More

    ಗಂಗೊಳ್ಳಿಯಲ್ಲಿ ಲೈಟ್ ಫಿಶಿಂಗ್ ಅವ್ಯಾಹತ

    ಗಂಗೊಳ್ಳಿ: ಇಲ್ಲಿನ ಬಂದರಿನ ಮೂಲಕ ನಿಷೇಧಿತ ಲೈಟ್ ಫಿಶಿಂಗ್ ಮೀನುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಸರ್ಕಾರದ ಆದೇಶಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀರಿನ ಮೇಲೆ ಅಥವಾ ಒಳಗೆ ಯಾವುದೇ ಕೃತಕ ದೀಪ ಬಳಸಿ ಮಾಡುವ ಪರ್ಸೀನ್, ಗಿಲ್‌ನೆಟ್ ಮೀನುಗಾರಿಕೆ ನಿಷೇಧಿಸಿದ್ದು, ಸರ್ಕಾರದ ಆದೇಶ ಉಲ್ಲಂಘಿಸುವವರ ಡೀಸೆಲ್ ಸಹಾಯಧನ ತಡೆ, ಮೀನುಗಾರಿಕಾ ಲೈಸೆನ್ಸ್, ನೋಂದಣಿ ರದ್ದು ಮಾಡಿ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿತ್ತು. ಆದರೆ ಸರ್ಕಾರದ ಆದೇಶ ಧಿಕ್ಕರಿಸಿ ಅನೇಕ ಮೀನುಗಾರಿಕಾ ಬೋಟುಗಳು ಲೈಟ್ ಫಿಶಿಂಗ್ ನಡೆಸುತ್ತಿವೆ. ಬೋಟುಗಳಲ್ಲಿ ಅಧಿಕ ಸಾಮರ್ಥ್ಯದ ಜನರೇಟರ್ ಅಳವಡಿಸಿ ದೊಡ್ಡ ದೊಡ್ಡ ಲೈಟ್ ಬಳಸಿ ಲೈಟ್ ಫಿಶಿಂಗ್ ಮೀನುಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪ ಮೀನುಗಾರ ವಲಯದಲ್ಲಿದೆ.

    ಲೈಟ್ ಫಿಶಿಂಗ್ ವಿರುದ್ಧ ಸಾಂಪ್ರದಾಯಿಕ ಮೀನುಗಾರಿಕೆಯವರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಕೂಡ ನಡೆಸಿದ್ದರು. ಇದಾವುದಕ್ಕೂ ಜಗ್ಗದೆ ಲೈಟ್ ಫಿಶಿಂಗ್ ಮುಂದುವರಿಸಿರುವುದು ಮೀನುಗಾರರ ಕಣ್ಣು ಕೆಂಪಾಗಿಸಿದೆ. ಗಂಗೊಳ್ಳಿ ಬಂದರು ಮೂಲಕ ಅನೇಕ ಬೋಟುಗಳಲ್ಲಿ ಲೈಟ್ ಫಿಶಿಂಗ್‌ಗೆ ಬಳಸಲಾಗುವ ಸಾಮಗ್ರಿ ಮತ್ತು ಅಧಿಕ ಸಾಮರ್ಥ್ಯದ ಜನರೇಟರ್ ಅಳವಡಿಸಿರುವುದು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಯಾಗಿದ್ದು, ಲೈಟ್ ಫಿಶಿಂಗ್ ನಡೆಸುತ್ತಿರುವುದನ್ನು ಪುಷ್ಟೀಕರಿಸಿದೆ. ಲೈಟ್ ಫಿಶಿಂಗ್ ವಿರುದ್ಧ ಸಂಬಂಧಿತ ಇಲಾಖೆ ಕ್ರಮ ಕೈಗೊಳ್ಳುತ್ತಿದ್ದರೂ ಕೆಲವರು ಕಣ್ಣು ತಪ್ಪಿಸಿ ನಿಷೇಧಿತ ಮೀನುಗಾರಿಕೆ ನಡೆಸುತ್ತಿರುವುದು ಸಮಸ್ಯೆಗೆ ಕಾರಣವಾಗುವ ಸಾಧ್ಯತೆಯಿದೆ. ಇದು ಮತ್ತೊಂದು ಸುತ್ತಿನ ಹೋರಾಟಕ್ಕೂ ವೇದಿಕೆಯಾಗಲಿದೆ.

    ಕಾನೂನು ಬಾಹಿರವಾಗಿ ಲೈಟ್ ಫಿಶಿಂಗ್ ನಡೆಸುತ್ತಿರುವ ಬೋಟುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದ್ದು, ಸಂಬಂಧಿತ ವರದಿಯನ್ನು ಇಲಾಖೆಯ ಉಪನಿರ್ದೇಶಕರಿಗೆ ಕಳುಹಿಸಿಕೊಡಲಾಗುವುದು. ಸರ್ಕಾರದ ಆದೇಶ ಉಲ್ಲಂಘಿಸಿ ಲೈಟ್ ಫಿಶಿಂಗ್ ನಡೆಸುತ್ತಿರುವ ಬೋಟುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
    -ಚಂದ್ರಶೇಖರ, ಸಹಾಯಕ ನಿರ್ದೇಶಕರು, ಮೀನುಗಾರಿಕಾ ಇಲಾಖೆ ಕುಂದಾಪುರ

    ಗಂಗೊಳ್ಳಿ ಬಂದರು ಮೂಲಕ ಕಾನೂನು ಬಾಹಿರವಾಗಿ ಲೈಟ್ ಫಿಶಿಂಗ್ ನಡೆಸುತ್ತಿವೆ ಎನ್ನಲಾದ ಬೋಟುಗಳನ್ನು ಪರಿಶೀಲನೆ ಮಾಡಲಾಗಿದ್ದು, ಈ ಬಗ್ಗೆ ಮೀನುಗಾರಿಕಾ ಇಲಾಖೆಗೆ ವರದಿ ಸಲ್ಲಿಸಲಾಗುವುದು. ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಸೂಕ್ತ ಕಾನೂನು ಕ್ರಮಕೈಗೊಳ್ಳಲಿದ್ದಾರೆ.
    -ಸಂದೀಪ್ ಜಿ.ಎಸ್., ಇನ್‌ಸ್ಪೆಕ್ಟರ್, ಕರಾವಳಿ ಕಾವಲು ಪೊಲೀಸ್ ಠಾಣೆ ಗಂಗೊಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts