿ ಅನಿರ್ದಿಷ್ಟ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಎಚ್ಚರಿಕೆ ನೀಡಿದರು. ಪ್ರಮುಖರಾದ ಮಹಾದೇವಯ್ಯ ಗೌಡೂರು, ರಮೇಶ ಶಾಸ್ತ್ರಿ, ರುದ್ರಯ್ಯಸ್ವಾಮಿ, ವೀರಭದ್ರಯ್ಯ ಹಿರೇಮಠ ಯಲಗಲದಿನ್ನಿ, ಅಮರೇಶ ಹಿರೇಮಠ, ಮಹೇಶ ನಂದಿಕೋಲಮಠ, ಶರಣಯ್ಯ ದಾಸೋಹಮಠ, ವೀರಭದ್ರಯ್ಯ ಗುಂತಗೋಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts