More

    ಗಾಂಧಿ ಗ್ರಾಮ ಪುರಸ್ಕಾರ ಘೋಷಣೆಗೆ ಸೀಮಿತ

    ಮಂಜುನಾಥ ಅಂಗಡಿ ಧಾರವಾಡ

    ಗ್ರಾಮ ಪಂಚಾಯಿತಿಗಳ ಕಾರ್ಯ ನಿರ್ವಹಣೆಯನ್ನು ಪ್ರೋತ್ಸಾಹಿಸಲು ಉತ್ತಮವಾಗಿ ಕಾರ್ಯನಿರ್ವಹಿಸುವ ಗ್ರಾ.ಪಂ.ಗಳಿಗೆ ಸರ್ಕಾರ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ನೀಡುತ್ತದೆ. ರಾಜ್ಯದ ಎಲ್ಲ ತಾಲೂಕುಗಳಿಗೆ ಒಂದರಂತೆ ಪ್ರಶಸ್ತಿ ನೀಡಲಾಗುತ್ತಿದೆ. ಆದರೆ, ಈ ಬಾರಿ ಪುರಸ್ಕಾರ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದೆ.

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯಿಂದ ಸೆಪ್ಟೆಂಬರ್​ನಲ್ಲಿ ಪ್ರಶಸ್ತಿ ಘೋಷಿಸಿ ಅ. 2ರಂದು ಬೆಂಗಳೂರಿನಲ್ಲಿ ಇಲಾಖೆಯಿಂದ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ಪ್ರಶಸ್ತಿ ಪುರಸ್ಕೃತ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪಿಡಿಒ ಸಮಾರಂಭದಲ್ಲಿ ಹಾಜರಿದ್ದು, ಇಲಾಖೆಯ ಸಚಿವರಿಂದ ಪ್ರಶಸ್ತಿ ಸ್ವೀಕರಿಸುತ್ತಿದ್ದರು. ಈ ಬಾರಿಯೂ ರಾಜ್ಯದ ಎಲ್ಲ ತಾಲೂಕಿಗೊಂದರಂತೆ ಪ್ರಶಸ್ತಿ ಘೋಷಿಸಲಾಗಿದೆ. ಆದರೆ, ಕರೊನಾ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಈವರೆಗೂ ನಡೆದಿಲ್ಲ. ವಿವಿಧ ಕಾರ್ಯಕ್ರಮ ಅನುಷ್ಠಾನಕ್ಕೆ ನಿರೀಕ್ಷಿತ 5 ಲಕ್ಷ ರೂ. ನಗದು ಪ್ರಶಸ್ತಿ ತಲುಪಿಸಿಯೂ ಆಗಿಲ್ಲ.

    ಪುರಸ್ಕಾರಕ್ಕೆ ಆಯ್ಕೆ ಹೇಗೆ?: ಗ್ರಾ.ಪಂ.ಗಳು ಸ್ವಯಂಪ್ರೇರಣೆಯಿಂದ ಕೈಗೊಳ್ಳಬಹುದಾದ ವಿನೂತನ ಚಟುವಟಿಕೆಗಳನ್ನು ಒಳಗೊಂಡ 200 ಅಂಕಗಳ ಪ್ರಶ್ನಾವಳಿ ನೀಡಲಾಗುತ್ತದೆ. ಜೀವನ ಗುಣಮಟ್ಟ, ಸ್ವಂತ ಸಂಪನ್ಮೂಲ ಹಾಗೂ ನರೇಗಾ, ಇತರ ಅನುದಾನದ ಸದ್ಬಳಕೆ ಹಾಗೂ ಕಾರ್ಯನಿರ್ವಹಣೆಯನ್ನು ಅಳೆಯಲಾಗುತ್ತದೆ. ಪಂಚಾಯತ್ ಜಮಾಬಂದಿ ನಿರ್ವಹಣೆ, ನೀರು, ಶೌಚಗೃಹ, ನೈರ್ಮಲ್ಯ- ಬೀದಿದೀಪ ನಿರ್ವಹಣೆ, ತ್ಯಾಜ್ಯ ನಿರ್ವಹಣೆ, ಆಡಳಿತ ನಿರ್ವಹಣೆ, ವಾರ್ಡ್- ಗ್ರಾಮ ಸಭೆ, ಹಣಕಾಸು- ಆಸ್ತಿ, ಸಿಬ್ಬಂದಿ ನಿರ್ವಹಣೆ, ಸಿಸಿ ಟಿವಿ ಅಳವಡಿಕೆ, ಬಾಪೂಜಿ ಸೇವಾ ಕೇಂದ್ರದಿಂದ ದಾಖಲೆಗಳನ್ನು ನೀಡುವುದು, ಸಕಾಲ ಸೇವೆ, ಆರ್​ಟಿಐ ನಿರ್ವಹಣೆ, ಗ್ರಂಥಾಲಯ ಸೇರಿದಂತೆ ವಿವಿಧ ವಿಷಯಗಳುಳ್ಳ ಪ್ರಶ್ನಾವಳಿಗೆ ಮಾಹಿತಿ ಸಲ್ಲಿಸಬೇಕು. ಅದಕ್ಕೆ ತಕ್ಕ ದಾಖಲೆಗಳನ್ನು ಒದಗಿಸಿದ ಉತ್ತಮ ಪಂಚಾಯಿತಿಗಳನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುತ್ತದೆ.

    ಧಾರವಾಡ ಜಿಲ್ಲೆಯ ಗ್ರಾಮ ಪಂಚಾಯಿತಿಗಳು: ಜಿಲ್ಲೆಯ ಧಾರವಾಡ ತಾಲೂಕಿನ ಅಮ್ಮಿನಭಾವಿ, ಹುಬ್ಬಳ್ಳಿ ತಾಲೂಕಿನ ಛಬ್ಬಿ, ಕಲಘಟಗಿ ತಾಲೂಕಿನ ಧುಮ್ಮವಾಡ, ಕುಂದಗೋಳ ತಾಲೂಕಿನ ಕುಬಿಹಾಳ, ನವಲಗುಂದ ತಾಲೂಕಿನ ಹೆಬ್ಬಾಳ, ಅಳ್ನಾವರ ತಾಲೂಕಿನ ಅರವಟಗಿ, ಅಣ್ಣಿಗೇರಿ ತಾಲೂಕಿನ ನಲವಡಿ ಗ್ರಾಮ ಪಂಚಾಯಿತಿಗಳು 2019- 20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿವೆ. ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯು 7 ಗ್ರಾಮ ಪಂಚಾಯಿತಿಗಳನ್ನು ಅನುಮೋದಿಸಿದೆ. ಈ ಬಾರಿ ಆಯ್ಕೆಯಾಗಿರುವ ಅರವಟಗಿ ಗ್ರಾಪಂ ಈ ಹಿಂದೆ 2017ರಲ್ಲಿ ಈ ಪುರಸ್ಕಾರಕ್ಕೆ ಭಾಜನವಾಗಿತ್ತು. ಆಗ ಧಾರವಾಡ ತಾಲೂಕಿನಲ್ಲಿದ್ದ ಅರವಟಗಿ ಗ್ರಾಮ ಪಂಚಾಯಿತಿ, ತಾಲೂಕು ಇಬ್ಭಾಗಗೊಂಡ ಹಿನ್ನೆಲೆಯಲ್ಲಿ ಅಳ್ನಾವರ ತಾಲೂಕಿಗೆ ಸೇರ್ಪಡೆಯಾಗಿದೆ.

    ಅರವಟಗಿ ಗ್ರಾ.ಪಂ. 2ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರವಾಗಿದೆ. ಕಳೆದ ಬಾರಿಯ ಪ್ರಶಸ್ತಿಯ ಮೊತ್ತದಲ್ಲಿ ಗ್ರಾಮ ಪಂಚಾಯಿತಿಯಿಂದ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಬಾರಿ ಸರ್ಕಾರದಿಂದ ಪ್ರಶಸ್ತಿ ಪುರಸ್ಕೃತವಾದ ಪಂಚಾಯಿತಿಗಳ ಹೆಸರುಗಳನ್ನು ಘೋಷಿಸಲಾಗಿದೆ. ಆದರೆ (ಕರೊನಾ ಕಾರಣದಿಂದ) ಈವರೆಗೂ ಪ್ರಶಸ್ತಿ ಪ್ರದಾನವಾಗಿಲ್ಲ.

    | ಅಪ್ಪಯ್ಯ, ಪಿಡಿಒ, ಗಾಂಧಿ ಗ್ರಾಮ ಪ್ರಶಸ್ತಿ ಪುರಸ್ಕೃತ ಅರವಟಗಿ ಗ್ರಾ.ಪಂ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts