More

    ಮಾ.7ರಂದು ಅಮರೇಶ್ವರ ಮಹಾರಥೋತ್ಸವ

    ಲಿಂಗಸುಗೂರು: ಇತಿಹಾಸ ಪ್ರಸಿದ್ಧ ಸುಕ್ಷೇತ್ರ ಅಮರೇಶ್ವರ ಜಾತ್ರಾ ಮಹೋತ್ಸವವು ಮಾ.7 ರಂದು ಜರುಗಲಿದ್ದು, ಅಂದು ಸಂಜೆ 6.30ಕ್ಕೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ನೆರವೇರಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆ ತಿಳಿಸಿದೆ.

    ದೇವರಭೂಪುರ ಬೃಹನ್ಮಠದ ಅಮರೇಶ್ವರ ಗುರುಗಜದಂಡ ಶಿವಾಚಾರ್ಯರ ನೇತೃತ್ವದಲ್ಲಿ ಫೆ.25ರ ರಾತ್ರಿ 11.30ಕ್ಕೆ ಹೊನ್ನಳ್ಳಿಯಿಂದ ಕಳಸ, ಯರಡೋಣದಿಂದ ಉತ್ಸವ ಮೂರ್ತಿ ದೇವಸ್ಥಾನಕ್ಕೆ ಆಗಮನವಾಗಿದೆ. ಫೆ.26 ರಂದು ಪಾದಗಟ್ಟಿಯ ಬಸವಪಟ ಕಂಕಣ ಕಟ್ಟಲಾಗಿದೆ. ಫೆ.27 ರಿಂದ ಮಾ.4ರವರೆಗೆ ಶ್ರೀಸ್ವಾಮಿಗೆ ಪ್ರತಿನಿತ್ಯ ವಿಶೇಷ ಪೂಜೆಗಳು ನಡೆಯಲಿವೆ. ಮಾ.5ರ ಸಂಜೆ 4.40ಕ್ಕೆ ದೇವರ ಪ್ರಥಮ ಉತ್ಸವ, ಸಂಜೆ 6ಕ್ಕೆ ಶ್ರೀಗಳು ಉತ್ಸವಮೂರ್ತಿ ಪಲ್ಲಕ್ಕಿ ಸಮೇತ ಗುರುಗುಂಟಾ ಸಂಸ್ಥಾನಕ್ಕೆ ಪ್ರಯಾಣ ಬೆಳೆಸಿ ರಾತ್ರಿ 10.30ಕ್ಕೆ ರಾಜಬೀದಿಯಲ್ಲಿ ದೇವರ ಕಳಸ ಮೆರವಣಿಗೆ ಮತ್ತು ಪುರವಂತಿಕೆ ಸೇವಾದಿಗಳು ಜರುಗಲಿವೆ.

    ಮಾ.6ರಂದು ಅಮರೇಶ್ವರಕ್ಕೆ ಶ್ರೀಗಳ ಸಹಿತ ಕಳಸ, ಪಲ್ಲಕ್ಕಿ ಉತ್ಸವ ಆಗಮಿಸಲಿದೆ. ಸಂಜೆ 4.30ಕ್ಕೆ ದೇವರ ದ್ವಿತೀಯೋತ್ಸವ, ಸಂಜೆ 6ಕ್ಕೆ ಶ್ರೀಗಳ ಕಳಸ, ಉತ್ಸವಮೂರ್ತಿ ಸಹಿತ ಗುಂತಗೋಳ ಸಂಸ್ಥಾನಕ್ಕೆ ತೆರಳಿದ ಬಳಿಕ ಸಂಸ್ಥಾನಿಕರಿಂದ ದೇವರಿಗೆ ವಿಶೇಷ ಪೂಜಾಗಳು ನಡೆಯಲಿವೆ. ಮಾ.7ರ ಬೆಳಗ್ಗೆ 6ಕ್ಕೆ ಅಮರೇಶ್ವರ ದೇವಾಲಯಕ್ಕೆ ಆಗಮನ, ಬೆಳಗ್ಗೆ 9ಕ್ಕೆ ತೃತಿಯೋತ್ಸವ, ಮಧ್ಯಾಹ್ನ 2ಕ್ಕೆ ಮಹಾರಥಕ್ಕೆ ಕಳಸಾರೋಹಣ, ಸಂಜೆ 6.30ಕ್ಕೆ ಮಹಾರಥೋತ್ಸವ ಜರುಗಲಿದೆ.

    ಮಾ.8ರಂದು ಸಂಜೆ 4ಕ್ಕೆ ವಿಶೇಷ ಪೂಜೆಗಳು, 9ರ ಸಂಜೆ 5.30ಕ್ಕೆ ಉತ್ಸವ ರಥದ ಮುಂದೆ ಅಮರೇಶ್ವರ ತಂದೆ-ತಾಯಿಗಳಾದ ಆದಯ್ಯ, ಮಾಳಗುಂಡಮ್ಮರ ವಿವಾಹ ಕಾರ್ಯ ಮತ್ತು ಕಡುಬಿನ ಕಾಳಗ, ಶ್ರೀಗಳು ಮತ್ತು ಸಂಸ್ಥಾನಿಕರಿಂದ ಹೂವಿನ ಚೆಂಡಿನ ಕಾರ್ಯಕ್ರಮ ಜರುಗಲಿದೆ. ಮಾ.10 ರಂದು ವಿಶೇಷ ಪೂಜೆ ಮತ್ತು ನಂದಿ ಪೂಜೆಯೊಂದಿಗೆ ದನಗಳ ಜಾತ್ರೆ ಆರಂಭವಾಗಲಿದೆ. ಮಾ.11 ರಂದು ವಿಶೇಷ ಪೂಜೆ, ಮಾ.12ರ ಬೆಳಗ್ಗೆ ಹೊಂಡ ತೊಳೆಯುವುದು, ರಥದ ಕಳಸ ಇಳಿಸುವುದು, ರಾತ್ರಿ 8ಕ್ಕೆ ಶ್ರೀಗಳು ಪಲ್ಲಕ್ಕಿ ಉತ್ಸವದೊಂದಿಗೆ ಪಾದಗಟ್ಟಿಗೆ ತೆರಳಿ ಬಸವಪಟ ಇಳಿಸುವುದು ಮತ್ತು ಮೆಟ್ಟಮರಡಿಗೆ ತೆರಳಿ ಅಮರೇಶ್ವರ ದೇವರನ್ನು ಸ್ವ ಸ್ಥಾನಕ್ಕೆ ಕರೆದುಕೊಂಡು ಬಂದ ಬಳಿಕ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts