More

    ಮಂಜೂರಾತಿ ನೀಡುವುದೇ ಮಂತ್ರಾಲಯ?

    ಪರಶುರಾಮ ಭಾಸಗಿ ವಿಜಯಪುರ
    ರಾಷ್ಟ್ರೀಯ ಹೆದ್ದಾರಿ ಯೋಜನಾ ವರದಿಯಡಿ ತಾತ್ವಿಕವಾಗಿ ಅನುಮೋದನೆಗೊಂಡು ಮೇಲ್ದರ್ಜೆಗೇರಿರುವ 6 ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ಅಂತಿಮ ಜೋಡಣಾ ವರದಿ (ಫೈನಲ್ ಅಲೈನ್‌ಮೆಂಟ್ ರಿಪೋರ್ಟ್) ಸಲ್ಲಿಸಿ ಒಂದೂವರೆ ವರ್ಷವಾದರೂ ಕೇಂದ್ರ ಭೂ ಸಾರಿಗೆ ಮಂತ್ರಾಲಯ ಇನ್ನೂ ಮಂಜೂರಾತಿ ನೀಡಿಲ್ಲ !
    ಈಗಾಗಲೇ ಹೆದ್ದಾರಿ ಕಾಮಗಾರಿಗಳ ಅಂತಿಮ ವರದಿಯನ್ನು ಬೆಂಗಳೂರಿನ ಕೇಂದ್ರ ಕಚೇರಿಯಿಂದ ನವದೆಹಲಿಯ ಭೂ ಸಾರಿಗೆ ಮಂತ್ರಾಲಯಕ್ಕೆ ಸಲ್ಲಿಸಲಾಗಿದೆ. ಎಲ್ಲ ಕಾಮಗಾರಿಗಳ ಸಮೀಕ್ಷೆ ಪೂರ್ಣಗೊಂಡಿದ್ದರಿಂದ ಇಲಾಖೆ ಅಧಿಕಾರಿಗಳು ಸಮಗ್ರ ವರದಿ ತಯಾರಿಸಿ ಕಳುಹಿಸಿದ್ದಾರೆ. ಆದರೆ, ಈ ಹಿಂದಿನ ಬಹುತೇಕ ಕಾಮಗಾರಿಗಳೇ ಅನುದಾನವಿಲ್ಲದೇ ಬಳಲುತ್ತಿರುವಾಗ ಸದರಿ ಕಾಮಗಾರಿ ಸರ್ಕಾರ ಅನುಮೋದನೆ ನೀಡುವುದೇ ಎಂಬ ಅನುಮಾನ ಕಾಡುತ್ತಿದೆ.

    ಕಾಮಗಾರಿ ವಿವರ

    ಸಂಕೇಶ್ವರ, ಗೋಟೂರ, ಕಾಗವಾಡ, ಅಥಣಿ ವಿಜಯಪುರ ಕಿಮೀ 0.00 ದಿಂದ 168 ರವರೆಗಿನ ರಸ್ತೆ ತಾತ್ವಿಕವಾಗಿ ಮೇಲ್ದರ್ಜೆಗೇರಿಸಲಾಗಿದೆ. ಧಾರವಾಡದ ಜಲವಾಹಿನಿ ಮ್ಯಾನೇಜ್‌ಮೆಂಟ್ ಸರ್ವಿಸಿಸ್ ಪ್ರೈವೇಟ್ ಲಿಮಿಟೆಡ್‌ಗೆ 1.95 ಕೋಟಿ ರೂ. ಗಳಿಗೆ ಗುತ್ತಿಗೆ ನೀಡಲಾಗಿದೆ. ಜು. 11, 2019ರಂದು ಮಾಡಿಕೊಂಡ ಒಪ್ಪಂದದ ಪ್ರಕಾರ ವಿವರವಾದ ಯೋಜನಾ ವರದಿ ತಯಾರಿಸಲಾಗಿದೆ. ಪ್ರಥಮ ಹಂತದಲ್ಲಿ 80 ಕಿಮೀ ಕಾಮಗಾರಿ ಕೈಗೊಳ್ಳಬೇಕಿದ್ದು ಈಗಾಗಲೇ ಕ್ರಿಯಾಯೋಜನೆ ಸಲ್ಲಿಸಲಾಗಿದೆ.
    ವಿಜಯಪುರ ಯತ್ನಾಳ ಹತ್ತಿರ ರಾಷ್ಟ್ರೀಯ ಹೆದ್ದಾರಿ 166ರ ಗುಡ್ಡಾಪುರ ಜತ್ತ ಜಂಕ್ಷನ್ (ವಿಜಯಪುರ-ಯತ್ನಾಳ) ಸುಮಾರು 30 ಕಿಮೀ ಮತ್ತು ವಿಜಯಪುರ ನಗರಕ್ಕೆ ರಾಷ್ಟ್ರೀಯ ಹೆದ್ದಾರಿ-13 ರ (ಹಳೆಯ) ಸೋಲಾಪುರ ವಿಜಯಪುರ ಸೆಕ್ಷನ್ ಬೈಪಾಸ್ ರಸ್ತೆ ಕಲ್ಪಿಸುವ 17 ಕಿಮೀ ಉದ್ದದ ಕಾಮಗಾರಿ ಸಮೀಕ್ಷೆಗೆ 0.81 ಕೋಟಿ ರೂ.ಗಳಿಗೆ ಅದೇ ಜಲವಾಹಿನಿ ಮ್ಯಾನೇಜ್‌ಮೆಂಟ್‌ಗೆ ಗುತ್ತಿಗೆ ನೀಡಲಾಗಿತ್ತು. ಇನ್ನು ಮುರವಾಳ ಆಲೂರ ಅಕ್ಕಲಕೋಟ ಇಂಡಿ ಮತ್ತು ಝಳಕಿ ರಾಷ್ಟ್ರೀಯ ಹೆದ್ದಾರಿ-13 ರ ಜಂಕ್ಷನ್ ಕಾಮಗಾರಿಯ ಸಮೀಕ್ಷೆಯನ್ನು 2.35 ಕೋಟಿ ರೂ.ಗಳಿಗೆ ಸೇಲಂನ ಮುಕೇಶ ಆ್ಯಂಡ್ ಅಸೋಸಿಯೇಟ್‌ಗೆ ಗುತ್ತಿಗೆ ನೀಡಲಾಗಿತ್ತು. ಅಫಜಲಪೂರ ಆಲಮೇಲ ಇಂಡಿ ರಸ್ತೆ ಸುಮಾರು 42 ಕಿಮೀ ಕಾಮಗಾರಿಯನ್ನು ಎಚ್‌ಬಿಎಸ್ ಇನ್‌ಪ್ರಾ ಇಂಜಿನಿಯರ್ಸ್ ಇಂಡಿಯಾ ಇವರಿಗೆ 1.67ಕ್ಕೆ ಗುತ್ತಿಗೆ ನೀಡಲಾಗಿತ್ತು. ಲಿಂಗಸಗೂರ ರೋಡಲಬಂಡಾ ನಾರಾಯಣಪುರ, ನಾಲತವಾಡ, ಮುದ್ದೇಬಿಹಾಳ ಹೂವಿನ ಹಿಪ್ಪರಗಿ ದೇವರಹಿಪ್ಪರಗಿ ತಾಂಬಾ ಜಂಕ್ಷನ್ ಸಮೀಕ್ಷೆಗಾಗಿ 5.53 ಕೋಟಿ ರೂ.ಗಳಿಗೆ ಸಿಂಕಂದರಾಬಾದ್‌ನ ಸಾತ್ರಾ ಇನ್‌ಫ್ರಾಸ್ಟ್ರಕ್ಚರ್ ಮ್ಯಾನೇಜ್‌ಮೆಂಟ್ ಸರ್ವಿಸಿಸ್‌ಗೆ ಗುತ್ತಿಗೆ ನೀಡಲಾಗಿತ್ತು. ಇಂಡಿಯ ಝಳಕಿ ಚಡಚಣ ಶಿರಾಡೋಣ ಮಹಾರಾಷ್ಟ್ರ ಸರಹದ್ದಿನ ಸುಮಾರು 48 ಕಿಮೀ ರಸ್ತೆ ಕಾಮಗಾರಿಯ ಸಮೀಕ್ಷೆಯನ್ನು 1.57 ಕೋಟಿ ರೂ.ಗಳಿಗೆ ಪುಣೆಯ ಸಿ.ವಿ. ಕಾಂಡ ಕನಸಲ್ಟಂಟ್ ಪ್ರೈ.ಲಿಗೆ ಗುತ್ತಿಗೆ ನೀಡಲಾಗಿತ್ತು.
    ಈ ಎಲ್ಲ ಹೆದ್ದಾರಿಗಳ ಸಮೀಕ್ಷೆ ವರದಿ ಆಧರಿಸಿ ಕ್ರಿಯಾ ಯೋಜನೆ ಸಿದ್ದಪಡಿಸಿ ಈಗಾಗಲೇ ಕೇಂದ್ರ ಭೂ ಸಾರಿಗೆ ಮಂತ್ರಾಲಯಕ್ಕೆ ಸಲ್ಲಿಸಿದ್ದಾಗಿ ಅಧಿಕಾರಿಗಳು ತಿಳಿಸುತ್ತಾರೆ.

    ಮಂಜೂರಾತಿ ಯಾವಾಗ?

    ಸದರಿ ಹೆದ್ದಾರಿಗಳು ಅಂತರ್ ಜಿಲ್ಲೆ ಮತ್ತು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈಗಿರುವ ಸ್ಥಿತಿಯಲ್ಲಿ ವಾಹನ ಸಂಚಾರದ ಪ್ರಮಾಣ ಹೆಚ್ಚಿದ್ದು ರಸ್ತೆ ಸಾಲದಾಗಿದೆ. ಮೇಲ್ದರ್ಜೆಗೇರಿಸಿದ ಕ್ರಮ ಸ್ತುತ್ಯರ್ಹವಾಗಿದ್ದು ತ್ವರಿತವಾಗಿ ಮಂಜೂರಾತಿ ನೀಡಿ ಕಾಮಗಾರಿ ಕೈಗೊಳ್ಳಬೇಕು. ಅಫಜಲಪೂರ ಮತ್ತು ಆಲಮೇಲ ನಡುವಿನ ರಸ್ತೆ ಹದಗೆಟ್ಟಿದೆ. ಇಂಡಿಯ ಝಳಕಿ ಚಡಚಣ ಶಿರಾಡೋಣ ಮಹಾರಾಷ್ಟ್ರ ಸರಹದ್ದಿನ ರಸ್ತೆಯಲ್ಲಿ ಒಂದು ವಾಹನ ಎದುರಾದರೆ ಇನ್ನೊಂದು ವಾಹನ ಪಕ್ಕಕ್ಕೆ ಸರಿದು ನಿಲ್ಲಬೇಕಾದ ಸ್ಥಿತಿ ಇದೆ. ಇದೇ ರೀತಿ ಇನ್ನುಳಿದ ರಸ್ತೆಗಳನ್ನು ತಕ್ಕ ಮಟ್ಟಿಗೆ ನಿರ್ವಹಿಸಲಾಗಿದೆಯಾದರೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಗೆ ಹೋಲಿಸಿದರೆ ಹೆದ್ದಾರಿ ಮೇಲ್ದರ್ಜೆಗೇರಿಸುವ ಅನಿವಾರ್ಯತೆ ಹೆಚ್ಚಿದೆ. ಲಿಂಗಸುಗೂರ ರೋಡಲಬಂಡಾ ನಾರಾಯಣಪುರ, ನಾಲತವಾಡ, ಮುದ್ದೇಬಿಹಾಳ ಹೂವಿನ ಹಿಪ್ಪರಗಿ ದೇವರಹಿಪ್ಪರಗಿ ತಾಂಬಾ ಜಂಕ್ಷನ್ ಹಾಳಾಗಿದ್ದು ತ್ವರಿತವಾಗಿ ಮೇಲ್ದರ್ಜೆಗೇರಿ ರಸ್ತೆ ಸುಧಾರಣೆ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. (ಮುಗಿಯಿತು)

    ವಿಜಯಪುರ ಯತ್ನಾಳ ಗುಡ್ಡಾಪುರ ಜತ್ತ ಜಂಕ್ಷನ್ ಹಾಗೂ ಮುರವಾಳ ಆಲೂರ ಅಕ್ಕಲಕೋಟ ಇಂಡಿ ರಸ್ತೆಗೆ ಎನ್‌ಎಚ್ ನಂಬರ್ ಕೊಡಬೇಕು. ಅಲೈನ್‌ಮೆಂಟ್ ರಿಪೋರ್ಟ್ ಸಲ್ಲಿಸಲಾಗಿದೆ. ಸಂಕೇಶ್ವರ ಗೋಟೂರ ಕಾಗವಾಡ ಅಥಣಿ ರಸ್ತೆ ಮೊದಲ ಹಂತದಲ್ಲಿ 80 ಕಿಮೀ ಕೈಗೊಳ್ಳಬೇಕಿದೆ. ಯಾವ ರಸ್ತೆಗೂ ಮಂಜೂರಾತಿ ಸಿಕ್ಕಿಲ್ಲ.
    ಅರುಣಕುಮಾರ ಪಾಟೀಲ, ಇಇ, ಲೋಕೋಪಯೋಗಿ ಇಲಾಖೆ ಹೆದ್ದಾರಿ ವಿಭಾಗ ವಿಜಯಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts